

ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ಅವರು ಆಡಿರುವ ಮಾತುಗಳು ಸದ್ಯ ಭಾರೀ ಚರ್ಚೆಗೆ ಕಾರಣವಾಗಿವೆ.
ಹಬ್ಬದ ಸಂಭ್ರಮದ ವೇದಿಕೆಯಲ್ಲಿ ನಟ ದರ್ಶನ್ ಅವರ ಪರವಾಗಿ ಮಾತನಾಡುತ್ತಾ ಅವರು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸದ್ದು ಮಾಡುತ್ತಿವೆ.
ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ವೇದಿಕೆಗೆ ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಆಗಮಿಸಿದ್ದರು. ಅವರು ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿದ್ದ ದರ್ಶನ್ ಅಭಿಮಾನಿಗಳು) ಜೋರಾಗಿ ಡಿ ಬಾಸ್… ಡಿ ಬಾಸ್… ಎಂದು ಘೋಷಣೆ ಕೂಗಿ ಸ್ವಾಗತಿಸಿದರು.
ದರ್ಶನ್ ಅಭಿಮಾನಿಗಳ ಘೋಷಣೆ ಮುಗಿಯುತ್ತಿದ್ದಂತೆ ವೇದಿಕೆಯ ಮೇಲೆ ಮಾತನಾಡಿದ ನಟ ಧನ್ವೀರ್ ಗೌಡ, ಅಭಿಮಾನಿಗಳ ಪ್ರೀತಿ ಮತ್ತು ಪ್ರೋತ್ಸಾಹವನ್ನು ಸ್ಮರಿಸಿಕೊಂಡರು. “ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಹೇಳಿದರು. ಚಾಮರಾಜನಗರ ಪ್ರದೇಶದ ಬಗ್ಗೆ ಮಾತನಾಡುತ್ತಾ, “ನಂಗೆ ಮಾದಪ್ಪನ ಬೆಟ್ಟ ಅಂದ್ರೆ ತುಂಬಾ ಇಷ್ಟ” ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಧನ್ವೀರ್ ಅವರು ನಟ ದರ್ಶನ್ ಬಗ್ಗೆ ಬೆಂಬಲ ಸೂಚಿಸುವ ಹೇಳಿಕೆ ನೀಡಿದರು. “ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಅವರನ್ನು ಏನು ಮಾಡಲಿಕ್ಕೆ ಆಗಲ್ಲ" ಎಂದು ದರ್ಶನ್ ವಿರೋಧಿಗಳಿಗೆ ಧನ್ವೀರ್ ಗೌಡ ಟಾಂಗ್ ಕೊಟ್ರು.
ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬಂದೇ ಬರ್ತಾರೆ. ನಿಮ್ಮ ಪ್ರೀತಿ, ಆಶೀರ್ವಾದ, ಬೆಂಬಲ ಅವರ ಮೇಲೆ ಸದಾ ಹೀಗೆ ಇರಲಿ ಎಂದು ನಟ ಧನ್ವೀರ್ ಗೌಡ ದರ್ಶನ್ ಅಭಿಮಾನಿಗಳಲ್ಲಿ ವೇದಿಕೆ ಮೇಲೆಯೇ ಮನವಿ ಮಾಡಿದ್ರು. ಈ ಮಾತುಗಳು ಅಭಿಮಾನಿಗಳ ಮಧ್ಯೆ ಜೋರಾದ ಘೋಷಣೆಗಳಿಗೆ ಕಾರಣವಾಯಿತು. ಸಿನಿಮಾ ವೇದಿಕೆಯಲ್ಲಿ ಅವರು ಈ ರೀತಿ ಮಾತನಾಡಿದ್ದರೆ ಯಾರೂ ವಿರೋಧ ಹೊರಹಾಕುತ್ತಿರಲಿಲ್ಲ. ಆದರೆ, ಯುವದಸರಾ ವೇದಿಕೆಯನ್ನು ಇಂತಹ ವಿಚಾರಗಳಿಗೆ ಬಳಸಿಕೊಂಡಿರುವುದಕ್ಕೆ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ.