ಹಳೆಯ ಪ್ರತೀಕಾರ ಹೊಸ ಅವತಾರ

ಕ್ರಿಕೆಟ್ ವಿಶ್ವಕಪ್ ಭಯಕ್ಕೆ ಸಿನೆಮಾಗಳ ಬಿಡುಗಡೆಯನ್ನು ನಿರ್ದೇಶಕರು-ನಿರ್ಮಾಪಕರು ಸದ್ದಿಲ್ಲದೆ ಮುಂದೂಡುತ್ತಿರುವಾಗ, ತಮಿಳು ಚಿತ್ರ 'ಪಾಂಡಿಯನಾಡು'ವಿನ
ರುದ್ರತಾಂಡವ ಸಿನೆಮಾ ಸ್ಟಿಲ್
ರುದ್ರತಾಂಡವ ಸಿನೆಮಾ ಸ್ಟಿಲ್

ಬೆಂಗಳೂರು: ಕ್ರಿಕೆಟ್ ವಿಶ್ವಕಪ್ ಭಯಕ್ಕೆ ಸಿನೆಮಾಗಳ ಬಿಡುಗಡೆಯನ್ನು ನಿರ್ದೇಶಕರು-ನಿರ್ಮಾಪಕರು ಸದ್ದಿಲ್ಲದೆ ಮುಂದೂಡುತ್ತಿರುವಾಗ, ತಮಿಳು ಚಿತ್ರ 'ಪಾಂಡಿಯನಾಡು'ವಿನ ರಿಮೇಕ್ 'ರುದ್ರ ತಾಂಡವ' ಎಂದು ಎಗ್ಗಿಲ್ಲದೆ ತೆರೆ ಕಂಡಿದೆ. ೨೦೧೫ ರಲ್ಲಿ ಯಾವುದೇ ಮಾಸ್ ಹಿಟ್ ಚಲನಚಿತ್ರವಿಲ್ಲದೆ ಕುಂಟುತ್ತಿರುವ ಕನ್ನಡ ಚಿತ್ರರಂಗಕ್ಕೆ ಈ ರಿಮೇಕ್ ಆದರೂ ಸಂಚಲನ ನೀಡುತ್ತದೆಯೇ? ವಿಶ್ವಕಪ್ ಮತ್ತು ರಣಜಿ ಪಂದ್ಯಗಳ ರೋಚಕತೆಯಿಂದ ಟಿವಿಗಳಿಗೆ ಅಂಟಿಕೊಂಡಿರುವ ಪ್ರೇಕ್ಷಕರನ್ನು ಬೆಳ್ಳಿತೆರೆಗೆ ಎಳೆತರಲು ಸಫಲವಾಗಿದೆಯೇ?

ಕೋಲಾರದ ಶ್ರೀನಿವಾಸಪುರ. ನರಸಿಂಹ ರೆಡ್ಡಿ ಎಂಬ ಡಾನ್ ತನ್ನ ವಿರೋಧಿಗಳನ್ನೆಲ್ಲಾ ಮಟ್ಟ ಹಾಕಿ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತಾನೆ. ಅಕ್ಷರಶಃ ಕಾನೂನೇ ಇಲ್ಲದ ಊರಿದು. ಕೊನೆಯ ಮಾತು ನರಸಿಂಹನದ್ದೇ. ಹಾದಿ ಬೀದಿಯಲ್ಲಿ ಲುಂಗಿ ಮೇಲಕ್ಕೆ ಕಟ್ಟಿ ಯಾರನ್ನು ಬೇಕಾದರೂ ಕೊಚ್ಚಿ ಹಾಕಬಲ್ಲ. ಇದೇ ಊರಿನಲ್ಲಿ ಒಂದು ಮಧ್ಯಮವರ್ಗದ ತುಂಬು ಕುಟುಂಬ. ಅಪ್ಪ (ಗಿರೀಶ್ ಕಾರ್ನಾಡ್). ಇಬ್ಬರು ಮಕ್ಕಳು. ದೊಡ್ಡ ಮಗ (ಕುಮಾರ್ ಗೋವಿಂದ್) ಸರ್ಕಾರಿ ಅಧಿಕಾರಿ. ಕಿರಿ ಮಗ (ಚಿರಂಜೀವಿ ಸರ್ಜಾ) ಪುಕ್ಕಲ, ಬಿಕ್ಕಲ, ಮೊಬೈಲ್ ರಿಪೇರಿ ಮಾಡುವವ. ಮನೆಯ ಮೇಲೆ ಶಿಕ್ಷಕಿ (ರಾಧಿಕಾ ಕುಮಾರಸ್ವಾಮಿ) ಬಾಡಿಗೆಗೆ ಇರುತ್ತಾಳೆ. ನರಸಿಂಹ ರೆಡ್ಡಿ ಪರವಾನಗಿ ಪಡೆದಿರುವುದಕ್ಕಿಂತಲೂ ಹೆಚ್ಚಿನ ಆಳಕ್ಕೆ ಗ್ರಾನೈಟ್ ಕೊರೆದು ಹಲವರ ಸಾವಿಗೆ ಕಾರಣವಾಗುವುದರಿಂದ, ದೊಡ್ಡ ಮಗ ಗ್ರಾನೈಟ್ ವ್ಯವಹಾರಕ್ಕೆ ಬೀಗ ಜಡಿಸುತ್ತಾನೆ. ನರಸಿಂಹ ಪ್ರತೀಕಾರವಾಗಿ ಕೊಲೆ ಮಾಡುತ್ತಾನೆ. ಇದಕ್ಕೆ ತಂದೆ ಮತ್ತು ತಮ್ಮ, ನರಸಿಂಹನ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ?

ಗ್ರಾನೈಟ್ ಕ್ವಾರ್ರಿಯಿಂಗ್ ನಿಂದ ನಡೆಯುವ ಸಾವನ್ನು ಹಿನ್ನಲೆಯಿಟ್ಟುಕೊಂಡು, ಮಾಸ್ ಮನರಂಜನೆಗಾಗಿಯೇ, ಭಾವನೆಯನ್ನು ಕೆರಳಿಸುವುದಕ್ಕಾಗಿಯೇ ಹೆಣೆದಿರುವ ಕಥೆ 'ರುದ್ರ ತಾಂಡವ'. ಪಾತ್ರಗಳ ಸೃಷ್ಟಿಯಲ್ಲಿ ಹೊಸತನವೇನೂ ಕಾಣುವುದಿಲ್ಲ. ತಾಯಿ-ಮಗನ ಎಮೋಶನ್ ಬದಲು ತಂದೆ-ಮಕ್ಕಳ ಎಮೋಶನ್ ಮೇಲೆ ಚಿತ್ರ ಕಟ್ಟಲಾಗಿದೆ. ಮೊದಲಾರ್ಧ ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಪ್ರೇಮ ಕಥೆ, ಮತ್ತು ಡಾನ್ ನರಸಿಂಹ ರೆಡ್ಡಿಯ ಅಬ್ಬರ, ಚಿರಂಜೀವಿ ಸರ್ಜಾ ಮತ್ತು ಅವನ ಗೆಳೆಯನ ನಡುವಿನ ಹಾಸ್ಯ ಸನ್ನಿವೇಶಗಳು (ಹೆಚ್ಚು ಡಬಲ್ ಮೀನಿಂಗ್ ಇಂದ ಕೂಡಿದವೇ!), ಕೆಲವು ಹಾಡುಗಳು ಚಿತ್ರವನ್ನು ಸಹ್ಯವಾಗಿಸಿವೆ. ಒಮ್ಮೊಮ್ಮೆ ವಿಪರೀತ ಎನ್ನಿಸದೆಯೂ ಇರದು. ದ್ವಿತೀಯಾರ್ಧ ಪೂರ್ತಿ ನರಸಿಂಹನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ತಂದೆ ಮತ್ತು ಮಗ ಮಾಡುವ ಪ್ರತ್ಯೇಕ ಪ್ರಯತ್ನಗಳು ಲಂಬಿತವಾಗಿ ಸ್ವಲ್ಪ ಬೇಸರ ತರಿಸುತ್ತವೆ. ಇಲ್ಲಿಯವರೆಗೂ ಚೊಕ್ಕವಾಗಿದ್ದ ಚಿರಂಜೀವಿ ಸರ್ಜಾ ಪಾತ್ರಕ್ಕೆ ಇದ್ದಕ್ಕಿದ್ದ ಹಾಗೆ ಹಿರೋಯಿಸಂ ಬಂದುಬಿಡುತ್ತದೆ. ಆದರೂ ಪುಕ್ಕಲ-ಬಿಕ್ಕಲನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಸುಧಾರಿತ-ಉತ್ತಮ ಅಭಿನಯ ನೀಡಿದ್ದಾರೆ. ಹೆಚ್ಚೇನು ಸ್ಕೋಪ್ ಇಲ್ಲದ ರಾಧಿಕಾ ಕುಮಾರಸ್ವಾಮಿ ಕೂಡ ತಕ್ಕ ಅಭಿನಯ ನೀಡಿದ್ದಾರೆ. ಮಕ್ಕಳ ನಡುವಿನ ಭಾವನಾತ್ಮಕ ಸಂಬಂಧ ಮತ್ತು ಪುತ್ರ ಶೋಕವನ್ನು ಸೂಚಿಸುವ ಗಿರೀಶ್ ಕಾರ್ನಾಡ್ ಅವರ ನಟನೆಯು ಚಂದ. ಉಳಿದ ಪೋಷಕ ವರ್ಗದ ಪಾತ್ರಗಳೂ ಅಗತ್ಯ ನಟನೆಯನ್ನು ತೋರಿಸಿದ್ದಾರೆ. ಹರಿಕೃಷ್ಣ ಅವರ ಸಂಗೀತ ಕೆಲವೊಮ್ಮೆ ಹಿತಕರ. ಗೀತ ರಚನೆಯ ಸಾಹಿತ್ಯ ಕಿವಿಗೆ ಕೇಳಿಸುವಂತಿದೆ. ರಾಜೇಶ್ ಕೃಷ್ಣನ್ ಹಾಡಿರುವ 'ಯಾರೇ ಯಾರೇ' ಹಾಡು ಕೇಳಲು ಸಖ್ಯ. ಡಾನ್ ಪಾತ್ರದಲ್ಲಿನ ವಿಪರೀತತೆ ಮತ್ತು ಕೆಲವು ಅನಗತ್ಯ ಪಾತ್ರಗಳ ಸೃಷ್ಟಿಯನ್ನು ಹೊರತುಪಡಿಸಿದರೆ ನಿರ್ದೇಶಕ ಗುರು ದೇಶಪಾಂಡೆ ರಿಮೇಕ್ ಸ್ಪೆಷಲಿಸ್ಟ್ ಎನ್ನಲು ಅಡ್ಡಿಯಿಲ್ಲ.

ಬೆರಳಣಿಕೆಯಷ್ಟೆ ಉತ್ತಮ ಸ್ವಮೇಕ್ ಚಿತ್ರಗಳ ಆಯ್ಕೆ ಕನ್ನಡದಲ್ಲಿ ಇರುವಾಗ, ರಿಮೇಕ್ ಚಿತ್ರಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದು ತೊಳಲಾಟವೇ. ಇಲ್ಲಿನ ಕಥೆಗಾರರನ್ನು ಅವಕಾಶ ವಂಚಿತಗೊಳಿಸಿ, ಹೊಸ ಕಥೆಗಳನ್ನು ಚಿತ್ರಂಗಕ್ಕೆ ಕೊಡುಗೆ ನೀಡದೆ ತನ್ನನ್ನೇ ವಂಚಿಸಿಗೊಳ್ಳುತ್ತಿರುವ ಕನ್ನಡ ಚಿತ್ರೋದ್ಯಮ ಈಗ ಕವಲು ದಾರಿಯಲ್ಲಿದೆ. ಎಷ್ಟೇ ಕೆಟ್ಟದಾಗಿದ್ದರೂ, ಆಯ್ಕೆಗಳು ಎಷ್ಟೇ ಕಡಿಮೆ ಇದ್ದರೂ ಸ್ವಮೇಕ್ ಚಿತ್ರಗಳನ್ನಷ್ಟೇ ನೋಡುತ್ತೇನೆ ಎಂದು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ಪರ ರಾಜ್ಯದ ಒಂದು ಉತ್ತಮ ಕೃತಿಯನ್ನು ಇಲ್ಲಿಯೂ ಸಿಗುವಂತಾಗಬೇಕು. ಆದರೆ ಡಬ್ಬಿಂಗ್ ನಿಂದ ಅದು ಸುಲಭ ಸಾಧ್ಯ. ಆಗ ಇಲ್ಲಿನ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬಹುದು ಎಂಬುದು ಒಂದು ವಾದ. ಇಂತಹ ವಾದ ವಿವಾದಗಳ ನಡುವೆಯೇ ರಿಮೇಕ್ ಸಿನೆಮಾಗಳ ದಾಂಡೇ ಇಲ್ಲಿ ನಿರ್ಮಾಣವಾಗುತ್ತಿವೆ. ಇಂತಹ ವಾದ ವಿವಾದದ ನಡುವೆ ಯೂವುದೇ ಲಾಜಿಕ್ ಹುಡುಕದೆ ಒಮ್ಮೆ ನೋಡಿ ಬರಬಹುದಾದ ನೀಟ್ ರಿಮೇಕ್ ಚಿತ್ರ 'ರುದ್ರತಾಂಡವ'.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com