ಸಂತೋಷ, ಆಹಾ ಆಹಾ... ಸಂ'ಗೀತಾ' ಓಹೊ ಓಹೊ...

ಸಂತೋಷ, ಆಹಾ ಆಹಾ... ಸಂ'ಗೀತಾ' ಓಹೊ ಓಹೊ...

ತಮಿಳಿನ 'ಮನಮಂ ಕೋತಿ ಪಾರವೈ' ನಕಲಾದ 'ಅಂಜದಗಂಡು' ಚಿತ್ರಕ್ಕೆ ಮೂಲ ಶೀರ್ಷಿಕೆಯನ್ನೇ ತುಸು ಕನ್ನಡೀಕರಿಸಿಟ್ಟಿದ್ದರೆ ಇನ್ನಷ್ಟು ನ್ಯಾಯ ಒದಗುತ್ತಿತ್ತು. ಆದರೆ ತೀರ 'ಮನಸೆಂಬ ಮರ್ಕಟ' ಅಂತೆಲ್ಲ ಕ್ಲಾಸಿ ಟೈಟಲಿಟ್ರೆ   'ಕನಸೆಂಬೋ ಕುದುರೆಯನೇರಿ' ಥರ ಅವಾರ್ಡ್ ಫಿಲ್ಮ್ ಅಂದ್ಕೊಳ್ಳೋ ಅಪಾಯ ಇರೋದ್ರಿಂದ  'ಕ್ಲಾಸಿ ಪಾಳಯ' ಬೇಡವೆಂದು 'ಕಲಾಸಿ ಪಾಳ್ಯ'ದಂಥ ಮಾಸ್ ಟೈಟಲ್‌ಗೆ ಮೊರೆ ಹೋಗಿದ್ದಾರೆ ನಿರ್ದೇಶಕರು. ನಾಯಕನಿಗೂ 'ಮಾರ್ಕೆಟ್‌' ಬೇಕಲ್ವಾ? ಆದರೆ, ಕರ್ಫ್ಯೂಲಿ ಸಿಕ್ಕಿಕ್ಕೊಂಡ ನಾಯಕಿಯನ್ನು ಮಾರ್ಕೆಟ್‌ನಿಂದ ಅಂಜದೇ ಸೇಫಾಗಿ ಹಾಡ್ತಾ ಕುಣೀತಾ ಕರ್ಕೊಂಡ್ ಬರೋ ದೃಶ್ಯ ಹೊರತುಪಡಿಸಿ ಚಿತ್ರದಲ್ಲಿ ನಾಯಕ ಯಾವ ಕ್ಷಣದಲ್ಲೂ 'ಅಂಜದಗಂಡು' ಅನಿಸುವುದೇ ಇಲ್ಲ.
ನಾಯಕಿಯ ಅಣ್ಣಂದಿರಿಗೆ ಹೆದರುತ್ತಲೇ ನಾಯಕಿಯ ಪ್ರೀತಿಸುವಾಗ 'ರಾಮಾಚಾರಿ' ಅನಿಸುತ್ತಾನೆ. ನಾಯಕಿಯೂ ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂತ ಭ್ರಮಿಸಿ ಕಥೆ ಕಟ್ಟುವಾಗ 'ಕನಸುಗಾರ' ಅನಿಸುತ್ತಾನೆ. ಕೆಲಸಕ್ಕೆ ಬಾರದವನಂತಿರುವ ಹೀರೊ, ಚಿತ್ರದ ಕೊನೆಯಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ನಾಯಕಿಯನ್ನು ವರಿಸುವ ಒನ್‌ಲೈನ್ ಮಾತ್ರ ಹಳೆಯ 'ಅಂಜದಗಂಡು' ಚಿತ್ರದೊಂದಿಗಿರುವ ಏಕೈಕ ಹೋಲಿಕೆ.  
ಚೆಲುವಿನ ಚಿತ್ತಾರ, ಶೈಲು, ಹುಡುಗರು(ತಮಿಳು ಮೂಲದವು) ಈ ಮೂರು ಕಥೆಗಳನ್ನು ಇಟ್ಕೊಂಡು ಅದೆಷ್ಟು ಹೊಸ ಕತೆಗಳನ್ನು ಬೇಕಾದರೂ ಸೃಷ್ಟಿ ಮಾಡಬಹುದು ಎಂಬುದಕ್ಕೆ ಇನ್ನೊಂದು ಉದಾಹರಣೆ ಈ ಚಿತ್ರ. ಟೈಟಲ್‌ಗೆ ನ್ಯಾಯ ಒದಗಿಲ್ಲ ಹಾಗೂ ಒರಿಜಿನಲ್ ಚಿತ್ರವಲ್ಲ ಅನ್ನೋ ಅಂಶ ಬಿಟ್ಟರೆ, ಚಿತ್ರಕ್ಕೆ ನೋಡಿಸಿಕೊಳ್ಳುವ ಗುಣವಿದೆ. ಸಂಭಾಷಣೆಯಲ್ಲಿ ಸಹಜವೆಂಬಂತೆ ಹೊಮ್ಮಿರೋ ಕಾಮಿಡಿಯಿದೆ.
ನೀನಾಸಂ ಸತೀಶ್ ತಮ್ಮದೇ ಆದ ಮ್ಯಾನರಿಸಂ ಹಾಗೂ ಗಟ್ಟಿ ಧ್ವನಿಯಿಂದ ಇಷ್ಟವಾಗ್ತಾರೆ. ಆದರೆ ಲೂಸಿಯ ಟ್ಯಾಬ್ಲೆಟ್‌ನ ಪವರ್ ಇನ್ನೂ ಇಳಿದಿಲ್ವಾ ಎಂಬಂತಿರುವ ಅವರ 'ಹ್ಯಾಂಗೋವರ್ ಲುಕ್‌' ಬಗ್ಗೆ ಗಮನ ಹರಿಸಬೇಕಿದೆ.  ಸುಭಿಕ್ಷಾಳ ಕಣ್ಣುಗಳಲ್ಲಿ  ಭಾವಗಳ ಸುಭೀಕ್ಷೆಯಿದೆ. ಹುಡುಗರು ಆಕೆಯ ಕಂಗಳ ಮುಂದೆ ಪ್ರೇಮಕ್ಕಾಗಿ ಭಿಕ್ಷೆ ಬೇಡೋ ಹಾಗೆ ಮಾಡುವಂತಿವೆ.  ಸುಮನ್, ಪ್ರೇಮಿಗಳ ಪಾಲಿಗೆ ವಿಲನ್ ಆದರೂ  ಜಂಟಲ್‌'ಮನ್.   ದೊಡ್ಡಣ್ಣ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್‌ಗೆ ಚಿಕ್ಕಣ್ಣ  ದೊಡ್ಡ ಭರವಸೆಯಾಗಿ ಕಂಡಿದ್ದಾರೆ. ತಾಳಿ ಕಟ್ಟುವ ಶುಭವೇಳೆಗೆ ಹುಡುಗಿಯನ್ನು ಎಸ್ಕೇಪ್ ಮಾಡಿಸುವ ರಾಜು ತಾಳಿಕೋಟೆಯವರ ಕಾಮಿಡಿ  ತಾಳಿಕೊಳ್ಳುವಂತಿದೆ. ಇಮಾನ್ ಸಂಗೀತ ಮೂಲ ಚಿತ್ರದ ಸಂಗೀತಕ್ಕೆ ಇಮಾನ್‌ದಾರಿ ತೋರಿದೆಯೇ ವಿನಃ ಚಿತ್ರಕ್ಕೆ ಸರಿಯಾದ ದಾರಿ ತೋರಿಲ್ಲ. ಚಿತ್ರದ ಬಹುತೇಕ ಎಲ್ಲ ಹಾಡುಗಳಿಗೂ ಕಥಾನಾಯಕನಿಗಿರುವಂತೆಯೇ  ಸ್ವಲ್ಪ  ಮೀಟರ್‌ನ ಕೊರತೆ ಇದೆ. ಛಾಯಾಗ್ರಹಣ ಶುರು ಮತ್ತು ಕೊನೆಯಲ್ಲಿ ಗ್ರಹಣ ಹಿಡಿದಂತಿದ್ದರೂ ಚಂದವಿರೋದು 'ಹೌದು ಸ್ವಾಮಿ'. ಒಟ್ಟಾರೆಯಾಗಿ, ಸಂತು ಮತ್ತು ಗೀತಾ ಸೇರೋದನ್ನು ಬ್ರಹ್ಮ ಬರೋಕೆ ಮುನ್ನ ಒಮ್ಮೆ ನೋಡಬಹುದು.

-ನವೀನ್ ಸಾಗರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com