

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗಿನ ವಿವಾಹ ಮುರಿದುಬಿದ್ದ ಬಳಿಕ ಸುದ್ದಿಯಲ್ಲಿದ್ದ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಇದೀಗ ತಮ್ಮ ಗಮನವನ್ನು ಕೆಲಸದೆಡೆಗೆ ತಿರುಗಿಸಿದ್ದಾರೆ.
ಪಲಾಶ್ ಮುಚ್ಚಲ್ ಅವರು ಇನ್ನೂ ಹೆಸರಿಡದ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದು, ಇದರಲ್ಲಿ ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಲ್ಪಾಡೆ ಅವರಿಗೆ ಜೋಡಿಯಾಗಿ ಡೈಸಿ ಶಾ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕಟಣೆಯನ್ನು ಫಿಲ್ಮ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ.
'ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಡೈಸಿ ಶಾ ಅವರು ಪಲಾಶ್ ಮುಚ್ಚಲ್ ಅವರ ಮುಂದಿನ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ಪಲಾಶ್ ಮುಚ್ಚಲ್ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ನಾಯಕಿಯನ್ನಾಗಿ ಡೈಸಿ ಶಾ ಅವರನ್ನು ಆಯ್ಕೆ ಮಾಡಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ' ಎಂದು ಬರೆದಿದ್ದಾರೆ.
ಈ ಥ್ರಿಲ್ಲರ್ ಚಿತ್ರವು ಶೀಘ್ರದಲ್ಲೇ ಸೆಟ್ಟೇರುವ ನಿರೀಕ್ಷೆಯಿದೆ. ಚಿತ್ರದಲ್ಲಿ ತಲ್ಪಾಡೆ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಸದ್ಯ, ಚಿತ್ರದ ಕಥಾವಸ್ತು ಮತ್ತು ಪೋಷಕ ಪಾತ್ರವರ್ಗ ಸೇರಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಪಲಾಶ್ ಮುಚ್ಚಲ್ -ಸ್ಮೃತಿ ಮಂಧಾನ ಮದುವೆ ರದ್ದು
ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ 2025ರ ನವೆಂಬರ್ 23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹವಾಗಬೇಕಿತ್ತು. ಆದರೆ, ಮದುವೆ ದಿನದಂದು ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಕೆಲವು ಗಂಟೆಗಳ ನಂತರ, ಅಸಿಡಿಟಿ-ಸಂಬಂಧಿತ ತೊಡಕುಗಳಿಗಾಗಿ ಪಲಾಶ್ ಕೂಡ ಆಸ್ಪತ್ರೆಗೆ ದಾಖಲಾದರು ಎಂಬ ವರದಿಗಳು ಹೊರಬಂದವು.
ಡಿಸೆಂಬರ್ 7 ರಂದು, ಇಬ್ಬರು ತಮ್ಮ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು.
ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, 'ಕುಟುಂಬಗಳು ತುಂಬಾ ಕಠಿಣ ಸಮಯವನ್ನು ಎದುರಿಸುತ್ತಿವೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಸಮಯದಲ್ಲಿ ನಾವು ಸಕಾರಾತ್ಮಕತೆಯನ್ನು ನಂಬಲು ಮತ್ತು ನಮಗೆ ಸಾಧ್ಯವಾದಷ್ಟು ಸಕಾರಾತ್ಮಕತೆಯನ್ನು ಹರಡಲು ಬಯಸುತ್ತೇವೆ ಎಂದು ನಾನು ಪುನರಾವರ್ತಿಸಲು ಬಯಸುತ್ತೇನೆ ಮತ್ತು ಬಲವಾಗಿರಿ...' ಎಂದಿದ್ದರು.
ಇದಕ್ಕೂ ಮುನ್ನ ಸ್ಮೃತಿ ಮಂಧಾನಾ ಅವರ ಬಾಲ್ಯದ ಗೆಳೆಯ ಎಂದು ಪರಿಚಯಿಸಿಕೊಂಡ ವಿದ್ನ್ಯಾನ್ ಮಾನೆ ಅವರು ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂವಾದದಲ್ಲಿ ಪಲಾಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
Advertisement