

ಲಕ್ನೋ: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಕನಿಕಾ ಕಪೂರ್ ಅವರು ಉದ್ಯಮಿ ಗೌತಮ್ ಹತಿರಮಣಿ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಿಸಿದ್ದಾರೆ. 2022ರಲ್ಲಿ ಲಂಡನ್‌ನಲ್ಲಿ ವಿವಾಹವಾಗಿದ್ದ ಈ ಜೋಡಿ, ನಾಲ್ಕು ವರ್ಷಗಳ ಬಳಿಕ ಪರಸ್ಪರ ದೂರವಾಗಲು ನಿರ್ಧರಿಸಿದೆ.
ಈ ಕುರಿತು ಕನಿಕಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಿಂದ ಮದುವೆಯ ಫೋಟೋ ಗಳನ್ನು ಡಿಲೀಟ್ ಮಾಡಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ನಾವು ಬೇರಾಗುವುದಕ್ಕೆ ಮೂರನೇ ವ್ಯಕ್ತಿಯ ಪ್ರವೇಶ ಕಾರಣವಲ್ಲ ಎಂದು ಕನಿಕಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಉದ್ಯೋಗದ ನಿಮಿತ್ತ ಗೌತಮ್ ಅವರು ವಾಸಿಸುತ್ತಿರುವ ನೈಜೀರಿಯಾದ ಲಾಗೋಸ್‌ಗೆ ತೆರಳಲು ತಾನು ಇಷ್ಟಪಡದ ಕಾರಣಕ್ಕೆ ದಾಂಪತ್ಯ ಮುರಿದುಬಿದ್ದಿದೆ ಎಂಬ ವದಂತಿಯನ್ನೂ ಅವರು ತಳ್ಳಿಹಾಕಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಕನಿಕಾ, ಸಾಕಷ್ಟು ಚಿಂತನೆ ಮತ್ತು ಪರಾಮರ್ಶೆಯ ಬಳಿಕ, ನಾವಿಬ್ಬರೂ ಪ್ರತ್ಯೇಕವಾಗಿ ಜೀವನ ಸಾಗಿಸಲು ನಿರ್ಧರಿಸಿದ್ದೇವೆ. ಒಟ್ಟಿಗೆ ಕಳೆದ ಸಮಯಕ್ಕಾಗಿ ಕೃತಜ್ಞಳಾಗಿದ್ದೇನೆ. ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಸಹಾನುಭೂತಿಯಿಂದ ವರ್ತಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ನನ್ನ ಜೀವನದಲ್ಲಿ ಬೇರೊಬ್ಬ ವ್ಯಕ್ತಿ ಬಂದಿಲ್ಲ. ನನಗೆ ತಿಳಿದಿರುವಂತೆ ಗೌತಮ್ ಜೀವನದಲ್ಲೂ ಬೇರೊಬ್ಬರು ಇಲ್ಲ. ಇದು ನನ್ನ ಎರಡನೇ ವಿಚ್ಛೇದನವಾಗಿದ್ದು, ಸಹಜವಾಗಿಯೇ ನೋವು ಮತ್ತು ನಿರಾಸೆಯನ್ನು ತಂದಿದೆ ಎಂದು ಹೇಳಿದ್ದಾರೆ.
ನಾನು ಲಾಗೋಸ್‌ನಲ್ಲಿ ವಾಸಿಸಲು ಇಷ್ಟಪಡದ ಕಾರಣಕ್ಕೆ ಮದುವೆ ಮುರಿದುಬಿದ್ದಿದೆ ಎನ್ನುವುದು ಸತ್ಯವಲ್ಲ. ದಾಂಪತ್ಯ ಜೀವನ ಮುರಿದುಬಿದ್ದಾಗ ಮೊದಲು ಮಹಿಳೆಯನ್ನೇ ದೂಷಿಸುವುದು ಸಾಮಾನ್ಯವಾಗಿದೆ. ಇದು ಅನ್ಯಾಯ. ದಾಂಪತ್ಯದಲ್ಲಿ ನಿಜವಾಗಿ ಏನಾಯಿತು ಎಂಬುದು ಆ ಇಬ್ಬರಿಗೆ ಮಾತ್ರ ತಿಳಿದಿರುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗೌತಮ್ ಅವರ ಸ್ನೇಹಿತರನ್ನು ಉಲ್ಲೇಖಿಸಿ 'ಮುಂಬೈ ಮಿರರ್' ವರದಿ ಮಾಡಿದ್ದು, ಈ ಪ್ರತ್ಯೇಕತೆಯಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದೆ. ಕನಿಕಾ ಸ್ವತಂತ್ರ ಮನೋಭಾವದ ವ್ಯಕ್ತಿಯಾಗಿದ್ದು, ಸಂಗೀತ ಕಾರ್ಯಕ್ರಮಗಳಿಗಾಗಿ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬುದು ಗೌತಮ್ ಅವರಿಗೆ ಮೊದಲಿನಿಂದಲೂ ತಿಳಿದಿತ್ತು. ಕೆಲವೊಮ್ಮೆ ಒಂದೇ ವಾರದಲ್ಲಿ ಸೇಂಟ್ ಟ್ರೋಪೆಜ್, ಲಂಡನ್ ಮತ್ತು ಮುಂಬೈ ನಡುವೆ ಪ್ರಯಾಣಿಸುತ್ತಿದ್ದರು ಎಂದು ಸ್ನೇಹಿತರು ಹೇಳಿದ್ದಾರೆ.
ಒಂದೆಡೆ ನಿರಂತರ ಪ್ರವಾಸದ ಒತ್ತಡವಿರುವ ಯಶಸ್ವಿ ಗಾಯಕಿ, ಮತ್ತೊಂದೆಡೆ ಉದ್ಯೋಗದ ಕಾರಣಕ್ಕೆ ಲಾಗೋಸ್ ತೊರೆಯಲು ಸಾಧ್ಯವಾಗದ ಉದ್ಯಮಿ. ಇಬ್ಬರ ಜೀವನಶೈಲಿ ಹಾಗೂ ನಿರೀಕ್ಷೆಗಳಲ್ಲಿನ ವ್ಯತ್ಯಾಸ ಸಂಬಂಧದಲ್ಲಿ ಅಸಮಾಧಾನ ಮೂಡಿಸಿತ್ತು ಎಂದು ವರದಿ ತಿಳಿಸಿದೆ.