

ಬೆಂಗಳೂರು: 80ರ ದಶಕದ ಟ್ರೆಂಡ್ ಇದೀಗ ಎಲ್ಲೆಲ್ಲೂ ಮನೆ ಮಾಡಿದೆ. ಪ್ರತಿಯೊಬ್ಬರ ಮೊಬೈಲ್ಗಳಲ್ಲಿ ರೆಟ್ರೋ ಲುಕ್ ನೊಂದಿಗೆ ಬಣ್ಣ - ಬಣ್ಣದ ಫೋಟೊಗಳು ವಾಟ್ಸ್ಆಪ್ ಸ್ಟೇಟಸ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಸಾಮಾನ್ಯ ಜನರು 80ರ ಟ್ರೆಂಡ್ ಗೆ ಮಾರು ಹೋಗಿದ್ದಾರೆ.
80 ದಶಕದ ಪೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮುಂದಾಗಬಹುದಾದ ಸೈಬರ್ ಅಪರಾಧಗಳಿಗೆ ತಾವೇ ಕಾರಣರಾಗುತ್ತಿರುವ ಬಗ್ಗೆ ಅರಿವು ಬಹುತೇಕರಿಗೆ ಇಲ್ಲದಾಗಿದೆ. ಸ್ಮಾರ್ಟ್ ಫೋನ್ ಬಳಸುವ ಇಂದಿನ ಯುವ ಜನಾಂಗ ಹಾಗೂ ಜೆನ್ ಜಿಗಳಂತೂ 80ರ ದಶಕದ ಟ್ರೆಂಡ್ ಪೋಟೊಗಳಿಗೆ ಫಿದಾ ಆಗಿದ್ದಾರೆ.
ಯಾರ ಮೊಬೈಲ್ ನೋಡಿದರೂ ಅವರ ಮೊಬೈಲ್ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಇಂತಹ ಪೋಟೊಗಳು ನಳನಳಿಸುತ್ತಿರುವುದನ್ನ ಕಾಣಬಹುದು. ಇಂತಹ ಫೋಟೋಗಳನ್ನೇ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನಿತರ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಸಾರ್ವಜನಿಕರನ್ನ ವಂಚಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನಜಾಗೃತಿ ಮೂಡಿಸಿದ್ದಾರೆ. 80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಟ್ರೆಂಡಿಂಗ್ ವಿಷಯಗಳನ್ನು ಬಳಸಿಕೊಂಡು ಸೈಬರ್ ವಂಚಕರು ಜನರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಿನ ಫೋಟೋಗಳು ರೆಟ್ರೋ ಮಾದರಿಯ ಡೆನಿಮ್ಸ್ ಜಿನ್ಸ್ ಗಳು, ಹಾಗೂ ಕರ್ಲಿ ಹೇರ್ ಸ್ಟೈಲ್ ಜೊತೆಗೆ ಹಳೆಯ ಕಾಲದ ಲುಕ್ ಗಳು ನೈಜ ರೀತಿ ಬಿಂಬಿಸುವ ಪೋಟೊಗಳು ಆಕರ್ಷಿಸುತ್ತಿವೆ. 80ರ ದಶಕದ ಫೋಟೋಗಳನ್ನು ಸೃಷ್ಟಿಸುವುದಕ್ಕಾಗಿ ವಿವಿಧ ಆ್ಯಪ್ ಗಳನ್ನ ಜನರು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ಧಾರೆ.
ಡೌನ್ ಲೋಡ್ ಮಾಡಿಕೊಳ್ಳುವಾಗ ಕೇಳಲಾಗುವ ಎಲ್ಲಾ ರೀತಿಯ ಅನುಮತಿಗಳನ್ನ ಕಣ್ಮುಚ್ಚಿ ಅನುಮೋದಿಸುತ್ತಾರೆ. ಇದರಿಂದ ಮೊಬೈಲ್ ನಲ್ಲಿರುವ ವೈಯಕ್ತಿಕ ಫೋಟೋ ಹಾಗೂ ವಿಡಿಯೋ ಸೇರಿದಂತೆ ರಹಸ್ಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಎಐ ಫೋಟೋ ಸೃಷ್ಟಿಸಲು ಮುಖ ಚಹರೆ (ಫೇಸ್ ರೆಕಗ್ನಿಷನ್) ನೀಡುವುದರಿಂದ ಸೈಬರ್ ವಂಚಕರು ನಿಮ್ಮ ಫೋಟೋಗಳನ್ನ ಬಳಸಿಕೊಂಡು ಐಡೆಂಟಿಟಿಯನ್ನ ಕಳ್ಳತನ ಮಾಡುತ್ತಾರೆ ಎಂದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹಳೆಯ ಫೋಟೋಗಳಿಗೆ ಕಟ್ಟುಬಿದ್ದು, ವಿವಿಧ ಆ್ಯಪ್ ಗಳನ್ನ ಡೌನ್ ಲೋಡ್ ಮಾಡಿಕೊಳ್ಳಬೇಡಿ. ಡೌನ್ ಲೋಡ್ ಮಾಡಿಕೊಳ್ಳುವಾಗ ನಿಮಗೆ ಅರಿವಿಲ್ಲದೇ, ನಿಮ್ಮ ಮೊಬೈಲ್ ನಲ್ಲಿರುವ ವೈಯಕ್ತಿಕ ಮಾಹಿತಿಗಳು ಸೈಬರ್ ಹ್ಯಾಕರ್ ಗಳ ಪಾಲಾಗಲಿದೆ. ಅದರಲ್ಲೂ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೊಟೊಗಳು ಶೇರ್ ಮಾಡಿದಷ್ಟು ಸೈಬರ್ ಕಿರಾತಕರಿಗೆ ಇನ್ನಷ್ಟು ಅನುಕೂಲವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.