

ತಮಿಳು ನಟ ಸೂರ್ಯ ಅವರು ಈ ಶುಕ್ರವಾರ ಬಿಡುಗಡೆಯಾಗಲಿರುವ ತಮ್ಮ ಹೊಸ ಚಿತ್ರ 'ವಿಶ್ವನಾಥ್ ಅಂಡ್ ಸನ್ಸ್'ಗಾಗಿ ಎದುರು ನೋಡುತ್ತಿದ್ದಾರೆ. ಅವರ ಸೂಪರ್ ಹಿಟ್ ಚಿತ್ರ 'ಕರುಪ್ಪು' ಬಳಿಕ ತೆರೆಕಾಣುತ್ತಿರುವ 'ವಿಶ್ವನಾಥ್ ಅಂಡ್ ಸನ್ಸ್', ಒಂದು ಕೌಟುಂಬಿಕ ಕಥಾಹಂದರವನ್ನು ಹೊಂದಿದ್ದು, ಭಿನ್ನ ಪ್ರಕಾರದ ಚಿತ್ರವಾಗಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ಅವರೊಂದಿಗೆ ಮಮಿತಾ ಬೈಜು, ರವೀನಾ ಟಂಡನ್ ಮತ್ತು ರಾಧಿಕಾ ಶರತ್‌ಕುಮಾರ್ ಮುಂತಾದವರು ನಟಿಸಿದ್ದಾರೆ.
ನಿರ್ಮಾಪಕರಾದ 'ಸಿತಾರಾ ಎಂಟರ್‌ಟೈನ್‌ಮೆಂಟ್' ಬಿಡುಗಡೆ ಮಾಡಿರುವ, ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡದೊಂದಿಗಿನ ಸಂದರ್ಶನದಲ್ಲಿ, ಸೂರ್ಯ ಅವರು ಚಿತ್ರ ಹಾಗೂ ತಮ್ಮ ಸಹನಟರ ಕುರಿತು ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ದಶಕಗಳ ಹಿಂದೆ ತಾವು ಮೊದಲ ಬಾರಿಗೆ ಸೂರ್ಯ ಅವರನ್ನು ಭೇಟಿಯಾದಾಗ, ಚಿತ್ರೀಕರಣದ ಸೆಟ್‌ನಲ್ಲಿ ಅವರು 'ಅತಿಯಾದ ಸಂಕೋಚದ ಸ್ವಭಾವದ' ನಟರಾಗಿದ್ದರು. ನಂತರದ ವರ್ಷಗಳಲ್ಲಿ 'ಕಾಖಾ ಕಾಖಾ' (Kaakha Kaakha) ಚಿತ್ರದಲ್ಲಿ ಅವರಲ್ಲಾದ ಬದಲಾವಣೆಯನ್ನು ಕಂಡು ನನಗೆ ಆಶ್ಚರ್ಯ ಉಂಟಾಯಿತು. ಅದಾದ ಬಳಿಕ ಅವರನ್ನು ತಡೆಯುವವರೇ ಇರಲಿಲ್ಲ' ಎಂದು ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, 'ನಾನು ನಟನಾಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಕಾರ್ತಿ ಯಾವಾಗಲೂ ಸಿನಿಮಾದ ಭಾಗವಾಗಲು ಬಯಸಿದ್ದರು. ಕ್ಯಾಮೆರಾ ಮುಂದೆ ನಿಲ್ಲಬೇಕಾದ ವಿಷಯ ನನಗೆ ಕೇವಲ ಐದು ದಿನಗಳ ಮುಂಚಿತವಾಗಷ್ಟೇ ತಿಳಿಯಿತು. ಹಾಗಾಗಿ ಯಾವುದೇ ಪೂರ್ವಸಿದ್ಧತೆ ಇರಲಿಲ್ಲ. ಕ್ಯಾಮೆರಾ ಮುಂದೆಯೇ ಎಲ್ಲವನ್ನೂ ಕಲಿತೆ ಮತ್ತು ಕ್ರಮೇಣ ಅದು ಒಂದು ಜವಾಬ್ದಾರಿಯಾಗಿ ಪರಿಣಮಿಸಿತು. ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿದ್ದವು, ಹಾಗಾಗಿ ನಾನು ನಟಿಸಲೇಬೇಕಾದ ಅನಿವಾರ್ಯತೆ ಇತ್ತು. ಆಗ ಹಣ ಸಂಪಾದಿಸಿ ತಾಯಿಗೆ ನೀಡುವ ಉದ್ದೇಶವಷ್ಟೇ ನನ್ನಲ್ಲಿತ್ತು. ಆದರೆ, ತೆರೆಯ ಮೇಲೆ ನಾನು ಎಡವಿದಾಗ ಅಥವಾ ತಪ್ಪುಗಳನ್ನು ಮಾಡಿದಾಗಲೂ ಎಲ್ಲರಿಂದಲೂ ಸಿಕ್ಕ ಅಪಾರ ಪ್ರೀತಿ-ಆದರಣೆಗಳು, ಆ ಜವಾಬ್ದಾರಿಯನ್ನು ಗಂಭೀರವಾಗಿ ಸ್ವೀಕರಿಸುವಂತೆ ನನ್ನನ್ನು ಪ್ರೇರೇಪಿಸಿದವು' ಎಂದು ಸೂರ್ಯ ವಿವರಿಸಿದರು.
ತಮ್ಮನ್ನು ಪರಿಗಣಿಸಿ 'ವಾರಣಂ ಆಯಿರಂ'ನಂತಹ ವಿವಿಧ ಚಿತ್ರಗಳಲ್ಲಿ ನಟಿಸುವ ಅವಕಾಶ ನೀಡಿದ ನಿರ್ದೇಶಕರ ಬಗ್ಗೆ ಸಿಗಂ ನಟ ಕೃತಜ್ಞತೆ ವ್ಯಕ್ತಪಡಿಸಿದರು. ವಾಸ್ತವವಾಗಿ, ಮಮಿತಾ ಬೈಜು ಅವರು 'ವಾರಣಂ ಆಯಿರಂ' ತಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದು ಎಂದು ಹೇಳಿದ್ದಲ್ಲದೆ, ಅದನ್ನು 'ಸ್ಫೂರ್ತಿದಾಯಕ' ಎಂದು ಬಣ್ಣಿಸಿದರು.
'ವಿಶ್ವನಾಥ್ ಅಂಡ್ ಸನ್ಸ್'ನಲ್ಲಿ ಸೂರ್ಯ ಅವರನ್ನು ಮಗುವಿನ ಜೊತೆಗೆ ಕಾಣಬಹುದು. ತಮ್ಮ ಸ್ವಂತ ಮಕ್ಕಳ ತಂದೆಯಾಗಿರುವ ಅನುಭವದ ಕುರಿತು ಕೇಳಿದಾಗ, 'ನಾನು ಬಹಳಷ್ಟು ವಿಷಯಗಳನ್ನು ಕಳೆದುಕೊಂಡೆ ಎಂದು ನನಗೆ ಅನ್ನಿಸುತ್ತದೆ; ವಿಶೇಷವಾಗಿ ದಿಯಾ (ಅವರ ಮಗಳು) ಚಿಕ್ಕವಳಿದ್ದಾಗ, ಕೆಲಸ ಮತ್ತು ಪ್ರಯಾಣದ ಕಾರಣದಿಂದಾಗಿ ನಾನು ಮೊದಲ ಕೆಲವು ವರ್ಷಗಳಲ್ಲಿ ತುಂಬಾ ಬಿಜಿಯಾಗಿದ್ದೆ. ದೇವ್ ಹುಟ್ಟಿದಾಗ ನನ್ನ ತಪ್ಪಿನ ಅರಿವಾಯಿತು ಮತ್ತು ಅವನ ಬಾಲ್ಯದ ಭಾಗವಾಗಲು ನಾನು ಪ್ರಯತ್ನಿಸಿದೆ' ಎಂದು ಸೂರ್ಯ ತಿಳಿಸಿದರು.
'ಸಾಮಾನ್ಯವಾಗಿ ಹೆಣ್ಣು ಮಗು ಹುಟ್ಟಿದರೆ 'ಮನೆಗೆ ಲಕ್ಷ್ಮಿ ಬಂದಳು' ಎಂದು ಹೇಳುತ್ತೇವೆ; ದಿಯಾ ಹುಟ್ಟಿದ ಸಮಯದಲ್ಲೇ ನಾನು ನಮ್ಮ ಮೊದಲ ಮನೆಯನ್ನು ಖರೀದಿಸಿದ್ದೆ. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೆವು, ಆದರೆ ಆ ಮನೆಗೆ ಕಾಲಿಡುವ ಮುನ್ನ, ಸಾಂಕೇತಿಕವಾಗಿ ದಿಯಾಳ ಪಾದವನ್ನು ಮೊದಲು ಅಲ್ಲಿ ಇರಿಸಿದ್ದೆವು. 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದಲ್ಲಿ ಮಗು ಚಾರ್ವಿಕ್ ಮನೆಗೆ ಕಾಲಿರಿಸುವ ದೃಶ್ಯವಿದ್ದಾಗ, ಇದೇ ರೀತಿಯನ್ನೇ ಏಕೆ ಸಿನಿಮಾದಲ್ಲೂ ಮಾಡಬಾರದು ಎಂದು ನನಗೆ ಅನ್ನಿಸಿತು' ಎಂದರು.
'ರಾಧಿಕಾ ಅವರ ಬಗ್ಗೆ ತಮಗೆ ಅಪಾರ ಗೌರವ ಮತ್ತು ಮೆಚ್ಚುಗೆಯಿದೆ. ಪಾತ್ರವರ್ಗದ ಆಯ್ಕೆ ಬಹಳ ಮುಖ್ಯ. ಚಿತ್ರೀಕರಣದ ಹೊರತಾಗಿಯೂ ನಾವು ಉತ್ತಮ ಒಡನಾಟವನ್ನು ಹೊಂದಿರುವುದರಿಂದ ನಮ್ಮ ನಡುವೆ ಉತ್ತಮ ತಿಳುವಳಿಕೆಯಿದೆ. ಪರಸ್ಪರ ಚೆನ್ನಾಗಿ ತಿಳಿದಿರುವುದು ಕ್ಯಾಮೆರಾ ಮುಂದೆ ಉತ್ತಮ ಹೊಂದಾಣಿಕೆಯಿಂದ ನಟಿಸಲು ಸಹಾಯ ಮಾಡುತ್ತದೆ' ಎಂದು ಅವರು ತಮ್ಮ ಸ್ನೇಹಿತ ಸುನೀಲ್ ರೆಡ್ಡಿ ಸೇರಿದಂತೆ ಚಿತ್ರದ ಇತರ ನಟರನ್ನು ಉಲ್ಲೇಖಿಸುತ್ತಾ ಹೇಳಿದರು.