ಇಷ್ಟ ಅನಿಷ್ಟಗಳಿಗೆ ಶನೀಶ್ವರನೇ ಕಾರಣ!

ನರ್ಸಿಂಗ್ ಹೋಮ್ ನಲ್ಲಿ ಕಾಯುತ್ತಿರುವ ಇಬ್ಬರು ಮಕ್ಕಳು. ಸಿರಿವಂತ ಬಾಲಕಿ ತನಗೆ ಇಷ್ಟವಿಲ್ಲ ಎಂದು ಬೊಂಬೆಯೊಂದನ್ನು ಬಿಸಾಡುತ್ತಾಳೆ, ಎದುರು ಕೂತ ಬಡ ಬಾಲಕಿ ಅದನ್ನು ಎತ್ತಿಕೊಂಡು ಮುದ್ದಾಡುತ್ತಾಳೆ,
ಇಷ್ಟಕಾಮ್ಯ ಸಿನೆಮಾ ವಿಮರ್ಶೆ
ಇಷ್ಟಕಾಮ್ಯ ಸಿನೆಮಾ ವಿಮರ್ಶೆ

ನರ್ಸಿಂಗ್ ಹೋಮ್ ನಲ್ಲಿ ಕಾಯುತ್ತಿರುವ ಇಬ್ಬರು ಮಕ್ಕಳು. ಸಿರಿವಂತ ಬಾಲಕಿ ತನಗೆ ಇಷ್ಟವಿಲ್ಲ ಎಂದು ಬೊಂಬೆಯೊಂದನ್ನು ಬಿಸಾಡುತ್ತಾಳೆ, ಎದುರು ಕೂತ ಬಡ ಬಾಲಕಿ ಅದನ್ನು ಎತ್ತಿಕೊಂಡು ಮುದ್ದಾಡುತ್ತಾಳೆ, ಆದರೆ ಸ್ವಲ್ಪ ಸಮಯದ ನಂತರ ಇಬ್ಬರೂ ಆ ಬೊಂಬೆಗಾಗಿ ಕಿತ್ತಾಡುತ್ತಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ಸಿನೆಮಾದ ನಿರ್ಣಾಯಕ ಸನ್ನಿವೇಶದಲ್ಲಿ ರೂಪಕವಾಗಿ ಕಟ್ಟಿಕೊಟ್ಟಿರುವ ಈ ಘಟನೆ ಸಿನೆಮಾದ ಮುಖ್ಯ ಪಾತ್ರಧಾರಿ ಡಾಕ್ಟರ್, ಇಬ್ಬರು ಯುವತಿಯರ ನಡುವಿನ ಕೈಗೊಂಬೆ ಎಂಬ ಪೂರ್ವಸಂಕಲ್ಪಿತ (ಲೆಕ್ಕಾಚಾರದ) ಕಥೆ ಹೇಳಲು ನಿರ್ದೇಶಕ ಸಾಹಸ ಮಾಡಿದ್ದಾರೆ.

ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ತಾತ ಕಟ್ಟಿಸಿದ ಬೆಳ್ಳಕ್ಕಿ ನರ್ಸಿಂಗ್ ಹೋಮ್ ಮುನ್ನಡೆಸುತ್ತಿರುವ ಆದರ್ಶಪ್ರಾಯ ಡಾಕ್ಟರ್ ಆಕರ್ಶ್ (ವಿಜಯ್ ಸೂರಿಯಾ) ಮಾಡುವ ಒಂದು ರಸ್ತೆ ಅಪಘಾತದಿಂದ, ಅಚ್ಚರಿ (ಮಯೂರಿ) ತನ್ನ ರೋಗಿಯಾಗಿ ನಂತರ ಅದು ಪರಿಚಯಕ್ಕೆ-ಪ್ರೀತಿಗೆ ತಿರುಗುತ್ತದೆ. ಅಪಘಾತದಿಂದ ಕೆಲಸ ಕಳೆದುಕೊಳ್ಳುವ ಬಡ (? ಮನೆಯಲ್ಲಿ ಐಮ್ಯಾಕ್ ಹೊಂದಿರುವ) ಹುಡುಗಿಗೆ ಡಾಕ್ಟರ್ ತಮ್ಮ ನರ್ಸಿಂಗ್ ಹೋಮ್ ನಲ್ಲೇ ಕೆಲಸ ನೀಡುತ್ತಾನೆ. ಇವರಿಬ್ಬರ ನಡುವಿನ ನವಿರು ಪ್ರೀತಿ ಸುಂದರಾವಾಗಿ ಆಕರ್ಷಕ ತಾಣಗಳ ನಡುವೆ ಕನಸು ಕಾಣುವ ಹಾಡುಗಳ ಜೊತೆಗೆ ಚಿತ್ರಿತವಾಗಿದ್ದರೂ, ಪ್ರೆಡಿಕ್ಟಬಲ್ ಆಗಿ ಕಥೆ ಮುಂದುವರೆಯುತ್ತದೆ. ಇವರಿಬ್ಬರ ಪ್ರೀತಿಯ ನಡುವೆ ಅದಿತಿ (ಕಾವ್ಯ ಶೆಟ್ಟಿ) ಆಗಮನವಾದಾಗಲೂ ಕೂಡ ಜನರ ಊಹೆಗೆ ಎಲ್ಲೂ ಪೆಟ್ಟಾಗದಂತೆ ಸಾಧಾರಣವಾಗಿ ಕಥೆ ಮುಂದುವರೆಯುವಂತೆ ನಿರ್ದೇಶಕ ಕಾಯ್ದುಕೊಂಡಿದ್ದಾರೆ. ಪ್ರೇಕ್ಷಕನ ಊಹೆಯಂತೆ ಅದಿತಿ  'ವಿಚಾರಹೀನ' ಮಹಿಳೆ. ಅತಿ ಸಾಮಾನ್ಯ ಕಥೆಗಳಲ್ಲಿ ಕಟ್ಟಿಕೊಡುವಂತಹ ಮತ್ತೊಂದು ಸಾಮಾನ್ಯ ಪಾತ್ರವೇ ಇದು. (ಪ್ರೇಕ್ಷಕನನ ಊಹೆಯನ್ನು ಅಲುಗಾಡಿಸುವಲ್ಲಿ ತುಸು ಸಫಲವಾಗಿದ್ದಾರೆ ಅದಿತಿ ಹಳೆಯ ಪ್ರೇಯಸಿಯಲ್ಲ ಬದಲಾಗಿ ದಾಂಪತ್ಯದ ಕೆಲವೇ ದಿನಗಳಲ್ಲಿ -ಅಥವಾ ಮೊದಲನೆಯ ದಿನವೇ? ಓಡಿಹೋಗಿರುವ ಪತ್ನಿ ಎಂಬ ಅಂಶವಷ್ಟೇ). ಮತ್ತೆ ಈಗ ಡಾಕ್ಟರ್ ಯಾರಿಗೆ ಒಲಿಯುತ್ತಾನೆ?

ಒಂದು ಸಾಮಾನ್ಯ ತ್ರಿಕೋನ ಪ್ರೇಮ ಕಥೆಯ ಒಂದು ಭಾಗವನ್ನು ಮುದ್ದಾಗಿಯೂ ಮತ್ತೊಂದು ಭಾಗವನ್ನು ಕೂಡಿ ಕಳೆವ ವಿಚಿತ್ರ ಪ್ರೇಮಕಥೆಯಾಗಿಯೂ ಕಟ್ಟಿಕೊಟ್ಟಿರುವ ಕಥೆಯಲ್ಲಿ ಪ್ರೇಕ್ಷಕನಿಗೆ ಹೆಚ್ಚಿನ ಪ್ರಶ್ನೆಗಳೇ ಮೂಡುತ್ತವೆ. ಆಕರ್ಶ್ ಮತ್ತು ಅದಿತಿ ಮದುವೆಗೆ ಯಾವುದೇ ಎಸ್ಟಾಬ್ಲಿಶ್ಮೆಂಟ್ ಇಲ್ಲ. ಸ್ವಚ್ಛತೆಯ ಒಸಿಡಿಯಿಂದ (ಅಬ್ಸೆಸ್ಸಿವ್ ಕಂಪಲ್ಶನ್ ಡಿಸಾರ್ಡರ್) ನರಳುವ ಅದಿತಿ, ಆಕರ್ಶ್ ನನ್ನು ತೊರೆಯುವ ಆತುರದ-ಅತಿರೇಕದ ನಿರ್ಧಾರವನ್ನು ಅಷ್ಟೇ ಆತುರವಾಗಿ ಕಟ್ಟಿಕೊಟ್ಟಿರುವ ಈ ಕಥೆ ಅಷ್ಟು ಮನಮುಟ್ಟುವುದಿಲ್ಲ. (ತಾಯಿ ಹೆರಿಗೆ ಸಮಯದಲ್ಲಿ ಸತ್ತ ಕಹಿಘಟನೆ, ಅದಿತಿಗೆ ಗರ್ಭ ಧರಿಸುವುದಕ್ಕೆ ಭಯವಾಗಿ-ಫೋಬಿಯಾ ಆಗಿ ಪರಿಣಮಿಸಿದೆ ಎಂಬ ಕಾರಣವನ್ನು ಮುಂದೆ ನೀಡುತ್ತಾರೆ). ಆಕರ್ಶ್ ನನ್ನು ಅತಿ ಆದರ್ಶಪ್ರಾಯ ಮಾಡಲು ಹೋಗಿ (ಕೈಗೊಂಬೆಯೆಂಬಂತೆ ಚಿತ್ರಿಸಲು), ಈ ಎರಡು  ಸ್ತ್ರೀಪಾತ್ರಗಳನ್ನು ಆಲೋಚನಾರಹಿತರನ್ನಾಗಿ-ಗೊಂಬೆಗಳ ರೀತಿ ಸೃಷ್ಟಿಸಿರುವುದು, ಕ್ಲಾಸಿಕ್ ಎನಿಸಿಕೊಳ್ಳುವ ಸಿನೆಮಾದಲ್ಲಿ ಅವಶ್ಯಕವಾಗುವ ನಾಜೂಕು-ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತದೆ. ಇದರ ಜೊತೆಗೆ ಕಟ್ಟಿಕೊಡುವ ಉಪಕಥೆಗಳು ಕೂಡ ಕೆಲವೊಮ್ಮೆ ಭಾವೋದ್ದೀಪನೆಗಾಗಿ ಕೃತಕತೆಯಿಂದ ಕೂಡಿದ್ದು ಬೇಸರ ತರಿಸುತ್ತವೆ. ತಂದೆ ತಾಯಿಯನ್ನು ಸದಾ ಎಚ್ಚರದಿಂದ ಕಾಯುವ ಶ್ರವಣ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಾಗ, ಆ ದೃಶ್ಯವನ್ನು ಅತಿ ಭಾವನಾತ್ಮಕವಾಗಿಸಿ, ಲೌಡ್ ಎನ್ನಿಸುವ ಹಿನ್ನಲೆ ಸಂಗೀತದೊಂದಿಗೆ ಮೂಡಿಸಿರುವುದು ಅನಾವಶ್ಯಕವಾಗಿ ಮೂಡಿಬಂದಿದೆ. ಜೊತೆಗೆ ಆಗಾಗ ಕಾಣಿಸಿಕೊಳ್ಳುವ ರಂಗಾಯಣ ರಘು, ಚಿಕ್ಕಣ್ಣ, ಮಂಡ್ಯ ರಮೇಶ್ ಅವರ ಹಾಸ್ಯ ದೃಶ್ಯಗಳು ಕೂಡ ಎಲ್ಲೂ ಸಿನೆಮಾದಲ್ಲಿ ಬೆರೆಯದೆ ಆಯಾಸ ತರಿಸುತ್ತವೆ. ಅದಿತಿ ಮನಸ್ಸು ಬದಯಾಯಿಸಿ ಮತ್ತೆ ಆಕರ್ಶ್ ನತ್ತ ಒಲಿಯಲು ಕಾರಣವಾಗುವ ಘಟನೆಗಳು ಕೂಡ ಬಹಳ ನೀರಸವಾಗಿ ಮೂಡಿ ಬಂದಿವೆ. (ಅದಿತಿ ಒಂಟಿಯಾಗಿ ನಿಂತಿದ್ದಾಗ ಸುತ್ತುವರಿವ ಪಡ್ಡೆಗಳು ತಾಳಿ ಕಂಡು -ತಾಳಿ ಕಂಡರೆ ಕೈಮುಗಿ ಇಲ್ಲ ಅಂದರೆ ಕಣ್ಣು ಹೊಡಿ ಎಂಬ ಡೈಲಾಗ್ ಹೊಡೆದು ಹೋಗುವುದು ಇತ್ಯಾದಿ!)  ಸಿನೆಮಾವನ್ನು ಒಂದು ಮಟ್ಟಿಗೆ ಕಾಯುವುದು ಮೊದಲಾರ್ಧದ ಆಕರ್ಶ್ ಮತ್ತು ಅಚ್ಚರಿ ನಡುವಿನ ಪ್ರೀತಿ ಪ್ರೇಮದ ರೊಮ್ಯಾಂಟಿಕ್ ದೃಶ್ಯಗಳು ಮತ್ತು ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ೨-೩ ಒಳ್ಳೆಯ ಹಾಡುಗಳು. ಕುವೆಂಪು ಅವರ 'ಜೇನಾಗುವಾ' ಹಾಡು ಬಹಳ ಸೂಕ್ತ ಸಂದರ್ಭದಲ್ಲಿ ಮೂಡಿದ್ದು ಸಿನೆಮಾಗೆ ತುಸು ಬಲ ನೀಡುತ್ತದೆ.  

ಆಕರ್ಷಕ ತಾಣಗಳಲ್ಲಿ ಚಿತ್ರೀಕರಣ, ಒಂದು ಮಟ್ಟಕ್ಕೆ ಹಿತವೆನ್ನಿಸುವ ಹಾಡುಗಳು ಮತ್ತು ಕೆಲವೊಮ್ಮೆ ಮುದ್ದೆನಿಸುವ ಪ್ರೀತಿ ಪ್ರೇಮದ ದೃಶ್ಯಗಳು ಈ ಸಿನೆಮಾವನ್ನು ಒಂದು ಮಟ್ಟಕ್ಕೆ ಸಹ್ಯವೆನಿಸುವತ್ತ ಕೊಂಡೊಯ್ದರು, ಪಾತ್ರಗಳ ನಡುವಿನ ಸಂಘರ್ಷದಲ್ಲಿ ಇಲ್ಲದ ಗಟ್ಟಿತನ, ಪ್ರೆಡಿಕ್ಟಬಲ್ ತ್ರಿಕೋನ ಪ್ರೇಮದ ಕಥೆ, ಅತಿರೇಕದ ಹಾಸ್ಯ ದೃಶ್ಯಗಳು ಸಿನೆಮಾವನ್ನು ದಶಕಗಳಷ್ಟು ಹಿಂದಕ್ಕೆ ನೂಕುತ್ತದೆ.

ಸಾಹಿತ್ಯದಿಂದ ಸಿನೆಮಾ ರೂಪಿಸುವುದು ಒಂದು ಪ್ರಾಕಾರ ಮತ್ತು ಬಹಳ ಸಂಭ್ರಮಿಸುವ ಪ್ರಾಕಾರ ಕೂಡ ಅದು. ದೊಡ್ಡೇರಿ ವೆಂಕಟಗಿರಿರಾವ್ ಅವರ ಇದೇ ಹೆಸರಿನ ಕಾದಂಬರಿಯನ್ನು ದೃಶ್ಯರೂಪಕ್ಕೆ ತಂದಿದ್ದಾರೆ ನಾಗತಿಹಳ್ಳಿ. ೮೦ರ ದಶಕದ ಈ ಕಾದಂಬರಿಯ ಪಾತ್ರಗಳು, ಅವುಗಳ ಪೋಷಣೆ ಮತ್ತು ನಡೆಯುವ ಘಟನೆಗಳನ್ನು ಇಂದಿನ ದಿನಕ್ಕೆ ಬದಲಾಯಿಸಲು ನಿರ್ದೇಶಕ ಪ್ರಯತ್ನಿಸಿದ್ದರು, ಕ್ಲೀಶೆಯಾದ ಅಥವಾ ಪ್ರಾಚೀನವಾದ ಕಥೆ ಹಾಗೆಯೇ ಉಳಿದುಕೊಂಡಿದೆ. ಮೂಲ ಕಾದಂಬರಿಯಲ್ಲಿ ಅದಿತಿ, ಆಕರ್ಶ್ ನನ್ನು ತೊರೆಯುವುದಕ್ಕೆ ಯಾವುದೇ ಬಲವಾದ ಕಾರಣಗಳನ್ನು ಕಟ್ಟಿಕೊಡಲು ವಿಫಲವಾಗಿದ್ದರಿಂದ ಅದನ್ನು ಸರಿಪಡಿಸಲು ನಿರ್ದೇಶಕ ಪ್ರಯತ್ನಿಸಿದ್ದರು ಅದು ಸಮಂಜಸವಾಗಿ-ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಪ್ರತಿ ಕಾಲಘಟ್ಟವೂ ಸಂಬಂಧಗಳ ನಡುವೆ ಹೊಸ ಸಂಘರ್ಷಗಳನ್ನು ಸೃಷ್ಟಿಸುತ್ತವೆ ಮತ್ತೆ ಅದರ ಕಾರಣಗಳು ಬದಲಾಗುತ್ತಲೇ ಇರುತ್ತವೆ. ಇವುಗಳನ್ನು ಹಿಡಿದಿಡಲು ಸಫಲವಾಗಿದ್ದಾರೆ 'ಇಷ್ಟಕಾಮ್ಯ' ಇನ್ನೂ ಪರಿಣಾಮಕಾರಿಯಾಗಿ ಹೆಚ್ಚು ಇಷ್ಟವಾಗುತ್ತಿತ್ತೇನೋ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com