ಗಲ್ಲಿಯಿಂದ ಗಲ್ಲಿನತನಕ

"ಈ ಉಮೇಶ್.. ರೆಡ್ಡಿ ಅಲ್ಲ" ಅನ್ನುತ್ತೆ ಖತರ್‌ನಾಕ್ ಟೀಮ್. ಆದರೆ ಉಮೇಶ ಕಣ್ಮುಚ್ಕೊಂಡ್ ರೇಪ್ ಮಾಡಿದ್ರೆ ಪೋಲಿಸ್ರಿಗ್ ಗೊತ್ತಾಗಲ್ವಾ?..
ಗಲ್ಲಿಯಿಂದ ಗಲ್ಲಿನತನಕ
Updated on: 

"ಈ ಉಮೇಶ್.. ರೆಡ್ಡಿ ಅಲ್ಲ" ಅನ್ನುತ್ತೆ ಖತರ್‌ನಾಕ್ ಟೀಮ್. ಆದರೆ ಉಮೇಶ ಕಣ್ಮುಚ್ಕೊಂಡ್ ರೇಪ್ ಮಾಡಿದ್ರೆ ಪೋಲಿಸ್ರಿಗ್ ಗೊತ್ತಾಗಲ್ವಾ? ಹೆಸರು ಬದಲಾಯಿಸ್ಕೊಂಡ್ರೆ ಪ್ರೇಕ್ಷಕರಿಗೆ ಗೊತ್ತಾಗಲ್ವಾ?
  ತಾಯಿ ಸೆಂಟಿಮೆಂಟಿನ ಹಾಗೂ ಗ್ರಾಮೀಣ ಸೊಗಡಿನ ಚಿತ್ರಗಳ ಸಂಭಾಷಣೆಗೆ ಖ್ಯಾತರಾಗಿದ್ದ ಮಳವಳ್ಳಿ  ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಅದಕ್ಕೆ ತದ್ವಿರುದ್ಧ ಎಂಬಂತೆ,  ಸೆಂಟಿಮೆಂಟ್-ಆಕ್ಷನ್-ಲವ್ ಎಲ್ಲದರಿಂದ ಹೊರತಾದ ಸಬ್ಜೆಕ್ಟ್ ಆರಿಸಿಕೊಂಡಿದ್ದಾರೆ. ಸೋ, ಈ ಸಾಯಿ...ಪ್ರಕಾಶ್ ಅಲ್ಲ. ಈ ಸಾಯಿ...ಕುಮಾರ್ ಕೂಡ ಅಲ್ಲ. ಇದು ಮಳವಳ್ಳಿ ಸಾಯಿ'ಕೃಷ್ಣ!
ಸೆಕ್ಸ್ ಎಜುಕೇಶನ್ ಚಿತ್ರಗಳ ಥರ 'ಕ್ರೈಮ್ ಎಜುಕೇಶನ್ ಚಿತ್ರ' ಎಂದು ಕರೆಯಬಹುದಾದ ಈ ಚಿತ್ರದಲ್ಲಿ ಎಲ್ಲ ಕ್ರೈಂಗಳನ್ನೂ ತೋರಿಸಿ, ನಂತರ ಅದರ ಸಾಧಕ-ಬಾಧಕಗಳನ್ನು ಬೋಧನೆ-ರೋಧನೆಗಳ ಮೂಲಕ ನಿರ್ದೇಶಕರು ತಿಳಿಹೇಳಿದ್ದಾರೆ. ಇಲ್ಲಿ ಪ್ರತಿಯೊಬ್ಬರೂ ಸಂದೇಶ ನೀಡುತ್ತಾರೆ. ಆದರೆ ವಿಕೃತಕಾಮಿಗಳ ಸೃಷ್ಟಿಗೆ ಅತೃಪ್ತ ಗೃಹಿಣಿಯರು ಕೂಡ ಕಾರಣ ಎಂಬಂಥ ಸಂದೇಶಗಳು ತುಸುಮಟ್ಟಿಗೆ ಯುವಕರಲ್ಲಿ ಗೊಂದಲ ಮೂಡಿಸಬಹುದೇನೋ. ಹಾಗೆಯೇ ಪುಟ್ಟಣ್ಣ ಅವರ ಎಡಕಲ್ಲು ಗುಡ್ಡದ ಮೇಲೆ ಚಿತ್ರವನ್ನು ಉಮೇಶ ದಾರಿ ತಪ್ಪುವ ಪ್ರಕ್ರಿಯೆಗೆ ಲಿಂಕ್ ಮಾಡಿರುವುದು ಅದ್ಯಾಕೋ ಒಪ್ಪಿಕೊಳ್ಳಲು ಕಷ್ಟ. ಚಿತ್ರದಲ್ಲಿ ಎಷ್ಟು ಕಟ್ಸ್-ಮ್ಯೂಟ್ಸ್ ಇವೆ ಎಂಬುದಕ್ಕೆ ಸೆನ್ಸಾರ್ ಕಮಿಟಿ ಬಳಸಿರುವ ಅಡಿಷನಲ್ ಶೀಟ್‌ಗಳೇ ಸಾಕ್ಷಿ. ಪತ್ರಿಕೆಯಲ್ಲಿ ಹೆಸರಿಸಲು ಮುಜುಗರವಾಗುವಂಥ ಪದಗಳಿಗೆ ಮ್ಯೂಟ್ ನೀಡದ ಕಮಿಟಿ ಉಮೇಶನ ಊರಿನ ಹೆಸರಿನ ಪ್ರಸ್ತಾಪವಿದ್ದಲ್ಲೆಲ್ಲ ಮ್ಯೂಟ್ ನೀಡಿರುವುದು ಪ್ರಶ್ನಾರ್ಹ. ಊರಿನ ಹೆಸರು ಅಂಥ ಬೈಗುಳಕ್ಕಿಂತ ಕೆಟ್ಟದ್ದಿರಬಹುದಾ? ರವಿ ಕಾಳೆ ಅಭಿನಯದಲ್ಲಿ ಜೊಳ್ಳಿಗಿಂತ ಕಾಳೇ ಹೆಚ್ಚು. ಆದರೆ ಕಣ್ಣಲ್ಲಿ ಕ್ರೌರ್ಯ ಕಂಡಷ್ಟು  ವಿಕೃತಿ ಕಾಣುವುದಿಲ್ಲ.
ರೂಪಿಕಾದು 'ತೂಕ'ದ ಪಾತ್ರ. ಉದ್ದುದ್ದ ಡೈಲಾಗ್ ಹೇಳಿ ತೂಕಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶೋಭಿನಾಳ ಧಾರಾಳತೆ ಚಿತ್ರದಲ್ಲಿ ಸದ್ಭಳಕೆಯಾಗಿದೆ. ಶೋಭಾ ರಾಘವೇಂದ್ರ ಅವರದ್ದು 'ಚಂಡ' ಚಿತ್ರದ ರಿಪೀಟ್ ಪಾತ್ರ. ಆದರೂ ಅವರಿಗೆ ಪೂರ್ಣಅಂಕಗಳು. ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಸ್ಟಂಟ್‌ಮಾಸ್ಟರ್ ರವಿವರ್ಮ ಖಡಕ್ಕೋ ಖಡಕ್ಕು. ತಲೆಗಿಂತ ದೊಡ್ಡ ವಿಗ್, ಮುಖಕ್ಕಿಂತ ದೊಡ್ಡ ಮೀಸೆಯಲ್ಲಿ ಮುರಳಿಮೋಹನ್, 'ವಾಯ್ಸ್ ಒಂದ್ ಬಿಟ್ರೆ' ಥೇಟ್ ವಿಲನ್ ರವಿಶಂಕರ್ ಹಾಗೂ ಅವಿಲ್ಲದಿದ್ದಾಗ, ಹೆಸರಿಗೆ ಮಾತ್ರ 'ಮಠ' ಚಿತ್ರದ 'ಪ್ರಣಯ'ಮೂರ್ತಿ. ಶರತ್ ಲೋಹಿತಾಶ್ವ ಅವರದು ಎಂದಿನಂತೆ ಸೀಮಿತ ಅವಕಾಶದಲ್ಲಿ ಪ್ರಬುದ್ಧ ಅಭಿನಯ. ಸಾಧು ರೀರೆಕಾರ್ಡಿಂಗ್ ಮಾತ್ರ ಅಂಡರ್ ವರ್ಲ್ಡ್ ಚಿತ್ರಕ್ಕಿರುವಷ್ಟು ಅಬ್ಬರವಾಗಿದೆ. ಎಂ ಆರ್ ಸೀನು ಅವರ ಕೆಮರಾ ಹೆಚ್ಚೇನೂ ಕೈಚಳಕ ತೋರಿಲ್ಲವಾದರೂ ಚಿತ್ರಕ್ಕೆ ಕೊಟ್ಟಿರುವ ಡ್ರೈ ಅನಿಸುವ ಕಲರ್ ಚಿತ್ರದ ಮೂಡನ್ನು ಎತ್ತಿಹಿಡಿದಿದೆ.
ನಿರ್ದೇಶಕ ಮಳವಳ್ಳಿ ಶಾಟ್ ಇಡುವುದರಲ್ಲಿ ಸಂಯಮ ತೋರಿದ್ದಾರೆ. ಉಮೇಶನೊಳಗೆ ಅಡಗಿರುವ 'ಉಮೆ'ಯನ್ನು ತೋರುವಲ್ಲಿ ಅತಿ ಉಮೇದು ತೋರದೇ 'ಆಕೆ' ಒಳಉಡುಪುಗಳನ್ನು ಆಯ್ದುಕೊಳ್ಳುವುದನ್ನು ನೆರಳಿನ ಚಿತ್ರಣದ ಮೂಲಕ, ಸ್ತಬ್ಧಚಿತ್ರಗಳ ಮೂಲಕ ತೋರಿಸಿ ಜಾಣ್ಮೆ ಮೆರೆದಿರುವ ಸಾಯಿಕೃಷ್ಣ, ಸಂಭಾಷಣೆಯಲ್ಲಿ ಸೆನ್ಸಾರ್‌ನವರಿಗೆ ಕೆಲಸ ನೀಡಲೆಂದೇ ಆಗಾಗ ಮಿತಿಮೀರಿದ್ದಾರೆ. ತಮ್ಮ ಮೇಲೆ ಭರವಸೆ ಇಡುವುದಕ್ಕೇನೂ ಅಡ್ಡಿಯಿಲ್ಲ ಎಂಬುದನ್ನು ನಿರೂಪಣೆಯಲ್ಲಿ ಸಾಬೀತು ಮಾಡಿದ್ದಾರೆ. ಆದರೆ ಮೊನ್ನೆ ನಡೆದ ಎಟಿಎಂ ದುರ್ಘಟನೆಯ ಐದು ನಿಮಿಷದ ವಿಡಿಯೋ, ಡೈಲಾಗ್ ಇಲ್ಲದೇ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ಇಲ್ಲದೇ ಯಾವ ಬೀಭತ್ಸತೆ ಹುಟ್ಟಿಸಿದೆಯೋ ಆ ಥರದ ಭಯ-ಜಾಗೃತಿ ಇಡೀ ಸಿನಿಮಾದ ಯಾವ ದೃಶ್ಯದಲ್ಲೂ ಇಲ್ಲದಿರುವುದು ಚಿತ್ರದ ದೊಡ್ಡ ಮೈನಸ್ ಅನ್ನೋ ಬದಲು ಕ್ರೌರ್ಯ-ವಿಕೃತಿಯನ್ನು ವಿಜೃಂಭಿಸಿಲ್ಲ ಅಂದರೆ ಅದನ್ನು ಸಾಯಿಕೃಷ್ಣ ಕ್ರೆಡಿಟ್ಟಾಗಿ ತಗೋಬಹುದು.

- ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com