'ಕೃಷ್ಣ'ನ ಮೊದಲ ಪ್ರವೇಶಕ್ಕೆ ಪ್ರೇಕ್ಷಕರಿಂದ ಟೀಕೆ: ಪಾತ್ರಧಾರಿ ನಿತೀಶ್ ಭಾರದ್ವಾಜ್ 'ಮಹಾಭಾರತ' ಬಗ್ಗೆ ಹೇಳಿದ್ದೇನು?

ಟಿವಿ ಹತ್ತಿರವೇ ಕುಳಿತರೆ ಚೆನ್ನಾಗಿ ಕಾಣುತ್ತದೆ ಎಂದು ಮಕ್ಕಳೆಲ್ಲಾ ಜಗಳ ಮಾಡುತ್ತಾ ಮುಂದೆ ಹೋಗಿ ಕೂತು ಟಿವಿ ನೋಡುತ್ತಿದ್ದರು. 1988–90ರಲ್ಲಿ ಮಹಾಭಾರತ ಧಾರವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಮನೆಮನೆಗಳಲ್ಲಿ ಕಂಡುಬರುತ್ತಿದ್ದ ದೃಶ್ಯಗಳು.
Nitin Bharadwaj
ಕೃಷ್ಣನ ಪಾತ್ರದಲ್ಲಿ ನಿತಿನ್ ಭಾರದ್ವಾಜ್
Updated on

ಭಾನುವಾರ ರಜೆ, ಮಕ್ಕಳು ಮನೆಯವರೆಲ್ಲಾ ತಡವಾಗಿ ಎದ್ದರಾಯಿತು ಎಂಬ ವಾತಾವರಣ ಆಗ ಇರಲಿಲ್ಲ, ಬಂತೆಂದರೆ ಭಾರತೀಯರು ತಮ್ಮ ಮನೆಗಳಲ್ಲಿ ಮಕ್ಕಳನ್ನು ಸಾಮಾನ್ಯಕ್ಕಿಂತ ಸ್ವಲ್ಪ ಬೇಗ ಎಬ್ಬಿಸಲಾಗುತ್ತಿತ್ತು, ಸರಿಯಾಗಿ ಟಿವಿ ಕಾಣಿಸದಿದ್ದರೆ ಮನೆಯ ಮೇಲೆ ಹತ್ತಿ ಹೋಗಿ ಇಲ್ಲವೇ ಆಂಟೆನಾ ಅಳವಡಿಸಿದಲ್ಲಿಗೆ ಹೋಗಿ ಮನೆಯ ಹಿರಿಯ ಸದಸ್ಯರು ಆಂಟೆನಾವನ್ನು ಸರಿಪಡಿಸುತ್ತಿದ್ದರು. ನಂತರ ಕುಟುಂಬದವರೆಲ್ಲಾ ಸೇರಿ ಹಾಲ್‌ನಲ್ಲಿ ಇಡಲಾಗಿದ್ದ ಟಿವಿ ಮುಂದೆ ಸೇರಿಕೊಳ್ಳುತ್ತಿದ್ದರು.

ಟಿವಿ ಹತ್ತಿರವೇ ಕುಳಿತರೆ ಚೆನ್ನಾಗಿ ಕಾಣುತ್ತದೆ ಎಂದು ಮಕ್ಕಳೆಲ್ಲಾ ಜಗಳ ಮಾಡುತ್ತಾ ಮುಂದೆ ಹೋಗಿ ಕೂತು ಟಿವಿ ನೋಡುತ್ತಿದ್ದರು. 1988–90ರಲ್ಲಿ ಮಹಾಭಾರತ ಧಾರವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಮನೆಮನೆಗಳಲ್ಲಿ ಕಂಡುಬರುತ್ತಿದ್ದ ದೃಶ್ಯಗಳು.

ಕೃಷ್ಣನ ಅದ್ಭುತ ಪಾತ್ರಧಾರಿ ಡಾ ನಿತೀಶ್ ಭಾರದ್ವಾಜ್

ಆರಂಭದಲ್ಲಿ ಪಶುವೈದ್ಯ ಶಸ್ತ್ರಚಿಕಿತ್ಸಕರಾಗಿದ್ದ ಡಾ. ನಿತೀಶ್ ಭಾರದ್ವಾಜ್ ಅವರು ಕಿರೀಟಧಾರಿಯಾಗಿ ಕಂಗೊಳಿಸುವ ಕೃಷ್ಣನಾಗಿ ಪರದೆಯ ಮೇಲೆ ಕಾಣಿಸಿಕೊಂಡಾಗ ಅಲ್ಲೊಂದು ನಿಶ್ಶಬ್ದತೆ ಆವರಿಸುತ್ತಿತ್ತು. ಅವರ ಶಾಂತ ಕಣ್ಣುಗಳು ಮತ್ತು ನಿಧಾನವಾದ ದೃಷ್ಟಿಯಲ್ಲಿ ಕರುಣೆ ಮತ್ತು ವೈರಾಗ್ಯ ಎರಡೂ ಪ್ರತಿಬಿಂಬಿಸುತ್ತಿದ್ದವು. ಅದೇ ಸೌಮ್ಯತೆಯೊಂದಿಗೆ ಇತ್ತೀಚೆಗೆ ಅವರು ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ತಮ್ಮ ಚಕ್ರವ್ಯೂಹ ನಾಟಕವನ್ನು ವೇದಿಕೆಗೆ ತಂದರು.

ಮಹಾಭಾರತ ಮಹಾಕಾವ್ಯದ ಅಭಿಮನ್ಯು ಘಟನೆಯನ್ನು ಆಧರಿಸಿದ ಈ ನಾಟಕದ ಪ್ರದರ್ಶನ ಭಾನುವಾರ ನಗರದಲ್ಲಿ ಏರ್ಪಟ್ಟಿತ್ತು. ರಾಂಕಾ ಕಾಲೋನಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಸಾಲಾಸರ್ ಬಾಲಾಜಿ ದೇವಾಲಯಕ್ಕೆ ಬೆಂಬಲವಾಗಿ ನಡೆಯುತ್ತಿರುವ ಬಹುನಗರ ಸಂಪರ್ಕ ಕಾರ್ಯಕ್ರಮವಾಗಿ ನಾಟಕ ಆಯೋಜಿಸಲಾಗಿತ್ತು.

ಲೋಕಸಭೆಯ ಮಾಜಿ ಸದಸ್ಯ, 2025ರ ವೆಬ್ ಸೀರೀಸ್ Kesariya@100ದಲ್ಲಿಯೂ ಅಭಿನಯಿಸಿದ್ದ ನಿತೀಶ್ ಭಾರದ್ವಾಜ್ ಕೃಷ್ಣನ ಪಾತ್ರವನ್ನು ಪ್ರೇಕ್ಷಕರು ಇನ್ನೂ ಭಕ್ತಿಭಾವದಿಂದಲೇ ಸ್ಮರಿಸುತ್ತಾರೆ; ಅದು ಒಮ್ಮೆ ಅವರ ಮನೆಗಳಲ್ಲಿ ಪ್ರವೇಶಿಸಿ ಎಂದಿಗೂ ಸಂಪೂರ್ಣವಾಗಿ ಹೊರಟುಹೋಗದ ಉಪಸ್ಥಿತಿಯಂತೆ ಅನಿಸುತ್ತದೆ. ಆ ಪಾತ್ರ ಮಾಡಿದ್ದ ನಿತೀಶ್ ಭಾರದ್ವಾಜ್ ಅವರಿಗೆ ಆ ಪಾತ್ರ ದೈವಿಕ ಭಾರವನ್ನು ಹೊರುವುದಾಗಿ ಎಂದಿಗೂ ತೋಚಲಿಲ್ಲ. ನಾನು ಆದಿ ಶಂಕರ ಪರಂಪರೆಯನ್ನು ಅನುಸರಿಸುವ ಸಾರಸ್ವತ ಬ್ರಾಹ್ಮಣ. ನಮ್ಮನ್ನು ನಿಷ್ಕಾಮ ಕರ್ಮಯೋಗದ ತತ್ವದಲ್ಲಿ ಬೆಳೆಸಲಾಗಿದೆ. ನಮ್ಮ ಶಕ್ತಿಗೆ ತಕ್ಕಂತೆ ನಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ನೆರವೇರಿಸಿ, ಉಳಿದದರ ಬಗ್ಗೆ ಚಿಂತಿಸಬಾರದು ಎಂದು ನಮಗೆ ಹೇಳಿಕೊಟ್ಟಿದ್ದರು ಎನ್ನುತ್ತಾರೆ ಅವರು. ಆ ದೃಢ ನೆಲೆಗಟ್ಟಿನ ಕಾರಣದಿಂದಲೇ ಪ್ರೇಕ್ಷಕರ ಪ್ರತಿಕ್ರಿಯೆ ಅಥವಾ ಯಶಸ್ಸಿನ ಬಗ್ಗೆ ಅವರು ಎಂದಿಗೂ ಆತಂಕಪಡಲಿಲ್ಲವಂತೆ.

ಕೃಷ್ಣನ ಪ್ರವೇಶಕ್ಕೆ ಟೀಕೆ!

ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣನ ಮೊದಲ ಪ್ರವೇಶ ಟೀಕೆಗೆ ಗುರಿಯಾಗಿತ್ತಂತೆ. ಆರಂಭಿಕ ಕಂತು ಪ್ರಸಾರವಾದ ನಂತರ ಪ್ರತಿಕ್ರಿಯೆಗಳು ಅನಿರೀಕ್ಷಿತವಾಗಿ ಕಠಿಣವಾಗಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. ದೂರದರ್ಶನ ಧಾರಾವಾಹಿಯ ನಿರ್ಮಾತೃ ಬಿ.ಆರ್. ಚೋಪ್ರಾ ಅವರು ಆ ಪ್ರತಿಕ್ರಿಯೆಯಿಂದ ಬಹಳ ಬೇಸರ ಮತ್ತು ಆತಂಕೊಂಡಿದ್ದರು ಎನ್ನುತ್ತಾರೆ.

ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಾಗ ಚೋಪ್ರಾ ಅವರು ನೀವು ಏನು ಹೇಳುತ್ತೀರಿ ಎಂದು ಕೇಳಿದರು. ನಾನು, ನೀವು ನಿರ್ದೇಶಕರು. ಜನರು ಒಂದೇ ಕಂತನ್ನು ನೋಡಿದ್ದಾರೆ; ಅದು ಸಾಂದೀಪನಿ ಆಶ್ರಮದಲ್ಲಿ ಕೃಷ್ಣನ ಪ್ರವೇಶದ ದೃಶ್ಯ ಮಾತ್ರ. ನನ್ನೊಂದಿಗೆ ನೀವು ಇನ್ನೂ ಏಳು ಅಥವಾ ಎಂಟು ಕಂತುಗಳನ್ನು ಚಿತ್ರೀಕರಿಸಿದ್ದೀರಿ, ನನ್ನ ಎಲ್ಲಾ ದೃಶ್ಯಗಳಿಗೆ ನೀವು ಒಪ್ಪಿಗೆ ನೀಡಿದ್ದೀರಿ. ಅನುಭವಿ ನಿರ್ದೇಶಕರಾಗಿ ನಿಮ್ಮ ನಿರ್ಣಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಆಗ ಹೇಳಿದ್ದೆ ಎಂದು ನಿತೀಶ್ ನೆನಪಿಸಿಕೊಳ್ಳುತ್ತಾರೆ.

Nitin Bharadwaj
'1980ರ ಮಹಾಭಾರತ, ರಾಮಾಯಣ ಮೆಗಾ ಧಾರಾವಾಹಿಗಿಂತಲೂ ಪ್ರಧಾನಿಯವರ 'ಮನ್ ಕಿ ಬಾತ್' ಹೆಚ್ಚು ಜನಪ್ರಿಯ'

ಮಹಾಭಾರತ ಮತ್ತು ಭಗವದ್ಗೀತೆಯನ್ನು ಚೆನ್ನಾಗಿ ಓದಿ ನಾನು ಅರಿತುಕೊಂಡ ಮೇಲೆ ನಾನು ಪಾತ್ರ ಮಾಡಿದ್ದು, ನಾನು ಚೋಪ್ರಾ ಅವರಿಗೆ, ನಾನು ನನ್ನ ಅತ್ಯುತ್ತಮವನ್ನು ನೀಡಿದ್ದೇನೆ, ಉಳಿದದ್ದು ಕೃಷ್ಣನ ಕೈಯಲ್ಲಿದೆ ಎಂದು ಹೇಳಿದ್ದೆ, ಅದಕ್ಕೆ ಚೋಪ್ರಾ ಅವರು ‘ನಾನು ಕೇಳಬೇಕೆಂದಿದ್ದ ಮಾತು ಇದೇ’ ಎಂದು ಪ್ರತಿಕ್ರಿಯಿಸಿದುದನ್ನು 62 ವರ್ಷದ ನಿತೀಶ್ ಸ್ಮರಿಸಿಕೊಳ್ಳುತ್ತಾರೆ.

ಪ್ರೇಕ್ಷಕರು ಆ ಪಾತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬುದನ್ನು ರೂಪಿಸಿದ ಒಂದು ಆಲೋಚನೆಯನ್ನು ಕೂಡ ಅವರು ವ್ಯಕ್ತಪಡಿಸಿದರು. ಜನರು ಕೃಷ್ಣನನ್ನು ಅಪಾರವಾಗಿ ಪ್ರೀತಿಸುವುದರಿಂದ, ಒಂದೇ ಕಂತಿನಲ್ಲಿ ಎಲ್ಲವನ್ನೂ ಕಾಣಬೇಕೆಂದು ಅವರು ನಿರೀಕ್ಷಿಸುತ್ತಾರೆ. ಭಗವದ್ಗೀತೆಯಿಂದ ಒಂದು ಉಪಮೆ ಬಳಸುವುದಾದರೆ, ಕೃಷ್ಣನನ್ನು ಕಮಲ ಹೂವಿಗೆ ಹೋಲಿಸಲಾಗಿದೆ. ಅದರ ಪದರಗಳು ಒಂದೊಂದಾಗಿ ತೆರೆಯುತ್ತವೆ. ಅದೇ ರೀತಿ ಕೃಷ್ಣನು ತನ್ನ ವ್ಯಕ್ತಿತ್ವ, ಬುದ್ಧಿಮತ್ತೆ ಮತ್ತು ಜ್ಞಾನಗಳ ಪದರಗಳನ್ನು ಕ್ರಮೇಣ ಅನಾವರಣಗೊಳಿಸುತ್ತಾನೆ ಎಂದು ವಿಷ್ಣುಪುರಾಣ ಎಂಬ ಪ್ರಸಿದ್ಧ ಪೌರಾಣಿಕ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದ ನಿತೀಶ್ ಹೇಳುತ್ತಾರೆ.

ಕೃಷ್ಣನ ಪಾತ್ರಕ್ಕೆ ಸಂಬಂಧಿಸಿದ ಅತ್ಯಂತ ಆಪ್ತ ಪ್ರತಿಕ್ರಿಯೆ ನಿತೀಶ್ ಅವರಿಗೆ ಅವರ ಮನೆಯವರಿಂದಲೇ ಬಂದಿತ್ತಂತೆ. ಆಧ್ಯಾತ್ಮಿಕವಾಗಿ ತುಂಬಾ ಆಳವಾಗಿ ತಿಳಿದುಕೊಳ್ಳುತ್ತಿದ್ದ ಅವರ ತಾಯಿ ಒಮ್ಮೆ ಅವರಿಗೆ, ನಾನು ಕೃಷ್ಣನಿಗೆ ಪ್ರಾರ್ಥನೆ ಮಾಡುವಾಗಲೆಲ್ಲಾ, ನಿನ್ನ ಮುಖವೇ ನನ್ನ ಮನಸ್ಸಿಗೆ ಬರುತ್ತದೆ ಎಂದಿದ್ದರಂತೆ.

ನಾನು ಅವಳಿಗೆ, ‘ನೀನು ನನಗೆ ಸಗುಣ ಸಾಕಾರದಿಂದ ನಿರ್ಗುಣ ನಿರಾಕಾರದವರೆಗೆ ಇರುವ ಯಾತ್ರೆಯನ್ನು ಕಲಿಸಿದ್ದೀಯೆ. ಈಗ ಆ ಯಾತ್ರೆಯನ್ನು ನಿನ್ನ ಜೀವನದಲ್ಲಿ ನೀನೇ ಅನುಷ್ಠಾನಗೊಳಿಸಬೇಕು. ನನ್ನ ಮುಖವನ್ನು ಮೀರಿ, ಕೃಷ್ಣ ತತ್ತ್ವವನ್ನು — ಅವನ ಸ್ವಭಾವದ ಸಾರವನ್ನು — ನೋಡು ಎಂದು ಹೇಳಿದೆ,” ಎಂದು ಆ ಘಟನೆ ನೆನಪಿಸಿಕೊಂಡು ನಗುತ್ತಾರೆ.

ಹಿರಿಯ ನಟ ಶಾಹು ಮೋಡಕ್ ಅವರನ್ನು ಭೇಟಿಯಾದ ಸಂದರ್ಭವನ್ನು ಸಹ ನಿತೀಶ್ ಭಾರದ್ವಾಜ್ ಹಂಚಿಕೊಂಡರು. ಅವರು ನಿತೀಶ್ ಭಾರದ್ವಾಜ್ ಅವರ ಜಾತಕವನ್ನು ಕೇಳಿ, ಮುಂಚಿತವಾಗಿ ಬರೆದಿಟ್ಟಿದ್ದ ಒಂದು ಟಿಪ್ಪಣಿಯನ್ನು ತೋರಿಸಿದರಂತೆ. ಅದರಲ್ಲಿ “ವೃಷಭ ರಾಶಿ, ರೋಹಿಣಿ ನಕ್ಷತ್ರ” ಎಂದು ಬರೆಯಲಾಗಿತ್ತು — ಇದು ಭಗವಾನ್ ಕೃಷ್ಣನ ಜನ್ಮವನ್ನು ಸೂಚಿಸುವ ನಕ್ಷತ್ರವಾಗಿದ್ದು, ನಿತೀಶ್ ಭಾರದ್ವಾಜ್, ಮೋಡಕ್ ಮತ್ತು ತೆಲುಗು ಚಿತ್ರರಂಗದ ದಿಗ್ಗಜ ಎನ್.ಟಿ. ರಾಮರಾವ್ — ಈ ಮೂವರಿಗೂ ಒಂದೇ ನಕ್ಷತ್ರ ಮತ್ತು ರಾಶಿಯವರಾಗಿದ್ದಾರೆ, ಈ ಮೂವರೂ ಪರದೆಯ ಮೇಲೆ ಕೃಷ್ಣನ ಪಾತ್ರವನ್ನು ನಿರ್ವಹಿಸಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com