ನಟ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ನೆನ್ನೆಯಷ್ಟೇ ಬಿಡುಗಡೆಯಾಗಿದ್ದು, ನಿರ್ದೇಶಕಿ ಗೀತು ಮೋಹನ್‌ದಾಸ್ ಇದೀಗ ಸಾಕಷ್ಟು ಪ್ರಶಂಸೆ ಮತ್ತು ಕೆಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರ ಹಳೆಯ ಸಂದರ್ಶನಗಳ ಆಯ್ದ ಭಾಗಗಳು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಟೀಸರ್ ಆರಂಭದಲ್ಲಿಯೇ ಯಶ್ ಪಾತ್ರವು ಕಾರಿನೊಳಗೆ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ಮತ್ತು ನಂತರ ಹೊರಗಿಳಿದು ಬಂದೂಕು ಹಿಡಿದು ಸಮಾಧಿ ಸ್ಥಳಕ್ಕೆ ಪ್ರವೇಶಿಸುವುದನ್ನು ತೋರಿಸುತ್ತದೆ. ಈ ದೃಶ್ಯವೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಟೀಸರ್ ನಂತರ, ನೆಟ್ಟಿಗರು ನಿರ್ದೇಶಕಿಯ ಹಳೆಯ ಸಂದರ್ಶನದ ಕ್ಲಿಪ್ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಗೀತು ಅವರು ಮನೀಶ್ ನಾರಾಯಣನ್ ಅವರಿಗೆ ಪರದೆಯ ಮೇಲಿನ ರೊಮ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ, ಪ್ರೇಕ್ಷಕರು ಕುಟುಂಬ ಸಮೇತರಾಗಿ ಅದನ್ನು ವೀಕ್ಷಿಸಲು ಆರಾಮದಾಯಕವಾಗುವ ರೀತಿಯಲ್ಲಿ ರೊಮ್ಯಾನ್ಸ್ ಸಂಬಂಧವನ್ನು ತೆರೆ ಮೇಲೆ ತೋರಿಸುವುದು ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ನೆಟಿಜನ್‌ಗಳ ಪ್ರಕಾರ, ಟಾಕ್ಸಿಕ್ ಚಿತ್ರದಲ್ಲಿ ತೋರಿಸಿರುವುದು ನಿರ್ದೇಶಕಿಯ ಸ್ವಂತ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಎಂದು ದೂರಿದ್ದಾರೆ.
ಗೀತು ಮಲಯಾಳಂ ಚಿತ್ರಗಳಲ್ಲಿ ಮಹಿಳೆಯರನ್ನು ಚಿತ್ರಿಸುವ ವಿಧಾನವನ್ನು ವಿರೋಧಿಸಿ, ವಿಶೇಷವಾಗಿ ಮಮ್ಮುಟ್ಟಿ ನಟಿಸಿದ 'ಕಸಬ' ಚಿತ್ರದ ವಿವಾದಾತ್ಮಕ ದೃಶ್ಯದ ಬಗ್ಗೆ ತಾವು ಹಿಂದೆ ನೀಡಿದ್ದ ಹೇಳಿಕೆಗಳಿಗಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಯದಲ್ಲಿ, ಮಮ್ಮುಟ್ಟಿ ಪಾತ್ರವು ಮಹಿಳಾ ಪೊಲೀಸ್ ಅಧಿಕಾರಿಯ ಘನತೆಗೆ ಕುಂದು ತರುವ ರೀತಿಯಲ್ಲಿ ವರ್ತಿಸುವ ದೃಶ್ಯಕ್ಕೆ ಗೀತು ಮತ್ತು ಪಾರ್ವತಿ ತಿರುವೋತ್ತು ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ತ್ರೀದ್ವೇಷದ ಒಳನೋಟಗಳ ಬಗ್ಗೆ ಪಾರ್ವತಿ ಮತ್ತು ಗೀತು ಅವರ ನಿಲುವು ಆಗ ಮಾನ್ಯವಾಗಿದ್ದರೂ, ಇದೀಗ ನೆಟಿಜನ್‌ಗಳು ಟಾಕ್ಸಿಕ್ ಚಿತ್ರದಲ್ಲಿನ ದೃಶ್ಯದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೀಗ ಕಸಬ ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕರ್ ಅವರೇ ಸ್ವತಃ ಯಶ್ ಅವರ 39ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿನ ದೃಷ್ಯಕ್ಕಾಗಿ ಗೀತು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೀತು ಅವರದ್ದು ಬೂಟಾಟಿಕೆ. ನನ್ನ ನಿರ್ದೇಶನದ ಚಿತ್ರದ ವೇಳೆ ಟೀಕಿಸಿದ ರೀತಿಯ ಕೆಲಸವನ್ನೇ ಅವರು ಈಗ ಮಾಡಿದ್ದಾರೆ ಎಂದಿದ್ದಾರೆ.
ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಮೊದಲೇ ಹೇಳಿದಂತೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ತಯಾರಾಗಿರುವುದರಿಂದ ಹಾಲಿವುಡ್‌ಗೆ ಹೊಂದಿಕೆಯಾಗುವಂತೆ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಿವೆ ಎಂದು ಕೆಲವರು ಹೇಳುತ್ತಿದ್ದರೂ, ಕನ್ನಡ ನಾಡಿನ ಸೊಗಡಿಗೆ ವಿರುದ್ಧವಾಗಿ ಚಿತ್ರವನ್ನು ತಯಾರಿಸಲಾಗಿದೆ ಎಂದು ಒಂದಷ್ಟು ಮಂದಿ ಹೇಳುತ್ತಿದ್ದಾರೆ.
Advertisement