ಮರೆವಿನ ರೋಗ ಮತ್ತು ಜಾಣ ಮರೆವಿನ ನಡುವಿನ ಬಿಕ್ಕಟ್ಟು

ಅನಂತನಾಗ್ ನಟನೆ ಮತ್ತು ಸಂಬಂಧಗಳ ಕಥೆಯ ಪ್ರಸ್ತುತತೆಯ ಮೇಲೆ ನಿಂತ ಈ ಸಿನೆಮಾ ಪ್ರೇಕ್ಷನಿಗೆ ನಿರಾಸೆಯನ್ನೇನೂ ತಂದೊಡ್ಡದೆ ಮತ್ತು ಉತ್ಕಟವಾಗಿಯೂ ಕಾಡದೆ ಮಿಶ್ರ ಭಾವನೆಗಳಿಗೆ ದೂಡುತ್ತದೆ.
ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು ಸಿನೆಮಾ ವಿಮರ್ಶೆ
ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು ಸಿನೆಮಾ ವಿಮರ್ಶೆ

ಮನುಷ್ಯ ಸಂಬಂಧಗಳ ಬಾಂಧವ್ಯ-ಬಿರುಕುಗಳಲ್ಲಿ ಕಳೆಯುವುದು-ಕೂಡುವುದರ ಮಹತ್ವ ಅಸಂಖ್ಯಾತ ಕಥೆಗಳನ್ನು ಹೇಳಬಲ್ಲದು. ರಕ್ತ ಸಂಬಂಧಗಳ ನಡುವೆ ಮೂಡುವ ಬಿರುಕಿನಿಂದ ಬಾಂಧವ್ಯದ ಜೊತೆಗೆ ಸಂಬಂಧಿಯೇ ಭೌತಿಕವಾಗಿ ಕಳೆದು ಹೋದರೆ? ಸಂಬಂಧಗಳ ಮತ್ತು ಅವುಗಳ ನಡುವಿನ ಭಾವನೆಗಳ ಕಥೆಯನ್ನು ಹೆಣೆದು ದೃಶ್ಯ ಮಾಧ್ಯಮದಲ್ಲಿ ಕಟ್ಟುವುದು ಒಂದು ಸವಾಲೇ ಸರಿ. ತಂದೆ ಮಗನ ನಡುವಿನ ಇಂತಹುದೊಂದು ಬಾಂಧವ್ಯದ ಕಥೆ ಕಟ್ಟಿಕೊಡಲಿದೆ ಎಂಬ ಪ್ರಚಾರದೊಂದಿಗೆ ತೆರೆಕಂಡ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮ, ದೃಶ್ಯಕ್ಕೆ ಬೆಸೆದಿರುವ ಈ ಸಂಬಂಧಗಳ ಬೆಸುಗೆ ಪರಿಣಾಮಕಾರಿಯಾಗಿದೆಯೇ?

ಮರೆವಿನ ರೋಗ ಆಲ್ಜೈಮರ್ಸ್ ಗೆ ತುತ್ತಾಗಿರುವ ವೆಂಕೋಬ ರಾವ್ (ಅನಂತ ನಾಗ್) ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿರುವ ಮಗ ಶಿವ (ರಕ್ಷಿತ್ ಶೆಟ್ಟಿ) ಆಧುನಿಕತೆಯ ವೇಗಕ್ಕೆ ಒಗ್ಗಿ ಬೆಳೆಯುತ್ತಿರುವ ಎಂಜಿನಿಯರ್. ಒಂದು ಅವಘಡದಲ್ಲಿ ತಂದೆ ವೃದ್ಧಾಶ್ರಮದಿಂದ ಕಾಣೆಯಾದಾಗ ಶಿವನಲ್ಲಿ ಆಗುವ ಬದಲಾವಣೆಗಳೇನು ಎಂಬ ಪ್ರಸ್ತುತ ಮತ್ತು ಭಾವನಾತ್ಮಕ ಎಳೆ ಚಿತ್ರಕಥೆಯ ಒಂದು ಹಳಿಯಲ್ಲಿ ಚಲಿಸುತ್ತದೆ. ತಂದೆಯ ರೋಗದ ಮರೆವಿಗೂ, ಆಧುನಿಕ ಯುಗದಲ್ಲಿ ಸಂಬಂಧಗಳ ಬೆಲೆ ಅರಿಯದ ಮಗನ ಜಾಣ ಮರೆವಿಗೂ ಇರುವ ವ್ಯತ್ಯಾಸವನ್ನು ಹಿಡಿದಿಡಲು ನಿರ್ದೇಶಕ ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದು ಪ್ರೇಕ್ಷಕನಿಗೆ ಕನೆಕ್ಟ್ ಆಗುತ್ತದೆ. ಕಳೆದು ಹೋದ ತಂದೆಯನ್ನು ಹುಡುಕುವ ಪಯಣದಲ್ಲಿ, ತಾನು ನಿಜವಾಗಿ ಕಳೆದುಕೊಂಡಿರುವುದೇನು ಎಂಬುದನ್ನೂ ತಿಳಿಯುತ್ತಾ ಹೋಗುವ ಮಗನಿಗೆ ಹಳೆಯ ನೆನಪುಗಳು ಮರುಕಳಿಸುತ್ತವೆ. ವೃದ್ಧಾಶ್ರಮದ ಆದರ್ಶಪ್ರಾಯ ವೈದ್ಯೆ ಸಹನಾ (ಶೃತಿ ಹರಿಹರನ್), ಶಿವನ ಜೊತೆಗೆ ನಿಂತು, ತೀವ್ರವಾದ ಆಸಕ್ತಿ-ಶ್ರದ್ದೆಯಿಂದ ಹುಡುಕುವಿಕೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಈ ನಿಟ್ಟಿನಲ್ಲಿ ಶಿವ ಉತ್ತಮ ಮನುಷ್ಯನಾಗುತ್ತಾ ಬೆಳೆಯುವುದು ಪ್ರೇಕ್ಷಕನಿಗೆ ಬುದ್ಧಿವಾದ ಹೇಳುವ-ತಿದ್ದುವ ಕಥೆ ಕಟ್ಟಿಕೊಡುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು, ಇನ್ನು ಎಲ್ಲೋ ನಾಜೂಕಿನ-ಸೂಕ್ಷ್ಮತೆಯ ಕೊರತೆ ಇದೆ ಎಂದೆನಿಸದೆ ಇರದು. ತಾಯಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ, ತಂದೆಗೆ ಮರೆವಿನ ರೋಗ, ತನಗೆ ಧಾವಂತ ಎಂಬುದಕ್ಕಿಂತಲೂ ತಂದೆ-ಮಗನ ನಡುವೆ ಬೀಡುಬಿಟ್ಟ ಬಿರುಕಿಗೆ ಇನ್ನೂ ಗಾಢವಾದ ಕಾರಣಗಳನ್ನು ಆರೋಪಿಸಲು ನಿರ್ದೇಶಕನಿಗೆ ಸಾಧ್ಯವಾಗಿದ್ದರೆ ಸಿನೆಮಾ ಹೆಚ್ಚು ಹತ್ತಿರವಾಗುತ್ತಿತ್ತೇನೋ. ತಂದೆ ಮತ್ತು ಮಗನ ವಿಷಯದಲ್ಲಿ ಕಪ್ಪು-ಬಿಳುಪಿನ ನಿಲುವು ಕೂಡ ಆ ಬೋಧನೆಯ ದೃಷ್ಟಿಯಿಂದಲೇ ನಿರ್ದೇಶಕ ಕಥೆ ಕಟ್ಟಿಕೊಡುತ್ತಿರುವುದು ಎಂದು ಸ್ಪಷ್ಟವಾಗುತ್ತಾ ತುಸು ನಿರಾಸೆಯನ್ನು ತಂದೊಡ್ಡುತ್ತದೆ.

ಇದೊಂದೇ ಎಳೆಯಾಗದೆ, ಕಾಣೆಯಾದ ತಂದೆ ಎಲ್ಲಿಗೆ ತಪ್ಪಿಸಿಕೊಳ್ಳುತ್ತಾನೆ ಎಂಬ ಕಥೆ ಮತ್ತೊಂದು ಹಳಿಯಲ್ಲಿ ಚಲಿಸಿ, ಕ್ರೈಮ್ ಕೋನವನ್ನು ಪ್ರೇಕ್ಷಕನ ಮುಂದಿಡುತ್ತಾನೆ ನಿರ್ದೇಶಕ. ಕೊಲೆಯಾದ ಶವದ ವಿಲೇವಾರಿಗೆ ಹೊರಟಿರುವ ರಂಗಣ್ಣ ಮತ್ತು ಮಂಜ. ಇವರನ್ನು ವೆಂಕೋಬರಾವ್ ಆಕಸ್ಮಿಕವಾಗಿ ಸೇರುವುದರಿಂದ ತೊಂದರೆಗೀಡಾಗಿ, ಮೆನಯೊಂದರಲ್ಲಿ ಆ ಕುಟುಂಬವನ್ನು ಒಳಗೊಂಡಂತೆ  ವೆಂಕೋಬರಾವ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುತ್ತಾರೆ. ಇವರನ್ನೆಲ್ಲಾ ಕೊಲ್ಲುವ ಆದೇಶ ಬಂದಾಗ ರಂಗಣ್ಣ ಸಂದಿಗ್ಧಕ್ಕೆ ಒಳಗಾಗುತ್ತಾನೆ. ಮುಂದೇನು? ಈ ಕಥೆ ಮೂಲ ತಂದೆ-ಮಗನ ಕಥೆಯಿಂದ ಪ್ರೇಕ್ಷನನ್ನು ಡಿವಿಯೇಟ್ ಮಾಡಿ ಕೆಲವೊಮ್ಮೆ ಮೇಲುಗೈ ಪಡೆಯುತ್ತದೆ. ಈ ಕೊಲೆಯನ್ನು ನಿಗೂಢವಾಗಿಯೇ ಉಳಿಸುವ ನಿರ್ದೇಶಕ, ಈ ವಿಲೇವಾರಿಗೆ ಹೊರಟವರನ್ನು ಮುಗಿಸಲು ಪೊಲೀಸರು ಸಂಚು ಹೂಡುವುದೇಕೆ ಎಂಬ ಪ್ರಶ್ನೆಗಳನ್ನು ಉತ್ತರಿಸದೆ ಅಂತ್ಯಗೊಳಿಸುತ್ತಾರೆ. ಇಲ್ಲಿ ಬರವಣಿಗೆಯಲ್ಲಿ, ಪ್ರಶ್ನೆಗಳಿಗೆ ಅಂತ್ಯ ಹಾಡುವ ಸ್ಪಷ್ಟತೆಯಿದ್ದಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು.

ಅನಂತನಾಗ್ ನಟನೆ ಮತ್ತು ಸಂಬಂಧಗಳ ಕಥೆಯ ಪ್ರಸ್ತುತತೆಯ ಮೇಲೆ ನಿಂತ ಈ ಸಿನೆಮಾ ಪ್ರೇಕ್ಷನಿಗೆ ನಿರಾಸೆಯನ್ನೇನೂ ತಂದೊಡ್ಡದೆ ಮತ್ತು ಉತ್ಕಟವಾಗಿಯೂ ಕಾಡದೆ ಮಿಶ್ರ ಭಾವನೆಗಳಿಗೆ ದೂಡುತ್ತದೆ. ಅನಂತನಾಗ್ ಅವರು ಎಂದಿನಂತೆ ಘನತೆಯ-ನಿಖರತೆಯ ನಟನೆಯಿಂದ ಸಿನೆಮಾವನ್ನು ಆಧಾರ ಸ್ಥಂಭದಂತೆ ಕಾಪಾಡುತ್ತಾರೆ. ತಂದೆಯನ್ನು ಹುಡುಕುವುದರ ಸುತ್ತ ಹೆಣೆದ ಬಹುತೇಕ ಘಟನೆಗಳು ಕ್ಲೀಶೆಯಾಗಿದ್ದು, ಇನ್ನೇನೋ ಹೆಚ್ಚು ಬೇಕು ಎಂಬ ಹಂಬಲ ಪ್ರೇಕ್ಷಕನದ್ದು. ಪಾರ್ಕ್ ನಲ್ಲಿ ಹಿರಿಯರು ಮಾಡುವ ವ್ಯಾಯಾಮವನ್ನು ಕಂಡು ಶಿವ ವಿಚಲಿತನಾಗುವುದು, ವೆಂಕೋಬ ರಾವ್ ಅವರ ಗೆಳೆಯರಿಂದ ಶಿವನಿಗೆ ಅಪ್ಪ-ಮಗನ ಸಂಬಂಧದ ಬಗೆಗೆ ಪಾಠ, ಶಿವ ಮದ್ಯಪಾನ ಮಾಡಿ ಸಹನಾಳೊಂದಿಗೆ ಅನುಚಿತವಾಗಿ ವರ್ತಿಸಿ ಕ್ಷಮೆ ಕೇಳುವುದು ಇವೆಲ್ಲವೂ ಗಂಭೀರ ಕಥಾಹಂದರಕ್ಕೆ ಹೆಚ್ಚೇನೂ ಮೌಲ್ಯವನ್ನು ತುಂಬಿಲ್ಲ. ರಕ್ಷಿತ್ ನಟನೆಯಲ್ಲಿ ಗಂಭೀರತೆಯಿದ್ದರೂ, ದುಃಖ-ಪಶ್ಚಾತ್ತಾಪ-ಗೊಂದಲ ಎಲ್ಲವನ್ನೂ ಪರಿಣಾಮಕಾರಿಯಾಗಿ ಮೂಡಿಸಲು ಸಾಧ್ಯವಾಗಿಲ್ಲ. ಶೃತಿ ಹರಿಹರನ್ ಅವಶ್ಯಕ ನಟನೆ ನೀಡಿದ್ದರೂ, ಮತ್ತು ಅದು ಆದರ್ಶಪ್ರಾಯದ ವೈದ್ಯರ ಪಾತ್ರವನ್ನಾಗಿ ಸೃಷ್ಟಿಸಿದ್ದರೂ, ತಾವು ಸುಶ್ರೂಷೆ ಮಾಡುತ್ತಿದ್ದ ರೋಗಿಯೊಬ್ಬರನ್ನು ಅಷ್ಟು ತೀವ್ರವಾಗಿ ಹಚ್ಚಿಕೊಂಡು ಹುಡುಕುವ ಪ್ರೇರಣೆ-ಉದ್ದೇಶ ಇನ್ನಷ್ಟು ಗಾಢವಾಗಿ ಮೂಡಿಬರಬೇಕಿತ್ತೇನೋ. ಇದೇ ಪ್ರಶ್ನೆ ಅಪಹರಣಕಾರನ ಪಾತ್ರಕ್ಕೂ ಮೂಡುತ್ತದೆ. ಅಚ್ಯುತ್ ರಾವ್ ಅವರದ್ದು ಕೂಡ ಎಂದಿನಂತೆ ಚಂದದ ಅಭಿನಯ.

ಬಜೆಟ್ ನಿರ್ಬಂಧವೂ ಇರಬಹುದು, ತಾಂತ್ರಿಕವಾಗಿ ಸಿನೆಮಾ ಅಲ್ಲಲ್ಲಿ ಪೆಚ್ಚಾಗುತ್ತಾದೆ. ದೃಶ್ಯಗಳ ಸಂಯೋಜನೆ ಅಲ್ಲಲ್ಲಿ ಚೆನ್ನಾಗಿದ್ದರೂ, (ಸಾಮಾನ್ಯವಾಗಿ ಕತ್ತಲೆ-ಮುಸುಕಿನಲ್ಲೇ ಮೂಡುವ ಹೆಚ್ಚೆಚ್ಚು ದೃಶ್ಯಗಳು ಸಿನೆಮಾದ ಒಟ್ಟಾರೆ ಮೂಡ್ ಗೆ ಸಹಕರಿಸಿವೆ). ಕ್ಯಾಮರಾ ಚಲನೆಯಲ್ಲಿ ಗೋಚರವಾಗುವ ಹಲವಾರು ಜರ್ಕ್ ಗಳಿಂದ ಕೆಲವೊಮ್ಮೆ ಕಿರಿಕಿರಿ ಉಂಟಾಗುತ್ತದೆ. ಲೈಟಿಂಗ್ ನಲ್ಲಿ ಕೂಡ ಎಡವಿದ್ದು ಛಾಯಾಗ್ರಹಣದಲ್ಲಿ ಸ್ಪಷ್ಟತೆಯ ಕೊರತೆಯಿದೆ. ಎರಡು ಟ್ರ್ಯಾಕ್ ಗಳಲ್ಲಿ ಚಲಿಸುವ ಕಥೆಯ ನಿರೂಪಣೆ ಅಲ್ಲಲಿ ಬದಲಾಗುತ್ತಾ ಆಪ್ತವಾದರೂ, ಸಿನೆಮಾದ ವೇಗದಲ್ಲಿ ಅಲ್ಲಲ್ಲಿ ಬದಲಾವಣೆ ಬೇಕಿತ್ತು. (ವೆಂಕೋಬ ರಾವ್ ಕಳೆದು ಹೋದ ಸನ್ನಿವೇಶ ಬಹಳ ಬೇಗನೆ ಮುಗಿದು ಆ ಉದ್ವಿಘ್ನತೆಯನ್ನು ಪ್ರೇಕ್ಷಕ ಅನುಭವಿಸುವುದೇ ಇಲ್ಲ, ಮತ್ತೆ ಕೆಲವೊಮ್ಮೆ ಮಾತುಗಳು ವಿಪರೀತ ಎನಿಸಿ ಸಿನೆಮಾ ಮುಂದುವರೆಯುತ್ತವೆ). ಆ ನಿಟ್ಟಿನಲ್ಲಿ ಸಂಕಲನವು ಇನ್ನೂ ಉತ್ತಮಪಡಿಸುವ ಅವಶ್ಯಕತೆಯಿತ್ತು. ಹಿನ್ನಲೆ ಸಂಗೀತವೂ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಹುಡುಕಾಟದ ಹಿನ್ನಲೆಯಲ್ಲಿ ಮೂಡುವ ಕೆಲವು ಹಾಡುಗಳು ಆಪ್ತವಾಗಿವೆ. (ಕಪಾಲಿ ಸಿನೆಮಾಮಂದಿರದಲ್ಲಿ ಅಲ್ಲಲ್ಲಿ ಶಬ್ದವೂ ಸರಿಯಾಗಿ ಕೇಳಿಸದೆ, ಲಿಪ್ ಸಿಂಕ್ ಸಮಸ್ಯೆಯೂ ಕಂಡುಬಂತು)

ಇದು ತಲೆತಲಾಂತರದಿಂದ ಇರುವ ತೊಂದರೆಯಾದರೂ, ಆಧುನಿಕತೆಯ ವಿಕಾರತೆಯಿಂದ (ಪೀಳಿಗೆಗಳ ದೃಷ್ಟಿಕೋನ ಮತ್ತು ಚಿಂತನೆಯಲ್ಲಿ ಆಧುನಿಕತೆ ತಂದೊಡ್ಡಿದ ಸವಾಲು ಕೂಡ ಇದು ಇರಬಹುದು)  ತಂದೆ-ಮಕ್ಕಳ (ಆ ನಿಟ್ಟಿನಲ್ಲಿ ಯಾವುದೇ ಸಂಬಂಧಗಳ ನಡುವೆ) ಸಂಬಂಧದಲ್ಲಿ ಬಿರುಕನ್ನು ಹೆಚ್ಚಿಸಿರುವುದು- ಅವುಗಳು ಹೆಚ್ಚೆಚ್ಚು ವರದಿಯಾಗುತ್ತಾ ಪ್ರಾಮುಖ್ಯತೆ ಪಡೆಯುತ್ತಿವುದು- ಗಂಭೀರ-ಸಾಮಾಜಿಕ-ಪ್ರಸ್ತುತ ಸಮಸ್ಯೆಗಳಲ್ಲಿ ಒಂದು. ಇಂತಹ ವಿಷಯದ ಮೇಲೆ ದೃಶ್ಯ ಮಾಧ್ಯಮದಲ್ಲಿ ಬೆಳಕು ಚೆಲ್ಲುವ ಚಿಂತನೆಗೆ ನಿರ್ದೇಶಕ ಹೇಮಂತ ರಾವ್ ಅಭಿನಂದನಾರ್ಹ. ಆ ನಿಟ್ಟಿನಲ್ಲಿ ಪ್ರೇಕ್ಷಕನನ್ನು ಚಿಂತನೆಗೆ ಹಚ್ಚುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com