ತಮಿಳು ನಟ ಧನುಷ್ ಜೊತೆಗೆ ಮದುವೆ ವದಂತಿ; ರಹಸ್ಯ ಪೋಸ್ಟ್ ಹಂಚಿಕೊಂಡ ನಟಿ ಮೃಣಾಲ್ ಠಾಕೂರ್!
ನವದೆಹಲಿ: ನಟ ಧನುಷ್ ಜೊತೆಗಿನ ವಿವಾಹದ ವದಂತಿಗಳು ಹರಿದಾಡುತ್ತಿರುವ ನಡುವೆ, ಮೃಣಾಲ್ ಠಾಕೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಹಸ್ಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನಟಿ ಸೂರ್ಯಾಸ್ತ ಮತ್ತು ಸಮುದ್ರದ ತಂಗಾಳಿಯನ್ನು ಆನಂದಿಸುತ್ತಾ ದೋಣಿಯಲ್ಲಿ ಕುಳಿತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 'ಗ್ರೌಂಡೆಡ್, ಹೊಳೆಯುವ ಮತ್ತು ಅಲುಗಾಡದ!' ಎಂದು ಮೃಣಾಲ್ ಶೀರ್ಷಿಕೆ ನೀಡಿದ್ದಾರೆ.
ಮೃಣಾಲ್ ಮತ್ತು ಧನುಷ್ ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈವರೆಗೂ ಅವರಿಬ್ಬರೂ ಈ ವರದಿಗಳ ಕುರಿತು ದೃಢಪಡಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ.
ಇತ್ತೀಚೆಗೆ, 2026ರ ಫೆಬ್ರುವರಿಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ವರದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ನಂತರ ಈ ಊಹಾಪೋಹಗಳು ಹೆಚ್ಚಾದವು.
ಈ ಮದುವೆ ಕುರಿತಾದ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಟನ ಆಪ್ತ ಮೂಲವೊಂದು ಸ್ಪಷ್ಟಪಡಿಸಿದೆ. 'ಮುಂದಿನ ತಿಂಗಳು ಮೃಣಾಲ್ ಮದುವೆಯಾಗುತ್ತಿಲ್ಲ. ಇದು ಗಾಳಿಸುದ್ದಿ' ಎಂದು ಮೂಲಗಳು HTCity ಗೆ ತಿಳಿಸಿವೆ.
ಮೂಲಗಳ ಪ್ರಕಾರ, ಮೃಣಾಲ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮೃಣಾಲ್ ನಟನೆಯ ಚಿತ್ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ ಮತ್ತು ನಂತರ ಮಾರ್ಚ್‌ನಲ್ಲಿ ಮತ್ತೊಂದು ತೆಲುಗು ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ ಮದುವೆಯನ್ನು ಯೋಜಿಸುವುದರಲ್ಲಿ ಅರ್ಥವಿಲ್ಲ. ಈ ಸಮಯದಲ್ಲಿ ಅವರ ಗಮನವು ಸಂಪೂರ್ಣವಾಗಿ ಕೆಲಸದ ಮೇಲೆ ಇದೆ' ಎಂದು ಮೂಲಗಳು ತಿಳಿಸಿವೆ.
2025ರ ಆಗಸ್ಟ್‌ನಲ್ಲಿ ಮೃಣಾಲ್ ಮತ್ತು ಧನುಷ್ ನಡುವಿನ ಡೇಟಿಂಗ್ ವದಂತಿಗಳು ಹಬ್ಬಿದವು. ಮೃಣಾಲ್ ತನ್ನ 'ಸನ್ ಆಫ್ ಸರ್ದಾರ್ 2' ಚಿತ್ರದ ಫಸ್ಟ್ ಷೋ ವೇಳೆ ತಮಿಳು ನಟ ಧನುಷ್ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದು ಕಂಡುಬಂದ ನಂತರ, ಅವರಿಬ್ಬರು ಡೇಟಿಂಗ್ ಮಾಡುತ್ತಿರಬಹುದು ಎಂಬ ವದಂತಿಗಳು ಕೇಳಿಬಂದವು. ಆ ಕ್ಷಣದ ವಿಡಿಯೋ ವೈರಲ್ ಆಗಿತ್ತು. ಇದಕ್ಕೂ ಮೊದಲು, ಧನುಷ್ ಅವರ ಚಿತ್ರ ತೇರೆ ಇಷ್ಕ್ ಮೇ ಚಿತ್ರದ ರ‍್ಯಾಪ್ ಪಾರ್ಟಿಯಲ್ಲಿ ಮೃಣಾಲ್ ಉಪಸ್ಥಿತಿಯು ಊಹಾಪೋಹಗಳಿಗೆ ಕಾರಣವಾಗಿತ್ತು.

