

ಬೆಂಗಳೂರು: ನಮ್ಮ ಕನ್ನಡಿಗರಿಗೆ ಯಾವ ರೀತಿ ಕೃತಜ್ಞತೆ ಹೇಳಬೇಕೆಂಬುದು ತಿಳಿತಿಲ್ಲ. ಈ ರೀತಿಯ ಪ್ರೋತ್ಸಾಹ ಸಿಗುತ್ತೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಈಗಲೂ ನನಗೆ ಇದನ್ನೆಲ್ಲ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ತಿಳಿಸಿದ್ದಾರೆ.
ಬಿಗ್ ಬಾಸ್ ಗೆದ್ದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಗಿಲ್ಲಿ, ಯೋಧರು, ಕನ್ನಡ ಜನತೆಯಲ್ಲದೆ ಬೇರೆ ರಾಜ್ಯದವರು, ರೈತರು, ಆಟೋ ಚಾಲಕರು, ಮಕ್ಕಳಿಂದ ಹಿಡಿದು ದೊಡ್ಡವರು ಸೇರಿದಂತೆ ಎಲ್ಲರೂ ಸಾಕಷ್ಟು ಪ್ರೀತಿಯನ್ನು ನೀಡಿದ್ದೀರಿ. ಇದಕ್ಕೆ ನಾನು ಋಣಿಯಾಗಿರುವೆ ಎಂದಿದ್ದಾರೆ.
'ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ.. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ.. ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ.. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ' ಎಂದು ಗಿಲ್ಲಿ ಬರೆದುಕೊಂಡಿದ್ದಾರೆ.
ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಮಾತುಗಳನ್ನು ನೋಡಲಿಲ್ಲ. ಟ್ಯಾಟೂ ಹಾಕಿಸಿಕೊಂಡವರು ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರೀತಿಯನ್ನು ಕೊನೆಯವರೆಗೂ ನಾನು ಉಳಿಸಿಕೊಳ್ಳುವೆ ಎಂದಿದ್ದಾರೆ.
Advertisement