ಮತ್ತದೇ ಮಳೆ, ಅದೆ ಕಥೆ, ಅದೆ ಏಕತಾನತೆ

ಕಾದ ನೆಲಕ್ಕೆ ಎಂದೋ ಒಂದು ದಿನ ಮಳೆಯ ಸಿಂಚನವಾದಾಗ ಮನಸ್ಸು ಉಲ್ಲಸಿತವಾಗುತ್ತದೆ. ಆದರೆ ಅದೇ ಮಳೆ ವಾರಾನುಗಟ್ಟಲೆ ಹಿಡಿಯಿತು ಎಂದುಕೊಳ್ಳಿ, ಆಗ ಏಕತಾನತೆ, ಬೇಸರಗಳು ಎಗ್ಗಿಲ್ಲದೆ ನಿಮ್ಮನ್ನು
ಮಳೆ ಸಿನೆಮಾ ವಿಮರ್ಶೆ
ಮಳೆ ಸಿನೆಮಾ ವಿಮರ್ಶೆ

ಕಾದ ನೆಲಕ್ಕೆ ಎಂದೋ ಒಂದು ದಿನ ಮಳೆಯ ಸಿಂಚನವಾದಾಗ ಮನಸ್ಸು ಉಲ್ಲಸಿತವಾಗುತ್ತದೆ. ಆದರೆ ಅದೇ ಮಳೆ ವಾರಾನುಗಟ್ಟಲೆ ಹಿಡಿಯಿತು ಎಂದುಕೊಳ್ಳಿ, ಆಗ ಏಕತಾನತೆ, ಬೇಸರಗಳು ಎಗ್ಗಿಲ್ಲದೆ ನಿಮ್ಮನ್ನು ಕಾಡುತ್ತವೆ. ಚಾರ್ ಮಿನಾರ್ ಖ್ಯಾತಿಯ ಆರ್ ಚಂದ್ರು ಅವರ ಕಥೆ-ಸ್ಕ್ರಿಪ್ಟ್ ಇರುವ, ನೆನಪಿರಲಿ ಪ್ರೇಮ್ ಮತ್ತು ಅಮೂಲ್ಯ ನಟಿಸಿರುವ, ಚೊಚ್ಚಲ ನಿರ್ದೇಶಕ ಎ ಆರ್ ಶಿವತೇಜಸ್ ಅವರ 'ಮಳೆ' ಬಹಳ ತಡವಾಗಿ ಬಿಡುಗಡೆಯಾಗಿದೆ. ಈಗಾಗಲೇ ಹಲವಾರು 'ಮಳೆ'ಗಳನ್ನು ಕಂಡಿರುವ ಈ ಚಿತ್ರ ಕನ್ನಡ ಮನಸ್ಸುಗಳಿಗೆ ಹೊಸತಾಗಿ ಉಲ್ಲಸಿತವಾಗಿದೆಯೇ? ಅಥವಾ ಮತ್ತದೇ ಮಳೆ-ಕಳೆ ಸಾಕೆನಿಸಿದೆಯೇ?

ವರುಣ್ (ಪ್ರೇಮ್) ಕೋಟ್ಯಾಧಿಪತಿಯಾಗಿದ್ದರೂ, ರಸ್ತೆ ಬದಿಯಲ್ಲಿ ಚಿತ್ರಾನ್ನ ತಿನ್ನುವ, ಮದ್ಯಕ್ಕೆ ಉಪ್ಪಿನ ಕಾಯಿ ನೆಂಚಿಕೊಳ್ಳುವ, ಸರಳ, ಅತಿ ನೈತಿಕ ಜೀವಿ. ಅವನಿಗೆ ವರ್ಷ (ಅಮೂಲ್ಯ) ಕಂಡಾಕ್ಷಣ ಪ್ರೀತಿ ಕ್ಷಣಮಾತ್ರದಲ್ಲಿ ಉದ್ಭವಿಸಿ ಆವರಿಸಿಕೊಂಡುಬಿಡುತ್ತದೆ. ಅವಳ ಬೆನ್ನತ್ತಿ ಹಿಂಬಾಲಿಸಿ ಮಲ್ಲಿಗೆಪುರಕ್ಕೆ ಹೋಗುತ್ತಾನೆ. ಆ ಊರಲ್ಲಿ ವರ್ಷಳ ಗೆಳತಿಯ ಮದುವೆಗೆ ಅಪರಿಚಿತನಾಗಿ ಹೊಕ್ಕಿ ಮದುಮಗಳ ಪೋಷಕರಿಗೆ ಬುದ್ಧಿವಾದ ಹೇಳಿ ಅವಳಿಗೆ ಒಲ್ಲದ ಮದುವೆಯನ್ನು ತಡೆದು, ಅವಳು ಇಷ್ಟಪಟ್ಟ ವರನನ್ನು ವರಿಸಿಕೊಳ್ಳುವಂತೆ ಮಾಡುತ್ತಾನೆ. ವರ್ಷಳಲ್ಲಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಾಗ ಬೈಗುಳದ ಸುರಿಮಳೆಯೇ ಆಗುತ್ತದೆ. ಆದರೂ ಪ್ರಯತ್ನವನ್ನು ಬಿಡದೆ ಅವಳನ್ನು ಒಲಿಕೊಳ್ಳುತ್ತಾನೆ. ಕೊನೆಗೆ ವರ್ಷಳಿಗೆ ವರುಣನ ನಿಜ ಹಿನ್ನಲೆ ತಿಳಿದಾಗ ಏನಾಗುತ್ತದೆ?

ಅತಿ ಸಾಧಾರಣ ಕಥೆಯನ್ನು ಮಳೆಯ ಹಿನ್ನಲೆಗೆ ಬೆರಿಸಿ ಮತ್ತೆ ಮತ್ತೆ ಅದನ್ನೇ ಹೇಳುವ ಸಾಹಸಕ್ಕೆ ನಿರ್ದೇಶಕ ಕೈಹಾಕಿರುವುದು ಮಳೆ ಚಿತ್ರಮಂದಿರಗಳಿಗೆ ಬರಲು ತಡವಾಗಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಶಬ್ದಗಳೇ ಕೇಳಿಸದ ಅಬ್ಬರದ ಸಂಗೀತದ ಹಾಡಿನೊಂದಿಗೆ ನಾಯಕನನ್ನು ಪರಿಚಯ ಮಾಡಿಕೊಡುವ ಅತಿ ಕ್ಲೀಶೆಯ ತಂತ್ರದಿಂದ ಸಿನೆಮಾ ಪ್ರಾರಂಭವಾಗುತ್ತದೆ. ಮೊದಲಾರ್ಧದಲ್ಲಿ ಕಥೆ ಯಾವುದೇ ಬೆಳವಣಿಗೆ ಕಾಣದೆ, ಕರ್ನಾಟಕ (ಚಿಕ್ಕಮಗಳೂರು ಜಿಲ್ಲೆ) ರಮಣೀಯ ಪ್ರದೇಶಗಳ 'ಸುತ್ತೋಣ ಬಾ' ಕಾರ್ಯಕ್ರಮದಂತೆ ಮುಂದುವರೆದು, ಬೆಟ್ಟ, ಗುಡ್ಡ, ಕಾಡು, ಜಲಪಾತಗಳನ್ನು ಸಿನೆಮ್ಯಾಟೋಗ್ರಾಫರ್ ಸುಜ್ಞಾನ ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಈ ಸಮಯದಲ್ಲಿ ಜಾಳು ಜಾಳು ಸಂಭಾಷಣೆ, ಡಬಲ್ ಮೀನಿಂಗ್ (ದ್ವಂದ್ವಾರ್ಥದ) ಮಾತುಗಳನ್ನು ಸಹಿಸಿಕೊಳ್ಳುವ ತಾಳ್ಮೆ ಪ್ರೇಕ್ಷಕನಿಗೆ ಇರಬೇಕಷ್ಟೇ. ಇದಕ್ಕೆ ದ್ವಿತೀಯಾರ್ಧವೂ ಹೆಚ್ಚು ವಿಭಿನ್ನವಾಗಿರದೆ ನಗರದಲ್ಲಿ ನಡೆಯುವ ಕಥೆ ಮತ್ತೆ ಅರ್ಥವಿಲ್ಲದ ವಿಪರೀತ ಪ್ರಲಾಪಗಳೊಂದಿಗೆ ಮುಂದುವರೆಯುತ್ತದೆ. ಯಾವ ದೃಶ್ಯಕ್ಕೂ, ಕಾರ್ಯಕ್ಕೂ ಕಾರಣವೇ ಇಲ್ಲದಂತೆ ಘಟನೆಗಳನ್ನು ಬೇಕಾಬಿಟ್ಟಿ ಪೋಣಿಸಲಾಗಿದೆ. ಸಿನೆಮಾಗಳಿಗೆ ಜೀವಾಳ ಎನ್ನಲಾಗುವ, ಯಾವುದೇ ನಂಬತಕ್ಕ ಸಂಘರ್ಷವಾಗಲಿ, ಸಂದಿಗ್ಧತೆಯಾಗಲಿ ಸಿನೆಮಾದಿಡೀ ಕಂಡುಬರುವುದಿಲ್ಲ. ಕೊನೆಗೆ ನಾಯಕನ ಹಿನ್ನಲೆ ತಿಳಿದ ಮೇಲೆ ಅವನ ಆಯ್ಕೆಯಲ್ಲಿ ನಾಯಕಿಗೆ ಕಾಡುವ ಸಂದೇಶ-ಸಂದಿಗ್ಧತೆ ಈಗಾಗಲೇ ಸಾವಿರಾರು ಸಿನೆಮಾಗಳಲ್ಲಿ ಬಳಕೆಯಾಗಿರುವುದೇ! ಸಿನೆಮ ಮನರಂಜನೆ ದೃಷ್ಟಿಯಿಂದಾಗಲೀ, ಅಥವಾ ಕಥಾ ಹಂದರದ ದೃಷ್ಟಿಯಿಂದಾಗಲೀ ಗಟ್ಟಿತನವಿಲ್ಲದೆ ಸೊರಗಿದೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಒಂದೆರಡು ಹಾಡುಗಳು ಮುದ ನೀಡುವಂತಿದ್ದರೂ, ಇನ್ನುಳಿದ ಹಾಡುಗಳು ಅವುಗಳಿಗೆ ಕಂಟಕವಾಗಿವೆ. ಇದ್ದುದರಲ್ಲಿ ಸ್ವಲ್ಪ ಮುದ ನೀಡುವುದು ಸುಜ್ಞಾನ್ ಅವರ ಛಾಯಾಗ್ರಹಣ. ಶಿವತೇಜ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಜನರಿಗೆ 'ಉಲ್ಲಾಸದ ಹೂಮಳೆ' ನೀಡಲು ವಿಫಲರಾಗಿದ್ದಾರೆ.

ನೈತಿಕ ಪೊಲೀಸ್ ಗಿರಿ ಕನ್ನಡ ಚಲನಚಿತ್ರಗಳಿಗೆ ಹಿಡಿದ ಗ್ರಹಣ. ಇದಕ್ಕೆ 'ಮಳೆ' ಕೂಡ ಹೊರತಾಗಿಲ್ಲ. ನಾಯಕಿ ಮತ್ತು ಅವಳ ಗೆಳತಿಯರು ರಾತ್ರಿ ಸಮಯದಲ್ಲಿ ತಮಗೆ ಅನುಕೂಲಕರವಾದ ಉಡುಪು ಧರಿಸಿ ವಾಹನದಲ್ಲಿ ಚಲಿಸುತ್ತಿರುವಾಗ ಸಲ್ಲದ ಕಾರಣಕ್ಕಾಗಿ ಪೊಲೀಸರು ಅವರನ್ನು ಬಂಧಿಸುತ್ತಾರೆ ಮತ್ತು ಛೇಡಿಸುತ್ತಾರೆ. ಇವರನ್ನು ಬಿಡಿಸಿ ರಕ್ಷಣೆ ಕೊಡುವ ನಾಯಕ ನಟ, ನಾಯಕಿಗೆ ಕಪಾಳಮೋಕ್ಷ ಮಾಡಿ ಈ ಘಟನೆಗೆ ಆ ಯುವತಿಯರ ಉಡುಪನ್ನೇ ದೂರಿ ನೈತಿಕತೆಯ ಪಾಠ ಹೇಳುತ್ತಾನೆ. ಈ ದೃಶ್ಯವನ್ನು ಸಿನೆಮಾದಲ್ಲಿ ವೈಭವೀಕರಿಸಿರುವುದಲ್ಲದೆ, ಆ ಯುವತಿಯರು ಅದನ್ನು ಒಪ್ಪಿಕೊಳ್ಳುವಂತೆ ಕೂಡ ತೋರಿಸಿರುವುದು ಯಾವುದೋ ಪ್ರಾಚೀನ ಕಾಲದ - ಶಿಲಾಯುಗದ ಮನಸ್ಥಿತಿಯನ್ನು ಪ್ರೇಕ್ಷಕರ ಮೇಲೆ ಹೇರಿದಂತಿದೆ. ಮನರಂಜನೆಯು ಇಲ್ಲದ ಇಂತಹ ಕೆಟ್ಟ ನೈತಿಕ ಪಾಠಗಳನ್ನು ಸಹಿಸಿಕೊಳ್ಳುವ ಕರ್ಮ ಕನ್ನಡ ಪ್ರೇಕ್ಷಕನದ್ದು!



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com