

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ರಿಷಬ್ ಮೊದಲು ಹೊಂಬಾಳೆ ಮತ್ತು ಕಾಂತಾರ ಅಧಿಕೃತ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು.
ಈಗ ಅಚ್ಚರಿ ಎಂಬಂತೆ, ತಮ್ಮ ಅತ್ಯಾಪ್ತ ಗೆಳೆಯ, ರಾಜ್ ಬಿ. ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ರಿಷಬ್ ಮತ್ತು ರಾಜ್ ಬಿ. ಶೆಟ್ಟಿ ನಡುವೆ ವೈಮನಸ್ಸು ಉಂಟಾಗಿದೆ ಎಂಬ ವದಂತಿಗಳು ಈ ಹಿಂದೆಯೇ ಹರಿದಾಡುತ್ತಿದ್ದವು. ಈ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದ ರಾಜ್ ಬಿ. ಶೆಟ್ಟಿ, ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು.
ಆದರೆ ರಿಷಬ್ ಅವರ ಈ ಸಡನ್ ಅನ್‌ಫಾಲೋ ನಡೆ ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ರಾಜ್ ಮತ್ತು ರುಕ್ಮಿಣಿ ಇಬ್ಬರೂ ಇಂದಿಗೂ ರಿಷಬ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಯುಗಾದಿ ಹಬ್ಬದಂದು ರಿಷಬ್ ‘2ನೇ ಅಧ್ಯಾಯ ಆರಂಭ’ ಎಂಬ ಪೋಸ್ಟರ್ ಹಂಚಿಕೊಂಡಿದ್ದರು. ಇದು ‘ಕಾಂತಾರ’ ಸರಣಿಯದ್ದೇ ಅಥವಾ ಅವರ ಮೊದಲ ಹಿಟ್ ಚಿತ್ರ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ಯ ಮುಂದುವರಿದ ಭಾಗವೇ ಎಂಬ ಗೊಂದಲ ಅಭಿಮಾನಿಗಳಲ್ಲಿದೆ. ಹೊಂಬಾಳೆ ಬ್ಯಾನರ್ ಬದಲಿಗೆ ರಿಷಬ್ ತಮ್ಮದೇ ಸ್ವಂತ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಘೋಷಿಸಿರುವುದು ಭಿನ್ನಾಭಿಪ್ರಾಯದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
Advertisement