

ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಟ ಹಾಗೂ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರು ಗುರುವಾರ ಪ್ರತಿರೋಧ ವ್ಯಕ್ತಪಡಿಸಿದರು.
ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಗುರುವಾರ ನಡೆದ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು ಅವರು, ಪ್ಯಾಲೆಸ್ಟೀನ್‌ನ ‘ಯುದ್ಧಗಳು ಕೊನೆಗೊಳ್ಳುತ್ತವೆ, ನಾಯಕರು ಕೈಕುಲುಕಿ ತೆರಳುತ್ತಾರೆ ಆದರೆ, ಆ ವೃದ್ಧೆ ತನ್ನ ಮಗನಿಗಾಗಿ ಕಾಯುತ್ತಿರುತ್ತಾಳೆ....’ ಎಂಬ ಪದ್ಯ ಓದಿ ಪ್ರತಿರೋಧಿಸಿದರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅಥವಾ ಸಾಹಿತ್ಯೋತ್ಸವಗಳ ಉದ್ದೇಶ ವಿಭಿನ್ನ ಆಲೋಚನೆಗಳನ್ನು ಹಂಚಿಕೊಳ್ಳುವುದು ಮತ್ತು ಮಾನವೀಯ ಸಂಬಂಧಗಳಿಗೆ ಅವಕಾಶ ಕಲ್ಪಿಸುವುದಾಗಿದೆ. ಆದರೆ, ಇತ್ತೀಚೆಗೆ ಸಿನಿಮಾ ಮತ್ತು ಸಾಹಿತ್ಯ ಕಾರ್ಯಕ್ರಮಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ. ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೀನ್ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಒಪ್ಪಲಾಗದು. ಇದರ ವಿರುದ್ಧ ಗಟ್ಟಿಯಾದ ನಿಲುವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಬೇಕು. ಕರ್ನಾಟಕದ ‘ಹಾರ್ಟ್ ಲ್ಯಾಂಪ್’ ಎಂಬ ಕಿರು ಕಥಾ ಸಂಕಲನ ಇಂಗ್ಲಿಷ್‌ಗೆ ಅನುವಾದಗೊಂಡು ಬುಕ್ಕರ್ ಪ್ರಶಸ್ತಿ ಗೆದ್ದಾಗ ನಾವು ಹೆಮ್ಮೆಪಟ್ಟೆವು. ಹಾಗಾದರೆ ಇತರರು ತಮ್ಮ ಕಥೆಗಳನ್ನು ನಮ್ಮ ನೆಲಕ್ಕೆ ತರುವುದನ್ನು ತಡೆಯುವುದು ಹೇಗೆ ಸಮ್ಮತ?” ಎಂದು ಪ್ರಶ್ನಿಸಿದರು. ಕೇರಳ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಿ ಚಿತ್ರಗಳನ್ನು ಪ್ರದರ್ಶಿಸಿದೆ, ಕರ್ನಾಟಕವೂ ಅದೇ ಧೈರ್ಯ ತೋರಬೇಕು ಎಂದು ಹೇಳಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದ ಹೊರಗಿನ ಅಥವಾ ಸ್ಥಳೀಯವಾಗಿ ನಿರ್ಮಿತ ಚಿತ್ರಗಳ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಅವುಗಳನ್ನು ಸಕಾರಾತ್ಮಕವಾಗಿ ಪೋಷಿಸಿದರೆ ಇಂತಹ ಕಾರ್ಯಕ್ರಮಗಳು ಉದ್ದೇಶ ಸಾಧಿಸಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ದೇಶ ಬೇರೆ ದೇಶಗಳ ಜನರ ಬದುಕು, ರಾಜಕೀಯ ವ್ಯವಸ್ಥೆ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವುದಾಗಿದೆ ಎಂದು ಹೇಳಿದರು. ಆದರೆ, ಪ್ರಕಾಶ್ ರಾಜ್ ಅವರ ಪ್ಯಾಲೆಸ್ಟೀನ್ ಚಿತ್ರಗಳ ವಿಷಯದ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸಿನಿಮಾ ಕೇವಲ ಮನರಂಜನೆಗೆ ಸೀಮಿತವಲ್ಲ, ಸಮಾಜದ ವೈಷಮ್ಯಗಳನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಮತ್ತು ಮಹಿಳೆಯರು ಎದುರಿಸುವ ಅಸಮಾನತೆ, ಬಡತನ ಮತ್ತು ಅನ್ಯಾಯವನ್ನು ಸಮಾಜದ ಮುಂದೆ ಇಡುವ ಜವಾಬ್ದಾರಿ ಸಿನಿಮಾಗೆ ಇದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಮಾತನಾಡಿ, ಈ ವರ್ಷದ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಆಕರ್ಷಣೆಯಾಗಿ ಸರ್ಕಾರ ನೀಡಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಘೋಷವಾಕ್ಯವನ್ನು ಉಲ್ಲೇಖಿಸಿದರು.
ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪ್ರೇರಣೆಯಿಂದ ರೂಪುಗೊಂಡ ಈ ಘೋಷವಾಕ್ಯದ ಆಶಯದಂತೆ, 65ಕ್ಕೂ ಹೆಚ್ಚು ದೇಶಗಳಿಂದ 250ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದರು.
ಈ ಚಿತ್ರೋತ್ಸವದಲ್ಲಿ 120ಕ್ಕೂ ಹೆಚ್ಚು ಪ್ರಶಸ್ತಿ ಪಡೆದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿತ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, 65ಕ್ಕೂ ಹೆಚ್ಚು ಮಹಿಳಾ ನಿರ್ದೇಶಕರು ಭಾಗವಹಿಸಿದ್ದಾರೆ ಎಂದು ತಿಳಿಸಿದರು. ಜೊತೆಗೆ ಚಲನಚಿತ್ರ ತಂಡಗಳಿಗೆ ರೆಡ್ ಕಾರ್ಪೆಟ್ ಸ್ವಾಗತ, ಕನ್ನಡ ಚಿತ್ರರಂಗದ 91 ವರ್ಷಗಳು ಮತ್ತು ಉದ್ಯಮದ 99 ವರ್ಷಗಳನ್ನು ಗುರುತಿಸುವ ಛಾಯಾಚಿತ್ರ ಪ್ರದರ್ಶನಗಳು, ಲುಲು ಮಾಲ್‌ನಲ್ಲಿ ವಾಲ್ ಆಫ್ ಆನರ್, ಓಪನ್ ಏರ್ ಸ್ಕ್ರೀನಿಂಗ್‌ಗಳು ಮತ್ತು ಚಿತ್ರ ಕಾರ್ಮಿಕರಿಗೆ ಹೆಚ್ಚುವರಿ ವೈದ್ಯಕೀಯ ನೆರವು ಸೇರಿದಂತೆ ಹಲವು ಉಪಕ್ರಮಗಳ ಕುರಿತು ಮಾತನಾಡಿದರು. ಇದೇ ವೇಳೆ ಚಿತ್ರಗಳ ಅನುಮತಿಗಾಗಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
Advertisement