ಅಸಲಿ ಆಟ, ಭಿನ್ನ ನೋಟ, ವೇಗದ ಓಟ, ಜೀವನ ಪಾಠ

ಸ್ಕ್ರಿಪ್ಟೆಡ್ ಟಿವಿ ಕಾರ್ಯಕ್ರಮಗಳಿಗೆ ಭಿನ್ನವಾಗಿ ಹುಟ್ಟಿಕೊಂಡವು ರಿಯಾಲಿಟಿ ಟಿ ವಿ ಕಾರ್ಯಕ್ರಮಗಳು. ನಿರ್ಬಂಧದ ಆಧುನಿಕ ಪರಿಸರದಲ್ಲಿ ನಮ್ಮ ಸುತ್ತಮುತ್ತಲಿನ ವಿವಿಧ ಸ್ಥರದ ಜನರನ್ನು ಒಟ್ಟಿಗೆ ಜೀವಿಸಲು
'ಆಟಗಾರ' ಸಿನೆಮಾ ವಿಮರ್ಶೆ
'ಆಟಗಾರ' ಸಿನೆಮಾ ವಿಮರ್ಶೆ

ಸ್ಕ್ರಿಪ್ಟೆಡ್ ಟಿವಿ ಕಾರ್ಯಕ್ರಮಗಳಿಗೆ ಭಿನ್ನವಾಗಿ ಹುಟ್ಟಿಕೊಂಡವು ರಿಯಾಲಿಟಿ ಟಿ ವಿ ಕಾರ್ಯಕ್ರಮಗಳು. ನಿರ್ಬಂಧದ ಆಧುನಿಕ ಪರಿಸರದಲ್ಲಿ ನಮ್ಮ ಸುತ್ತಮುತ್ತಲಿನ ವಿವಿಧ ಸ್ಥರದ ಜನರನ್ನು ಒಟ್ಟಿಗೆ ಜೀವಿಸಲು ಬಿಟ್ಟಾಗ, ಅಲ್ಲಿ ನಡೆಯುವ ಘಟನೆಗಳು ಹೆಚ್ಚು ಭಾವನಾತ್ಮಕವಾಗಿ, ನೈಜವಾಗಿ ಜನರ ಮುಂದೆ ತೆರೆದುಕೊಂಡು ಕೆಲವೊಮ್ಮೆ ಅದು ಮನರಂಜನೆಯಾಗಿಯೂ, ಮತ್ತು ಕೆಲವೊಮ್ಮೆ ಅಧುನಿಕ ಜೀವನದ ಪ್ರತಿಬಿಂಬವಾಗಿಯೂ ಮೂಡಿ ಬರುವ ಈ ಕಾರ್ಯಕ್ರಮಗಳೇ ಸ್ಕ್ರಿಪ್ಟ್-ಚಿತ್ರಕತೆಯೇ ಅಡಿಪಾಯವಾಗಿರುವ ದೃಶ್ಯಮಾಧ್ಯಮ ಸಿನೆಮಾಗೆ ಅಹಾರವಾದರೆ? ಹೌದು ಅಂತಹ ಒಂದು ಅನ್ವೇಷಣೆಗೆ-ಪ್ರಯೋಗಕ್ಕೆ ತೆರೆದುಕೊಂಡಿರುವ 'ಆ ದಿನಗಳು' ಖ್ಯಾತಿಯ ನಿರ್ದೇಶಕ ಕೆ ಎಂ ಚೈತನ್ಯ ಅವರ 'ಆಟಗಾರ' ಇಂದು ಬಿಡುಗಡೆಯಾಗಿದೆ. ರಿಯಾಲಿಟಿ ಶೋಗಳು ನೀಡುವ ರೋಚಕತೆ, ಸಿನಿಕತೆಗಳನ್ನು ಮೀರಿ ಏನನ್ನಾದರೂ ಹೇಳಹೊರಟಿದೆಯೇ ಸಿನೆಮಾ? ಈ ಅಸಲಿ ಆಟವೇನು?

ಒಂದು ಕೋಟಿ ಬಹುಮಾನದ ಟಿವಿ ವಾಹಿನಿಯೊಂದರ ಪ್ರಖ್ಯಾತ ರಿಯಾಲಿಟಿ ಕಾರ್ಯಕ್ರಮ 'ಆಟಗಾರ'ದಲ್ಲಿ ಭಾಗವಹಿಸಲು ಪತ್ರಕರ್ತ (ಅಚ್ಚುತ್ ಕುಮಾರ್), ವೈದ್ಯ (ಪ್ರಕಾಶ್ ಬೆಳವಾಡಿ) ಶಾಲಾ ಪ್ರಾಂಶುಪಾಲೆ (ಅನು ಪ್ರಭಾಕರ್) ಅಡುಗೆ ಭಟ್ಟ (ಸಾಧುಕೋಕಿಲಾ), ಖ್ಯಾತ ನಟಿ (ಪರುಲ್ ಯಾದವ್), ಗ್ಲ್ಯಾಮರ್ ನಟಿ (ಮೇಘನಾ ರಾಜ್), ಹಳ್ಳಿ ಹುಡುಗಿ (ಪಾವನಾ), ವನ್ಯಮೃಗ ಸಂರಕ್ಷಕಿ (ಆರೋಹಿತಾ ಗೌಡ), ಫ್ಯಾಷನ್ ಫೋಟೋಗ್ರಾಫರ್ (ಬಾಲಾಜಿ ಮನೋಹರ್) ಮತ್ತು ಸ್ಲಂ ಹುಡುಗ ಹಾಗೂ ಡ್ರಗ್ ಕಳ್ಳಸಾಗಾಣಿಕೆದಾರ (ಚಿರಂಜೀವಿ ಸರ್ಜಾ) ಯಾರು ನೆಲೆಸದ ಒಂದು ನಿಗೂಢ ದ್ವೀಪಕ್ಕೆ ತೆರಳುತ್ತಾರೆ. ಒಂದು ರಾತ್ರಿ ಕಳೆದ ನಂತರ ಆ ಗೃಹ ಸ್ಮಶಾನವಾಗಿ ಮಾರ್ಪಟ್ಟು ಒಬ್ಬೊಬ್ಬರೇ ಸಾವಿಗೀಡಾಗಿ ಉಳಿದವರಲ್ಲಿ ಭಯ, ಸಂಶಯ ಮೂಡುತ್ತಾ ಹೋಗುತ್ತದೆ. ಅವರು ನಿಜವಾದ ಅಸಲಿ ಆಟಕ್ಕೆ ಬಂದಿದ್ದಾರೆಯೇ? ಅವರಿಗೆ ಉಳಿಗಾಲ ಇದೆಯೇ?

ಗಾಂಧಿನಗರದ ಕೆಲವೇ ಸಿನೆಮಾಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ನಿರ್ಮಾಣವಾಗುವ ಮತ್ತವೇ ರೌಡೀಸಂ ಆಧಾರಿತ, ಅಥವಾ ಪ್ರೀತಿ-ಪ್ರೇಮ-ತಾಯಿ ಸೆಂಟಿಮೆಂಟ್ ಆಧಾರಿತ, ಹೀರೋ ಕೇಂದ್ರಿತ, ಅತಿರಂಜಿತ ಫೈಟುಗಳನ್ನು ಒಳಗೊಂಡ, ತಿಕ್ಕಲು ಸಂಭಾಷಣೆ-ಹಾಡುಗಳನ್ನು ಒಳಗೊಂಡ ಸಿನೆಮಾಗಳಿಗಿಂತ ವಿಭಿನ್ನವಾಗಿ ನಿಲ್ಲುವ ಸಿನೆಮಾ ಆಟಗಾರ. ಸಿನೆಮಾದ ಗಟ್ಟಿತನವಿರುವಿದು ಪಾತ್ರದ ಸೃಷ್ಟಿ ಮತ್ತು ಅದಕ್ಕೆ ಸರಿಯಾಗಿ ಹೊಂದುವ ನಟರ ಆಯ್ಕೆ. ಲೀನಿಯರ್ ನಿರೂಪಣೆಯಲ್ಲೇ ಮುಂದುವರೆಯುವ ಸಿನೆಮಾ ಅಲ್ಲಲ್ಲಿ ಕೆಲವು ಅನಿರೀಕ್ಷಿತ ತಿರುವುಗಳನ್ನು ಪಡೆದು ಪ್ರೇಕ್ಷಕರನ್ನು ಆಸನದ ತುದಿಗೆ ಕೂತು ನೋಡುವಂತೆ ಮಾಡುತ್ತದೆ. ಇದಕ್ಕೆ ಆ ರಿಯಾಲಿಟಿ ಶೋ ಗೆ ತೆರಳುವ ಎಲ್ಲರ ನಟನೆ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ನಿರ್ದೇಶಕರ ಪರಿಶ್ರಮವನ್ನು ಇದು ತೋರುತ್ತದೆ. ಅದರಲ್ಲೂ ಚಿರಂಜೀವಿ ಸರ್ಜಾ ಮತ್ತು ಪ್ರಕಾಶ್ ಬೆಳವಾಡಿ ಉಳಿದವರಿಗಿಂತ ತುಸು ಮುಂಚೂಣಿಯಲ್ಲೇ ನಿಲ್ಲುತ್ತಾರೆ. ಎಲ್ಲಿಯೂ ಅನಗತ್ಯ ಹಾಡುಗಳನ್ನು ತುರುಕದೆ ಸಾಂದರ್ಭಿಕವಾಗಿ ಬಳಸಿರುವ ಹಾಡುಗಳು, ಸಿನೆಮಾ ವೀಕ್ಷಣೆಗೆ ತೊಡಕಾಗದಂತೆ ಕಾಯ್ದುಕೊಳ್ಳುತ್ತದೆ. ಅನೂಪ್ ಸೀಳಿನ್ ಅವರ ಸಂಗೀತ ಸಂದರ್ಭಕ್ಕೆ ತಕ್ಕಂತಿದ್ದು, ಕೆಲವು ಹಾಡುಗಳು ಸಿನೆಮಾ ಮುಗಿದ ನಂತರವೂ ಗುನುಗುವಂತಿದ್ದು ಸದ್ಯದ ಕನ್ನಡ ಚಿತ್ರೋದ್ಯಮದ ಸನ್ನಿವೇಶದಲ್ಲಿ ತಮ್ಮ ಮೂಂಚೂಣಿ ಸ್ಥಾನವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಛಾಯಾಗ್ರಹಣವೂ ಕೂಡ ಪೂರಕವಾಗಿದ್ದು, ಒಂದು ಅರ್ಥಗರ್ಭಿತ, ವಿಭಿನ್ನ ಸಿನೆಮಾವನ್ನು ನಿರ್ದೇಶಿಸುವುದರಲ್ಲಿ ಕೆ ಎಂ ಚೈತನ್ಯ ಸಫಲರಾಗಿದ್ದಾರೆ.

'ಬಿಗ್ ಬಾಸ್' ಇಂತಹ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ನೋಡುವ ಬರೀ ಸಿನಿಕತೆ ಅಥವಾ ಒಂದು ಥ್ರಿಲ್ ಸಿನೆಮಾದಲ್ಲಿ ಇರಬೇಕಾದ ಆಘಾತಕಾರಿ ಎನಿಸುವ ಘಟನೆಗಳ ಕೊಲಾಜ್ ಅನ್ನಷ್ಟೇ ನಿರ್ದೇಶಕ ಸಂಯೋಜಿಸಿದ್ದಾರೆ ಸಿನೆಮಾಗೆ ಇಷ್ಟು ಗಟ್ಟಿತನವಿರುತ್ತಿರಲಿಲ್ಲ. ಶೋಗೆ ತೆರಳುವ ಪ್ರತಿ ಅಭ್ಯರ್ಥಿಯ ಹಿಂದಿನ ಕಥೆಯನ್ನು ಹೇಳಲು ನಿರ್ದೇಶಕ ಸಫಲರಾಗಿರುವುದಲ್ಲದೆ ಪ್ರತಿ ಪಾತ್ರವನ್ನು ಮನಸ್ಸಿನಲ್ಲುಳಿಯುವಂತೆ ಎಸ್ಟಾಬ್ಲಿಶ್ ಮಾಡಲು ಕೂಡ ಗೆದ್ದಿದ್ದಾರೆ. ರಿಯಾಲಿಟಿ ಶೋ ಎಂಬ ನಿರ್ಭಂಧಿತ ಪರಿಸರದಲ್ಲಿ ಹುಟ್ಟಬಹುದಾದ ಆಕರ್ಷಣೆ, ಪ್ರೀತಿ, ಸಂಘರ್ಷ, ಭಯ, ಸಂಶಯ ಇವುಗಳನ್ನು ದೃಶ್ಯದಲ್ಲಿ ಸೆರೆಹಿಡಿಯಲು, ಮನುಷ್ಯ ಹೇಗೆ ಅಪಾಯಕಾರಿ ಸನ್ನಿವೇಶಗಳಲ್ಲೂ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವುದರಿಂದ ಹಿಂಜರಿಯುವುದಿಲ್ಲ ಹೀಗೆ ಹತ್ತು ಹಲವಾರು ವಿಷಯಗಳನ್ನು ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ದಾಟಿಸಲು ನಿರ್ದೇಶಕ ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಇಂದಿನ ಮಾಧ್ಯಮಗಳ, ಭೋಗದ ಜೀವನದ, ಹೆಚ್ಚೆಚ್ಚು ಗಳಿಸಬೇಕು ಎಂಬ ದುರಾಸೆಯ ಮನಸ್ಥಿತಿ, ಕ್ಷೀಣಿಸುತ್ತಿರುವ ಮಾನವೀಯತೆಯ ಟೀಕೆಯಾಗಿಯೂ ಸಿಮೆಮಾ ಕಂಡುಬರುತ್ತದೆ. ಇಷ್ಟೆಲ್ಲದರ ಹೊರತಾಗಿಯೂ ಸಿನೆಮಾ ಕೊನೆಕೊನೆಗೆ ಬೋಧನೆಯ ಧಾಟಿಗೆ ಜಾರುವುದು ಕೊಂಚ ಕಿರಿಕಿರಿ ಉಂಟುಮಾಡುತ್ತದೆ. ಕೊನೆಗೆ ಸೂಚನೆ ರೂಪದಲ್ಲಿ ಬರವಣಿಗೆಯಲ್ಲಿ ತೋರಿಸಿದರು, ಸಂವಿಧಾನ-ಕಾನೂನಿನ ವ್ಯವಸ್ಥೆಯನ್ನು ಮೀರಿ ಪೊಲೀಸರಿಗೇ ನೈತಿಕತೆಯ ಪಾಠ ಮಾಡುತ್ತಾ ಸಮಾನಾಂತರ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡು ತಮಗೆ ತಿಳಿದ ಸೀಮಿತ ಜ್ಞಾನದಲ್ಲಿ ಆರೋಪಿಗಳಿಗೆ ಕೊಲ್ಲುವ ಶಿಕ್ಷೆ ನೀಡುವುದು ಅಪಾಯಕಾರಿ ಸಂದೇಶವೇನೊ ಎಂಬ ಪ್ರಶ್ನೆ ಕೂಡ ಕೊನೆಗೆ ಉಳಿಯುತ್ತದೆ.

ಕೊನೆಗೆ: ಸಿನೆಮಾ ಪ್ರೇಕ್ಷಕರಲ್ಲಿ ಭಾವನೆಗಳನ್ನು, ಮನುಷ್ಯತ್ವವನ್ನು, ಮಾನವೀಯತೆಯನ್ನು ಕಲಕಬೇಕು ಆದರೆ ಅವುಗಳನ್ನು ಬೋಧಿಸುವುದಲ್ಲ. ಬೋಧನೆ ಯಾವತ್ತಿಗೂ ಸಿನೆಮಾ ನೋಡುವ ಅನುಭವಕ್ಕೆ ಮಾರಕವೇ!  

-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com