

ಸದ್ಯ ನಟನೆಯಿಂದ ರಾಜಕಾರಣಕ್ಕೆ ಮರಳಿ ತಮಿಳುನಾಡಿನ ಸಿಎಂ ಆಗಿರುವ ವಿಜಯ್, ದೀರ್ಘಕಾಲದಿಂದ ಭಾರತೀಯ ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಈ ನಟ ಹಲವು ವರ್ಷಗಳಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದು, ಅವರ ಪುತ್ರ ಜೇಸನ್ ಸಂಜಯ್ ಇದೀಗ ಅವರಿಗಾಗಿ ದೊಡ್ಡ ಕನಸೊಂದನ್ನು ಹೊಂದಿದ್ದಾರೆ. ಆ್ಯಕ್ಷನ್ ತಾರೆ ಜೇಸನ್ ಸ್ಟಾಥಮ್ ಅವರೊಂದಿಗೆ ವಿಜಯ್ ನಟಿಸುವಂತಹ ಹಾಲಿವುಡ್ ಚಿತ್ರವೊಂದನ್ನು ನಿರ್ದೇಶಿಸುವುದು ತಮ್ಮ ಕನಸು ಎಂದು ಉದಯೋನ್ಮುಖ ಚಿತ್ರ ನಿರ್ದೇಶಕ ಜೇಸನ್ ಸಂಜಯ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
'ಬಿಹೈಂಡ್ ವುಡ್ಸ್ ಟಿವಿ' (Behindwoods TV) ಜೊತೆಗಿನ ಸಂಭಾಷಣೆ ವೇಳೆ, ಹಾಲಿವುಡ್ ಆ್ಯಕ್ಷನ್ ತಾರೆ ಜೇಸನ್ ಸ್ಟಾಥಮ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ತಮಿಳು ಚಿತ್ರರಂಗದಿಂದ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಜೇಸನ್ ಅವರನ್ನು ಕೇಳಲಾಯಿತು. ಅದಕ್ಕೆ ಅವರು ತಕ್ಷಣವೇ, 'ನನ್ನ ತಂದೆ (ವಿಜಯ್). ಅದೊಂದು ಅದ್ಭುತವಾದ ಸಹಯೋಗವಾಗಿರುತ್ತದೆ' ಎಂದು ಉತ್ತರಿಸಿದರು. ತಮ್ಮ ಈ ಉತ್ತರವು ಆನ್‌ಲೈನ್‌ನಲ್ಲಿ ಮೀಮ್‌ಗಳು ಮತ್ತು ತಮಾಷೆಯ ಚರ್ಚೆಗಳ ಅಲೆಗೆ ಕಾರಣವಾಗಲಿದೆ ಎಂದೂ ಹೇಳಿದರು.
ತಮಿಳು ಚಿತ್ರರಂಗದ ಪ್ರಮುಖ ತಾರೆಯೊಬ್ಬರ ಪುತ್ರನಾಗಿದ್ದರೂ, ನಟನೆಯ ಬದಲು ನಿರ್ದೇಶನವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಕೇಳಿದಾಗ, ಚಿಕ್ಕಂದಿನಿಂದಲೂ ಚಿತ್ರೀಕರಣದ ಸೆಟ್‌ಗಳಿಗೆ ಹೋಗುತ್ತಾ ಬೆಳೆದಿದ್ದು ತನ್ನ ಆಸಕ್ತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಜೇಸನ್ ಸಂಜಯ್ ಹೇಳಿದರು.
ಸಂದೀಪ್ ಕಿಶನ್ ನಟನೆಯ 'ಸಿಗ್ಮಾ' (Sigma) ಚಿತ್ರದ ಮೂಲಕ ಜೇಸನ್ ಸಂಜಯ್ ಇದೀಗ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.
'ಚಿಕ್ಕ ವಯಸ್ಸಿನಿಂದಲೇ ನನಗೆ ಚಿತ್ರೀಕರಣದ ಸೆಟ್‌ಗಳಿಗೆ ಪ್ರವೇಶವಿತ್ತು. ಅದು ನನಗೆ ಸಿಕ್ಕಿದ್ದ ಒಂದು ವಿಶೇಷ ಅವಕಾಶ. ನನಗೆ ಉತ್ತಮ ಅನುಭವ ಹಾಗೂ ಪರಿಚಯ ಸಿಕ್ಕಿತು. ಅಲ್ಲಿ ನನಗೆ ಸಹಜವಾದ ಭಾವನೆ ಮೂಡತೊಡಗಿತು. ಸೆಟ್‌ಗಳಿಗೆ ಹೋಗುವುದು ನನ್ನ ಜೀವನದ ಒಂದು ಸಾಮಾನ್ಯ ಭಾಗವಾಯಿತು. ಹೀಗಾಗಿ, ಅಲ್ಲಿಂದಲೇ ಆ ಆಸಕ್ತಿ ಚಿಗುರೊಡೆಯಿತು' ಎಂದು ಅವರು ತಿಳಿಸಿದರು.
ನಿರ್ದೇಶನವು ತಾನು ಆರಂಭದಲ್ಲಿ ಆರಿಸಿಕೊಂಡಿದ್ದ ವೃತ್ತಿಯಾಗಿರಲಿಲ್ಲ ಎಂಬುದನ್ನೂ ಜೇಸನ್ ಬಹಿರಂಗಪಡಿಸಿದರು. 'ಮೊದಲು ನಾನು ಪೈಲಟ್ ಆಗಲು ಬಯಸಿದ್ದೆ. ಮಧ್ಯದಲ್ಲಿ ಕ್ರಿಕೆಟಿಗನಾಗುವ ಆಸಕ್ತಿಯೂ ಇತ್ತು. 11 ಮತ್ತು 12ನೇ ತರಗತಿಯಲ್ಲಿದ್ದಾಗ ನನಗೆ ಸಿನಿಮಾದಲ್ಲಿ ಆಸಕ್ತಿ ಮೂಡಿತು. ಕಾಲೇಜಿನಲ್ಲಿದ್ದಾಗ ನಾನು ಚಿತ್ರ ತಯಾರಿಕೆಯಲ್ಲಿ ಮುಂದುವರಿಯಲು ಬಯಸಿದ್ದೆ' ಎಂದರು.
ನಟನೆಯತ್ತ ತನಗೆ ಎಂದಿಗೂ ಒಲವು ಇರಲಿಲ್ಲ. ಏಕೆಂದರೆ ಕಥೆ ಹೇಳುವುದೇ ಯಾವಾಗಲೂ ನನ್ನ ನಿಜವಾದ ಆಸಕ್ತಿಯ ವಿಷಯವಾಗಿತ್ತು. 'ಚಿಕ್ಕ ವಯಸ್ಸಿನಿಂದಲೂ ನನಗೆ ಕಥೆ ಹೇಳುವುದೆಂದರೆ ಇಷ್ಟ; ಸ್ನೇಹಿತರಿಗೆ ಆಗಾಗ್ಗೆ ವಿವಿಧ ಘಟನೆಗಳನ್ನು ವಿವರಿಸುತ್ತಿದ್ದೆ. ಕ್ರಮೇಣ, ಆ ಆಲೋಚನೆಗಳನ್ನು ಬರೆದಿಟ್ಟುಕೊಳ್ಳಲು ಪ್ರಾರಂಭಿಸಿದೆ. ಕಾಲಕ್ರಮೇಣ ಅದು ನನ್ನ ಹವ್ಯಾಸವಾಯಿತು. ಚಿತ್ರ ನಿರ್ಮಾಣವನ್ನು ಕಲಿಯಲು ನಾನು ಕೆನಡಾಕ್ಕೆ ಹೋದೆ. ಅಲ್ಲಿಯೇ ನನಗೆ ನಾನು ಏನು ಮಾಡಲು ಬಯಸುತ್ತೇನೆ ಎಂಬುದು ಸ್ಪಷ್ಟವಾಯಿತು' ಎಂದು ಹೇಳಿದರು.
ಜೇಸನ್ ಸಂಜಯ್ ಅವರ 'ಸಿಗ್ಮಾ' ಚಿತ್ರವು ಆರಂಭದಲ್ಲಿ ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ವರದಿಯ ಪ್ರಕಾರ ಅದನ್ನು ಮುಂದೂಡಲಾಗಿದೆ.