

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದಾಗ್ಯೂ, ಹಲವು ಕಹಿ ಘಟನೆಗಳನ್ನು ಅವರು ಎದುರಿಸಿದ್ದು, ತಮಗಾದ ಅತ್ಯಂತ ಆಘಾತಕಾರಿ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಅವರು ಇತ್ತೀಚೆಗೆ ಸಿನಿಮಾ ಸೆಟ್‌ನಲ್ಲಿ ತಮಗಾದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದು, ಸಹಾಯಕ ನಿರ್ದೇಶಕರೊಬ್ಬರು ಯಾವುದೇ ಅನುಮತಿ ಪಡೆಯದೇ ಅನಿರೀಕ್ಷಿತವಾಗಿ ತಮ್ಮ ಕ್ಯಾರವಾನ್‌ಗೆ ಪ್ರವೇಶಿಸಿದರು. ಅಲ್ಲದೆ ಅವರು ತಮ್ಮ ಶರ್ಟ್ ತೆಗೆದು ತನ್ನ ಎದೆಯ ಮೇಲಿದ್ದ ಟ್ಯಾಟೂ ತೋರಿಸಿದ ಆಘಾತಕಾರಿ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.
"ಕೆಲವು ದಿನಗಳ ಹಿಂದೆ, ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ ನಂತರ, ನಾನು ನನ್ನ ಕ್ಯಾರವಾನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಆ ಸಮಯದಲ್ಲಿ, ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನನ್ನ ಅನುಮತಿ ಪಡೆಯದೆ ಇದ್ದಕ್ಕಿದ್ದಂತೆ ಕ್ಯಾರವಾನ್‌ಗೆ ಪ್ರವೇಶಿಸಿದರು. ಅವರು ತಕ್ಷಣ ತಮ್ಮ ಶರ್ಟ್ ತೆಗೆದು ತಮ್ಮ ಎದೆಯ ಮೇಲೆ ನನ್ನ ಹೆಸರಿನ ಹಚ್ಚೆ ಇರುವುದನ್ನು ತೋರಿಸಿದರು. ಆ ಘಟನೆಯಿಂದ ನಾನು ತುಂಬಾ ಆಘಾತಕ್ಕೊಳಗಾಗಿದ್ದೆ, ನನ್ನ ಕೈಗಳು ಮತ್ತು ಕಾಲುಗಳು ನಡುಗಲು ಆರಂಭಿಸಿದವು" ಎಂದು ನಟಿ ಹೇಳಿರುವುದಾಗಿ ಎಬಿಪಿ ನ್ಯೂಸ್ ವರದಿ ಮಾಡಿದೆ.
ಸಹಾಯಕ ನಿರ್ದೇಶಕರು ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದನ್ನು ನಟಿ ಕಾಜಲ್ ಮೆಚ್ಚಿಕೊಂಡರೂ, ಅವರು ನಡೆದುಕೊಂಡ ರೀತಿ ಸಂಪೂರ್ಣ ಅನುಚಿತವಾಗಿತ್ತು ಎಂದು ಅವರು ಒತ್ತಿ ಹೇಳಿದ್ದಾರೆ.
"ಅವರು ತಮ್ಮ ದೇಹದ ಮೇಲೆ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಕ್ಕೆ ನನಗೆ ಸಂತೋಷವಾಯಿತು. ಆದರೆ, ಒಬ್ಬ ಮಹಿಳೆಯ ಅನುಮತಿಯಿಲ್ಲದೆ ಅವರು ಒಬ್ಬಂಟಿಯಾಗಿರುವಾಗ ಒಳಗೆ ಬರುವುದು ಸೂಕ್ತವಲ್ಲ. ಯಾರಾದರೂ ಎಷ್ಟೇ ದೊಡ್ಡ ಅಭಿಮಾನಿಯಾಗಿದ್ದರೂ, ಅಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಈ ರೀತಿ ಮಾಡಿದರೆ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದು ನಾನು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದೆ" ಎಂದು ನಟಿ ಹೇಳಿದ್ದಾರೆ.
ಕಾಜಲ್ ಅಗರ್ವಾಲ್ ಅವರು 2004ರಲ್ಲಿ ಬಾಲಿವುಡ್‌ನ 'ಕ್ಯೂಂ! ಹೋ ಗಯಾ ನಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ 2009ರಲ್ಲಿ ತೆರೆಕಂಡ ಎಸ್‌ಎಸ್ ರಾಜಮೌಳಿ ಅವರ ‘ಮಗಧೀರ’ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಇತ್ತೀಚೆಗೆ ಜುಲೈ 24ರಂದು ಬಿಡುಗಡೆಯಾದ 'ದಿ ಇಂಡಿಯಾ ಸ್ಟೋರಿ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಾಜಲ್, ಸಿಂಗಂ ಹಾಗೂ ಸ್ಪೆಷಲ್ 26 ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.