ದಕ್ಷಿಣ ಭಾರತೀಯರನ್ನು ಚಂದಗಾಣಿಸುವ ಯತ್ನದಲ್ಲಿ ಕರಣ್ ಜೋಹರ್ ಸಿನಿಮಾ ಯಶಸ್ವಿ: ಮೀನಾಕ್ಷಿ ಸುಂದರೇಶ್ವರ್ ಚಿತ್ರವಿಮರ್ಶೆ

ಸೌತ್ ಇಂಡಿಯನ್ ಎಂದ ಕೂಡಲೆ ಹೊರಗಿನವರಿಗೆ ಯಾವೆಲ್ಲಾ ವಸ್ತುಗಳು, ಸಂಗತಿಗಳು ನೆನಪಾಗುವವೋ ಅವೆಲ್ಲವೂ ಈ ಸಿನಿಮಾದಲ್ಲಿ ಅಡಕ. ಬಾಗಿಲ ತೋರಣ, ತೆಂಗಿನ ಕಾಯಿ, ಇಡ್ಲಿ ಸಾಂಬಾರ್, ತೊಟ್ಟಿ ಮನೆ, ಅಟ್ಟ, ರಜಿನಿಕಾಂತ್, ಜಿಗರ್ಥಂಡ ಪೇಯ, ಪಾಯಸಂ, ರೇಷಿಮೆ ಸೀರೆ, ಫಿಲ್ಟರ್ ಕಾಫಿ. You name it. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಮದುವೆ ಫೋಟೊ ಶೂಟಿನಂತೆ ಕಂಗೊಳಿಸುತ್ತದೆ.
ಸಿನಿಮಾ ಸ್ಟಿಲ್
ಸಿನಿಮಾ ಸ್ಟಿಲ್

ವಿಮರ್ಶೆ: ಹರ್ಷವರ್ಧನ್ ಸುಳ್ಯ

ಕೆಲ ಸಮಯದ ಹಿಂದೆ ದಿ ಫ್ಯಾಮಿಲಿ ಮ್ಯಾನ್ ಧಾರಾವಾಹಿ ಸರಣಿಯ ಎರಡನೇ ಸೀಸನ್ ಅಮೆಜಾನ್ ಪ್ರೈಮ್ ನಲ್ಲಿ ತೆರೆಕಂಡಿದ್ದು ನೆನಪಿರಬಹುದು. ನೆನಪಿರಲೇ ಬೇಕು ಏಕೆಂದರೆ ಪ್ರಾರಂಭದಲ್ಲಿ ಧಾರಾವಾಹಿ ಸರಣಿ ಎರಡು ಕಾರಣಗಳಿಗೆ ಸುದ್ದಿಯಾಗಿತ್ತು. ಒಂದು, ಧಾರಾವಾಹಿ ಸರಣಿಯ brillianceಗೆ, ಮತ್ತೊಂದು ಅದರಲ್ಲಿ ಚೆನ್ನೈಯನ್ನೂ ತಮಿಳರನ್ನೂ ಬಿಂಬಿಸಲಾದ ರೀತಿಗೆ. ತಮಿಳರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುವ ಆರೋಪ ತಲೆಗೂದಲು ಪರ್ರೆಂದು ಉರಿದಂತೆ ತಮಿಳುನಾಡಿನಾದ್ಯಂತ ಹರಡಿ ರಾಜಕೀಯ ಪಕ್ಷಗಳು ಮತ್ತು ತಮಿಳು ಸಂಘಟನೆಗಳು ದಿ ಫ್ಯಾಮಿಲಿ ಮ್ಯಾನ್ ಧಾರಾವಾಹಿ ಸರಣಿಗೆ ನಿರ್ಬಂಧ ಹೇರಬೇಕಾಗಿ ಪ್ರತಿಭಟನೆಗಳನ್ನು ನಡೆಸಿದವು. ಮೀನಾಕ್ಷಿ ಸುಂದರೇಶ್ವರ್ ಸಿನಿಮಾಗೂ ಈ ಘಟನೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜವೇ. ಸಂಬಂಧ ಇದೆ. 

ಯಾವ ಕಾರಣಕ್ಕಾಗಿ ದಿ ಫ್ಯಾಮಿಲಿ ಮ್ಯಾನ್ ಧಾರಾವಾಹಿ ಸರಣಿಯನ್ನು ನಿರ್ಬಂಧಿಸಲು ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವೋ ಅದೇ ವಿಚಾರದಲ್ಲಿ ಮೀನಾಕ್ಷಿ ಸುಂದರೇಶ್ವರ್ ಸಿಕ್ಸರ್ ಬಾರಿಸಿದೆ. ಮದುರೈ ನಗರವನ್ನು ಇದಕ್ಕಿಂತ ಹೆಚ್ಚು ಸುಂದರವಾಗಿ ತೋರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮೀನಾಕ್ಷಿ ಸುಂದರೇಶ್ವರ್ ತೋರಿಸಿದೆ. ಕೆಲವೊಮ್ಮೆ ಇದು ಕನಸಿನಂತೆಯೂ ಭಾಸವಾಗುತ್ತದೆ. ಸೌತ್ ಇಂಡಿಯನ್ ಎಂದ ಕೂಡಲೆ ಹೊರಗಿನವರಿಗೆ ಯಾವೆಲ್ಲಾ ವಸ್ತುಗಳು, ಸಂಗತಿಗಳು ನೆನಪಾಗುವವೋ ಅವೆಲ್ಲವೂ ಈ ಸಿನಿಮಾದಲ್ಲಿ ಅಡಕ. ಬಾಗಿಲ ತೋರಣ, ತೆಂಗಿನ ಕಾಯಿ, ಇಡ್ಲಿ ಸಾಂಬಾರ್, ತೊಟ್ಟಿ ಮನೆ, ಅಟ್ಟ, ರಜಿನಿಕಾಂತ್ ಫ್ಯಾನ್ಸ್, ಜಿಗರ್ಥಂಡ ಪೇಯ, ಪಾಯಸಂ, ರೇಷಿಮೆ ಸೀರೆ, ಫಿಲ್ಟರ್ ಕಾಫಿ. You name it. ಆ ಲೆಕ್ಕದಲ್ಲಿ ನೋಡಿದರೆ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದಲ್ಲಿಯೂ ದಕ್ಷಿಣ ಭಾರತೀಯರ ಮನಗೆಲ್ಲುವ ಪ್ರಯತ್ನ ನಡೆದಿತ್ತು. ರೊಮ್ಯಾಂಟಿಕ್ ಸಿನಿಮಾಗಳಿಗೆ ಹೆಸರುವಾಸಿಯಾದ ಕರಣ್ ಜೋಹರ್ ಈ ಸೌತ್ ಇಂಡಿಯನ್ ರೊಮ್ಯಾಂಟಿಕ್ ಸಿನಿಮಾಗೆ ಹಣ ಹೂಡಿದ್ದಾರೆ.

'ಮೀನಾಕ್ಷಿ ಸುಂದರೇಶ್ವರ್' ಉತ್ತರ ಭಾರತೀಯರೇ ಜೊತೆಗೂಡಿ ನಿರ್ಮಾಣವಾದ ಚಿತ್ರ ಎನ್ನುವುದು ಅಚ್ಚರಿ. ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ವಿವೇಕ್ ಸೋನಿ, ನಾಯಕ ಅಭಿಮನ್ಯು ದಾಸಾನಿ, ನಾಯಕಿ ಸಾನ್ಯಾ ಮಲ್ಹೋತ್ರಾ, ಪೂರ್ಣೇಂದು ಭಟ್ಟಾಚಾರ್ಯ, ಕಥೆಗಾರ ಅರ್ಶ್ ವೋರಾ, ಸಿನಿಮೆಟೊಗ್ರಾಫರ್ ದೆಬೊಜಿತ್ ರೇ, ಕಾಸ್ಟ್ಯೂಮ್ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸಿರುವ ಪ್ರಮುಖರೆಲ್ಲರೂ ಉತ್ತರಭಾರತೀಯರು. ಬಹಳ ಅಚ್ಚುಕಟ್ಟಾಗಿ ಅವರು ದಕ್ಷಿಣಭಾರತವನ್ನು, ಅದರಲ್ಲೂ ತಮಿಳುನಾಡನ್ನು ತೆರೆ ಮೇಲೆ ಬಿಂಬಿಸಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಮದುವೆ ಫೋಟೊ ಶೂಟಿನಂತೆ ಕಂಗೊಳಿಸುತ್ತದೆ. ಅದಕ್ಕೇ ಈ ಸಿನಿಮಾ ಒಂದು ಸುಂದರ ಕನಸಿನಂತೆ ಭಾಸವಾಗುತ್ತದೆ ಎಂದು ಆಗಲೇ ಹೇಳಿದ್ದು!

ಸುಂದರೇಶ್ವರ್ ಎಂಜಿನಿಯರಿಂಗ್ ಮುಗಿಸಿ ಕೆಲಸ ಅರಸುತ್ತಿದ್ದ ಯುವಕ. ಮೀನಾಕ್ಷಿಯೂ ಬಿಬಿಎ ಮುಗಿಸಿ ಸಮಾಜಕ್ಕೆ ಸೇವೆ ಸಲ್ಲಿಸುವ ಘನೋದ್ದೇಶದ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾಳೆ. ಅವರಿಬ್ಬರೂ ಸೇರಬೇಕೆನ್ನುವುದು ದೇವರ ಇಚ್ಛೆ. ಅದರ ವಿರುದ್ಧ ಹೋಗುವುದು ದೇವರ ಇಚ್ಛೆಗೆ ವಿರುದ್ಧ ಹೋದಂತೆ ಎನ್ನುವುದು ಮೀನಾಕ್ಷಿ ತಾತನ ಉದ್ಘೋಷ. ಮೀನಾಕ್ಷಿ ಮತ್ತು ಸುಂದರೇಶ್ವರ್ ಅವರಿಬ್ಬರ ಬಿಗ್ ಫ್ಯಾಟ್ ವೆಡಿಂಗ್ ಮುಖಾಂತರ ಎರಡು ತಮಿಳು ಬ್ರಾಹ್ಮಣ ಕುಟುಂಬಗಳ ನಡುವೆ ಸಂಬಂಧ ಏರ್ಪಡುತ್ತದೆ. 

ಸುಂದರೇಶ್ವರ್ ಕುಟುಂಬ ಸೀರೆ ವ್ಯಾಪಾರಸ್ಥರ ಕುಟುಂಬ, ಆತನೂ ಸೀರೆ ವ್ಯಾಪಾರದಲ್ಲಿ ಕೈಜೋಡಿಸಬೇಕೆಂಬುದು ತಂದೆ ಆಸೆ. ಆತ ಮಿಲಿಟರಿ ಅಧಿಕಾರಿಯಷ್ಟೇ ಕಟ್ಟುನಿಟ್ಟು. ಮೀಸೆಯಡಿಯಿಂದ ಒಮ್ಮೆಯೂ ಒಂದು ನಗು ಕೂಡಾ ನುಸುಳದಷ್ಟು ಕಟ್ಟುನಿಟ್ಟು. ಸುಂದರೇಶ್ವರ್ ಗೆ ಒಬ್ಬ ಅಣ್ಣ ಅತ್ತಿಗೆಯೂ ಉಂಟು. ಮನೆಗೆ ಹೊಸದಾಗಿ ಕಾಲಿಡುವ ಹೆಣ್ಣಿನ ಅನುಕೂಲಕ್ಕೆ ತಕ್ಕಂತೆಯೇ ಅವರಿಬ್ಬರೂ. ಗುಲಗಂಜಿಯಷ್ಟೂ ದೋಷವಿಲ್ಲ. ಅದರ ಮೇಲೆ ಹಾಸ್ಯ ಸ್ವಭಾವ ಬೇರೆ. 7 ಮಂದಿಯ ತುಂಬು ಸಂಸಾರ. ಮನೆಯಲ್ಲಿ ಪತಿ, ಮಾವ, ಅತ್ತೆ, ಅತ್ತಿಗೆ ಭಾವ, ಅವರ ಮಗ, ಮತ್ತು ನಾದಿನಿ.

ಮೊದಲ ರಾತ್ರಿಯ ದಿನವೇ ಸುಂದರೇಶ್ವರ್ ಗೆ ಮಾರನೇ ದಿನ ನೌಕರಿ ಸಂದರ್ಶನ ಇರುವ ಸಂದೇಶ ಬರುತ್ತದೆ. ಮಾರನೇ ದಿನಕ್ಕೆ ಉಳಿದಿರುವುದು ಐದೇ ಗಂಟೆಗಳು. ಅದರಲ್ಲಿ ೨ ಗಂಟೆ ಮೀನಾಕ್ಷಿಗೆ, ಉಳಿದ ೩ ಗಂಟೆ ಸಂದರ್ಶನ ತಯಾರಿಗೆ ಮೀಸಲಿಡುತ್ತಾನೆ ಸುಂದರೇಶ್. ಆ ಮೂಲಕ ತಾನು ಒಬ್ಬ ಪಕ್ಕಾ ಸಾಫ್ಟ್ ವೇರ್ ಎಂಜಿನಿಯರ್ ಎನ್ನುವುದನ್ನು ನಿರೂಪಿಸುತ್ತಾನೆ. ಆ ಸಂದರ್ಶನದಲ್ಲಿ ಅವನು ಪಾಸಾಗುವುದಿಲ್ಲ. ಸೋತ ಮುಖದಿಂದ ಮನೆಗೆ ಮರಳುತ್ತಾನೆ. ಮೆಟ್ಟಿಲ ಮೇಲೆ ಇದಿರುಗೊಳ್ಳುವ ಮೀನಾಕ್ಷಿ ಅವನನ್ನು ಸಂತೈಸುತ್ತಾ ಅವನಿಗೆ ಬಂದ ಪತ್ರವನ್ನು ಕೈಗಿಡುತ್ತಾಳೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕಂಪನಿಯಲ್ಲಿ ಕೆಲಸ ಸಿಕ್ಕಿರುವ ಸಂದೇಶ ಅದರಲ್ಲಿರುತ್ತದೆ. 

ಪತ್ರ ಸಿಕ್ಕಿದ ಕೂಡಲೆ ಕೆಲಸಕ್ಕೆ ಹಾಜರಾಗಬೇಕೆಂದು ಅದರಲ್ಲಿ ಬರೆದಿರುತ್ತದೆ. ಪತ್ನಿಯೊಡನೆ ಜೊತೆಯಿರಬೇಕಾದ ಸಮಯದಲ್ಲಿ ಆಕೆಯನ್ನು ಬಿಟ್ಟುಹೋಗಬೇಕಾಗಿ ಬಂದುದಕ್ಕಾಗಿ ಸುಂದರೇಶ್ವರ್ ಚಡಪಡಿಸುತ್ತಾನೆ. ಮೀನಾಕ್ಷಿಯೇ ಅವನನ್ನು ಸಮಾಧಾನಿಸಿ ನೀವಂದುಕೊಂಡ ಹಾಗೆಯೇ ಒಳ್ಲೆಯ ಕೆಲಸ ಸಿಕ್ಕಿದೆ. ಮೊದಲು ನೀವು ಹೋಗಿ ನಂತರ ತಾನು ಕೂಡಿಕೊಳ್ಳುವುದಾಗಿ ಹೇಳಿ ಕಳಿಸಿಕೊಡುತ್ತಾಳೆ. ಬೆಂಗಳೂರಿಗೆ ಬಂದ ನಂತರ ಅವನಿಗೆ ಬರಸಿಡಿಲೆರಗಿದಂತೆ ಸುದ್ದಿಯೊಂದು ತಿಳಿದುಬರುತ್ತದೆ. ಆತ ಆ ಕೆಲಸದ ಸಂದರ್ಶನದ ಸಮಯದಲ್ಲಿ ಅವಿವಾಹಿತನಾಗಿರುತ್ತಾನೆ. ಉದ್ಯೋಗದಾತ ಸಂಸ್ಥೆ ಆತನನ್ನು ಕೆಲಸಕ್ಕೆ ಆರಿಸಿಕೊಂಡ ಕಾರಣಗಳಲ್ಲಿ ಅವಿವಾಹಿತ ಎನ್ನುವುದೂ ಸೇರಿರುತ್ತದೆ. ಹೀಗಾಗಿ ತಾನು ಮದುವೆಯಾಗಿರುವ ಸಂಗತಿಯನ್ನು ಕೆಲಸದ ಸ್ಥಳದಲ್ಲಿ ಮುಚ್ಚಿಡುತ್ತಾನೆ. ಅಲ್ಲಿಂದ ಪಜೀತಿ ಶುರು.

ಈ ಸಿನಿಮಾ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್, ನವ ವಿವಾಹಿತ ಸಂಪತಿಗಳ ನಡುವೆ ತಲೆದೋರುವ ಸಣ್ಣ ಪುಟ್ಟ ಮನಸ್ತಾಪಗಳು, ಬಿರುಕುಗಳನ್ನು ಮನಮುಟ್ಟುವಂತೆ ತೆರೆಮೇಲೆ ತರುತ್ತದೆ. ದಕ್ಷಿಣ ಭಾರತದಲ್ಲಿನ ಕುಟುಂಬ ವ್ಯವಸ್ಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಗದರುವ ಅಪ್ಪ, ಹೆದರುವ ಮಗ, ಸಾಧ್ವಿ ಅಮ್ಮ. ಅಟ್ ದಿ ಸೇಮ್ ಟೈಮ್ ಮೀನಾಕ್ಷಿಯನ್ನು ಸಂಪ್ರದಾಯಸ್ಥೆಯಾದರೂ ಈಗಿನ ಕಾಲದವಳಂತೆ ಬಿಂಬಿಸಲಾಗಿದೆ. ಮೀನಾಕ್ಷಿಗೆ ಒಬ್ಬ ಹಿರಿಯ ನೆಂಟರ ಮಹಿಳೆ ಅವಮಾನ ಮಾಡಿದಾಗ ಗೌರವ ಕೊಟ್ಟು ಗೌರವ ಪಡೆದುಕೊಳ್ಳಬೇಕು ಎಂದು ಹೇಳಿ ಆಕೆಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಆಚಾರ ವಿಚಾರಗಳಲ್ಲಿ, ಮನೆಯವರೊಂದಿಗೆ ಹೊಂದಿಕೊಳ್ಳುವುದರಲ್ಲಿ ಹಿಂದೆ ಬೀಳದ ಮೀನಾಕ್ಷಿ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ಬಂದಾಗ, ಅಗೌರವ ತೋರಿದಾಗ ತಾನು ಗಟ್ಟಿಗಳು ಕೂಡಾ ಎನ್ನುವುದನ್ನು ಸಾಬೀತುಪಡಿಸುತ್ತಾಳೆ.

ನಾಯಕಿ ಸಾನ್ಯಾ ಮಲ್ಹೋತ್ರಾ, ಅಪ್ಪಟ ರಜಿನಿ ಅಭಿಮಾನಿಯಾದ ದಕ್ಷಿಣಭಾರತೀಯ ಹೆಣ್ಣುಮಗಳಂತೆ ತೋರದೇ ಇದ್ದರೂ ಅಭಿನಯದ ವಿಚಾರಕ್ಕೆ ಬಂದಾಗ ಫುಲ್ ಮಾರ್ಕ್ಸ್ ಗಿಟ್ಟಿಸುತ್ತಾರೆ. ಆಕೆಯ ಪತಿ ಸುಂದರೇಶ್ವರ್ ಮಾತ್ರದಲ್ಲಿ ನಟಿಸಿರುವ ಅಭಿಮನ್ಯು ದಾಸಾನಿ ಈ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅವರು ಮೈನೆ ಪ್ಯಾರ್ ಕಿಯಾ ನಾಯಕಿ ಭಾಗ್ಯಶ್ರೀ ಪುತ್ರ ಎನ್ನುವುದು ವಿಶೇಷ. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಫೋಟೊ ಶೂಟಿನಂತೆ ಬಂದಿರುವುದರ ಶ್ರೇಯ ಸಿನಿಮೆಟೊಗ್ರಾಫರ್ ದೆಬೊಜಿತ್ ರೇ ಅವರೊಗೆ ಸಲ್ಲಬೇಕು. 

ಫೀಲ್ ಗುಡ್ ಸಿನಿಮಾಗಳ ಸಾಲಿಗೆ ಸೇರುವ ಮೀನಾಕ್ಷಿ ಸುಂದರೇಶ್ವರ್ ಸಿನಿಮಾ ನಿರ್ದೇಶನದ ಬಗ್ಗೆಯೂ ಚಕಾರ ಎತ್ತುವ ಹಾಗಿಲ್ಲ. ನಿರ್ದೇಶಕ ವಿವೇಕ್ ಸೋನಿ ಈ ಹಿಂದೆ ರಾ ಒನ್, ಉಡ್ತಾ ಪಂಜಾಬ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನು ಚಿತ್ರದ ಸಂಗೀತದ ಬಗ್ಗೆ ಪ್ರಸ್ತಾಪಿಸಲೇ ಬೇಕು. ಸುಮಧುರ ಸಂಗೀತ ನೀಡಿರುವ ಹೊಸ ಪ್ರತಿಭೆ ಜಸ್ಟಿನ್ ಪ್ರಭಾಕರನ್ ಸಂಗೀತ ಇಳಯರಾಜ, ಎ. ಆರ್ ರೆಹಮಾನ್ ರನ್ನು ನೆನಪಿಸುತ್ತಾರೆ. ಸಿನಿಮಾದ ಪ್ರಧಾನ ಟ್ಯೂನ್ ಪ್ರಾರಂಭದಿಂದ ಅಂತ್ಯದವರೆಗೂ ಕೇಳಿಬರುತ್ತದೆ. ಯಾಕಾದರೂ ಆ ಟ್ಯೂನ್ ಮುಗಿಯಿತೋ ಎಂದೆನಿಸುವಷ್ಟು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ, ನೆನಪಲ್ಲುಳಿಯುತ್ತದೆ. 

ಪತಿಯಿಂದ ದೂರ ಇರಬೇಕಾದ ನವವಿವಾಹಿತೆಯ ಅನಿವಾರ್ಯತೆ, ಕಾಲೇಜು ದಿನಗಳ ಸಮಯದಲ್ಲಿ ಇದ್ದಂತೆ ಮದುವೆ ನಂತರವೂ ಇರಬಹುದೇ ಎನ್ನುವ ಸಂಧಿಗ್ಧತೆ,  ಪುರುಷ ಗೆಳೆಯರೊಡನೆ ಸಂಪರ್ಕ ಇಟ್ಟುಕೊಳ್ಳಬೇಕೆ ಬೇಡವೆ ಎನ್ನುವ ಗಂಟಲ ಬಿಸಿತುಪ್ಪ ಇವೇ ಇತ್ಯಾದಿ ಬದಲಾದ ಕಾಲದ ತಾಪತ್ರಯಗಳನ್ನು ಸಿನಿಮಾ ಸೆರೆಹಿಡಿದಿದೆ. ಬೆಂಗಳೂರಿನಲ್ಲಿ ಐಟಿ ವೃತ್ತಿ ನಿರ್ವಹಿಸುತ್ತಿರುವವರ ಬದುಕಿನ ಇಣುಕು ನೋಟವನ್ನು ಸಿನಿಮಾ ನೀಡುತ್ತದೆ. ಯಾವ ವಿಧಿಯಿಂದಾಗಿ ಮೀನಾಕ್ಷಿ ಸುಂದರೇಶ್ವರ್ ವಿವಾಹ ಜರುಗಿತ್ತೋ ಅದೇ ವಿಧಿಯಾಟದಿಂದ ಅವರಿಬ್ಬರೂ ದೂರವಾಗುವ ಸನ್ನಿವೇಶ ಎದುರಾಗುತ್ತದೆ. ಅದನ್ನು ಮೆಟ್ಟಿ ನಿಲ್ಲುವರೇ? ಒಂದಾಗುವರೇ? ಬೇರ್ಪಡುವರೇ? ಸಿನಿಮಾ ನೋಡಿ. ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿದೆ.  ಸ್ಟೀರಿಯೊಟೈಪ್ ಅಂಶಗಳಿರುವ ಸಿನಿಮಾ ಅಂತನ್ನಿಸಿದರೂ ಒಂದೊಳ್ಳೆ ಫೀಲ್ ಗುಡ್ ಸಿನಿಮಾ ನೋಡಿದ ಅನುಭವ ನೀಡುತ್ತದೆ ಮೀನಾಕ್ಷಿ ಸುಂದರೇಶ್ವರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com