
ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ ನಂತರ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ತಮ್ಮ ಬೋಲ್ಡ್ ಲುಕ್ಸ್ ಹಾಗೂ ಡೊಂಟ್ ಕೇರ್ ಸ್ವಭಾವದ ಮೂಲಕ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಮಧ್ಯೆ ತಾವು ಮದುವೆಯಾಗುತ್ತಿರುವುದಾಗಿ ಸುಹಾನಾ ಹೇಳಿದ್ದಾರೆ.
ಹೌದು... ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಸುಹಾನಾಗೆ ಹಾಡುಗಾರಿಕೆ ಎಂದರೆ ಎಲ್ಲಿಲ್ಲದ ಪ್ರೀತಿ. ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ಸುಹಾನಾ ಇದೀಗ ಬಹುಕಾಲದ ಗೆಳೆಯನನ್ನು ವರಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಸುಹಾನಾ ಕೈಹಿಡಿಯಲಿರುವವನು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿರುವ ನಿತಿನ್ ಹಾಗೂ ಸುಹಾನಾ ಕಳೆದ 16 ವರ್ಷಗಳಿಂದ ಪರಸ್ಪರ ಒಡನಾಟ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರೇರಕವಾಗಿದೆ. ತಮ್ಮ ಮದುವೆಯ ವಿಚಾರವನ್ನು ಸುಹಾನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ........ ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಪೋಸ್ಟ್ ಮಾಡಿದ್ದಾರೆ.
Advertisement