ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಮಜವಿಲ್ಲ

ವರನಟ ರಾಜಕುಮಾರ ಅವರ ಹುಟ್ಟಿದ ತಿಂಗಳಲ್ಲಿ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಏನಾದರೂ ವಿಶಿಷ್ಟತೆ ತೋರಿದ್ದಾರೆಯೆ?
ರಣವಿಕ್ರಮ ಚಲನಚಿತ್ರ ವಿಮರ್ಶೆ
ರಣವಿಕ್ರಮ ಚಲನಚಿತ್ರ ವಿಮರ್ಶೆ

ಸಮಕಾಲೀನ ಮತ್ತು ಐತಿಹಾಸಿಕ ಕಥೆಗಳನ್ನು ಒಟ್ಟಿಗೇ ಹೇಳುವ ಕಲೆ ಚಲನಚಿತ್ರಗಳಲ್ಲಿನ ಜನಪ್ರಿಯ ತಂತ್ರ! ಇದೆ ಜಾಡಿನಲ್ಲಿ ನಿರ್ದೇಶಕ ಪವನ್ ಒಡೆಯರ್, ಖ್ಯಾತ ನಟ ಪುನೀತ್ ರಾಜಕುಮಾರ್ ಅವರನ್ನು ಹಾಕಿಕೊಂಡು ನಡೆಸಿರುವ ಕಸರತ್ತು ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾಗಿದೇಯೇ? ವರನಟ ರಾಜಕುಮಾರ ಅವರ ಹುಟ್ಟಿದ ತಿಂಗಳಲ್ಲಿ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಏನಾದರೂ ವಿಶಿಷ್ಟತೆ ತೋರಿದ್ದಾರೆಯೆ?

ಭೂಪಟದಲ್ಲೇ ಇರದ ವಿಕ್ರಮತೀರ್ಥ ಎಂಬ ಐತಿಹಾಸಕ ಊರೊಂದರ ಬಗ್ಗೆ ಪತ್ತೆಹಚ್ಚುವ ಪತ್ರಕರ್ತೆ ಅದರ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಸ್ಥಳಕ್ಕೆ ಹೋಗಿ ಕೊಲೆಯಾಗಿರುತ್ತಾಳೆ. ಆದರೆ ಇದಕ್ಕೂ ಮುಂಚೆ ಅವಳು ರಾಜ್ಯದ ಗೃಹ ಮಂತ್ರಿ (ಗಿರೀಶ್ ಕಾರ್ನಾಡ್) ಅವರಿಗೆ ಸ್ಥಳದ ಹಿರಿಮೆ ಕುರಿತು ಪತ್ರ ಬರೆದಿರುತ್ತಾಳೆ. ಈ ಪತ್ರಕರ್ತೆ ಕಾಣೆಯಾಗಿದ್ದರಿಂದ ಅಲ್ಲಿ ಏನೋ ಅಪಾಯವಿದೆ ಎಂದರಿಯುವ ಗೃಹ ಮಂತ್ರಿ, ಅಲ್ಲಿಗೆ ಯಾವುದೇ ಪೊಲೀಸ್ ಪಡೆ ಕಳುಹಿಸದೆ, ಪೊಲೀಸ್ ಕೆಲಸದ ಶೋಧದಲ್ಲಿರುವ ವಿಕ್ರಮನನ್ನು (ಪುನೀತ್ ರಾಜಕುಮಾರ್) ತಾತ್ಕಾಲಿಕ ಪೊಲೀಸ್ ಆಗಿ ನೇಮಕ ಮಾಡಿ, ವಿಕ್ರಮ ತೀರ್ಥದ ಬಗ್ಗೆ ಶೋಧಿಸಲು ಕಳುಹಿಸುತ್ತಾರೆ. ತನ್ನ ಪ್ರೇಯಸಿಯನ್ನು (ಅದಾ ಶರ್ಮಾ) ತೊರೆದು ವಿಕ್ರಮತೀರ್ಥ ಹುಡುಕಹೊರಟ ವಿಕ್ರಮನಿಗೆ ಸಿಗುವುದೇನು? ಮೊದಲಾರ್ಧವಾದರೆ, ದ್ವಿತೀಯಾರ್ಧ ಅದೇ ಸ್ಥಳದ ಸ್ವತಂತ್ರಪೂರ್ವ ಕಥೆಯನ್ನು ಹೇಳಲು ಪ್ರಯತ್ನಿಸಿದೆ. ದ್ವಿತೀಯಾರ್ಧದಲ್ಲಿ ವಿಕ್ರಮತೀರ್ಥ ಊರಿನ ನಾಯಕನಾಗಿ ಅವಿನಾಶ್ ಕಾಣಿಸಿಕೊಂಡರೆ, ವಿಕ್ರಮನ ಪ್ರೇಯಸಿ ಮತ್ತು ಹೆಂಡತಿಯಾಗಿ ಅಂಜಲಿ ಕಾಣಿಸಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ವಿಕ್ರಮ ಪುನೀತ್ ರಾಜಕುಮಾರ್.

ಸಿನೆಮಾದಲ್ಲಿ ಅತ್ಯುತ್ತಮವಾದ ಕಥೆ ಇಲ್ಲವಾದಾಗ ಕಥೆ ಹೇಳುವ ಕ್ರಮವಾದರೂ ಸೋಜಿಗವೆನುಸುವಂತಿದ್ದರೆ ಪ್ರೇಕ್ಷಕನನ್ನು ಹಿಡಿದಿಡಲು ಸಾಧ್ಯ. ಆದರೆ ರಣವಿಕ್ರಮದಲ್ಲಿ ಕಥೆ ಹೇಳುವ ಕ್ರಮದಲ್ಲಿ ಪ್ರೇಕ್ಷಕನಿಗೆ ಯಾವುದೇ ಸೋಜಿಗ ಕಾಣುವುದಿಲ್ಲ. ಮೊದಲಾರ್ಧ ಸಮಕಾಲಿನ ಕಥೆ ಹೇಳುವುದು ಹಾಗೂ ದ್ವಿತೀಯಾರ್ಧದಲ್ಲಿ ಯಾವುದೋ ಐತಿಹಾಸಿಕ ಕಥೆ ಹೆಣೆಯುವುದು ಸಿದ್ಧ ಸೂತ್ರ. ಆದರೆ ಆ ಸೂತ್ರದಲ್ಲಿ ಏನೂ ಅನಿರೀಕ್ಷಿತತೆ ಇರದೆ, ಎಲ್ಲವೂ ಪ್ರೇಕ್ಷಕ ಊಹಿಸಿದಂತೆಯೇ ಕಥೆ ಹಾದು ಹೋಗುವುದರಿಂದ ಪ್ರೇಕ್ಷಕನಿಗೆ ಆಕಳಿಕೆ ಬರದೆ ಇರಲಾರದು. ಇಂತಹ ಸಿದ್ಧ ಸೂತ್ರಕ್ಕೇ ಅಂಟಿಕೊಂಡಿರುವ ರಣವಿಕ್ರಮ ಕಥೆ ಸಾಧಾರಣ. ಹಾಗೂ ನಿರೂಪಣೆಯಲ್ಲಿ ಎಲ್ಲೂ ಥ್ರಿಲ್ ಎನಿಸುವಂತಹ, ಅನಿರೀಕ್ಷಿತ ತಿರುವು ಪಡೆದುಕೊಳ್ಳುವಂತಹ ಸನ್ನಿವೇಶಗಳು ಇಲ್ಲವೇ ಇಲ್ಲ. ಸಿನೆಮಾದ ಇಡೀ ಭಾರವನ್ನು ಹೊತ್ತಿರುವುದು ಪುನೀತ್ ರಾಜಕುಮಾರ್ ಅವರ ಹೀರೋಯಿಸಂ. ಆ ಹೀರೋಯಿಸಂ ಏನಾದರೂ ಪ್ರೇಕ್ಷಕನ ಮನದಲ್ಲಿ ಹೆಚ್ಚುಗಾರಿಕೆ ಪಡೆಯದಿದ್ದ ಪಕ್ಷದಲ್ಲಿ ಸಿನೆಮಾದ ಹೆಚ್ಚುಗಾರಿಕೆಯೂ ಕೊಚ್ಚಿಹೋಗುತ್ತದೆ. ಪ್ರತಿಯೊಂದು ಹಂತದಲ್ಲೂ ವಿಕ್ರಮನನ ಹೀರೋಯಿಸಂಗೆ ನುಜ್ಜುಗುಜ್ಜಾಗುವ ಬೇತಾಳಗಳು ಇಡೀ ಸಿನೆಮಾದುದ್ದಕ್ಕೂ ಕಂಡುಬರುತ್ತದೆ. ಇಡೀ ಸ್ಕ್ರೀನ್ ಸಮಯವನ್ನು ಆವರಿಸಿಕೊಳ್ಳುವವನು ನಾಯಕ ನಟ. ಆದುದರಿಂದ ನಾಯಕ ನಟಿಯರಾಗಿರುವ ಆದ ಶರ್ಮಾ ಆಗಲೀ ಅಂಜಲಿ ಆಗಲಿ ತ್ರಾಸವಿಲ್ಲದೆ ನಟನೆ. ಗಿರೀಶ್ ಕಾರ್ನಾಡ್ ನಟನೆಯಲ್ಲಿ ಕೂಡ ಅದ್ಭುತ ಮ್ಯಾಜಿಕ್ ಏನೂ ಕಂಡುಬರುವುದಿಲ್ಲ. ಯಾವುದೇ ಪಾತ್ರಗಳಲ್ಲಿ, ಪಾತ್ರಗಳ ಸಂಬಂಧಗಳಲ್ಲಿ ಗಟ್ಟಿತನದ ಭಾವನೆಗಳ ಚಿತ್ರಣ ಇಲ್ಲ. ಮಧ್ಯೆ ಮಧ್ಯೆ ಬರುವ ಸುದ್ದಿ ವಾಹಿನಿಗಳ ನ್ಯೂಸ್ ಶೋಗಳು ಕಿರಿಕಿರಿ ಉಂಟುಮಾಡುತ್ತವೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಎರಡು ಹಾಡುಗಳನ್ನು ಕೇಳಿ ಆನಂದಿಸಬಹುದು. ಇಷ್ಟು ಬಿಟ್ಟರೆ ಪುನಿತ್ ರಾಜಕುಮಾರ್ ಅವರ ಪವರ್ ಅಭಿಮಾನಿಗಳಿಗೆ ಅವರ ಪವರ್ ಮತ್ತು ಹಿರೋಯಿಕ್ ನಟನೆ ಇಷ್ಟವಾಗಬಹುದು. ನಿರ್ದೇಶಕ ತಮ್ಮ ಪ್ರಚಾರ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿರುವ ಯಾವುದೇ ಹೊಸತನ ಸಿನೆಮಾದಲ್ಲಿ ಕಂಡುಬರುವುದಿಲ್ಲ. ತೆಲುಗಿನ ಅನೇಕ ಚಿತ್ರಗಳ ಛಾಯೆ ದಟ್ಟವಾಗಿ ರಾಚುತ್ತದೆ. ಅಬ್ಬರಿಸಿ ಬೊಬ್ಬಿರುವ ಚಿತ್ರದಲ್ಲಿ ಪ್ರೇಕ್ಷಕನಿಗೆ ಬೇಕಿರುವ ಮನರಂಜನೆ ದಕ್ಕುವುದೇ ಇಲ್ಲ.

ನಟರನ್ನು ಬರೀ ಅವರ ಹಿರೋಯಿಸಂಗೆ ಬಂಧಿಸದೆ ಹಲವಾರು ಸಾಧ್ಯತೆಗಳ ಆವಿಷ್ಕಾರದಲ್ಲಿ ನಿರ್ದೇಶಕರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಹೀರೋಯಿಸಂ ಭರಾಟೆಯಲ್ಲಿ ಕಥೆ ಹೆಣೆಯುವುದನ್ನು ಒಂದು ಕಡೆ ಮರೆತರೆ ಹೆಣೆಯುವ ಕಥೆಯಲ್ಲಿ ಸೂಕ್ಷ್ಮತೆಗಳು ಕಾಣೆಯಾಗಿ ದಪ್ಪ ಚರ್ಮದವರಾಗಿಬಿಡುತ್ತಾರೆ. ವಿಕ್ರಮತೀರ್ಥ ಎಂಬ ಕನ್ನಡ ಸ್ಥಳವನ್ನು ಮರಾಠಿ ಭಾಷಿಕನೊಬ್ಬ ಆಳುತಿದ್ದಾನೆ ಎಂಬ ಕಥೆ ಕಟ್ಟುವುದೋ, ಪೋಲಿಸ್ ಅಧಿಕಾರಿಯಾಗಿ ಅಪರಾಧಿಯನ್ನು ಹಿಡಿಯುವುದರ ಬದಲು ಕೊಂದು ಹಾಕುತ್ತೀನಿ ಎಂದು ಹೇಳುವ ನಾಯಕ ನಟನ ಮಾತೋ, ಮೊದಲಾರ್ಧಲ್ಲಿ ಕಾಲಿಗೆ ಚೈನುಗಳಿಂದ ಬಂಧಿತರಾಗಿರುವವರನ್ನು ರಕ್ಷಿಸುವ ನಾಯಕ ನಟ, ದ್ವಿತೀಯಾರ್ಧದಲ್ಲಿ ಕಾಡು ಜನರು ಎಂದು ಹೇಳಿ ಅವರನ್ನು ಎತ್ತಿನ ಗಾಡಿ ಎಳೆಯುವಂತೆ ಮಾಡುವುದೋ ಕೆಟ್ಟ-ದುರುದ್ದೇಶದ ಸಂದೇಶಗಳನ್ನು ನೀಡುತ್ತದೆ. ಅತಿ ದೊಡ್ಡ ಜನಪ್ರಿಯ ಮಾಧ್ಯಮವಾದ ಸಿನೆಮಾ ಯಾವುದೇ ಕಥೆ ಹೇಳಲಿ, ಅನ್ಯ ಭಾಷಿಕರ ನಡುವಿನ ಪ್ರೀತಿ, ಮಾನವೀಯತೆ, ಪೊಲೀಸರ ಚೌಕಟ್ಟಿನ ಸೀಮಿತ ಶಕ್ತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತೋರಿಸುವುದು ಆರೋಗ್ಯಕರ ಸಮಾಜದ ಅಗತ್ಯತೆ!

- ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com