

ಇತ್ತೀಚೆಗೆ ಶುಕ್ರವಾರ (ಜನವರಿ 9) ಬಿಡುಗಡೆಯಾದ ಮಾ ಇಂಟಿ ಬಂಗಾರಂ ಚಿತ್ರದ ಟೀಸರ್, ನಟಿ ಸಮಂತಾ ರುತ್ ಪ್ರಭು ಅವರ ಆ್ಯಕ್ಷನ್-ಪ್ಯಾಕ್ಡ್ ಪಾತ್ರದಿಂದ ಅಭಿಮಾನಿಗಳ ಉತ್ಸಾಹವನ್ನು ಕೆರಳಿಸಿದೆ. ಕನ್ನಡದ ನಟ ದಿಗಂತ್ ಮಂಚಾಲೆ ಸಮಂತಾ ಅವರ ಪತಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಿಗಂತ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ದಿಗಂತ್ ಅವರ ವೃತ್ತಿಜೀವನದ ಆರಂಭದಲ್ಲಿ, 2008 ರಲ್ಲಿ ತೆಲುಗು ಚಿತ್ರ ವಾನದಲ್ಲಿ ನಟಿಸಿದ್ದ ಅವರು ಇದೀಗ ಮಾ ಇಂಟಿ ಬಂಗಾರಂ ಮೂಲಕ ಮತ್ತೆ ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.
ಟೀಸರ್‌ನಲ್ಲಿ, ದಿಗಂತ್ ಅವರು ಶಾಂತ ರೀತಿಯಿಂದ ಕೂಡಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ರಹಸ್ಯವಾಗಿಟ್ಟಿದ್ದರೂ, ಅವರ ಪಾತ್ರವು ವಿಶಿಷ್ಟ ಪೋಷಕ ಪಾತ್ರಕ್ಕಿಂತ ಹೆಚ್ಚಿನ ಆಳವನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಲವರ್ ಬಾಯ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದ ದಿಗಂತ್ ಇದೀಗ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್ ನಿಡಿಮೋರು, ಸಮಂತಾ ರುತ್ ಪ್ರಭು ಮತ್ತು ಹಿಮಾಂಕ್ ದುವ್ವುರು ನಿರ್ಮಿಸಿದ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, 'ಓಹ್! ಬೇಬಿ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಜೊತೆ ಮತ್ತೆ ಒಂದಾಗಿದ್ದಾರೆ. ಗುಲ್ಶನ್ ದೇವಯ್ಯ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ನಟಿಯರಾದ ಗೌತಮಿ ಮತ್ತು ಮಂಜುಳಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.
Advertisement