ಲೊಳಲೊಟ್ಟೆ ಲೊಳಲೊಟ್ಟೆ 'ಲೊಡ್ಡೆ' ಲೊಳಲೊಟ್ಟೆ

ಇದು ಹಾಸ್ಯನಟರಿಗೆ ಸುಭಿಕ್ಷ ಕಾಲವಿರಬೇಕು. ಸಿನೆಮಾವಿಡಿ ತೆರೆಯನ್ನು ಆವರಿಸಿಕೊಳ್ಳುವ ಸುವರ್ಣಾವಕಾಶ ಪಡೆಯುತ್ತಿದ್ದಾರೆ ನೆನ್ನೆಯ ಹಾಸ್ಯನಟರು. ಕಳೆದ ವಾರ ಶರಣ್ ಅವರ ಸರದಿ ಈ ವಾರ ಕೋಮಲ್.
'ಲೊಡ್ಡೆ' ಸಿನೆಮಾ ವಿಮರ್ಶೆ
'ಲೊಡ್ಡೆ' ಸಿನೆಮಾ ವಿಮರ್ಶೆ

ಹಾಸ್ಯನಟರಿಗೆ ಇದು ಸುಭಿಕ್ಷ ಕಾಲವಿರಬೇಕು. ಸಿನೆಮಾವಿಡಿ ತೆರೆಯನ್ನು ಆವರಿಸಿಕೊಳ್ಳುವ ಸುವರ್ಣಾವಕಾಶ ಪಡೆಯುತ್ತಿದ್ದಾರೆ ನೆನ್ನೆಯ ಹಾಸ್ಯನಟರು. ಕಳೆದ ವಾರ ಶರಣ್ ಅವರ ಸರದಿ ಈಗ ಕೋಮಲ್ ಅವರದ್ದು. ಖ್ಯಾತ ನಟ ವಿಷ್ಣುವರ್ಧನ್ ಕೂಡ ಎಡಚರಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಗೌರವ ಸಮರ್ಪಿಸಿದ್ದೇವೆ ಎಂಬ ಪ್ರಚಾರ ಪಡೆದಿರುವ 'ಲೊಡ್ಡೆ' ಎಸ್ ವಿ ಸುರೇಶ್ ಅವರ ನಿರ್ದೇಶನದಲ್ಲಿ ಇಂದು ಬಿಡುಗಡೆಯಾಗಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಲೊಡ್ಡೆಗಳಗಿರುವ ಖ್ಯಾತನಾಮರಿದ್ದಾರೆ, ಈ ಸಿನೆಮಾಗೂ ಅಂತಹ ಖ್ಯಾತಿ ಪಡೆಯುವ ತಾಕತ್ತಿದೆಯೇ ಅಥವಾ ಸಾಮಾನ್ಯ ಜನರ ನಡುವೆ ಎಡಚರು ಗೇಲಿಗೊಳಗಾಗುವಂತೆ ಈ ಸಿನೆಮಾದ್ದು ಅದೇ ಗತಿಯೇ?

ಒಂದು ಕಾಲದ ಚಡ್ಡಿ ಸ್ನೇಹಿತರಾದ ಧರ್ಮೇಗೌಡ(ಸಯ್ಯಾಜಿ ಶಿಂಧೆ) ಮತ್ತು ರುದ್ರಪ್ಪ(ಅವಿನಾಶ್) ಈಗ ಬದ್ಧ ವೈರಿಗಳು. ಪರಸ್ಪರ ವಂಶಗಳನ್ನು ನಾಶ ಮಾಡಲು ಸದಾ ಕತ್ತಿ ಮಸೆಯುವವರು.  ಧರ್ಮೇಗೌಡನ ಮೊಮ್ಮಗ ನರಸಿಂಹ ಅಲಿಯಾಸ್ ಲೊಡ್ಡೆ (ಕೋಮಲ್) ಅಮೆರಿಕಾದಿಂದ ಹಿಂದಿರುಗುತ್ತಾನೆ. ರುದ್ರಪ್ಪನ ಮೊಮ್ಮಗಳು ಆಕಾಂಕ್ಷಾಳನ್ನು(ಅಕಾಂಕ್ಷಾ ಪುರಿ) ಉತ್ಕಟವಾಗಿ ಪ್ರೀತಿಸುತ್ತಾನೆ. ಕುಟುಂಬಗಳನ್ನು ಒಂದು ಮಾಡಲು ಅವಳನ್ನು ಮದುವೆಯಾಗಲು ನಿಶ್ಚಯಿಸುತ್ತಾನೆ. ಇನ್ನೇನು ಒಂದಾಗಬೇಕು, ಆಗ ರುದ್ರಪ್ಪನ ಪಿತೂರಿ ತಿಳಿದು ನಿಶ್ಚಿತಾರ್ಥ ಬೇಡ ಎನ್ನುತ್ತಾನೆ ನರಸಿಂಹ. ಆದರೆ ಇವರಿಬ್ಬರ ಮೂಲ ವೈರಕ್ಕೆ ಹಿನ್ನಲೆಯಲ್ಲಿ ಮತ್ತೊಂದು ಕಥೆ ಇರುತ್ತದೆ ಹಾಗೂ ಮತ್ತೊಬ್ಬ ವ್ಯಕ್ತಿ ಇರುತ್ತಾನೆ. ಅವರ ಬೆನ್ನು ಹತ್ತಿ ಬೆಂಗಳೂರಿಗೆ ಹೊರಡುವ ನಾಯಕ-ನಾಯಕನಟಿ ಮುಂದೆ ಮಾಡುವುದೇನು?

ಮೊದಲಿಗೇ ಸ್ಪಷ್ಟೀಕರಿಸಬೇಕಾದ ಸಂಗತಿಯೆಂದರೆ ಇಲ್ಲಿ ಲೊಡ್ಡೆ ಎಂಬುದಕ್ಕಾಗಾಲೀ, ವಿಷ್ಣುವರ್ಧನ್ ಅವರಿಗಾಗಲೀ ಈ ಸಿನೆಮ ಸಂಬಧಪಡದೆ ಇರುವುದು. ವಿಶ್ವ ವಿಖ್ಯಾತ ಎಡಚರನ್ನು ನೆನಪಿಸಿಕೊಳ್ಳುವ ಹಾಡಿನ ಮೂಲಕ ಪ್ರಾರಂಭವಾಗುವ ಈ ಚಿತ್ರ ನಂತರ ಅದನ್ನು ಕಡೆಗಣಿಸಿ, ಅಂತ್ಯಕ್ಕೆ ವಿಷ್ಣುವರ್ಧನ್ ಅವರನ್ನು ಹಾಡಿನ ಮೂಲಕ ನೆನಪಿಸಿಕೊಳ್ಳುವುದನ್ನು ಬಿಟ್ಟರೆ ಇವುಗಳ ನಡುವೆ ತುರುಕಿರುವ ಘಟನೆಗಳನ್ನು-ಕಥೆಯನ್ನು ಸಹಿಸಿಕೊಳ್ಳುವ ದೌರ್ಭಾಗ್ಯ ಪ್ರೇಕ್ಷಕನದ್ದು. ಸತ್ವವೇ ಇಲ್ಲದ ಕಥೆಯಲ್ಲಿ ಜಾಳು ಜಾಳು ಸಂಬಂಧಗಳನ್ನು ತುರುಕಿ, ಹೊಸತೇನೂ ಇರದ ಕಥೆಯನ್ನು ಹೆಣೆಯುತ್ತಾ ಹೋಗಲಾಗಿದೆ. ಒಬ್ಬರ ವಂಶವನ್ನು ಮತ್ತೊಬ್ಬ ಸುಟ್ಟಿ ಹಾಕಿಬಿಡುತ್ತೇನೆ ಎಂಬ ಪುನರಾವರ್ತಿತ ದೃಶ್ಯ ಪ್ರೇಕ್ಷಕನ ನೆಮ್ಮದಿಯನ್ನು ಸುಟ್ಟಿಹಾಕಿಬಿಡುತ್ತದೆ. ಎರಡು ಕುಟುಂಬಗಳ ವೈರಕ್ಕೆ ನೀಡಿರುವ ಕಾರಣ ಅತಿ ಪ್ರಾಚೀನವಾದ ಕಥೆ ಅದಕ್ಕೆ ಸುಮ್ಮನೆ ಜಾತಿ ನೆವವನ್ನು ತಂದು ಈ ಕುಟುಂಬಗಳ ಸಂಬಂಧದ ಗೋಜಲುಗಳಲ್ಲಿ ಪ್ರೇಕ್ಷನನ್ನು ಹೈರಾಣಾಗಿ ಮಾಡುತ್ತದೆ ಸಿನೆಮಾ. ದ್ವಿತೀಯಾರ್ಧವಂತೂ ೫೦೦ ಎಪಿಸೋಡಿನ ಧಾರಾವಾಹಿ ನೋಡಿದಂತೆ ಭಾಸಬಾಗುತ್ತದೆ.

ಅಬ್ಬರದ ಸಂಭಾಷಣೆ ಮತ್ತು ನಟನೆ, ಅರ್ಥವಿಲ್ಲದ ತಿರುವುಗಳು, ವಿಪರೀತ ವೇಗವಾಗಿ ಓಡುವ ದೃಶ್ಯಗಳು, ಪ್ರೇಕ್ಷಕನ ಭಾವನೆಗಳನ್ನು ಕೆರಳಿಸದ ನೀರಸ ಭಾವನಾತ್ಮಕ-ಪ್ರಣಯ ದೃಶ್ಯಗಳು ನಿರ್ದೇಶಕ ಎಡವಿರುವುದನ್ನು ಎತ್ತಿ ತೋರಿಸುತ್ತದೆ. ಕಂಡಕಂಡಲ್ಲಿ ಹಾಡುಗಳನ್ನು ತುರುಕಿರುವುದು ಕನ್ನಡ ಸಿನೆಮಾಗಳನ್ನು ನೂತನ ಪಾತಾಳಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ತಾವೇ ಡಬ್ ಮಾಡಿರುವ ಅನ್ಯ ಭಾಷಿಕ ನಟ ಸಯ್ಯಾಜಿ ಶಿಂಧೆ ಗೌಡನ ಪಾತ್ರದಲ್ಲಿ ಕನ್ನಡ ಮಾತಾಡಲು ದ್ರಾವಿಡ ಪ್ರಾಣಾಯಾಮ ಮಾಡಿ ಪ್ರೇಕ್ಷಕನಿಗೆ ಉಸಿರುಗಟ್ಟಿಸುತ್ತಾರೆ. ಒಳ್ಳೆಯ ಹಾಸ್ಯಪ್ರಜ್ಞೆಯ ನಟ ಎಂದು ಹೆಸರಾಗಿರುವ ಕೋಮಲ್ ಈ ಸಿನೆಮಾದಲ್ಲಿ ಯಾವುದೇ ಮ್ಯಾಜಿಕ್ ತೋರಲು ವಿಫಲರಾಗಿರುವುದು ಸಿನೆಮಾದ ಅತಿ ದೊಡ್ಡ ನಿರಾಸೆ. ಅವಿನಾಶ್ ನಟನೆ ಕೂಡ ಬೇಸರ ತರಿಸುತ್ತದೆ. ಇದ್ದುದರಲ್ಲಿ ನಾಯಕಿಯೇ ಪರವಾಗಿಲ್ಲ ಎನ್ನಬಹುದು. ಸಂಗೀತ-ಹಾಡುಗಳು ಯಾವುದೂ ಮನಸ್ಸಿನಲ್ಲಿ ಉಳಿಯುವಂತಿಲ್ಲ. ಸವಕಲು ಕಥೆ, ಅಬ್ಬರದ ಸಂಭಾಷಣೆ-ಸಂಗೀತ, ಕೆಲವೊಮ್ಮೆ ಧಾರಾವಾಹಿ ಶೈಲಿಯ ನಿರೂಪಣೆಗೆ ಜಾರಿರುವುದು ಹೀಗೆ ತಪ್ಪುಗಳ ಸರಮಾಲೆಯನ್ನೇ ಪೋಣಿಸಿರುವ ನಿರ್ದೇಶಕ ಸುರೇಶ್ ಸಹಿಸಿಕೊಳ್ಳಲು ಅಸಾಧ್ಯವಾದ ಸಿನೆಮಾ ನಿರ್ದೇಶಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

'ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ' ದಾಸರ ಪದ. ಕನ್ನಡ ಚಲನಚಿತ್ರಗಳನ್ನು ದಾಸರು ನೋಡಿದ್ದರೆ ಇತ್ತೀಚಿನ ಬಹುತೇಕ ಕನ್ನಡ ಸಿನೆಮಾಗಳು ಲೊಳಲೊಟ್ಟೆ, ಕನ್ನಡ ನಟ, ನಿರ್ದೇಶಕ, ನಿರ್ಮಾಪಕ ಮಹಾಶಯರು ಲೊಳಲೊಟ್ಟೆ ಎಂದು ಹಾಡನ್ನು ಲಂಬಿಸುತ್ತಿದ್ದರೋ ಏನೋ. ಬೆರಳಣಿಕೆಯಷ್ಟೇ ನಟ, ನಟಿ, ನಿರ್ಮಾಪಕ, ನಿರ್ದೇಶಕ, ಸಿನೆಮಾಗಳನ್ನು ಹೊರತುಪಡಿಸಿದರೆ ಕನ್ನಡ ಸಿನೆಮಾರಂಗದ ಸ್ಥಿತಿ ಲೊಳಲೊಟ್ಟೆ. 

-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com