ಅನಂತನಾಗ್ ಇದ್ದೂ ಪ್ಲಸ್ ಇಲ್ಲ

ಕಥೆಯಲ್ಲಿ ಪಾತ್ರಗಳ ಸೃಷ್ಟಿ ಹೇಗಿರಬಾರದು ಎಂಬುದಕ್ಕೆ ಪಠ್ಯಪುಸ್ತಕದ ಉದಾಹರಣೆಯಂತಿದೆ ಈ ಸಿನೆಮಾ. ಯಾವ ಪಾತ್ರದಲ್ಲೂ ಗಟ್ಟಿತನವಿಲ್ಲದೆ, ಎಲ್ಲರಿಗೂ ನಾನು ಸಿನೆಮಾದಲ್ಲಿ ಪಾತ್ರ ನೀಡುತ್ತೇನೆ
ಪ್ಲಸ್ ಸಿನೆಮಾ ವಿಮರ್ಶೆ
ಪ್ಲಸ್ ಸಿನೆಮಾ ವಿಮರ್ಶೆ
ಗಡ್ಡ ವಿಜಿ ನಿರ್ದೇಶನದ 'ಪ್ಲಸ್' ಸಿನೆಮಾವನ್ನು ಮಾನಸಿಕ ಅವಸ್ಥೆಯ ಬಗೆಗಿನ ಚಿತ್ರ ಎಂದು ವರ್ಗೀಕರಿಸಲಾಗದ, ಸೇಡು ಪ್ರಧಾನ ರಿವೆಂಜ್ ಮೂವಿ ಎಂದು ಕೂಡ ವರ್ಗೀಕರಿಸಲು ಮನಸ್ಸಾಗದೆ, ಒಳ್ಳೆಯ ಮನರಂಜನೆ ಸಿನಿಮಾ ಎಂದಂತೂ ಹೇಳಲೇ ಆಗದ, ಇಕ್ಕಟ್ಟಿನ ಸಿನೆಮಾ. ಕಥೆಯಲ್ಲಿ ಪಾತ್ರಗಳ ಸೃಷ್ಟಿ ಹೇಗಿರಬಾರದು ಎಂಬುದಕ್ಕೆ ಪಠ್ಯಪುಸ್ತಕದ ಉದಾಹರಣೆಯಂತಿದೆ ಈ ಸಿನೆಮಾ. ಯಾವ ಪಾತ್ರದಲ್ಲೂ ಗಟ್ಟಿತನವಿಲ್ಲದೆ, ಎಲ್ಲರಿಗೂ ನಾನು ಸಿನೆಮಾದಲ್ಲಿ ಪಾತ್ರ ನೀಡುತ್ತೇನೆ ಎಂಬ ದಾರ್ಷ್ಟ್ಯದಿಂದ ಮನಸಾಇಚ್ಛೆ ಪಾತ್ರಗಳ ಪಟ್ಟಿ ಬೆಳೆದು, ಅರ್ಥಹೀನ ಚಿತ್ರಕಥೆಯೊಂದಿಗೆ ನಿರ್ಮಾಪಕನಾಗಿ, ಕಥೆಗಾರನಾಗಿ, ನಟನಾಗಿ ಹೊರಹೊಮ್ಮಿದ್ದಾರೆ ರಿತೇಶ್.

ಆಕಾಂಕ್ಷೆ ಹೊತ್ತ ಯುವ ನಿರ್ದೇಶಕನೊಬ್ಬ ಸೋತು ಹೋಗಿರುವ ನಿರ್ಮಾಪಕನಿಗೆ ಕಥೆ ಹೇಳುತ್ತಿದ್ದಾನೆ. ಕಥೆಯ ಮೊದಲನೇ ಸಾಲು ಹೇಳುತ್ತಿದ್ದಂತೆಯೇ ನಿರ್ಮಾಪಕ ಭಲೇ ಭೇಷ್ ಎನ್ನುತ್ತಾನೆ. ಭೂಲೋಕವಲ್ಲದ ಈ ಲೋಕದಲ್ಲಿ ನಡೆಯುವ ಈ ಕಥೆ ಚಿತ್ರಕ್ಕೆ ಪ್ರಸ್ತಾವನೆಯಾಗಿ ಪ್ರಾರಂಭವಾಗುತ್ತದೆ. ಇದೇ ಮೊದಲ ೧೫ ನಿಮಿಷದ ಭಾಗವನ್ನು ಕಸಿದುಕೊಂಡು ಚಿತ್ರದ ಬಗ್ಗೆ ಒಂದು ಋಣಾತ್ಮಕ ಅಭಿಪ್ರಾಯವನ್ನು ರೂಪಿಸಿಬಿಡುತ್ತದೆ. ನಂತರ ಭೂಲೋಕದಲ್ಲಿ ಪ್ರಾರಂಭವಾಗುವ ಕಥೆಯಲ್ಲಿ ಸಾರ್ವಜನಿಕರ ಹಿತಕ್ಕಾಗಿ ಲಕ್ಷಾಂತರ ರುಪಾಯಿ ದುಡ್ಡನ್ನು ವ್ಯಯಿಸಿ ಎನ್ ಜಿ ಒ ನಡೆಸುತ್ತಿರುವ ದೇವ್ (ಅನಂತನಾಗ್) ಎಂಬ ದೊಡ್ಡ ಉದ್ದಿಮೆದಾರ, ಅವನ ಮೇಲೆ ದಾಳಿಯಾಗುತ್ತದೆ. ಪೊಲೀಸ್ ಅಧಿಕಾರಿ (ರಾಜೇಶ್ ನಟರಂಗ) ತನಿಖೆ ನಡೆಸಲು ದೇವ್ ಅವರಲ್ಲಿ ಎಷ್ಟೇ ಮನವಿ ಮಾಡಿದರು ದೇವ್ ಸಹಕರಿಸುವುದಿಲ್ಲ. ವಿದೇಶದಲ್ಲಿ ವ್ಯಾಸಂಗ ಮುಗಿಸಿರುವ ದೇವ್ ಮಗ ವಿವೇಕ್ (ಚೇತನ್ ಚಂದ್ರ) ಹಿಂದಿರುಗುತ್ತಾನೆ. ಮಗನಿಗೆ ಮಿಸೋಫೋನಿಯಾ ಎಂದರೆ ಅತಿ ಕಿರಿಕಿರಿಯ ಅಥವಾ ಜೋರು ಶಬ್ದವನ್ನು ಕೇಳಿದಾಗ ಕೆರಳುವ ರೋಗ ಎಂದು ದೇವ್ ಅವರ ಗೆಳೆಯ ಮಾನಸಿಕ ತಜ್ಞ (ಸುಚೇಂದ್ರ ಪ್ರಸಾದ್) ವಿವರಿಸುತ್ತಾರೆ. ಇನ್ನೊಮ್ಮೆ ಇವರ ಮೇಲೆ ದಾಳಿಯಾದಾಗ ಇವರನ್ನು ಉಳಿಸುವ ರಿತೇಶ್ (ರಿತೇಶ್) ದೇವ್ ಕೋರಿಕೆ ಮೇರೆಗೆ ವಿವೇಕ್ ನ ಗೆಳೆಯನಾಗುತ್ತಾನೆ. ವಿವೇಕ್ ಎನ್ ಎಸ್ ಡಿ ಎಂಬ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಇವರ ಜೊತೆಗೆ ರಕ್ತ ಕಂಡರೆ ಬೆದರುವ ಹೀಮೋಫೋಬಿಯಾ ಎಂಬ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯ ತಂಗಿಯಾದ ನಿಧಿ (ಶಾಲಿನಿ) ಸೇರಿಕೊಳ್ಳುತ್ತಾಳೆ. ಮೊದಲಾರ್ಧ ಈ ಮೂವರ ಆಟೋಪಾಟಗಳ ಕೊಲಾಜ್ ಆದರೆ ದ್ವಿತೀಯ ಭಾಗದಲ್ಲಿ ದೇವ್ ಅವರ ಮೇಲೆ ದಾಳಿಯಾಗುವುದು ಏಕೆ? ಈ ಮೂವರೂ ಮಾನಸಿಕ ರೋಗಿಗಳ ಮೈನಸ್ ಅಂಶಗಳನ್ನು ಪ್ಲಸ್ ಆಗಿ ಬಳಸಿಕೊಳ್ಳುವ ದೇವ್ ಮಾಡುವುದೇನು? ಎಂಬ ಕಥೆ ಮೂಡುತ್ತದೆ.

ಮೊದಲಾರ್ಧ ಯಾವುದೋ ಮಾನಸಿಕ ಅಸ್ವಸ್ಥತೆಯ ಬಗ್ಗೆ ಸಿನೆಮಾ ಮಾಡಿರಬಹುದು ಎಂಬ ಸಂದೇಹ ಹುಟ್ಟಿದರೂ ಆ ಅಸ್ವಸ್ಥತೆ ನಟನೆಯಲ್ಲಿ ಎಲ್ಲೂ ಪರಿಣಾಮಕಾರಿಯಾಗಿ ಮೂಡಿ ಬರದೆ ಬೇಸರಿಸುವ ಸಂಭಾಷಣೆಯ ಮೂಲಕ ಈ ರೋಗಗಳ ಬಗ್ಗೆ ವಿವರಿಸುತ್ತಾ ಮೊದಲಾರ್ಧ ಪ್ರೇಕ್ಷಕನಿಗೂ ಮಾನಸಿಕ ಹಿಂಸೆಯನ್ನು ನೀಡುವಲ್ಲಿ ನಿರ್ದೇಶಕ ಸಫಲವಾಗಿದ್ದಾರೆ. ಅಲ್ಲದೆ ಹಿನ್ನಲೆಯಲ್ಲಿ ಮೂಡುವ ಸಂಗೀತ, ನಟರ ಡಬ್ಬಿಂಗ್ ಮಾತುಗಳು ಎಷ್ಟು ಕೆಟ್ಟದಾಗಿದೆಯೆಂದರೆ ಪ್ರೇಕ್ಷಕನಿಗೂ ಮಿಸೋಫೋನಿಯಾ ಖಾಯಿಲೆ (ಅತಿ ಕಿರಿಕಿರಿಯ ಅಥವಾ ಜೋರು ಶಬ್ದವನ್ನು ಕೇಳಿದಾಗ ಕೆರಳುವ ರೋಗ )ಬಂದರ ಆಶ್ಚರ್ಯವಿಲ್ಲ. ಮಹಿಳೆಯೊಬ್ಬಳು ಹುಚ್ಚಿಗೆ ಲಸಿಕೆ ಕಂಡುಹಿಡಿಯುತ್ತಿರುವುದು ತಮ್ಮ ಎನ್ ಜಿ ಒ ವ್ಯವಹಾರಕ್ಕೆ ಕುತ್ತು ಬರುವುದೆಂದು ಆ ಮಹಿಳೆಯನ್ನು ದೇವ್ ಗೆಳೆಯರು ಕೊಲ್ಲುವ ಸಂಗತಿಯಂತಹ ದೃಶ್ಯಗಳು ತರ್ಕಕ್ಕೆ-ಮನರಂಜನೆಗೆ ಸವಾಲೆಸೆಯುವುದಲ್ಲದೆ ಪ್ರೇಕ್ಷಕನ ತಾಳ್ಮೆಗೂ ಸಮಾನವಾದ ಸವಾಲೆಸೆಯುತ್ತದೆ. ಮೂಲ ಸೇಡಿನ ಕಥೆಗೂ, ಮೂವರು ನಟರ ಮಾನಸಿಕ ಅಸ್ವಸ್ಥೆತೆಗೂ ಯಾವುದೇ ಸಂಬಂಧವಿಲ್ಲದೆ ಮೂಡಿರುವ ಕಥೆ, ಅಮೆಚ್ಯೂರಿಶ್ ಅಂತ ಹೇಳುವುದಕ್ಕೂ ಯೋಗ್ಯವಿಲ್ಲ. ಚೇತನ್ ಚಂದ್ರ, ರಿತೇಶ್, ರವಿಶಂಕರ್, ಸುಚೇಂದ್ರ ಪ್ರಸಾದ್, ಬಿ ಸುರೇಶ್ ಇವರುಗಳ ನಟನೆ ಗಾಯದ ಮೇಲೆ ಉಪ್ಪು ಸುರಿದಂತ ಅನುಭವ. ಅನಂತ ನಾಗ್ ಕೂಡ ಹೆಚ್ಚೇನೂ ಮಾಡಲಾಗದೆ ಕೈಚೆಲ್ಲಿದಂತಿದೆ. ಪೊಲೀಸ್ ವ್ಯವಸ್ಥೆ ತನಿಖೆ ಮಾಡಲು ಮುಂದು ಬಂದರೂ ಅದಕ್ಕೆ ಸಹಕರಿಸದೆ ಅದನ್ನು ಮೀರಿ ತಮಗೆ ತಿಳಿದ ಮಾಹಿತಿಯಂತೆ (ಮಾಹಿತಿ ತಿಳಿಯುವುದು ದೇವ್ ಮಾಡುವ ನಾರ್ಕೋ ಅನಾಲಿಸಿಸ್ ಮೂಲಕ) ಕೊಲೆಗಳನ್ನು ಮಾಡುವುದು ಮತ್ತದನ್ನು ಸಮರ್ಥಿಸಿಕೊಳ್ಳುವ ಸಂಗತಿ ಅದರ ಕಲ್ಪನೆಗಾಗಿ ಬೆಚ್ಚಿ ಬೀಳಿಸುತ್ತದೆ. ಇತ್ತೀಚಿನ ಆಟಗಾರ ಸಿನೆಮಾದಲ್ಲಿ, ರಿಂಗ್ ಮಾಸ್ಟರ್ ಸಿನೆಮಾದಲ್ಲಿದ್ದ ಈ ವಿದ್ಯಮಾನ ಈ ಸಿನೆಮಾದಲ್ಲೂ ಮುಂದುವರೆದಿರುವುದು ಕೌತುಕ. ಯೋಗರಾಜ್- ಸೂರಿ ಗರಡಿಯಲ್ಲಿ ಪಳಗಿರುವ ನಿರ್ದೇಶಕ ಗಡ್ಡ ವಿಜಿ ಸಂಭಾಷಣೆಯಲ್ಲಿ ಅಸಂಬದ್ಧ ಪ್ರಲಾಪಗಳನ್ನು ಮುಂದು ಮಾಡಿರುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಬಿ ಜೆ ಭರತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡು ಹಾಡುಗಳ ಸಂಗೀತ ಹಿತವಾಗಿದ್ದು, ತುರುಕಿಂದಂತಿದ್ದರೂ ಮೂಡಿ ಬಂದಿರುವ ಈ ಎರಡು ಹಾಡುಗಳ ನೃತ್ಯ ಸಂಯೋಜನೆ ಗಮನ ಸೆಳೆಯುತ್ತದೆ ಹಾಗೂ  ಇದೊಂದೆ ಸಿನೆಮಾದ 'ಪ್ಲಸ್' ಪಾಯಿಂಟ್. ಛಾಯಾಗ್ರಹಣದಲ್ಲು ಯಾವುದೇ ವಿಶೇಷತೆ ಎದ್ದು ಕಾಣುವುದಿಲ್ಲ. ಚಲನಚಿತ್ರದ ಸಂಕಲನ ಸಿನೆಮಾದ ನಿಜವಾದ ಮೈನಸ್ ಪಾಯಿಂಟ್. ವಿಪರೀತವಾಗಿ ದೃಶ್ಯಗಳಿಗೆ ಕತ್ತರಿ ಹಾಕಿರುವುದು, ಇದ್ದಕ್ಕಿದ್ದಂತೆ ಧುತ್ ಎಂದು ಮುಂದಿನ ದೃಶ್ಯ ಮೂಡುವುದು, ಸಿನೆಮಾ ನೋಡುವ ಅನುಭವಕ್ಕೆ ಮಾರಕವಾಗುತ್ತವೆ. ಬಹುಶಃ ನಿರ್ಮಾಪಕ-ನಟ, ಕಥೆಗಾರನೂ ಆಗಿ ಚೊಚ್ಚಲ ಸಿನೆಮಾದಲ್ಲಿ ಮೂಡಿ ಬಂದಿರುವ ರಿತೇಶ್ ಅವರ ಒತ್ತಡಕ್ಕೆ ಬಿದ್ದು ಗಡ್ಡ ವಿಜಿ ದಡ್ಡತನದಿಂದ ಈ ಸಿನೆಮಾ ಮಾಡಿ ಮುಗಿಸಿದ್ದಾರೆ.

ಸೇಡು ತೀರಿಸಿಕೊಳ್ಳಲು ಕೊಲೆ ಮಾಡುವುದು ಅಥವಾ ಮಾನಸಿಕ ಅಸ್ವಸ್ಥತೆ ಒಂದು ಒಳ್ಳೆಯ ಸಿನೆಮಾಗೆ ಯಾವಾಗಲು ವಸ್ತುವಾಗಬಲ್ಲದು. ಆದರೆ ಆ ಅಸ್ವಸ್ಥತೆಯನ್ನಾಗಲೀ, ಸೇಡಾಗಲೀ ಬೋಧನೆಯ ರೂಪದಲ್ಲಿ, ಮಾತುಗಳಲ್ಲಿ ಪ್ರೇಕ್ಷಕರಿಗೆ ಅರ್ಥ ಮಾಡಿಸುವಂತೆ ವಿವರಿಸುವುದಾಗಲೀ, ಅಥವಾ ಆ ಸೇಡಿನ ಕೊಲೆಗಳನ್ನು ಸಮರ್ಥಿಸಿಕೊಂಡು ಕೊಲೆ ಮಾಡಿದವನನ್ನು ಹೀರೋ ಮಾಡುವ ರೂಪದಲ್ಲಾಗಲೀ ಮೂಡಿಸಿದಾಗ ಸಿನೆಮಾ ಕಟ್ಟಿಕೊಡಬೇಕಿದ್ದ ಆ ಸಂಘರ್ಷ, ಅಥವಾ ಜನರು ನಿರೀಕ್ಷಿಸುವ ಆ ನಿಗೂಢತೆಗೆ ಕುಂದು ಬರುತ್ತದೆ. ಎಲ್ಲದ್ದಕ್ಕೂ ಅರ್ಥ ಹೇಳುವ, ಬೋಧನೆ ಮಾಡುವ, ಒಳ್ಳೆಯವರನ್ನು ಸೃಷ್ಟಿಸುವ ಟ್ರ್ಯಾಪ್ ಗೆ ಬೀಳುತ್ತಿರುವ ಹಲವಾರು ಕನ್ನಡ ನಿರ್ದೇಶಕರು ಸಿನೆಮಾ ನೋಡುವ ಅನುಭವಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದ್ದಾರೆ!

ಚಿತ್ರದ ನಿಜವಾದ ಪ್ಲಸ್ ಪಾಯಿಂಟ್: ಎನ್ ಕೆ ಉಮಾ ಮಹೇಶ್ವರ್ ಅವರ ಪ್ರಸಾದನ. ಅನಂತನಾಗ್ ಮತ್ತಿತರ ನಟರ ಯವ್ವನವನ್ನು ಮೇಕಪ್ ಮೂಲಕ ಮರುಕಳಿಸುವುದರಲ್ಲಿ ಅಚ್ಚರಿ ಮೂಡಿಸುತ್ತಾರೆ.

-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com