'ಮೈತ್ರಿ' ಮನರಂಜನೆ ಐತ್ರೀ!

ಮೈತ್ರಿ ಚಿತ್ರ ಪ್ರೇಕ್ಷಕರನ್ನು ನಾಗಾಲೋಟದಿಂದ ಕೊಂಚವೂ ಬೋರಾಗದಂತೆ ನೋಡಿಸಿಕೊಂಡು ಹೋಗುತ್ತದೆ.
'ಮೈತ್ರಿ' ಚಿತ್ರದ ಸ್ಟಿಲ್
'ಮೈತ್ರಿ' ಚಿತ್ರದ ಸ್ಟಿಲ್

ವರ್ಷದಾರಂಭದಿಂದಲೂ ಸದ್ದು ಮಾಡುತ್ತಿದ್ದ ಬಹುನಿರೀಕ್ಷಿತ ಮತ್ತು ಬಹುತಾರಾಗಣವಿರುವ ಚಿತ್ರ 'ಮೈತ್ರಿ' ಇಂದು ಬಿಡುಗಡೆ ಕಂಡಿದೆ. ಚಿತ್ರದುದ್ದಕ್ಕೂ ನಿರ್ದೇಶಕ ಬಿ.ಎಂ ಗಿರಿರಾಜ್ ರ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಗಿರಿರಾಜ್ ರ ಪಾತ್ರಗಳು ಶೋಷಣೆಗೆ ಒಳಗಾಗುತ್ತವೆ, ಅದರ ವಿರುದ್ಧ ದನಿಯನ್ನೂ ಎತ್ತುತ್ತವೆ, ಈ ದೆಸೆಯಲ್ಲಿ ಅವರು ಬೀದಿ ನಾಟಕಗಳ ಹಿನ್ನೆಲೆಯಿಂದ ಬಂದುದರ ಪ್ರಭಾವವನ್ನು ಪಾತ್ರಗಳ ನಟನೆಯಲ್ಲಿ ಕಾಣಬಹುದಾಗಿದೆ. ಹಾಗೆಂದು ಚಿತ್ರದಲ್ಲಿ ಬರಿಯ ಸಂದೇಶಗಳೇ ತುಂಬಿಕೊಂಡಿವೆ ಎಂದು ಗಾಬರಿ ಬೀಳುವ ಅಗತ್ಯವಿಲ್ಲ. ಚಿತ್ರದಲ್ಲಿ ಸಂದೇಶದ ಜೊತೆಗೆ ಮನೋರಂಜನೆಯೂ ಇದೆ. ಈ ಚಿತ್ರ ಪ್ರೇಕ್ಷಕರನ್ನು ನಾಗಾಲೋಟದಿಂದ ಕೊಂಚವೂ ಬೋರಾಗದಂತೆ ನೋಡಿಸಿಕೊಂಡು ಹೋಗುತ್ತದೆ. ಕೆಳಮಟ್ಟದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಕ್ಕು, ಪರಿಸ್ಥಿತಿಯ ದಾಳಕ್ಕೆ ಬಲಿಯಾಗಿ ರಿಮ್ಯಾಂಡ್ ಹೋಮ್ ಸೇರಿ ಅಲ್ಲಿ ಸಿಕ್ಕ ಜೊತೆಗಾರರ 'ಮೈತ್ರಿ'ಯ ನೆರವಿನಿಂದ ಉನ್ನತ ಸ್ಥಾನಕ್ಕೇರುವ ಕತೆಯನ್ನು 'ಮೈತ್ರಿ' ಚಿತ್ರ ಹೊಂದಿದೆ.

ನಟ ಪುನೀತ್ ರಾಜ್ ಕುಮಾರ್ ತಾವು ತಾವಾಗಿಯೇ ಕಾಣಿಸಿಕೊಂಡಿದ್ದಾರೆ, ಅಂದರೆ ಸಿನೆಮಾ ನಟರಾಗಿಯೇ ಕಾಣಿಸಿಕೊಂಡಿದ್ದಾರೆ. ಅವರ ಇತರ ಚಿತ್ರಗಳಲ್ಲಿರುವಂತೆ ಕಿವಿಗಡಚಿಕ್ಕುವ ಸಂಗೀತದ ಹಿನ್ನೆಲೆಯಲ್ಲಿ ಬರುವ ಡ್ಯಾಶಿಂಗ್, ಮಾಸ್ ಡಯಲಾಗುಗಳು ಇಲ್ಲಿಲ್ಲವಾದರೂ ಮೆತ್ತಗೆ ಅವರಾಡುವ ನುಡಿಮುತ್ತುಗಳು ಅವುಗಳಿಗಿಂತೇನೂ ಕಮ್ಮಿ ತೋರುವುದಿಲ್ಲ, ಹಾಗಾಗಿ ಇಲ್ಲಿಯೂ ಶಿಳ್ಳೆ ಬೀಳುವುದಂತೂ ಗ್ಯಾರೆಂಟಿ. ಉಳಿದಂತೆ ಮುಖ್ಯಭೂಮಿಕೆಯಲ್ಲಿ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ ಇದ್ದಾರೆ. ಮೋಹನ್ ಲಾಲ್, 'ಜಾಕಿ'ಯ ಭಾವನಾ, 'ಆ ದಿನಗಳು' ಅರ್ಚನಾ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ಕೂಡಾ ಚಿತ್ರದ ಬಹುತೇಕ ಭಾಗಗಳನ್ನು ತುಂಬಿಕೊಂಡಿಲ್ಲ. ಈ ಚಿತ್ರದ ಜೀವಾಳ ಅಡಗಿರುವುದು ಎರಡು ಪ್ರಮುಖ ಪಾತ್ರಗಳಲ್ಲಿ, ಬಾಲಕ ಸಿದ್ಧರಾಮ ಮತ್ತು ಆತನಿಗೆ ರಿಮ್ಯಾಂಡ್ ಹೋಮಿನಲ್ಲಿ ಜೊತೆಯಾಗುವ ಪಿಕ್ ಪಾಕೆಟರ್, ಇವೇ ಆ ಎರಡು ಪಾತ್ರಗಳು. ಸಿದ್ಧರಾಮನಾಗಿ, ಆದಿತ್ಯ ಮತ್ತು ಪಿಕ್ ಪಾಕೆಟರ್ ಆಗಿ ಜಗದೀಶ್ ಅಭಿನಯಕ್ಕೆ ಫುಲ್ ಮಾರ್ಕ್ಸ್! ಹಾಸ್ಯದ ಸನ್ನಿವೇಶಗಳಲ್ಲಿ ಅವರ ಭಾವಾಭಿನಯ ಉತ್ತಮವಾಗಿ ಮೂಡಿಬಂದಿದೆ. ಅವರು ಪ್ರೇಕ್ಷರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಗೀತ ಮಾಂತ್ರಿಕ ಇಳೆಯರಾಜರವರ ಸಂಗೀತ ಚಿತ್ರದ ಆಕರ್ಷಣೆ.

ಚಿತ್ರಕತೆಯಲ್ಲಿ ನಕಾರಾತ್ಮಕ ಅಂಶಗಳೇ ಇಲ್ಲವೆಂದಿಲ್ಲ. ಒಂದಷ್ಟು ಸಂದರ್ಭಗಳಲ್ಲಿ, ಬಿಟ್ಟ ಪದವನ್ನು ತುಂಬದೆಯೇ, ಕತೆ ಮುಂದಿನ ಅಧ್ಯಾಯಕ್ಕೆ ಹಾರುತ್ತದೆ. ಯಾವುದೇ ರೀತಿಯ ಸಮರ್ಥನೆಯೂ ದೃಶ್ಯಾವಳಿ ಮೂಲಕ ಸಿಗುವುದಿಲ್ಲ. ಇದು ಪ್ರೇಕ್ಷಕರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಆ ಒಂದು ಸಂದರ್ಭದಲ್ಲಿ ಬಿಟ್ಟ ಜಾಗವನ್ನು ಕೊನೆಯಲ್ಲಿ ತುಂಬುತ್ತಾರೆಯಾದರೂ ಅಷ್ಟರಲ್ಲಿ ಗೊಂದಲ ಮನೆ ಮಾಡಿಯಾಗಿರುತ್ತದೆ. ಮಲಯಾಳಂನಿಂದ ನಟ ದಿಗ್ಗಜ ಮೋಹನ್ ಲಾಲ್ ರನ್ನು ಮತ್ತೊಮ್ಮೆ ಕರೆತಂದಿದ್ದು ನಮಗೆಲ್ಲರಿಗೂ ಗೌರವ ತರುವ ವಿಚಾರವಾದರೂ ಅವರ ಅವಶ್ಯಕತೆ ನಿಜಕ್ಕೂ ಆ ಪಾತ್ರಕ್ಕಿತ್ತಾ ಅಥವಾ ಪ್ರಚಾರಕ್ಕೋಸ್ಕರ ಕರೆತಂದಿದ್ದೇ? ಎಂಬ ಅನುಮಾನ ಮೂಡದೇ ಇರದು. ಚಿತ್ರದ ಕತೆ 'ಚಿನ್ನಾರಿ ಮುತ್ತಾ' ಮತ್ತು 'ಸ್ಲಂಡಾಗ್ ಮಿಲಿಯನೇರ್' ಚಿತ್ರಗಳ ಎಳೆಯನ್ನು ಹೊಂದಿದೆ. ಇಷ್ಟು ಹೇಳಿದ ಮೇಲೆ ಮೈತ್ರಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕೋಟು ತೊಟ್ಟು ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವರೇ ಎಂದುಕೊಂಡರೆ ನಿಮ್ಮದು ಸರಿಯಾದ ಊಹೆ. ಮತ್ತು ರಿಮ್ಯಾಂಡ್ ಹೋಮಿನ ವಾರ್ಡನ್ ಅತುಲ್ ಕುಲಕರ್ಣಿ 'ಚಿನ್ನಾರಿ ಮುತ್ತಾ'ದ ಅಥ್ಲೆಟಿಕ್ ಕೋಚ್ ಅವಿನಾಶ್ ರನ್ನು ನೆನಪಿಸುತ್ತಾರೆ. ಯಾವುದೇ ಚಿತ್ರವಾಗಲಿ, ಸ್ಪೂರ್ತಿಯನ್ನು ಎಲ್ಲೆಲ್ಲಿಂದಲೋ ಪಡೆದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳದಿದ್ದರೆ ಅದು ವ್ಯರ್ಥ. ಈ ನಿಟ್ಟಿನಲ್ಲಿ ನಿರ್ದೇಶಕ ಗಿರಿರಾಜ್ ಒಂದುತ್ತಮ ಚಿತ್ರವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

 - ಹರ್ಷವರ್ಧನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com