

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದಲ್ಲಿ ಸೀತೆ ಪಾತ್ರಕ್ಕೆ ನಟಿ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಇದೀಗ ಟ್ರೋಲ್‌ಗೆ ಗುರಿಯಾಗಿರುವ ನಟಿ ಸಾಯಿ ಪಲ್ಲವಿ ಅವರ ಬೆಂಬಲಕ್ಕೆ ನಿಂತಿರುವ ಖ್ಯಾತ ತಮಿಳು ನಟ ಧನುಷ್ ಅವರು, ಇಡೀ ದೇಶ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಸಿಗಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಮುಂಬರುವ 'ಓಎಂ' (OM) ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್, ಸಾಯಿ ಪಲ್ಲವಿ ಅವರನ್ನು ಶ್ಲಾಘಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ, ಸಾಯಿ ಪಲ್ಲವಿ ಅವರನ್ನು ಸೀತೆ ಪಾತ್ರಕ್ಕೆ ಆಯ್ಕೆ ಮಾಡಿರುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಧನುಷ್ ಮಾತನಾಡಿದ್ದು, ಈ ಟೀಕೆಗಳನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
"ಸೀತೆ ಪಾತ್ರದಲ್ಲಿ ಅವರ ನಟನೆಯ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತು ಟೀಕೆಗಳು ಕೇಳಿಬರುತ್ತಿವೆ. ಇದು ನನಗೆ ಅರ್ಥವಾಗುತ್ತಿಲ್ಲ. ಚಿತ್ರೀಕರಣದ ವಿರಾಮದ ಸಮಯದಲ್ಲೂ ಅವರು ಸದಾ ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದರು. ಇಡೀ ಭಾರತದಲ್ಲಿ ಹುಡುಕಿದರೂ, ಅವರಂತಹ ಮತ್ತೊಬ್ಬ ಸೀತೆಯನ್ನು ಕಾಣಲು ಸಾಧ್ಯವಿಲ್ಲ. ಅವರು ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ, ಅತ್ಯಂತ ಶುದ್ಧ ಹೃದಯದ ವ್ಯಕ್ತಿ. ಅವರು ನೋಡಲು ತುಂಬಾ ಸುಂದರವಾಗಿದ್ದಾರೆ ಮತ್ತು ಒಬ್ಬ ಅದ್ಭುತ ಕಲಾವಿದೆ," ಎಂದು ಧನುಷ್ ಹೇಳಿದ್ದಾರೆ.
'ಮಾರಿ 2' ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಧನುಷ್, ಇತ್ತೀಚಿನ ವರ್ಷಗಳಲ್ಲಿ ಸಾಯಿ ಪಲ್ಲವಿ ಒಬ್ಬ ನಟಿಯಾಗಿ ಹೇಗೆ ವಿಕಸನಗೊಂಡಿದ್ದಾರೆ ಎಂಬುದರ ಕುರಿತೂ ಮಾತನಾಡಿದ್ದಾರೆ. 'ಓಎಂ' ಚಿತ್ರದ ಸೆಟ್‌ನಲ್ಲಿ ಅವರು ಪ್ರದರ್ಶಿಸಿದ ಆತ್ಮವಿಶ್ವಾಸ ಮತ್ತು ಪಾತ್ರದ ಮೇಲಿನ ಹಿಡಿತವನ್ನು ಕಂಡು ತಮಗೆ ಆಶ್ಚರ್ಯವಾಯಿತು ಎಂದು ಅವರು ತಿಳಿಸಿದರು.
"ನಾನು ಮೊದಲ ಬಾರಿಗೆ 'ಮಾರಿ 2' ಚಿತ್ರದ ಸಮಯದಲ್ಲಿ ಸಾಯಿ ಪಲ್ಲವಿ ಅವರನ್ನು ಭೇಟಿಯಾದಾಗ, ಅವರು ತುಂಬಾ ಮುಗ್ಧರಾಗಿದ್ದರು ಮತ್ತು ಬಹಳ ಕಡಿಮೆ ಮಾತನಾಡುತ್ತಿದ್ದರು. ಏನನ್ನಾದರೂ ಹೇಳುವ ಮೊದಲು ಚೆನ್ನಾಗಿ ಯೋಚಿಸುತ್ತಿದ್ದರು, ಮಾತನಾಡಲು ಹಿಂಜರಿಯುತ್ತಿದ್ದರು. ಅಂತಹ ವ್ಯಕ್ತಿತ್ವ ಅವರದ್ದಾಗಿತ್ತು. ಒಂಬತ್ತು ವರ್ಷಗಳ ನಂತರ ಈ ಚಿತ್ರದ ಸೆಟ್‌ನಲ್ಲಿ ಅವರನ್ನು ನೋಡಿದಾಗ, ಅವರು ಸಂಪೂರ್ಣ ಬದಲಾಗಿದ್ದರು. ಅವರು ಒಬ್ಬ ಭಿನ್ನ ವ್ಯಕ್ತಿಯಾಗಿ ರೂಪುಗೊಂಡಿದ್ದರು. ಸಿನಿಮಾ ಕಲೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದವರಂತೆ ಅವರು ಅಲ್ಲಿ ನಿಂತಿದ್ದರು. ಅವರ ಮಾತು, ನಡಿಗೆ ಮತ್ತು ಹಾವಭಾವಗಳಲ್ಲಿ ಅಪಾರ ಆತ್ಮವಿಶ್ವಾಸ ಹಾಗೂ ಘನತೆ ಎದ್ದು ಕಾಣುತ್ತಿತ್ತು. ಇದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು" ಎಂದು ಧನುಷ್ ಹೇಳಿದ್ದಾರೆ.
ಮಾರಿ-2 ಚಿತ್ರದ ಬಳಿಕ ನಟ ಧನುಷ್ಯ ಜೊತೆ ಎರಡನೇ ಬಾರಿ ಸಾಯಿ ಪಲ್ಲವಿ ಓಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು, ಶ್ರೀಗಂಧದ ಮರದ ಅಕ್ರಮ ವ್ಯಾಪಾರದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಿಬಿಐ ಅಧಿಕಾರಿ ನಿತ್ಯಾ ರೆಡ್ಡಿ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.