ಕನ್ನಡ ಚಿತ್ರರಂಗವೂ ಸೇರಿದಂತೆ ಭಾರತೀಯ ಸಿನೆಮಾರಂಗದ ವ್ಯಾಧಿ ಇದು. ಪುರುಷ ಪಾತ್ರಗಳನ್ನು ಅತಿರೇಕದಿಂದ ವೈಭವೀಕರಿಸಿ, ಅವರನ್ನು ಸಂತ್ರಸ್ತರಂತೆ ಚಿತ್ರಿಸಿ, ಮಹಿಳೆಯರೇ ಸರ್ವ ಸಮಸ್ಯೆಗೂ ಕಾರಣ ಎಂಬಂತೆ ಬಿಂಬಿಸುವುದು ಸಾಮಾನ್ಯ ಪ್ಯಾಟರ್ನ್ ಮತ್ತು ಇದು ಈ ಸಿನೆಮಾದಲ್ಲಿ ಕೂಡ ಮುಂದುವರೆದಿದೆ. ಜಗ್ಗು ಮತ್ತು ದತ್ತಾತ್ರೇಯ ಪಾತ್ರಗಳ ಹೆಡ್ಡತನಗಳು, ದುರುಳ ಚಿಂತನೆಗಳು ಭಾರಿ ತಾತ್ವಿಕ ಚಿಂತನೆಗಳಂತೆ ಚಿತ್ರೀಕರಿಸುವ ನಿರ್ದೇಶಕ, ಕುಮುದಾ ವಿದ್ಯಾರ್ಥಿನಿಯಾಗಿದ್ದಾಗ ಇಬ್ಬರು ಸಹ ವಿದ್ಯಾರ್ಥಿಗಳೊಡನೆ ನಡೆದಿದ್ದ ಒಂದು ಹುಡುಗಾಟದ ಪ್ರಸಂಗ ಅಥವಾ ಅವಳ ನೈಜ ಭಾವನೆಯನ್ನು ಅಪರಾಧವೋ-ಪಾಪವೋ ಎಂಬಂತೆ ನಿರೂಪಿಸಿಬಿಡುತ್ತಾರೆ. ಜಗ್ಗು ಪಾತ್ರದ ತಾಯಿ ಮತ್ತೊಬ್ಬನ ಜೊತೆ ಓಡಿಹೋಗುವುದನ್ನು ದೇವರು ಮಾಡಿದ ತಪ್ಪು ಎಂದು ಬಣ್ಣಿಸುವ ಜಗ್ಗು, ತನ್ನ ತಂದೆಯ ವಿವಾಹದಾಚೆಗಿನ ಸಂಬಂಧವನ್ನು ವಿಜೃಂಭಿಸುತ್ತಾನೆ. ಇಂತಹ ಘಟನೆಗಳನ್ನು ಕಟ್ಟಿಕೊಡುವಾಗ, ಸಿನೆಮಾ ಕರ್ತೃಗಳು ಕಪ್ಪು-ಬಿಳುಪಿನ ಸುಲಭ ವಾದಕ್ಕೆ, ಪುರುಷ ಅಹಂಕಾರಕ್ಕೆ ತಮ್ಮನ್ನು ಬಲಿಗೊಡದೆ ವಿಶಾಲ ಚಿಂತನೆಯಿಂದ ಕಥೆಯನ್ನು ದೃಶ್ಯಗಳನ್ನು ಕಟ್ಟಿಕೊಟ್ಟಾಗ ಅದನ್ನು ಸ್ವೀಕರಿಸುವ ಮನಸ್ಸುಗಳು ಕೂಡ ವಿಶಾಲವಾಗುತ್ತವೆ! ಅಂತಹ ಸಿನೆಮಾಗಳನ್ನು ಸ್ವೀಕರಿಸುವ ಪ್ರೇಕ್ಷಕರ ಸಂಖ್ಯೆಯೂ!