ಸಾಮಾನ್ಯ ಚೌಕಟ್ಟಿನ ಸಿರಿವಂತಿಕೆಯ ಸಿನೆಮಾಗೆ ಕಸ್ತೂರಿ ತಿಲಕದ ಲೇಪನ

'ಮಿ ಅಂಡ್ ಮಿಸಸ್ ರಾಮಾಚಾರಿ' ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿ, ಯಶಸ್ಸು ಕಂಡು ಈಗ ಮತ್ತೊಬ್ಬ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸಿನೆಮಾ ನಿರ್ದೇಶಿಸಿ ಹಿಂದಿರುಗಿದ್ದಾರೆ
ರಾಜಕುಮಾರ ಸಿನೆಮಾ ವಿಮರ್ಶೆ
ರಾಜಕುಮಾರ ಸಿನೆಮಾ ವಿಮರ್ಶೆ
'ಮಿ ಅಂಡ್ ಮಿಸಸ್ ರಾಮಾಚಾರಿ' ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿ, ಯಶಸ್ಸು ಕಂಡು ಈಗ ಮತ್ತೊಬ್ಬ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸಿನೆಮಾ ನಿರ್ದೇಶಿಸಿ ಹಿಂದಿರುಗಿದ್ದಾರೆ ಸಂತೋಷ್ ಆನಂದರಾಮ್. ಮೊದಲ ಸಿನೆಮಾವನ್ನು ನಟ ವಿಷ್ಣುವರ್ಧನ್ ಅವರಿಗೆ ಅರ್ಪಿಸಿ, ನಾಗರಹಾವು ಸಿನೆಮಾ ನೆನಪಿಸಿಸಿಕೊಳ್ಳುವಂತೆ ಮಾಡಿದ್ದ ನಿರ್ದೇಶಕ ಇದರಲ್ಲಿ, ನಟ ರಾಜಕುಮಾರ್ ಮತ್ತು ಕಸ್ತೂರಿ ನಿವಾಸ ಸಿನೆಮಾವನ್ನು ಪದೇ ಪದೇ ಉಲ್ಲೇಖಿಸಿದ್ದರೂ, ಪ್ರೇಕ್ಷಕನ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆಯೇ? ಕನ್ನಡ ಚಿತ್ರರಂಗದ ಮೇರು ಸಿನೆಮಾಗಳಲ್ಲಿ ಒಂದು ಎನ್ನಲಾಗುವ 'ಕಸ್ತೂರಿ ನಿವಾಸ'ದ ಘಮಲನ್ನು ಮರುಸೃಷ್ಟಿಸಲು ನಿರ್ದೇಶಕನಿಗೆ ಸಾಧ್ಯವಾಗಿದೆಯೇ? 
ಆಸ್ಟ್ರೇಲಿಯಾದಲ್ಲಿ ಅಶೋಕ್ (ಶರತ್ ಕುಮಾರ್) ಅವರದ್ದು ಸಿರಿವಂತ ಕುಟುಂಬ. ಉದ್ದಿಮೆ, ಧರ್ಮಾರ್ಥ ಕಾರ್ಯಗಳು, ಅಲ್ಲಿನ ಭಾರತೀಯರಿಗೆ ಸಹಾಯವಾಣಿ ಹೀಗೆ ಸಕಲ ಸಿದ್ಧಿ ಮತ್ತು ಸದಭಿರುಚಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಕುಡಿ ಸಿದ್ಧಾರ್ಥ ಅಲಿಯಾಸ್ ಅಪ್ಪು (ಪುನೀತ್ ರಾಜಕುಮಾರ್). ಅಪ್ಪನ ಹೆಸರನ್ನು ಉತ್ತುಂಗಕ್ಕೇರಿಸುವ, ಆದರ್ಶವಾದಿ ಮಗನಿಗೆ ನೃತ್ಯಗಾರ್ತಿ ನಂದಿನಿಯ (ಪ್ರಿಯಾ ಆನಂದ್) ಜೊತೆಗೆ ಅನುರಾಗ ಬೆಳೆಯುತ್ತದೆ. ನಂತರ ಒಂದಷ್ಟು ಗೊಂದಲ, ಅದು ಬಗೆಹರಿಯುವ ಹೊತ್ತಿಗೆ ಒಂದು ಅಪಘಾತ. ಇದರಿಂದ ಸಿದ್ಧಾರ್ಥ ತನ್ನ ತಾಯ್ನಾಡಿಗೆ ಹಿಂದಿರುಗುತ್ತಾನೆ? ಏಕೆ? ಮುಂದೇನಾಗುತ್ತದೆ?  
ಜನಪ್ರಿಯ ನಟನನ್ನು ಅತಿರಂಜಿತಗೊಳಿಸಲೆಂದೇ ಹೆಣೆದಿರುವ ಕಥೆಯಲ್ಲಿ ಒಂದಷ್ಟು ಸಂಗತ ಸಮಸ್ಯೆಗಳನ್ನು ಸಿನೆಮಾದ ಘಟನೆಗಳಾಗಿ ಪರಿವರ್ತಿಸಿ ಒಳಗೊಳ್ಳುವ ಆಶಯ ಉದಾತ್ತವಾಗಿದ್ದರೂ ಅವುಗಳನ್ನು ನಿರ್ವಹಿಸಿರುವ ರೀತಿ ಕೆಲವೊಮ್ಮೆ ಬಾಲಿಶವಾಗಿಯೂ ಮತ್ತೆ ಕೆಲವೊಮ್ಮೆ ಅತಿರೇಕದ ಭಾವುಕತೆಯಿಂದಲೂ ಮತ್ತೆ ಕೆಲವೊಮ್ಮೆ ಅನಗತ್ಯ ಹಾಸ್ಯದಿಂದ ಸೊರಗಿ, ಕುಸಿದುಹೋಗಿ ಕೊರೆತದಂತೆ ಕಂಡು ನಿರಾಸೆ ಹುಟ್ಟಿಸುತ್ತವೆ. 
ಸಿನೆಮಾ ಪ್ರಾರಂಭವಾಗುವುದೇ ಅಂತಹ ಒಂದು ಸಮಸ್ಯೆಯಿಂದ. ವಿದೇಶಗಳಲ್ಲಿ (ಅದರಲ್ಲಿಯೂ ಆಸ್ಟ್ರೇಲಿಯಾದಲ್ಲಿ ಭಾರತೀಯರ ವಿರುದ್ಧ) ಜ್ವಲಂತವಾಗಿರುವ ಜನಾಂಗೀಯ ನಿಂದನೆಯನ್ನು, ನೈಜತೆಯಿಂದ ಎಷ್ಟು ದೂರಕ್ಕೆ ಕೊಂಡುಹೋಗಿ ಕಟ್ಟಿಕೊಡಬಹುದೇ ಅಷ್ಟರ ಮಟ್ಟಿಗೆ ಅದನ್ನು ಪೆಚ್ಚಾಗಿ ಮೂಡಿಸಲಾಗಿದೆ. ಒಂದು ವಿಷಯವನ್ನು ಜನಪ್ರಿಯ ಮಾದರಿಯಲ್ಲಿ ಕಟ್ಟಿಕೊಡುವುದು ಒಂದು, ಆದರೆ ಹಿರೋಯಿಸಂ ಮಾತ್ರ ಉತ್ಪ್ರೇಕ್ಷಿಸಲು ಅದನ್ನು ಕಳಪೆ ಮಾದರಿಯಲ್ಲಿ ಕಟ್ಟಿಕೊಡುವುದು ಮತ್ತೊಂದು. ಪ್ರೇಕ್ಷಕರ ಬುದ್ದಿವಂತಿಕೆಯನ್ನು ಅಣಕಿಸದಿರಲು ಇವುಗಳ ನಡುವಿನ ತೆಳುಗೆರೆಯನ್ನು ಅರ್ಥಮಾಡಿಕೊಳ್ಳುವುದು ಬಹುಮುಖ್ಯ. 
ಹೀರೊ ಫೈಟ್, ನಂತರ ಹಾಡು-ನೃತ್ಯ, ಮತ್ತೆ ನಾಯಕನಟಿಯ ಆಗಮನ ಹೀಗೆ ಸಿದ್ಧ ಮಾದರಿಯನ್ನು ಚಾಚು ತಪ್ಪದೆ ಅನುಸರಿಸುವ ಈ ಸಿನೆಮಾ ಸಾಕಷ್ಟು ವಿಷಯಗಳನ್ನು ತುರುಕುವ ತವಕದಲ್ಲಿ ಯಾವುದನ್ನು ನಿಖರವಾಗಿ-ಆಪ್ತವಾಗಿ ಕಟ್ಟಿಕೊಡುವುದಿಲ್ಲ. ಮೊದಲಾರ್ಧಕ್ಕೆ ಒಂದು ಪೂರ್ತಿ ಸಿನೆಮಾವನ್ನು ತ್ರಾಸದಾಯಕವಾಗಿ ಮುಗಿಸಿದ ಅನುಭವ ಪ್ರೇಕ್ಷಕನದ್ದಾದರೆ, ದ್ವಿತೀಯಾರ್ಧಕ್ಕೆ ಬಾಲ್ಯದ ಜೀವನ ನೆನೆದು ತಾಯ್ನಾಡಿಗೆ ಹಿಂದಿರುಗುವ ಹೀರೋಗೆ ಬೆಟ್ಟದಷ್ಟು ಸಮಸ್ಯೆಗಳು ಎದುರಾಗುತ್ತವೆ. 
ವೃದ್ಧಾಶ್ರಮದ ತೊಂದರೆಗಳು, ರಾಜಕೀಯ ಪಿತೂರಿ, ವೈಯಕ್ತಿಕ ನೋವಿನಿಂದ ಹೊರಬರಬೇಕಾದ ಸಂಗತಿ - ಹೀಗೆ ಮತ್ತೆ ಆಶಯದಲ್ಲಿ ಮಹತ್ವಾಕಾಂಕ್ಷೆ ಇದ್ದರೂ, ಯಾವುವು ಸಾವಯವವಾಗಿ ಮೂಡದೇ ಇವೆಲ್ಲವಕ್ಕೂ ಖಾಜಿ ನ್ಯಾಯವಷ್ಟೇ ಸಲ್ಲಿಸಲು ನಿರ್ದೇಶಕರಿಗೆ ಸಾಧ್ಯವಾಗಿದೆ. ಆರೋಗ್ಯ ಮಂತ್ರಿಯಾಗಲು ಜಗನ್ನಾಥ್ (ಪ್ರಕಾಶ್ ರಾಜ್) ಪೋಲಿಯೋ ಲಸಿಕೆಯಲ್ಲಿ ವಿಷಪೂರಿತ ಅಂಶ ಸೇರಿಸಿ ಪಿತೂರಿ ನಡೆಸುವ ಕಾಲ್ಪನಿಕ ಕಥೆಯ ಎಳೆ ಬಹಳ ಪೊಳ್ಳಾಗಿ ಮೂಡಿ ಬಂದಿದೆ. ವೃದ್ಧಾಶ್ರಮದಲ್ಲಿ ಸೇರಿಕೊಳ್ಳುವ ಹಿರಿಯ ಜೀವಿಗಳ ಕಥೆಗಳನ್ನು ಕರುಣೆ-ಅನುಕಂಪಗಳಿಂದ ಕಟ್ಟಿಕೊಟ್ಟಿದ್ದರೂ, ಅವುಗಳಲ್ಲೂ ಕೃತಕತೆ ಸೇರಿಕೊಂಡು ಅಥವಾ ಸರ್ವಶಕ್ತ ಹೀರೊ ಎಲ್ಲವನ್ನು ಪರಿಹರಿಸಲು ಅನುವಾಗುವಂತೆ ಅತೀವ ಭಾವಕೃತ್ರಿಮತೆಗೆ ಎಡೆಮಾಡಿಕೊಟ್ಟು ಇಲ್ಲಿಯೂ ನಿರಾಶೆ ಮೂಡಿಸುತ್ತಾರೆ. ದತ್ತಣ್ಣ, ಅನಂತನಾಗ್, ಭಾರ್ಗವಿ ನಾರಾಯಣ್, ಅಶೋಕ್ ಹೀಗೆ ಹಿರಿಯ ನಟರ ತಾರಾ ದಂಡನ್ನೇ ವೃದ್ಧಾಶ್ರಮದ ಸದಸ್ಯರ ಪಾತ್ರಗಳನ್ನಾಗಿಸಿ ಎಲ್ಲರ ಕಥೆಗಳನ್ನು ಹೇಳುವ ನಿರ್ದೇಶಕರ ತಂತ್ರ, ಮತ್ತೆ ಪರಿಣಾಮಕಾರಿಯೆನ್ನಿಸುವುದಿಲ್ಲ. ಪೋಷಕರನ್ನು ಮಕ್ಕಳು ಮನೆಯಲ್ಲಿ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದನ್ನು ಬೋಧನೆಯ ದೃಷ್ಟಿಯಿಂದಷ್ಟೇ ಜನರಿಗೆ ಸಾಮಾಜಿಕ ಸಂದೇಶವನ್ನಾಗಿ ನೀಡಲು ನಿರ್ದೇಶಕ ಮುಂದಾಗಿದ್ದಾರೆ. 
ನಿರೂಪಣೆಯ ದೃಷ್ಟಿಯಿಂದಲೂ ಸಿನೆಮಾ ಪ್ರೇಕ್ಷಕನಿಗೆ ಕುತೂಹಲಕಾರಿ ಎನ್ನಿಸುವುದಿಲ್ಲ. ಎಲ್ಲವನ್ನು ಸುವಿವರವಾಗಿ, ಬಿಡಿಸಿ ಬಿಡಿಸಿ ಹೇಳುವ ಕಥೆ, ತುಂಬಾ ಎಳೆಯಲಾಯಿತೇ ಎಂಬ ಭಾವ ಉಳಿದುಕೊಳ್ಳುವಂತೆ ಮಾಡುತ್ತದೆ. ರಂಗಾಯಣ ರಘು, ಸಾಧುಕೋಕಿಲಾ, ಚಿಕ್ಕಣ್ಣ ಮುಂತಾದ ಹಾಸ್ಯನಟರ ಟ್ರ್ಯಾಕ್ ಗಳು ಕೂಡ ಮೂಲ ಕಥೆಗೆ ಹೆಚ್ಚೇನೂ ಮೌಲ್ಯವನ್ನು ತುಂಬದೇ ಕೆಲವೊಮ್ಮೆ ನಗಿಸಲು ಸಾಧ್ಯವಾಗಿಸಿದರೆ, ಮತ್ತೆ ಕೆಲವೊಮ್ಮೆ ಸಿಟ್ಟಿಗೇರಿಸುತ್ತವೆ. ವೃದ್ಧಾಶ್ರಮದ ಸದಸ್ಯರನ್ನು ಗೋವಾಗೆ ಕರೆದೊಯ್ದು, ಮೋಜು ಮಸ್ತಿ ಮಾಡಿಸುವ 'ಹಾಸ್ಯದ ಟ್ರ್ಯಾಕ್' ಕೂಡ ಅನಾವಶ್ಯಕವಾಗಿ ಮೂಡಿ ಬಂದಂತೆ ಭಾಸವಾಗುತ್ತದೆ. ಇತ್ತ ನಾಯಕ-ನಾಯಕಿಯ ರೋಮ್ಯಾನ್ಸ್ ಕಥೆಯ ಎಳೆಯಲ್ಲಿಯೂ ಯಾವುದೇ ತಾಜಾತನ ಇಲ್ಲ. 
ಸಂಭಾಷಣೆಯಲ್ಲಿ ಕೂಡ ಮಾಂತ್ರಿಕತೆ ಮೂಡಿಸಲು ಸಾಧ್ಯವಾಗಿಲ್ಲ. ನಾಯಕ ನಟನ ಸುತ್ತ ಸುತ್ತುವ ಬಹುತೇಕ ಸಂಭಾಷಣೆ ಅವರ ವ್ಯಯಕ್ತಿಕ ಜೀವನವನ್ನೂ, ಅವರ ಹಿಂದಿನ ಸಿನೆಮಾಗಳನ್ನೂ, ಮತ್ತೇನನ್ನೋ ಹೊಗಳುವುದಕ್ಕಾಗಿಯೇ (ಪವರ್ರು, ಸದಾಶಿವನಗರದವರು, ೧೦ ನೇ ವಯಸ್ಸಿಗೆ ಪ್ರಶಸ್ತಿ ಪಡೆದವರು, ಬೆಟ್ಟದ ಹೂವು ಹೀಗೆ)  ಬರೆದಿರುವುದು ಅವರ ಅಭಿಮಾನಿಗಳಿಗೆ ಮುದ ನೀಡಬಲ್ಲದ್ದಾಗಿದ್ದರು, ಗಂಭೀರ ಸಿನೆಮಾ ಪ್ರೇಕ್ಷಕನಿಗೆ ಬೇಸರ ತರಿಸುತ್ತದೆ. ಇವುಗಳನ್ನು ಹೊರತುಪಡಿಸಿದರೆ ಬೋಧನೆಯ ದಾಟಿಗೆ ಸಂಭಾಷಣೆ ಹೆಚ್ಚೆಚ್ಚಾಗಿ ಹೊರಳಿಬಿಡುತ್ತದೆ. ಇವುಗಳ ಮಧ್ಯೆ ಪುನೀತ್ ರಾಜಕುಮಾರ್ ಅವರ ಸಂಯಮದ ನಟನೆ, ಅತ್ಯುತ್ತಮ ನೃತ್ಯ ಮತ್ತು ಅವರ ಎಂದಿನ ಶೈಲಿಯ ಆಕ್ಷನ್ ದೃಶ್ಯಗಳು ಮಾತ್ರ ಸಿನೆಮಾದಲ್ಲಿ ಒಂದಷ್ಟು ಮುದ ನೀಡಬಲ್ಲವು ಮತ್ತು ಅವರ ಅಭಿಮಾನಿಗಳಿಗೆ ಹರ್ಷ ತರಬಲ್ಲವು. ನಟಿ ಪ್ರಿಯಾ ಆನಂದ್ ಅವರ ಪಾತ್ರದಲ್ಲಿ ಅಂತಹ ಸತ್ವವೇನು ಇಲ್ಲ. ಉಳಿದ ತಾರಾಗಣದ ನಟನೆ ಅಚ್ಚುಕಟ್ಟಾಗಿದೆ. 
ಆಸ್ಟ್ರೇಲಿಯಾದ ಮನಮೋಹಕ ಪರಿಸರವನ್ನು ಮೊದಲಾರ್ಧದಲ್ಲಿ ಸೆರೆ ಹಿಡಿಯುವ ಛಾಯಾಗ್ರಹಣ, ದ್ವಿತೀಯಾರ್ಧದಲ್ಲಿ ವೇಗವಾಗಿ ಚಲಿಸುವ ಕಥೆಯನ್ನು (ಉಪಕಥೆಗಳನ್ನು), ಆಕ್ಷನ್ ದೃಶ್ಯಗಳನ್ನು ಸೆರೆಹಿಡಿದು ಸಿನೆಮಾಗೆ ಪೂರಕವಾಗಿ ಸಹಕರಿಸಿದೆ. ಹರಿಕೃಷ್ಣ ಸಂಗೀತದಲ್ಲಿ ಮೂಡಿರುವ ಒಂದೆರಡು ಹಾಡುಗಳು ಮುದ ನೀಡಬಲ್ಲವು. ಆದರೆ ಕೆಲವು ಹಾಡುಗಳಲ್ಲಿನ ಸಾಹಿತ್ಯದಲ್ಲಿ ಅನಗತ್ಯವಾಗಿ ಬಳಸುವ ಅನ್ಯಭಾಷೆಯ ಪದಗಳು ಕಿರಿಕಿರಿ ಉಂಟುಮಾಡುತ್ತವೆ (ಹೀರೋನ ಪರಿಚಯಾತ್ಮಕ ಹಾಡು - 'ಯಾರಿವನು ಲೋಡೆಡ್ ಗನ್ನು' ಎಂಬಿತ್ಯಾದಿ). 
ತಾವೇ ಬರೆದು ನಿರ್ದೇಶಿಸಿರುವ ಸಂತೋಷ್ ಆನಂದರಾಮ್ ಹಿಂದಿನ ಸಿನೆಮಾದಲ್ಲಿ ಮೂಡಿಸಿದ್ದ ಒಂದು ಆಹ್ಲಾದಕಾರಿ ಮೂಡ್ ಅನ್ನು ಇಲ್ಲಿ ಮತ್ತೆ ಸೃಷ್ಟಿಸಲು ಸೋತಿದ್ದಾರೆ. ಕಸ್ತೂರಿ ನಿವಾಸವನ್ನು, ಅದರ ಹಾಡನ್ನು (ಟ್ಯೂನ್) ಪದೇ ಪದೇ ಎಳೆದುತಂದರೂ, ಪ್ರೇಕ್ಷಕರನ್ನು ಆ ಲೋಕಕ್ಕೆ ಎಳೆದೊಯ್ಯಲು ಸಫಲರಾದಂತೆ ಕಾಣುವುದಿಲ್ಲ. ಕಥೆಯ ಹರವನ್ನು ತಗ್ಗಿಸಿಕೊಂಡು, ಇನ್ನಷ್ಟು ವಿವರಗಳಿಂದ, ಅತಿಯಾದ ಹೀರೊ ವಿಜೃಂಭಣೆಯನ್ನು ಇಳಿಸಿ ಸ್ಕ್ರಿಪ್ಟ್ ಹಂತದಲ್ಲಿ ಇನ್ನಷ್ಟು ಕೆಲಸ ಮಾಡಿದ್ದರೆ ಸಿನೆಮಾ ಇನ್ನಷ್ಟು ಆಪ್ತವಾಗುತ್ತಿತ್ತೇನೆ. ಪುನೀತ್ ಅವರ ನೃತ್ಯ ಮತ್ತು ಆಕ್ಷನ್ ದೃಶ್ಯಗಳಿಗಾಗಿ, ಅವರ ಅಭಿಮಾನಿಗಳ ನಡುವೆ ಸಂಭ್ರಮಿಸಬಹುದಾದ ಸಿನೆಮಾ ನೀಡಿ ನಿರ್ದೇಶಕ ಕೈತೊಳೆದುಕೊಂಡಿದ್ದಾರೆ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com