ಬಲ ಬಾಹುಗಳಲ್ಲಿ, ಬಾಹ್ಯ ದೃಶ್ಯಗಳಲ್ಲಿ ಬಂಧಿಸಿದ ಬಾಹುಬಲಿ

ನೂರಾರು ಕೆಜಿ ತೂಕದ ಶಿವಲಿಂಗವನ್ನು ಹುಲ್ಲು ಕಡ್ಡಿಯಂತೆ ಎತ್ತುವ, ನೂರಾರು ಅಡಿ ಚಿನ್ನದ ಪ್ರತಿಮೆಯನ್ನು ಕೆಳಗೆ ಬೀಳದಂತೆ ತಡೆಯಬಲ್ಲ, ಸುಸಜ್ಜಿತ ಕೋಟೆಯನ್ನು ಯಾರ ಕಣ್ಣಿಗೂ
ಬಾಹುಬಲಿ ಸಿನೆಮಾ ವಿಮರ್ಶೆ
ಬಾಹುಬಲಿ ಸಿನೆಮಾ ವಿಮರ್ಶೆ

ನೂರಾರು ಕೆಜಿ ತೂಕದ ಶಿವಲಿಂಗವನ್ನು ಹುಲ್ಲು ಕಡ್ಡಿಯಂತೆ ಎತ್ತುವ, ನೂರಾರು ಅಡಿ ಚಿನ್ನದ ಪ್ರತಿಮೆಯನ್ನು ಕೆಳಗೆ ಬೀಳದಂತೆ ತಡೆಯಬಲ್ಲ, ಸುಸಜ್ಜಿತ ಕೋಟೆಯನ್ನು ಯಾರ ಕಣ್ಣಿಗೂ ಬೀಳದಂತೆ ಕ್ಷಣಮಾತ್ರದಲ್ಲಿ ಜಿಗಿಯಬಲ್ಲ, ನೂರಾರು ಮೀಟರ್ ದೂರವನ್ನು ಪಕ್ಷಿಯಂತೆ ಹಾರಿ ಕ್ರಮಿಸಬಲ್ಲ, ಖಡ್ಗ, ಈಟಿ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಲೀಲಾಜಾಲವಾಗಿ ಬಳಸಬಲ್ಲ, ರೊಮ್ಯಾಂಟಿಕ್ ಆಗಬಲ್ಲ, ಸಧೃಢ ಕಾಯದ-ಸಿಕ್ಸ್ ಪ್ಯಾಕ್ ದೇಹದ ಬಾಹುಬಲಿಯ ಪ್ರಾರಂಭ ಭಾಗ ತೆರೆಗೆ ಅಪ್ಪಳಿಸಿದೆ. ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಈ ಚಲನಚಿತ್ರದ ಕಥೆ ಪ್ರೇಕ್ಷಕನನ್ನು ಹಿಡಿದಿಡುವಷ್ಟು ಸಶಕ್ತವೇ? ನೂರಾರು ಕೋಟಿ ಖರ್ಚು ಮಾಡಿ ವಿ ಎಫ್ ಎಕ್ಸ್ ನಿಂದ ಸೃಷ್ಟಿಸಿರುವ ಜಲಪಾತ, ರಾಜ್ಯ, ಕೋಟೆ ಕೊತ್ತಲುಗಳು ಏನಾದರು ಹೊಸದನ್ನು ಹೇಳುತ್ತವೆಯೇ?

ಜಲಪಾತದ ಕೆಳಗೆ ಸಿಗುವ ಮಗುವನ್ನು ಸಣ್ಣ ಪಂಗಡವೊಂದು ಸಾಕುತ್ತದೆ. ದೈಹಿಕವಾಗಿ ಏನನ್ನು ಬೇಕಾದರೂ ಮಾಡಬಲ್ಲ ಯುವಕನಾಗಿ ಶಿವ(ಪ್ರಭಾಸ್) ಬೆಳೆಯುತ್ತಾನೆ. ಜಲಪಾತದಿಂದ ಕೆಳಗೆ ಸಿಗುವ ಮುಖವಾಡದ ಬೆನ್ನು ಹತ್ತಿ, ಕೊನೆಗೆ ನೂರಿನ್ನೂರು ಅಡಿ ಜಲಪಾತವನ್ನೂ ಹತ್ತಿ ಅವಂತಿಕಳನ್ನು (ತಮನ್ನ) ಭೇಟಿಯಾಗುತ್ತಾನೆ. ಅವಂತಿಕ ಕೂಡ ಯುದ್ಧದಲ್ಲಿ ಪರಿಣಿತಳು. ಮಾಹಿಷ್ಮತಿ ರಾಜ್ಯದಲ್ಲಿ ಬಳ್ಳಾಳದೇವ ಸೆರೆ ಹಿಡಿದಿರುವ ರಾಣಿ ದೇವಸೇನಳನ್ನು ಬಿಡಿಸಿಕೊಂಡು ಬರಲು ಅವಂತಿಕ ಮತ್ತು ಅವಳ ಬಣ ಪ್ರಯತ್ನಿಸುತ್ತಿರುತ್ತದೆ. ಶಿವ ಮತ್ತು ಅವಂತಿಕಳಿಗೆ ಪ್ರೇಮಾಂಕುರವಾಗಿ ರಾಣಿ ದೇವಸೇನಳನ್ನು ಬಿಡಿಸಿಕೊಂಡು ಬರವ ಅವಂತಿಕಳ ಕೆಲಸವನ್ನು ತಾನೇ ವಹಿಸಿಕೊಂಡು ಮಾಹಿಷ್ಮತಿ ರಾಜ್ಯಕ್ಕೆ ಒಬ್ಬಂಟಿಯಾಗಿ ಲಗ್ಗೆಯಿಟ್ಟು, ದೇವಸೇನಳನ್ನು ಬಿಡಿಸಿಕೊಂಡು ಬರುತ್ತಾನೆ. ಆಗ ಆ ರಾಜ್ಯದಲ್ಲಿ ಇವನ ಮುಖ ನೋಡಿದ ಕೆಲವರು ಬಾಹುಬಲಿ ಬಾಹುಬಲಿ ಎಂಬ ಮಂತ್ರ ಪಠಿಸುತ್ತಾರೆ. ತಾನೇ ಬಾಹುಬಲಿ, ತನ್ನ ತಾಯಿಯೇ ದೇವಸೇನ ಎಂಬ ಪರಿವೇ ಇಲ್ಲದೆ ದೇವಸೇನಳನ್ನು ಕರೆತರುವಾಗ, ಮಹಿಸ್ಮತಿಯ ಯುವರಾಜ ಮತ್ತು ಮಂತ್ರಿ ಕಣ್ಣಪ್ಪ ಬೆನ್ನು ಹತ್ತುತ್ತಾರೆ. ಶಿವ ಅಕಾ ಬಾಹುಬಲಿ ಯುವರಾಜನ ತಲೆ ಕತ್ತರಿಸುತ್ತಾನೆ. ಕಣ್ಣಪ್ಪ ಬಾಹುಬಲಿಯ ಗುರುತು ಹಚ್ಚಿ ಅವನ ಹಿಂದಿನ ಕಥೆಯನ್ನು ಹೇಳಲು ಪ್ರಾರಂಭಿಸಿದಾಗ ಕಥೆ ಹಿನ್ನಲೆಗೆ ಜಾರುತ್ತದೆ. ಅಮರೇಂದ್ರ ಬಾಹುಬಲಿ(ಪ್ರಭಾಸ್ ದ್ವಿಪಾತ್ರ), ಬಾಹುಬಲಿಯ ತಂದೆ. ತನ್ನ ಶೂರತ್ವದಿಂದ ದೊಡ್ಡ ಯುದ್ಧವನ್ನು ಗೆದ್ದು, ಶೌರ್ಯದಲ್ಲಿ ತನ್ನ ದಾಯಾದಿ ಬಲ್ಲಾಳದೇವನನ್ನು ಹಿಂದಿಕ್ಕಿ ರಾಜಪಟ್ಟವನ್ನು ಅಲಂಕರಿಸಿರುತ್ತಾನೆ. ಆದರೆ ಪಿತೂರಿ ನಡೆದು ಅಮರೇಂದ್ರನ ಕೊಲೆಯಾಗಿರುತ್ತದೆ ಆದರೆ ಮಗು ಬಾಹುಬಲಿ ರಾಜಮಾತೆ ಅಜ್ಜಿಯಿಂದ(ರಮ್ಯಕೃಷ್ಣ) ಉಳಿದುಕೊಂಡಿರುತ್ತದೆ.

ಇದು ಬಾಹುಬಲಿಯ ಆರಂಭವಷ್ಟೇ. ಆದುದರಿಂದ ಕಥೆಯ ಮುಕ್ತಾಯಕ್ಕೆ ಬಾಹುಬಲಿ ಮುಕ್ತಾಯವನ್ನು ೨೦೧೬ ರಲ್ಲಿ ನೋಡುವಂತೆ ನಿರ್ದೇಶಕರು ಚಲನಚಿತ್ರದ ಕೊನೆಗೆ ತಿಳಿಸುತ್ತಾರೆ. ಚಿತ್ರಕಥೆ ಚೆನ್ನಾಗಿದೆ ಎಂದೆನಿಸಿದರು ಕನ್ನಡ ಚಲನಚಿತ್ರ ಮಯೂರ ಸಿನೆಮಾದ ಛಾಯೆ ದಟ್ಟವಾಗಿ ಕಂಡುಬರುತ್ತದೆ. ಸಿನೆಮಾ ಕಟ್ಟುವಿಕೆಯಲ್ಲಿ ಮಾಮೂಲಿ ಗಿಮಿಕ್ ಗಳಿಗೆ ಕಟ್ಟುಬಿದ್ದಿರುವ ನಿರ್ದೇಶಕ ರಾಜಮೌಳಿ ಅವರ ಈ ಸಿನೆಮಾ ಕೂಡ ಅತಿಯಾದ ಹಿರೋಯಿಸಂ ಭಾರದಿಂದ ತುಳುಕುತ್ತದೆ. ಚಿತ್ರದ ಎರಡನೇ ಭಾಗದಲ್ಲಿ ಯುದ್ಧವನ್ನು ಮಾಡುವಾಗ ಬಳಸುವ ತಂತ್ರವನ್ನು ಸ್ವಲ್ಪ ತಾರ್ಕಿಕವಾಗಿ ತೋರಿಸಲು ಪ್ರಯತ್ನಿಸಿದ್ದರು, ಮೊದಲ ಭಾಗದಲ್ಲಿ ನಾಯಕ ನಟನಿಗೆ ಅಸಾಧ್ಯವಾದುದೇ ಇಲ್ಲ ಎಂಬಂತೆ ಎಸ್ಟಾಬ್ಲಿಶ್ ಮಾಡುವುದು, ಮೊದಲ ನೋಟದಲ್ಲೇ ಮರ ಸುತ್ತುವ ಪ್ರೇಮಕಥೆ, ಅಲ್ಲೆಲ್ಲೋ ಒಂದು ಐಟಮ್ ಸಾಂಗು ಹೀಗೆ ಕಮರ್ಷಿಯಲ್ ಸಂಗತಿಗಳಿಗೆ ಯಾವುದೇ ಧಕ್ಕೆ ತರದೆ ಜಾಣ್ಮೆಯಿಂದ ಮಾಸ್ ಪ್ರೇಕ್ಷಕರಿಗಾಗಿಯೇ ನಿರ್ದೇಶಿಸಿರುವ ಸಿನೆಮಾ ಇದು. ಮೊದಲಾರ್ಧದ ಕಥೆಯ ಬೆಳವಣಿಗೆ ತುಸು ಹೆಚ್ಚೇ ಎನ್ನಿಸುತ್ತದೆ ಹಾಗೂ ದ್ವಿತೀಯಾರ್ಧದಲ್ಲಿ ಹಿನ್ನಲೆಯ ಯುದ್ಧದ ದೃಶ್ಯವನ್ನು ವೈಭವೀಕರಿಸಿ ೨೦-೨೫ ನಿಮಿಷ ತೋರಿಸುತ್ತಾರೆ. ಇವೆರಡರ ಸಮಯವನ್ನು ಕಡಿತಗೊಳಿಸಿದ್ದರೆ ಸಿನೆಮಾ ಒಂದೇ ಭಾಗದಲ್ಲಿ ಮುಗಿಸಬಹುದಿತ್ತು ಎಂದೆನಿಸದೆ ಇರದು. ನಟ ಪ್ರಭಾಸ್ ಮತ್ತು ನಟಿ ತಮನ್ನ ಅವರ ಅಂಗಸೌಷ್ಟತೆ ಹೊರತುಪಡಿಸಿದರೆ ನಟನೆ ಅಷ್ಟಕ್ಕಷ್ಟೇ. ಗ್ರಾಫಿಕ್ಸ್ ನಿಂದ ಸೃಷ್ಟಿಯಾಗಿರುವ ಜಲಪಾತದ ಕಣ್ಣಿಗೆ ರಾಚುತ್ತದೆ, ಆದರೆ ಅದಕ್ಕೆ ಸ್ವಲ್ಪ ಸಮಾಧಾನ ನೀಡುವುದು ಅದೇ ಗ್ರಾಫಿಕ್ಸ್ ನಲ್ಲಿ ಸೃಷ್ಟಿಸಲಾಗಿರುವ ರಾಜ್ಯ-ಅರಮನೆ-ಕೋಟೆ. ಸಿನೆಮಾದಲ್ಲಿ ನಿಜಕ್ಕೂ ಒಂದು ಕೌಶಲತೆ ಇರುವುದು ಕೀರವಾಣಿ ಅವರ ಸಂಗೀತ ಮತ್ತು ಹಿನ್ನಲೆ ಸಂಗೀತದಲ್ಲಿ. ಉಳಿದ ಪಾತ್ರವರ್ಗದ ನಟನೆ ರಾಜಮನೆತನದ-ಯುದ್ಧ ಸಿನೆಮಾಗಳ ಅತಿರೇಕದ ನಟನೆಗೆ ಬೇಕಂತಿದೆ. ಒಟ್ಟಿನಲ್ಲಿ ರಾಜಮೌಳಿ ಯಾವುದೇ ಮ್ಯಾಜಿಕ್ ಸೃಷ್ಟಿಸದೆ ಹಿತ-ಅಹಿತಗಳ ಸಂಯೋಜಿತ ಸಿನೆಮಾವೊಂದನ್ನು ನೀಡಿದ್ದಾರೆ.

ಸಿಂಹಾಸನಕ್ಕಾಗಿ ದಾಯಾದಿಗಳ ಕಲಹ ಹೊಸತೇನಲ್ಲ. ಆ ಸಂದಿಗ್ಧದ ಕಥೆಗಳು ದೃಶ್ಯ ಮಾಧ್ಯಮದಲ್ಲಿ ಅಪಾರವಾಗಿ ಮೂಡಿ ಬಂದಿವೆ. ಬಾಹುಬಲಿ ಸಿನೆಮಾದಲ್ಲೂ ಆ ಒಂದು ಸಣ್ಣ ಸಂದಿಗ್ಧತೆಯನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಬೇರೆ ಯಾವ ಘನ ವಿಚಾರವೂ ಕಂಡುಬರುವುದಿಲ್ಲ. ಸಿನೆಮಾ ವೀಕ್ಷಣೆ ಒಂದು ಪ್ರತ್ಯೇಕ-ವಿಶಿಷ್ಟ ಅನುಭವ ಎಂದಾದರೂ ಬಳಸಿರುವ ಗ್ರಾಫಿಕ್ಸ್ ಕೆಲವೊಮ್ಮೆ ವಿಪರೀತ ಎನ್ನಿಸಿ, ನಟನ ಹಿರೋಯಿಸಂ ಅತಿ ಎನ್ನಿಸಿ ಕಥೆಯ ಸಣ್ಣ ಎಳೆಯೂ ಹಿಂದಕ್ಕೆ ಸರಿಯುತ್ತದೆ. ಇನ್ನೂ ನಯವಾಗಿ-ನಾಜೂಕಾಗಿ ಈ ಸಿನೆಮಾ ಮಾಡುವ ಎಲ್ಲ ಸಾಧ್ಯತೆಗಳೂ ನಿರ್ದೇಶಕನಿಗಿದ್ದವು. ಹಿರೋ ಬೈಸೆಪ್ಸ್ ನೋಡಲು ಇಷ್ಟಪಡುವವರು, ಅತಿಯಾದ ವಿ ಎಫ್ ಎಕ್ಸ್ ದೃಶ್ಯಗಳನ್ನು ಆಸ್ವಾದಿಸುವವರು, ಯುದ್ಧದಲ್ಲಿ ಈಟಿ, ಘರಾಣೆ, ಕತ್ತಿ ಝಳಕ ಹೊಡೆದಾಟ ಅದ್ಭುತ ಎನ್ನುವವರು ನೋಡಲೇಬೇಕಾದ ಸಿನೆಮಾ ಇದು.

-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com