ದುರುಳತನಕ್ಕೆ ಎದುರಾಗಿ ಬ್ಯೂಟಿಫುಲ್ ಮಾತಿನ ಮಲ್ಲರು

ಬೆಳೆದ ಮಕ್ಕಳು ತಮ್ಮ ಪೋಷಕರ ದುರ್ನಡತೆಯ ಬಗ್ಗೆ ತಿಳಿದಾಗ ಪ್ರತಿಭಟಿಸಬೇಕೇ? ವ್ಯವಸ್ಥೆಯ ದುರಾಡಳಿತಕ್ಕೆ ಯುವ ಮನಸ್ಸುಗಳು ಹೇಗೆ ಪ್ರತಿಕ್ರಿಯಿಸಬೇಕು? ಸಮಾಜದ ಆಗುಹೋಗುಗಳಿಗೆ ನಮ್ಮ
ಬ್ಯೂಟಿಫುಲ್ ಮನಸುಗಳು ಸಿನೆಮಾ ವಿಮರ್ಶೆ
ಬ್ಯೂಟಿಫುಲ್ ಮನಸುಗಳು ಸಿನೆಮಾ ವಿಮರ್ಶೆ
ಬೆಳೆದ ಮಕ್ಕಳು ತಮ್ಮ ಪೋಷಕರ ದುರ್ನಡತೆಯ ಬಗ್ಗೆ ತಿಳಿದಾಗ ಪ್ರತಿಭಟಿಸಬೇಕೇ? ವ್ಯವಸ್ಥೆಯ ದುರಾಡಳಿತಕ್ಕೆ ಯುವ ಮನಸ್ಸುಗಳು ಹೇಗೆ ಪ್ರತಿಕ್ರಿಯಿಸಬೇಕು? ಸಮಾಜದ ಆಗುಹೋಗುಗಳಿಗೆ ನಮ್ಮ ಸ್ಪಂದನೆ ಹೇಗಿರಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಅತಿ ಜನಪ್ರಿಯ ಮಾದರಿಯಲ್ಲಿ ಚರ್ಚಿಸಲು ನಿರ್ದೇಶಕ ಜಯತೀರ್ಥ ಮುಂದಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ನೈಜ ಪ್ರಕರಣವೊಂದರ ಸುತ್ತ ಹೆಣೆದ ಕಥಾನಕ ಇದು ಎಂದು ಕೂಡ ಹೇಳಿಕೊಂಡು ತೆರೆಗೆ ಬಂದಿರುವ 'ಬ್ಯೂಟಿಫುಲ್ ಮನಸುಗಳು' ಪ್ರೇಕ್ಷಕರಿಗೆ ಕಾಡುತ್ತದೆಯೇ? 
ಹಫ್ತಾ ನೀಡದ್ದಕ್ಕೆ ಇನ್ಸ್ಪೆಕ್ಟರ್ ರಾಜಶೇಖರ್ (ಅಚ್ಯುತ್ ಕುಮಾರ್) ಬ್ಯೂಟಿ ಸಲೂನ್ ಒಂದರ ಮೇಲೆ ವೇಶ್ಯಾವಾಟಿಕೆಯ ಸುಳ್ಳು ಆರೋಪ ಹೊರಿಸಿ ದಾಳಿ ಮಾಡಿ, ಅಲ್ಲಿ ಕೆಲಸಕ್ಕಿರುವ ಮುಗ್ಧ ಯುವತಿಯರನ್ನು ಬಂಧಿಸುತ್ತಾನೆ. ಆಗ ನಂದಿನಿ (ಶ್ರುತಿ ಹರಿಹರನ್) ಸುತ್ತ ಸಮಾಜ ಹೇಗೆ ಬದಲಾಗುತ್ತದೆ? ನಂದಿನಿ ಪ್ರಿಯತಮ ಪ್ರಶಾಂತ್ (ನೀನಾಸಂ ಸತೀಶ್) ಹೇಗೆ ಪ್ರತೀಕಾರ ತೆಗೆದುಕೊಳ್ಳುತ್ತಾನೆ? ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೇ? 
ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಕ್ರೌರ್ಯದ ಘಟನೆಯೊಂದನ್ನು ಚಲನಚಿತ್ರಕ್ಕೆ ಅಳವಡಿಸಿಕೊಂಡಿರುವ ನಿರ್ದೇಶಕ ಜಯತೀರ್ಥ, ಅದರ ಸುತ್ತ ಪಾತ್ರಗಳನ್ನು ಬೆಳೆಸಿ, ಒಂದಷ್ಟು ಪ್ರೇಮ-ರೋಮ್ಯಾನ್ಸ್, ಒಂಚೂರು ಸಸ್ಪೆನ್ಸ್ ಒಳಗೊಂಡು ಸಾಕಷ್ಟು ಬೋಧನೆಯನ್ನು ತುರುಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿಜ ಕ್ರೈಮ್ ಘಟನೆಗಳು ಮೂಡುವುದೇ ಅಪರೂಪ ಎನ್ನುವ ಸಂದರ್ಭದಲ್ಲಿ ಇಂತಹ ಒಂದು ಕಥೆಯನ್ನು ಹೇಳಹೊರಟ ನಿರ್ದೇಶಕರ ಬದ್ಧತೆ (ಸಿನೆಮಾದ ವಸ್ತುವಿಗೆ) ಶ್ಲಾಘನೀಯ. ಆದರೆ ಈ ದೃಶ್ಯ ಮಾಧ್ಯಮವನ್ನು, ಅದರ ರೂಪ-ಶೈಲಿಯನ್ನು ಈ ಕಥೆಗೆ ಅಷ್ಟೇ ತೀವ್ರತೆಯಲ್ಲಿ ಒಗ್ಗಿಸಿಕೊಳ್ಳದ್ದಕ್ಕೆ ತುಸು ನಿರಾಸೆ ಕೂಡ ಒಡಮೂಡುತ್ತದೆ. 
ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಅಪಹರಿಸಿ ಹೊತ್ತೊಯ್ಯುವ ದೃಶ್ಯದಿಂದ ಪ್ರಾರಂಭವಾಗುವ ಚಿತ್ರ, ಕುತೂಹಲ ಹುಟ್ಟಿಸಿ ನಂತರ ಪ್ರೇಮಕಥೆಗೆ ಹೊರಳುತ್ತದೆ. ಮಧ್ಯಮವರ್ಗದ ಯುವತಿ ನಂದಿನಿ ಮತ್ತು ಉಡಾಳ ಪ್ರಶಾಂತ್ ಅವರ ಪ್ರೇಮ ಕಥೆ ಮೊದಲಾರ್ಧ ಆವರಿಸಿಕೊಂಡು, ಗುನುಗಿಕೊಳ್ಳಬಹುದಾದ ಒಂದೆರಡು ಒಳ್ಳೆಯ ಹಾಡುಗಳಿಂದ ಮುದ ನೀಡಿದರು, ಬಹುತೇಕ ಎಲ್ಲ ಪಾತ್ರಗಳ ಮಾತಿನ ಚಪಲಕ್ಕೆ, ಟಿವಿ ಚಾನೆಲ್ ಗಳ ಜನಪ್ರಿಯ ಕಾರ್ಯಕ್ರಮಗಳ ಪುನರಾವರ್ತಿತ ಮೂಡುವಿಕೆಗೆ ಬೇಸರ ಮೂಡಿಸುತ್ತದೆ. ಕ್ಲೀಶೆಯ ಮಧ್ಯಮ ವರ್ಗದ ಕುಟುಂಬ/ಪಾತ್ರ ಕಟ್ಟಿಕೊಡುವ ನಿರ್ದೇಶಕರಿಗೆ ಅದನ್ನು ಅಥೆಂಟಿಕ್ ಎನ್ನುವ ರೀತಿಯಲ್ಲಿ ಮೂಡಿಸುವಲ್ಲಿ ಶ್ರಮವಿಲ್ಲ. ಪಾರ್ಶುವಾಯುಗೆ ತುತ್ತಾದ ತಂದೆ, ಓದುತ್ತಿರುವ ತಮ್ಮನ ಶಿಕ್ಷಣಕ್ಕಾಗಿ ಹಣ, ಹೀಗೆ ಕುಟುಂಬದ ಜವಾಬ್ದಾರಿ ಹೊತ್ತ ಯುವತಿ ನಂದಿನಿಯ ಬಳಲಿದ ಶ್ರಮಜೀವನವನ್ನು ಬರಿ ಮಾತಿನಲ್ಲೇ ಹೇಳಿಸುವ ನಿರ್ದೇಶಕ, ಆ ಬಳಲಿಕೆಯನ್ನು ನಟನೆಯ ಹಾವಭಾವ, ಮುಖಚರ್ಯೆ, ಅಥವಾ ಪೂರಕ ಪರಿಸರವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮೂಡಿಸುವುದಿಲ್ಲ. ಪ್ರತಿಯೊಂದಕ್ಕೂ ಒಣ ತತ್ವ ನುಡಿಯುವ ರಂಗಣ್ಣನ (ತಬಲಾ ನಾಣಿ) ಎಲ್ಲಿಯೂ ಸಲ್ಲುವುದಿಲ್ಲ ಮತ್ತು ಬೋಧನಪ್ರಾಯ ಸಂಭಾಷಣೆ ಬೋರು ಹೊಡೆಸುವುದಲ್ಲದೆ, ಕೆಲವು ಸಂಭಾಷಣೆ ಅಸೂಕ್ಷಮತೆಯಿಂದ ಕೂಡಿದೆ. (ದಲಿತನನ್ನು ತುಳಿದ ಆನೆ ಎಂಬ ಕಾಲ್ಪನಿಕ ಪತ್ರಿಕಾ ಬರಹ ಹಿಡಿದು ಲೇವಡಿ ಮಾಡುವ ಬಗೆ, ದಲಿತರ ವಿರುದ್ಧ ನಡೆಯುವ ದೌರ್ಜನ್ಯಗಳ ನರೇಟಿವ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದು). ದ್ವಿತೀಯಾರ್ಧದಲ್ಲಿ ಕೇಂದ್ರ ಘಟನೆಗೆ ಧುಮುಕುವ ಸಿನೆಮಾ ತುಸು ಗಂಭೀರತೆಯನ್ನು ಪಡೆದರೂ, ಮತ್ತೆ ನಿರೂಪಿಸುವ ಕ್ರಮದಲ್ಲಿ ಸೋಲುತ್ತದೆ. ಇಡೀ ಸಿನೆಮಾದ ಭಾವ ಅತಿ ಲೌಡ್ ಎನ್ನಿಸುತ್ತದೆ. ಪರಸ್ಪರ ಭಾವನೆಗಳನ್ನು, ದುರಂತಕ್ಕೆ ಸಂಬಂಧಗಳು ಪ್ರತಿಕ್ರಿಯಿಸುವ ರೀತಿಯನ್ನು ಕೇವಲ ಮಾತಿನ ಮೂಲಕ ಎಲ್ಲವನ್ನು ನಿರ್ವಚನಗೊಳಿಸದೆ, ಇನ್ನಷ್ಟು ಸೂಕ್ಷ್ಮವಾಗಿ ಕಟ್ಟಿಕೊಡುವ ವಿಫುಲ ಅವಕಾಶಗಳನ್ನು ನಿರ್ದೇಶಕ ಕೈಚೆಲ್ಲುತ್ತಾರೆ. ಜನಪ್ರಿಯ ಸುದ್ದಿವಾಹಿನಿಗಳನ್ನು ಮೂದಲಿಸುವ ಸೋಗಿನಲ್ಲಿ, ಅದೇ ಜನಪ್ರಿಯತೆಯ ಅಸೂಕ್ಷ್ಮತೆಯಲ್ಲಿ ಸಿನೆಮಾ ಸೊರಗುತ್ತದೆ. (ವೇಶ್ಯಾವಾಟಿಕೆಯ ಬಗ್ಗೆ ಅತಿ ಕೆಟ್ಟ ಅಭಿಪ್ರಾಯವನ್ನು ಸಿನೆಮಾ ತಳೆಯುವುದು ಕೂಡ ಅದರಲ್ಲಿ ಒಂದು!) 
ಇವೆಲ್ಲ ಕೊರತೆಗಳ ನಡುವೆಯೂ ಒಂದು ಘರ್ಷವನ್ನು ಮೂಡಿಸುವ ಸಿನೆಮಾ, ಅನ್ಯಾಯವೆಸಗಿದ ಅಧಿಕಾರಿಗೆ, ತನ್ನ ಮಗಳನ್ನು ಕಳೆದುಕೊಳ್ಳುವ ಅಥವಾ ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ಅವಳನ್ನು ಹಿಂಪಡೆಯುವ ಆಯ್ಕೆಗಳನ್ನು ತಂದೊಡ್ಡುತ್ತದೆ. ಮಾಧ್ಯಮಗಳ ಮಾತಿಗೆ ಮೋಸ ಹೋಗಿ ಪ್ರೇಯಸಿಯನ್ನು ದೂರ ಮಾಡುವ ಯುವಕನಿಗೆ, ತಪ್ಪು ತಿದ್ದಿಕೊಳ್ಳುವಂತೆ ಮಾಡುತ್ತದೆ. ತಂದೆಯ ತಪ್ಪನ್ನು ಗ್ರಹಿಸುವ ಮಗಳು, ಸಾರ್ವಜನಿಕವಾಗಿ ತಂದೆಯನ್ನು ತಿರಸ್ಕರಿಸುವ ದೃಶ್ಯ ನೈಜವಲ್ಲ, ತುಸು ಅತಿರೇಕ ಎಂದೆನಿಸಿದರೂ ವ್ಯವಸ್ಥೆಯ-ಅಧಿಕಾರದ ಭಾಗವಾಗಿ ಪೋಷಕರು ತಪ್ಪೆಸಗಿದಾಗ ಮಕ್ಕಳು ವಿರೋಧಿಸಬಹುದಲ್ಲವೇ ಎಂಬ ಚಿಂತನೆಗೆ ಒಡ್ಡುವಂತೆ ಪ್ರೇರೇಪಿಸುತ್ತದೆ. ಅನ್ಯಾಯಕ್ಕೆ ವಿರುದ್ಧವಾಗಿ, (ಹಿರೋಯಿಕ್ ರೂಪದ) ಅಪಹರಣ ದೃಶ್ಯವನ್ನು ಒಳಗೊಂಡಿದ್ದರು, ಜನಪ್ರಿಯ ಗ್ರಹಿಕೆಯಲ್ಲಿ ಸಾಮಾನ್ಯರು ಕೂಡ ಅನ್ಯಾಯದ ವಿರುದ್ಧ ಹೋರಾಡಬಹುದು ಎಂಬ ಹೇಳಿಕೆಯನ್ನು ಸಿನೆಮಾ ಮಾಡುತ್ತದೆ. 
ತಾಂತ್ರಿಕವಾಗಿ ಸಿನೆಮಾ ಇನ್ನು ಉತ್ತಮಗೊಳ್ಳಬಹುದಿತ್ತು. ಬಿ ಜೆ ಭರತ್ ಸಂಗೀತ ನಿರ್ದೇಶನದಲ್ಲಿ ಮೂಡಿರುವ ಒಂದೆರಡು ಹಾಡುಗಳು ಮನಸ್ಸಿನಲ್ಲುಳಿಯುತ್ತವೆ. ನಗರ ಜೀವನದಲ್ಲಿ ಬದುಕುಕಟ್ಟಿಕೊಳ್ಳುವ ಜನರ ಪರಿಪಾಡನ್ನು ತೋರಿಸಲು ಹಿನ್ನಲೆಯಲ್ಲಿ ಆಗಾಗ ಬಳಸಿಕೊಂಡಿರುವ (ರಘು ದೀಕ್ಷಿತ್ ಹಾಡಿರುವ) ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗೆ' ಹಾಡು ಆಪ್ತವಾಗುತ್ತದೆ. ಲೀನಿಯರ್ ನಿರೂಪಣೆಗೆ ಬದಲಾಗಿ, ಇನ್ನಷ್ಟು ರೋಚಕತೆ ತಂದಿದ್ದರೆ ಹೆಚ್ಚು ಕುತೂಹಲಕಾರಿಯಾಗುವ ಸಾಧ್ಯತೆ ಇತ್ತು. ಛಾಯಾಗ್ರಹಣ ಪೂರಕವಾಗಿದ್ದರು, ಇನ್ನಷ್ಟು ಉತ್ತಮಗೊಳ್ಳಬಹುದಿತ್ತು. ಬ್ರೈಟ್ ಲೈಟಿಂಗ್ ಹೇರಳವಾಗಿ ಬಳಕೆಯಾಗಿದ್ದು, ದುಃಖದ, ದುರಂತದ ಸನ್ನಿವೇಶಗಳಲ್ಲಾದರೂ (ನಂದಿನಿ ಮನೆಯ ಪರಿಸರ) ಅದನ್ನು ಬದಲಿಸುವ ಅವಶ್ಯಕತೆಯಿತ್ತು. ಹಿನ್ನಲೆ ಸಂಗೀತ, ಸಂಭಾಷಣೆಗಳಂತೆ ಅಬ್ಬರವಾಗಿಯೇ ಉಳಿದಿದೆ. ನೀನಾಸಂ ಸತೀಶ್, ಶ್ರುತಿ ಹರಿಹರನ್ ಮತ್ತು ಇತರ ನಟರು ಉತ್ತಮವಾಗಿ ಅಭಿನಯಿಸಿದ್ದರು, ಅಚ್ಯುತ್ ಕುಮಾರ್ ತಮ್ಮ ನಿಯಂತ್ರಿತ ಮತ್ತು ನಿಖರವಾದ ನಟನೆಯಿಂದ ಮನಸೂರೆಗೊಳ್ಳುತ್ತಾರೆ. 
ಸಮಾಜದ ಓರೆಕೋರೆಗಳನ್ನು ಸಿನೆಮಾ ಮಾಧ್ಯಮದಲ್ಲಿ ಒಳಗೊಳ್ಳಬೇಕು ಎಂಬ ಬದ್ಧತೆಯ ದೃಷ್ಟಿಯಿಂದ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು, ಅದರ ನಿರ್ವಹಣೆಯಲ್ಲಿ ಅಷ್ಟೇನೂ ಪರಿಣಾಮಕಾರಿಯಾಗದೆ ನಿರ್ದೇಶಕ ಜಯತೀರ್ಥ ಮಿಶ್ರಭಾವನೆ ಮೂಡಿಸುತ್ತಾರೆ. ಆದರೆ ಸಮಾಜದ ಸುತ್ತಮುತ್ತಲಿನ ಘಟನೆಗಳಿಗೆ ಸ್ಪಂದಿಸುವ ಮನಸ್ಸು ನಿಮ್ಮದಾದರೆ ಒಮ್ಮೆ ನೋಡಲು ಅಡ್ಡಿಯೇನಿಲ್ಲ.  
-ಗುರುಪ್ರಸಾದ್ 
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com