

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಅವರ ಉನ್ನತಿ ಅನೇಕರನ್ನು ಅಚ್ಚರಿಗೊಳಿಸಿದ್ದು, ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (TVK) ತನ್ನ ಮೊದಲ ಚುನಾವಣೆಯಲ್ಲೇ ವಿಧಾನಸಭೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಈ ನಡುವೆ, ವಿಜಯ್ ಅಭಿನಯದ 2024ರ ಬ್ಲಾಕ್‌ಬಸ್ಟರ್ ಚಿತ್ರ The Greatest Of All Time (GOAT)ನ ಒಂದು ಚಿಕ್ಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ವೈರಲ್ ಆಗಿದೆ. ಅನೇಕರು ಇದನ್ನು ವಿಜಯ್ ಅವರ ಮುಖ್ಯಮಂತ್ರಿ ಹುದ್ದೆಯ ಕನಸಿನ ಸೂಕ್ಷ್ಮ ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಆ ದೃಶ್ಯದಲ್ಲಿ ವಿಜಯ್ “TN 07 CM 2026” ಎಂಬ ನೋಂದಣಿ ಸಂಖ್ಯೆಯ ಕಾರು ಓಡಿಸುತ್ತಿರುವುದು ಕಾಣಿಸುತ್ತದೆ. ಈಗ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಹೊಸ್ತಿನಲ್ಲಿದ್ದು, ಈ ಸಂಖ್ಯೆ ಬಹಳ ಹೊಂದಿಕೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಅವರು 2024ರ ಫೆಬ್ರವರಿಯಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷವನ್ನು ಆರಂಭಿಸಿದ ಕೆಲವೇ ತಿಂಗಳ ನಂತರ ಈ ಚಿತ್ರ ಬಿಡುಗಡೆಯಾಗಿತ್ತು. ಆಗಲೇ ಅವರು 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದವು. ಇದೀಗ ಆ ದೃಶ್ಯದ ನಂಬರ್ ಪ್ಲೇಟ್ ನ್ನು ಅವರ ರಾಜಕೀಯ ಮಹತ್ವಾಕಾಂಕ್ಷೆಯ ಮುನ್ನೋಟವೆಂದು ಹಲವರು ನೋಡುತ್ತಿದ್ದಾರೆ.
“ವಿಜಯ್ ಅವರು ಇದನ್ನು 1000 ಶೇಕಡಾ ನಿಜ ಮಾಡಿದ್ದಾರೆ,” ಎಂದು ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಬಳಕೆದಾರ ವೈರಲ್ ವಿಡಿಯೋಗೆ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ “ಸ್ಪಷ್ಟವಾದ ಪೂರ್ವ ಸೂಚನೆ” ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬ X ಬಳಕೆದಾರ, ಚುನಾವಣಾ ಫಲಿತಾಂಶಗಳು ಮೊದಲು ಚಿತ್ರಮಂದಿರದ ಪರದೆಗಳಲ್ಲೇ ಬಂದಿದ್ದವು ಎಂದು ಪ್ರತಿಕ್ರಿಯಿಸಿದ್ದಾರೆ.
“ದಳಪತಿ ವಿಜಯ್ 2026ರ ದಾರಿಯನ್ನು ಮೊದಲೇ ರೂಪಿಸಿದ್ದರಾ? ಅಭಿಮಾನಿಗಳು ಅವರು ತಮ್ಮ ರಾಜಕೀಯ ಪಯಣ ಮತ್ತು 2026ರ ವಿಜಯದ ಬಗ್ಗೆ ವರ್ಷಗಳ ಹಿಂದೆಯೇ ಸುಳಿವು ನೀಡಿದ್ದರು ಎಂದು ನಂಬುತ್ತಾರೆ. ಇದು ಕೇವಲ ಸಂಖ್ಯೆ ಅಲ್ಲ, ಭವಿಷ್ಯದ ಮುಖ್ಯಮಂತ್ರಿಯ ಭರವಸೆ,” ಎಂದು ಗುರ್ಡಯಾಲ್ ಸಿಂಗ್ ಎಂಬ ಬಳಕೆದಾರ ಬರೆದಿದ್ದಾರೆ. ಹಲವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಕೆಲವರು ಇದನ್ನು ಕೇವಲ ಕಾಕತಾಳೀಯ ಘಟನೆ ಎಂದು ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದೆ. ಬಹುಮತಕ್ಕಿಂತ ಸ್ವಲ್ಪ ಹಿಂದೆ ಉಳಿದಿರುವ ಪಕ್ಷ ಈಗ ಸಣ್ಣ ಪಕ್ಷಗಳೊಂದಿಗೆ ಸರ್ಕಾರ ರಚನೆಗೆ ಮಾತುಕತೆ ನಡೆಸುತ್ತಿದೆ. ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ಹಾಗೂ ಇತರ ಪಕ್ಷಗಳೂ ಮೈತ್ರಿಗೆ ಸೇರುವ ಸಾಧ್ಯತೆಯಿರುವುದರಿಂದ, ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ.
Advertisement