ವನ್ಯಜೀವಿ ಕಥೆಯೊಂದಿಗೆ ನಿರ್ದೇಶಕಿಯಾದ ಸಂಯುಕ್ತಾ ಹೊರನಾಡು,‘ಕ್ರಾಸಿಂಗ್ ಪಾತ್ಸ್’ ಗೆ ಆಕ್ಷನ್-ಕಟ್

ಈ ಪ್ರಯಾಣ ಇದೀಗ ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿದ್ದು, ಇದರ ಮೂಲಕ ಅವರು ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ವಿಶ್ವ ಆನೆ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ.
Samyukta Hornadu
ಸಂಯುಕ್ತಾ ಹೊರನಾಡು
Updated on

ಕಳೆದ ಒಂದು ವರ್ಷದಿಂದ ನಟಿ ಸಂಯುಕ್ತಾ ಹೊರನಾಡು ಸಿನಿಮಾ ಶೂಟಿಂಗ್ ಗಿಂತ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಸಮಯ ಕಳೆದಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿರುವ ಅವರು ರೈತರು, ಅರಣ್ಯ ಅಧಿಕಾರಿಗಳು ಹಾಗೂ ಸಂರಕ್ಷಣಾ ಕಾರ್ಯಕರ್ತರನ್ನು ಭೇಟಿಯಾಗಿ, ಸುಲಭವಾದ ಉತ್ತರಗಳಿಲ್ಲದ ಮಾನವ-ಆನೆ ಸಂಘರ್ಷವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ಪ್ರಯಾಣ ಇದೀಗ ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿದ್ದು, ಇದರ ಮೂಲಕ ಅವರು ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ವಿಶ್ವ ಆನೆ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕಾಗಿ ನಾನು ಕರ್ನಾಟಕದಾದ್ಯಂತ ಪ್ರವಾಸ ಮಾಡಿದ್ದೇನೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಜನರಿಗೆ ನಾನು ನಟಿಯಾಗಿ ಪರಿಚಿತಳು. ಆದರೆ, ಚಿತ್ರ ನಿರ್ಮಾಣದ ಬಗ್ಗೆ ನನಗೆ ಯಾವಾಗಲೂ ಆಸಕ್ತಿ ಇತ್ತು. ನನ್ನ ತಂದೆಯೊಂದಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನಿರ್ದೇಶನದ ಆಲೋಚನೆ ನನ್ನ ಮನಸ್ಸಿನಲ್ಲಿ ಯಾವಾಗಲೂ ಇತ್ತು. ಈ ಕಥೆಯೇ ಆರಂಭಕ್ಕೆ ಸೂಕ್ತವೆನಿಸಿತು ಎಂದು ಸಂಯುಕ್ತಾ ಹೇಳುತ್ತಾರೆ.

ಅವರು ಹೊಸದಾಗಿ ಆರಂಭಿಸಿರುವ ಸಂಪಿಗೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಕ್ರಾಸಿಂಗ್ ಪಾತ್ಸ್’, ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ A Rocha India ನಡೆಸುತ್ತಿರುವ ಪ್ರಾಜೆಕ್ಟ್ EaDDS (Elephant Anti-Depredation Dog Squad) ಉಪಕ್ರಮವನ್ನು ಆಧರಿಸಿದೆ. ತರಬೇತಿ ಪಡೆದ ನಾಯಿಗಳು, ಸಂರಕ್ಷಣಾ ಪ್ರಯತ್ನಗಳು ಹಾಗೂ ತ್ವರಿತ ಪ್ರತಿಕ್ರಿಯಾ ವ್ಯವಸ್ಥೆಗಳ ಮೂಲಕ ಮಾನವ- ಆನೆಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.

ಸಂಯುಕ್ತಾ ಅವರಿಗೆ ಈ ಯೋಜನೆಯಿಂದ ದೊರೆತ ದೊಡ್ಡ ಪಾಠವೆಂದರೆ ಜನರ ಮಾತುಗಳನ್ನು ಆಲಿಸುವುದು. ಪ್ರತಿ ಬಾರಿ ಆನೆಯೊಂದು ಗ್ರಾಮಕ್ಕೆ ಪ್ರವೇಶಿಸಿದಾಗ, ಮೊದಲ ಪ್ರತಿಕ್ರಿಯೆಯಾಗಿ ಆನೆಯನ್ನು ಖಳನಾಯಕನಂತೆ ನೋಡುವುದು ಸಾಮಾನ್ಯ. ನಾನು ಪ್ರವಾಸ ಮಾಡಿ ಸ್ಥಳೀಯರನ್ನು ಭೇಟಿಯಾಗಲು ಆರಂಭಿಸಿದಾಗ, ವಾಸ್ತವದ ಚಿತ್ರಣ ಇನ್ನೂ ದೊಡ್ಡದಾಗಿದೆ ಎಂಬುದು ಅರಿವಾಯಿತು.

ಬೆಳೆಗಳನ್ನು ಕಳೆದುಕೊಂಡಿರುವುದರಿಂದ ರೈತರು ಭಯದಲ್ಲಿದ್ದಾರೆ. ಜನರು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದರಿಂದ ಅರಣ್ಯ ಅಧಿಕಾರಿಗಳ ಮೇಲೂ ಒತ್ತಡವಿದೆ. ಆನೆಗಳೂ ತಮ್ಮ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ. ಯಾರೂ ಬೆಳಗ್ಗೆ ಎದ್ದು ಸಂಘರ್ಷಕ್ಕೆ ಮುಂದಾಗುವುದಿಲ್ಲ ಎನ್ನುತ್ತಾರೆ ಸಂಯುಕ್ತಾ.

ಕರ್ನಾಟಕದ ಸಂರಕ್ಷಣಾ ಕ್ಷೇತ್ರದ ಹಲವು ಪ್ರಮುಖರ ಅಭಿಪ್ರಾಯಗಳನ್ನೂ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ. ಮಾಜಿ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುಷ್ಕರ್ ಕುಮಾರ್, ಪ್ರಾಜೆಕ್ಟ್ ಎಲಿಫೆಂಟ್ ಮುಖ್ಯಸ್ಥ ಮನೋಜ್ ರಾಜನ್, ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹಾಗೂ A Rocha India ರಾಷ್ಟ್ರೀಯ ನಿರ್ದೇಶಕ ಅವಿನಾಶ್ ಕೃಷ್ಣನ್ ಅವರು ಈ ಯೋಜನೆಗೆ ಬೆಂಬಲ ನೀಡಿದ್ದಾರೆ.

ಇವರೆಲ್ಲರೂ ನೀತಿ, ವೈಜ್ಞಾನಿಕ ಹಾಗೂ ಸ್ಥಳೀಯ ಮಟ್ಟದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದು, ಸರಳ ಪರಿಹಾರವಿಲ್ಲದ ಮಾನವ-ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ವಿವರಿಸಿದ್ದಾರೆ.

ಸಂಯುಕ್ತಾ ಅವರು 16ನೇ ವಯಸ್ಸಿನಿಂದಲೇ ಪ್ರಾಣಿ ಕಲ್ಯಾಣ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಆದರೆ, ವನ್ಯಜೀವಿಗಳಿಗಾಗಿ ಕೆಲಸ ಮಾಡಿದ್ದು ತಮ್ಮ ದೃಷ್ಟಿಕೋನವನ್ನು ಬದಲಿಸಿದೆ ಎಂದು ಹೇಳುತ್ತಾರೆ.

ನನಗೆ ಯಾವಾಗಲೂ ಪ್ರಾಣಿಗಳೆಂದರೆ ತುಂಬಾ ಇಷ್ಟ. ಆದರೆ, ಈ ಅನುಭವ ನನ್ನನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿತು. ಇದರಿಂದ ಸಂರಕ್ಷಣೆಯ ಮಹತ್ವವನ್ನು ಅರ್ಥಮಾಡಿಕೊಂಡೆ. ಪ್ರಾಣಿಗಳನ್ನು ಪ್ರೀತಿಸುವುದಷ್ಟೇ ಸಾಕಾಗುವುದಿಲ್ಲ. ಈ ಸಂಘರ್ಷಗಳು ಏಕೆ ಸಂಭವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ನನಗೆ ಯಾವಾಗಲೂ ಪ್ರಾಣಿಗಳೆಂದರೆ ತುಂಬಾ ಇಷ್ಟ. ಆದರೆ, ಈ ಅನುಭವ ನನ್ನನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿತು. ಇದರಿಂದ ಸಂರಕ್ಷಣೆಯ ಮಹತ್ವವನ್ನು ಅರ್ಥಮಾಡಿಕೊಂಡೆ. ಪ್ರಾಣಿಗಳನ್ನು ಪ್ರೀತಿಸುವುದಷ್ಟೇ ಸಾಕಾಗುವುದಿಲ್ಲ. ಈ ಸಂಘರ್ಷಗಳು ಏಕೆ ಸಂಭವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಸಾಕ್ಷ್ಯಚಿತ್ರದ ಮೂಲಕ ಕ್ಯಾಮೆರಾದ ಹಿಂದೆಯೂ ಕೆಲಸ ಮಾಡುವ ಅವಕಾಶ ಅವರಿಗೆ ದೊರೆತಿದೆ. ನಾನು ಹಲವು ವರ್ಷಗಳಿಂದ ನಟಿಸುತ್ತಿದ್ದೇನೆ. ಆದರೆ ನಿರ್ದೇಶನ ನನಗೆ ವಿಭಿನ್ನ ರೀತಿಯ ತೃಪ್ತಿ ನೀಡಿತು. ಕಥೆ ಹೇಳುವುದನ್ನು ನಾನು ಇಷ್ಟಪಡುತ್ತೇನೆ. ಜಗತ್ತನ್ನು ಕಪ್ಪು-ಬಿಳುಪು ದೃಷ್ಟಿಕೋನದಲ್ಲಿ ನೋಡುವುದಿಲ್ಲ. ಗಂಭೀರ ವಿಷಯವನ್ನೂ ಜನರಿಗೆ ಸಂಪರ್ಕವಾಗುವ ರೀತಿಯಲ್ಲಿ ಹೇಳಬಹುದು ಎಂದು ಸಂಯುಕ್ತಾ ಹೇಳುತ್ತಾರೆ.

‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರದಲ್ಲಿ ಯುವ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ರ‍್ಯಾಪ್ ಹಾಡೊಂದನ್ನೂ ಸೇರಿಸಲಾಗಿದೆ. ಹಾಡು ಅಥವಾ ಸಾಕ್ಷ್ಯಚಿತ್ರದ ಮೂಲಕ ಯುವಜನರು ಸಂರಕ್ಷಣೆಯ ಬಗ್ಗೆ ಮಾತನಾಡಲು ಆರಂಭಿಸಿದರೆ, ಅದೇ ಒಳ್ಳೆಯ ಆರಂಭ ಎನ್ನುತ್ತಾರೆ.

‘ಕಾಂತಾರ’, ‘ಗಂಧದ ಗುಡಿ’ ಮತ್ತು ‘777 ಚಾರ್ಲಿ’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಛಾಯಾಗ್ರಾಹಕ ಪ್ರತೀಕ್ ಶೆಟ್ಟಿ ಈ ಸಾಕ್ಷ್ಯಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಸಾಮಾನ್ಯವಾಗಿ ಕೇಳಿಬರುವ ಮಾನವ-ಆನೆ ಸಂಘರ್ಷದ ಸುದ್ದಿಯನ್ನು ಪ್ರೇಕ್ಷಕರು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಮಾಡುವುದು ‘ಕ್ರಾಸಿಂಗ್ ಪಾತ್ಸ್’ ಉದ್ದೇಶವಾಗಿದೆ.

ಪ್ರೇಕ್ಷಕರು ಚಿತ್ರವನ್ನು ನೋಡಿದ ಬಳಿಕ ಕೇವಲ ಆನೆಗಳ ಬಗ್ಗೆ ಮಾತ್ರ ಯೋಚಿಸಬಾರದು. ಸಹಬಾಳ್ವೆಯ ಬಗ್ಗೆ ಯೋಚಿಸಬೇಕು ಎಂಬುದು ನನ್ನ ಆಶಯ ಎಂದು ಸಂಯುಕ್ತಾ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com