ಕೆಂಪು ತೋಟದಲ್ಲಿ ಪ್ರೇಮ ಪಾರಿವಾಳ

ನಕ್ಸಲಿಸಂ ಭಾರತೀಯ ಸಿನೆಮಾಗಳಲ್ಲಿ ಆಗೊಮ್ಮೆ-ಈಗೊಮ್ಮೆ ಹಾದುಹೋದರೂ ವಿಷಯದ ಬಗ್ಗೆ ಗಂಭೀರತೆಯ ಕೊರತೆಯಂತೂ ಇದ್ದದ್ದೇ. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟನೆಯ 'ರಿಕ್ಕಿ'
ರಿಕ್ಕಿ ಸಿನೆಮಾ ವಿಮರ್ಶೆ
ರಿಕ್ಕಿ ಸಿನೆಮಾ ವಿಮರ್ಶೆ

ನಕ್ಸಲಿಸಂ ಭಾರತೀಯ ಸಿನೆಮಾಗಳಲ್ಲಿ ಆಗೊಮ್ಮೆ-ಈಗೊಮ್ಮೆ ಹಾದುಹೋದರೂ ವಿಷಯದ ಬಗ್ಗೆ ಗಂಭೀರತೆಯ ಕೊರತೆಯಂತೂ ಇದ್ದದ್ದೇ. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟನೆಯ 'ರಿಕ್ಕಿ' ಸಿನೆಮಾದ ಪ್ರಧಾನ ವಸ್ತು 'ಪ್ರೀತಿ'ಯಾದರೂ ಹಿನ್ನೆಲೆಯಲ್ಲಿ ನಕ್ಸಲಿಸಂ ಕಥೆ ಹೇಳುವುದಾಗಿ ಅದರ ಟ್ರೇಲರ್ ಬಿಚ್ಚಿಟ್ಟಿತ್ತು. ರಿಷಭ್ ಶೆಟ್ಟಿ ನಿರ್ದೇಶನದ ಈ ಚಿತ್ರ ನಕ್ಸಲ್ ಮತ್ತು ಪ್ರೀತಿ ವಿಷಯವನ್ನು ನಿಭಾಯಿಸಿರುವ ರೀತಿ ಪ್ರೇಕ್ಷಕನ ಪ್ರೀತಿಗೆ ಪಾತ್ರವಾಗಲಿದಯೇ?

ಅನಾಥ ಬಾಲಕ ರಾಧಾಕೃಷ್ಣ ಅಲಿಯಾಸ್ ರಿಕ್ಕಿ (ರಕ್ಷಿತ್ ಶೆಟ್ಟಿ) ಮತ್ತು ರಾಧಾಳದ್ದು (ಹರಿಪ್ರಿಯಾ) ದಿವ್ಯ ಬಾಲ್ಯ ಪ್ರೇಮ. ರಿಕ್ಕಿ ಹಲವಾರು ವರ್ಷಗಳ ನಂತರ ಬೆಂಗಳೂರಿನಿಂದ ಹಿಂದಿರುಗಿದ ಮೇಲೆ ಇಬ್ಬರಿಗೂ ನಿಶ್ಚಿತಾರ್ಥವಾಗುತ್ತದೆ. ವನ್ಯಜೀವಿ ಸಂರಕ್ಷಕನಾದ ರಿಕ್ಕಿ, ರಾಧಾಳನ್ನು ಅವಳ ಊರಿನಲ್ಲೇ ಬಿಟ್ಟು ಕಾಶ್ಮೀರಕ್ಕೆ ತೆರಳುವ ಪರಿಸ್ಥಿತಿ ಬಂದಾಗ, ಎಸ್ ಇ ಝಡ್ ಅಭಿವೃದ್ಧಿಯ ಕಾರಣದಿಂದ ವಿರೋಧದ ನಡುವೆಯೂ ರಾಧಾಳ ಮನೆ-ಮಠ ನಾಶವಾಗುತ್ತದೆ. ಈ ಸಮಯದಲ್ಲಿ ರಿಕ್ಕಿಯ ಸಂಪರ್ಕ ಕೂಡ ಕಡಿದುಹೋಗುತ್ತದೆ. ರಿಕ್ಕಿ ಆರು ತಿಂಗಳ ನಂತರ ಹಿಂದಿರುಗಿದಾಗ ರಾಧಾ ಕಾಣೆಯಾಗಿರುತ್ತಾಳೆ. ರಾಧಾಳನ್ನು ಮತ್ತೆ ಕಾಣಲು, ಮದುವೆಯಾಗಲು ರಿಕ್ಕಿಗೆ ಸಾಧ್ಯವಾಗುತ್ತದೆಯೇ?

ಸರಳ ಪ್ರೇಮ ಕಥೆಯ ಜೊತೆ ಜೊತೆಗೇ ಹಲವಾರು ಸ್ಥರಗಳಲ್ಲಿ ತೆರೆದುಕೊಳ್ಳುವ ಸಾಮಾಜಿಕ ಸ್ಥಿತ್ಯಂತರಗಳು, ಅರಿವಿನ ಪರದೆಯಲ್ಲಿ ಕಾಣಿಸಿಕೊಳ್ಳುವ-ಕಾಣಿಸದ ಹೋರಾಟಗಳು-ಕ್ರಾಂತಿಗಳು, ಪ್ರೀತಿ ಮತ್ತು ಹೋರಾಟದ ಬಗೆಗಿನ ಸಂದಿಗ್ಧಗಳು ಇವುಗಳೆಲ್ಲವನ್ನೂ ಒಳಗೊಳ್ಳುವ ಸ್ಕ್ರಿಪ್ಟ್, ಒಂದು ಸಾಮಾನ್ಯ ಸಿನೆಮಾ ಹೇಳುವುದಕ್ಕಿಂತಲೂ ಹೆಚ್ಚಿನದೇನನ್ನೂ ಹೇಳಹೊರಟಿದೆ ಎಂದೆನಿಸುತ್ತದೆ. ಬಾಲ್ಯ ಪ್ರೇಮ ತುಸು ಕ್ಲೀಶೆ ಮತ್ತು ಜನಪ್ರಿಯ ಮಾರ್ಗ ಎಂದೆನಿಸಿದರು, ನಂತರ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವ ರಿಕ್ಕಿ-ರಾಧಾ ರೋಮ್ಯಾನ್ಸ್ ಹಿತವೆನಿಸುತ್ತದೆ. ಅಭಿವೃದ್ಧಿಯ ನೆಪದಲ್ಲಿ ಮನೆ-ಮಠ ಕಳೆದುಕೊಳ್ಳುವ ಕುಟುಂಬದ (ಇದು ಕಡು ಬಡತನದ ಕುಟುಂಬವೇನಲ್ಲ) ಗೀಳಿನ-ಭಾವುಕತೆಯ ದುಃಖ ಇನ್ನೂ ವಿವರಗಳನ್ನು ಬೇಡಿದರು ಒಂದು ಕ್ಷಣ ಪ್ರೇಕ್ಷಕನನ್ನು ಭಾವುಕನನ್ನಾಗಿಸದೆ ಇರದು. ಇದರಿಂದ ಸರ್ವಸ್ವವನ್ನೂ ಕಳೆದುಕೊಂಡು ನಕ್ಸಲ್ ಚಟುವಟಿಕೆಯ ಭಾಗವಾಗುವ ರಾಧಾ (ಹರಿಪ್ರಿಯಾ) ಉತ್ತಮ ನಟನೆಯಿಂದ ಗಮನ ಸೆಳೆಯುತ್ತಾರೆ. ರಕ್ಷಿತ್ ಶೆಟ್ಟಿಗಿಂತಲೂ ಒಂದು ಕೈ ಮುಂದೆ ಎನ್ನುವಂತೆ ಭಾವನಾತ್ಮಕ ನಟನೆ ನೀಡುವಲ್ಲಿ ಹರಿಪ್ರಿಯಾ ಯಶಸ್ವಿಯಾಗಿದ್ದಾರೆ. ಕಾಡಿನಲ್ಲಿ ತೆರೆದುಕೊಳ್ಳುವ ನಕ್ಸಲ್ ಚಟುವಟಿಕೆಗಳ ಬಗ್ಗೆ ಸೂಕ್ಷ್ಮವಾದ ವಿವರಗಳನ್ನು ಕೆದಕಲು ಹೋಗುವುದಿಲ್ಲ, ಆದರೆ ಪ್ರೇಮ ಕಥೆಗೆ ಅಗತ್ಯವಾದ ಹಿನ್ನಲೆ ಕಟ್ಟಿಕೊಡಲು ನಿರ್ದೇಶಕ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕೆಲವೊಮ್ಮೆ ನಕ್ಸಲ್ ಹಿಂಸೆ, ನಕ್ಸಲರ ಮಧ್ಯೆಯೇ ಇರುವ ವಿಕಾರಗಳ ವಿರುದ್ಧವಾಗಿಯೂ ಮತ್ತೆ ಕೆಲವೊಮ್ಮೆ ನಕ್ಸಲ್ ಚಟುವಟಿಕೆಗಳಿಗೆ ಕಾರಣವಾದ ವ್ಯವಸ್ಥೆಯ ಹಿಂಸೆಯ ವಿರುದ್ಧವಾಗಿಯೂ ವಾದಗಳನ್ನು ಸರಿದೂಗಿಸುವಲ್ಲಿ ಜಾಣ್ಮೆ ತೋರಿರುವುದು, ಪ್ರೇಮ ಕಥೆಯನ್ನು ಅತ್ಯುತ್ತಮವಾಗಿ ಅರಳಿಸುವುದಕ್ಕೆ ಸಾಧ್ಯವಾಗಿದೆ. ಹಿರೋಯಿಸಂ (ಅನಗತ್ಯ ಫೈಟ್ಸ್) ಭಾರದಲ್ಲಿ, ಮತ್ತು ಕೆಲವೊಮ್ಮೆ ಅಗತ್ಯ ಭಾವನೆಗಳನ್ನು ಕೆರಳಿಸುವುದರಲ್ಲಿ ರಕ್ಷಿತ್ ತುಸು ಸಪ್ಪೆಯೇ, ಆದರೆ ಅತಿರೇಕಗಳಿಲ್ಲದಂತೆ ನಟಿಸಿರುವುದೇ ಸಮಾಧಾನ. ಕಾಡಿನ ವಾತಾವರಣವನ್ನು ಸೆರೆ ಹಿಡಿಯಲು ಛಾಯಾಗ್ರಾಹಕ ಒಂದು ಮಟ್ಟಕ್ಕೆ ಯಶಸ್ವಿಯಾಗಿದ್ದರು, ಹಿನ್ನಲೆ ಸಂಗೀತ ಕಾಡಿನ ಭೀಕರತೆಯನ್ನು ಮರೆ ಮಾಚುತ್ತದೆ. ಜಯಂತ್ ಕಾಯ್ಕಿಣಿ ಸಾಹಿತ್ಯದ 'ಎಲೆ ಮರೆಯಲ್ಲಿ' ಹಾಡು ಸಿನೆಮಾಗೆ ಅತಿ ಹೆಚ್ಚು ಪೂರವಾಗಿ-ಅತ್ಯುತ್ತಮವಾದ ಸಂಯೋಜನೆಯಿಂದ ಕೂಡಿದ್ದು ಇನ್ನುಳಿದ ಎಲ್ಲ ಹಾಡುಗಳನ್ನೂ ಕೈಬಿಡಬಹುದಿತ್ತು ಎಂದೆನಿಸದೆ ಇರದು! ಹಾಗೆಯೇ ಆಗಾಗ ಗಂಭೀರತೆಯನ್ನು ಹಾಳುಗೆಡುವ, ಅತ್ತ ಅತ್ಯುತ್ತಮ ಹಾಸ್ಯವೂ ಎನ್ನಿಸದ ಸಾಧು ಕೋಕಿಲಾ ಅವರ ಕಾಮಿಡಿ ಟ್ರ್ಯಾಕ್ ಕೂಡ ಕಿರಿಕಿರಿ ಉಂಟುಮಾಡುತ್ತದೆ. ನಕ್ಸಲ್ ಗುಂಪಿನ ಮಾಸ್ಟರ್ ಆಗಿ ಪ್ರಮೋದ್ ಶೆಟ್ಟಿ, ರಾಧಾ ತಂದೆಯಾಗಿ ಅಚ್ಯುತ್ ಕುಮಾರ್ ಮತ್ತು ಇತರ ಪೋಷಕ ನಟರು ಒಳ್ಳೆಯ ನಟನೆ ನೀಡಿದ್ದಾರೆ. ವ್ಯವಸ್ಥೆಯಿಂದ ಮನೆ-ಕುಟುಂಬ ಕಳೆದುಕೊಂಡು ಕ್ರಾಂತಿಗಿಳಿಯುವ ನಾಯಕಿ, ಪ್ರೀತಿ ಮತ್ತೆ ಅರಸಿ ಬಂದಾಗ ತನ್ನ ಆಯ್ಕೆ ಯಾವುದು ಎಂಬ ಸಂದಿಗ್ಧ(ಇದಕ್ಕೆ ಪರಿಹಾರ ಇದೆ ಎಂದಲ್ಲ) ಸಿನೆಮಾಗೆ ಒಳ್ಳೆಯ ಅಂತ್ಯ ನೀಡಲು ಸಾಧ್ಯವಾಗಿದೆ. ಇದು ಇಂದಿನ ಹಲವು ಯುವಕರ ಸಂದಿಗ್ಧತೆಯ ರೂಪಕವಾಗಿ ಕಾಣಬಹುದು. ಒಟ್ಟಿನಲ್ಲಿ ಹಲವು ನ್ಯೂನತೆಗಳ ಹೊರತಾಗಿಯೂ, ಯಾವುದೇ ವಾದಕ್ಕೆ ಜೋತು ನಿಲ್ಲದೆ, ಪ್ರೇಮತತ್ವಕ್ಕೆ ಶರಣಾಗುವಂತೆ ಪ್ರೇರೇಪಿಸುವ ಸಿನೆಮಾ ನೀಡುವಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ.

ನಕ್ಸಲ್ ಚಟುವಟಿಕೆಗಳನ್ನು, ಪ್ರೇಮಕಥೆಯ ಹಿನ್ನಲೆಯಲ್ಲಿ ಸೆರೆಹಿಡಿಯಲು ನಿರ್ದೇಶಕ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಆದರೆ ಕಥೆ ಹೇಳಲು ಜನಪ್ರಿಯ ಜಾಡನ್ನೇ ಹಿಡಿದಿರುವುದು ಮಾತ್ರ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಇದು ನಕ್ಸಲರ ಮತ್ತು ಪೊಲೀಸರ ನಡುವಿನ ಘರ್ಷಣೆ ಎಂಬ ಸಾಮಾನ್ಯ ಚಿಂತನೆಗಿಂತಲೂ, ಕಾರ್ಪೊರೆಟ್, ಭೂಮಾಲಿಕರು ಮತ್ತು ಅವರ ರಕ್ಷಣೆಗಾಗಿ ನಿಲ್ಲುವ ರಾಜಕೀಯ ಪಕ್ಷಗಳು, ಇದರಿಂದ ಸುಲಭವಾಗಿ ಕಾಣೆಯಾಗುವ, ಶೋಷಣೆಗೊಳಗಾಗುವ ಪರಿಸರ-ಕಾಡುಗಳು ಮತ್ತು ಆ ಕಾಡುಗಳನ್ನು ನಂಬಿಕೊಂಡ ಕಾಡು ಮಕ್ಕಳ-ಬುಡಕಟ್ಟು ಜನಾಂಗದ ನಿರ್ಲಕ್ಷ್ಯ, ಇವರ ನಡುವಿನ ಘರ್ಷಣೆಯೂ ಇದು ಎಂಬ ಜನಪ್ರಿಯ ಚಿಂತನೆಯಾಚೆಗಿನ ವಿಷಯಗಳನ್ನು ನಿರ್ದೇಶಕ ಒಳಗೊಳ್ಳಬಹುದಿತ್ತೇನೋ.  ಹಿಂಸೆಯನ್ನು ನಿರಾಕರಿಸಿ ಪ್ರೀತಿಗೆ ಶರಣಾಗಿ ಎನ್ನುವ ನಿರ್ದೇಶಕನ ಕಾಳಜಿ ಇದೆಲ್ಲವನ್ನು ಮರೆಮಾಚುತ್ತದೆ. ಚಿತ್ರದ ತಾಜಾತನಕ್ಕೆ ಒಮ್ಮೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com