15 ನೆಯ ಶತಮಾನದಲ್ಲಿ ಕಾಶಿ ಎಂಬ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ, ಮುಸ್ಲಿಂ ಸಮುದಾಯದ ಹಾಗೂ ಹಿಂದೂ ಸಮುದಾಯದ ಹಲವು ಪಂಗಡಗಳ ಡಾಂಭಿಕ ಧಾರ್ಮಿಕತೆ ತಾಂಡವವಾಡುತ್ತಿದೆ. ಹಿಂದೂ ದೊರೆ, ಮುಸ್ಲಿಂ ಕೊತ್ವಾಲ ಹಾಗು ದೆಹಲಿಯಿಂದ ರಾಜ್ಯಭಾರ ಮಾಡುವ ಸಿಕಂದರ್ ಲೋಧಿ ಹೀಗೆ ಎಲ್ಲರು ಧರ್ಮ ಸಂರಕ್ಷಕರೇ ಹೊರತು ಮನುಷ್ಯ ಮನುಷ್ಯರ ನಡುವೆ ಪ್ರೇಮವನ್ನು ಪೋಷಿಸುವ ಗೋಜಿಗೆ ಯಾರು ಹೋಗುವುದಿಲ್ಲ. ಜಾತಿ-ಧರ್ಮ, ಮೇಲು-ಕೀಳು ಹೆಸರಿನಲ್ಲಿ ಹೊಡೆದಾಡುವ ಸಾಮಾಜಿಕ ವ್ಯಾಧಿಯ ಬಗ್ಗೆ ಇವರ್ಯಾರಿಗೂ ಚಿಂತೆಯಿಲ್ಲ. ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ನೇಕಾರನಾದ ಮುಸ್ಲಿಂ ಯುವಕ ಕಬೀರ, ಹಿಂದೂ ಮುಸ್ಲಿಮರು ಬಡಿದಾಡುವುದು ತಪ್ಪು ಎಂದು ಪದ ಕಟ್ಟಿ ಹಾಡುತ್ತಾನೆ. ಹಿಂದೂ ಸಂಪ್ರಯಾಯದ ಯುವತಿಯೊಬ್ಬಳು ಮುಸ್ಲಿಂ ಪುರುಷನನ್ನು ಪ್ರೀತಿಸುವುದರಿಂದ ಉಂಟಾಗುವ ಗಲಭೆಯಲ್ಲಿ, ಪ್ರೀತಿಯ ಪರವಾಗಿ ನಿಲ್ಲುತ್ತಾನೆ. ಹುಡುಗಿಯ ಕೊಲೆಯಾದಾಗ, ಅಲ್ಲಾಹುಗೆ ನಮಸ್ಕರಿಸುತ್ತಿರುವ ಮೌಲಿಗೆ ಅಲ್ಲಾಹು ಇರುವೆಯ ಕಾಲಿನ ಸಪ್ಪಳವನ್ನು ಕೇಳಿಸಿಕೊಳ್ಳುವ ಶಕ್ತಿಯಿದೆ, ಗಟ್ಟಿಯಾಕೆ ಏಕೇ ಕಿರುಚುತ್ತೀರಾ ಎಂದು ವಿರೋಧಿಸುತ್ತಾನೆ. ಕೆಳ ಜಾತಿ ಎಂದು ಮಗುವಿಗೆ ಹೊಡೆಯುವ ಹಿಂದೂ ಧರ್ಮಗುರುಗಳ ವಿರುದ್ಧ ನಿಲ್ಲುತ್ತಾನೆ. ಹೀಗೆ ಸಮಾಜದಲ್ಲಿನ ತಳಸಮುದಾಯದ ಪರ ನಿಂತು ಕ್ರಾಂತಿಕಾರಿಯಾಗಿಯೂ, ಆಧ್ಯಾತ್ಮದ ಹೊಸ ದಾರಿಯ ಶೋಧಕನಾಗಿಯೂ, ಇದ್ಯಾವುದು ಅಲ್ಲ ಮನುಷ್ಯರ ನಡುವಿನ ಪ್ರೇಮಕ್ಕೆ ಹಂಬಲಿಸುವ ವ್ಯಕ್ತಿ ತಾನು ಎಂದು ಹೇಳಿಕೊಳ್ಳುವ ಕಬೀರ, ಧಾರ್ಮಿಕ ಹಿತಾಸಕ್ತಿಗಳು ಇವನ ವಿರುದ್ಧ ಪಿತೂರಿ ಹೂಡುವಂತೆ ಮಾಡಿದರೆ, ಒಂದು ವರ್ಗದ ಸಾಮಾನ್ಯ ಜನರಿಗೆ ಹುಚ್ಚನಂತೆ ಕಾಣಿಸಿಕೊಂಡು, ವ್ಯವಹಾರದಲ್ಲಿಯೂ ಆಸಕ್ತಿ ಕಳೆದುಕೊಂಡು ತನ್ನ ತಂದೆಯಿಂದ ಆಪಾದನೆಗೆ ಗುರಿಯಾಗುತ್ತಾನೆ.