'ನೈಟ್ ಕರ್ಫ್ಯೂ' ಸಿನಿಮಾ ವಿಮರ್ಶೆ: ಕೊರೋನಾ ಸಾಂಕ್ರಾಮಿಕದ ಕರಾಳತೆ; ಹೊಸ ಬಾಟಲಿಯಲ್ಲಿ ಹಳೆಯ ವೈನ್; ಅನಾವಶ್ಯಕ ಫೈಟಿಂಗ್ ಸೀನ್!
Rating(2.5 / 5)
ಕೋವಿಡ್ ಸಾಂಕ್ರಾಮಿಕ ಸಮಯದ ಕೆಲವು ನಿರ್ಲಜ್ಜ ವ್ಯಕ್ತಿಗಳು ವೈಯಕ್ತಿಕ ಲಾಭಕ್ಕಾಗಿ ಪರಿಸ್ಥಿತಿಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತಿಳಿಸಲಾಗಿದೆ. ಮಾಲಾಶ್ರೀ ಪಂಚಿಂಗ್ ಡೈಲಾಗ್ಸ್ ಅವರ ಅಭಿಮಾನಿಗಳನ್ನು ರಂಜಿಸುತ್ತವೆ. ಉಳಿದಂತೆ ಸಿನಿಮಾ ಕಥೆಯಲ್ಲಿ ಕೆಲವೆಡೆ ಲಾಜಿಕ್ ಮಿಸ್ ಆಗಿದೆ.
ಜಗತ್ತು ಸಾಂಕ್ರಾಮಿಕ ರೋಗದಿಂದ ಬಸವಳಿದು ಸಹಜ ಸ್ಥಿತಿಗೆ ತಲುಪಿದ್ದರೂ ಸಿನಿಮಾ ನಿರ್ದೇಶಕರು ಮಾತ್ರ ಕರೋನಾ ಕಥೆಯ ಹಿಂದೆ ಸುತ್ತುವುದನ್ನು ಬಿಟ್ಟಿಲ್ಲ. ಸಾಂಕ್ರಾಮಿಕ ಕೊರೋನಾ ಸಂದರ್ಭದ ಹಲವು ಕಥೆಗಳು ಈಗಾಗಲೇ ಸಿನಿಮಾವಾಗಿ ಬಂದಿವೆ. ಈ ಪಟ್ಟಿಗೆ ಮತ್ತೊಂದು ಕೊರೋನಾ ಸಂಬಂಧಿತ ಸಿನಿಮಾ ನೈಟ್ ಕರ್ಪ್ಯೂ ಕೂಡ ಸೇರಿದೆ. ಹೊಸ ಬಾಟಲ್ ನಲ್ಲಿ ಹಳೇಯ ವೈನ್ ಸೇರಿಸಿದಂತಾಗಿದೆ.
ನೈಟ್ ಕರ್ಫ್ಯೂ ಸಿನಿಮಾ ತಡವಾಗಿ ಥಿಯೇಟರ್ ಗಳಿಗೆ ಎಂಟ್ರಿ ಕೊಟ್ಟಿದೆ, ಆದರೆ ಕೇವಲ ಕೋವಿಡ್ ಕಾಲದ ಸಮಸ್ಯೆಗಳನ್ನು ಮಾತ್ರವಲ್ಲದೆ ಅಪರಾಧ ಮತ್ತು ಸಾಮಾಜಿಕ ಶಾಂತಿಯ ಕುರಿತಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ. ನೈಜ ಘಟನೆಗಳನ್ನು ಸೇರಿಸಿಕೊಂಡು ವಿಭಿನ್ನ ರೀತಿ ಕತೆ ಮಾಡಿದ್ದಾರೆ ರವೀಂದ್ರ ವೆಂಶಿ.
ನಟಿ ಮಾಲಾಶ್ರೀ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸಿನಿಮಾದಲ್ಲಿ ಆಕೆ ವೈದ್ಯೆ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಆಕೆಯ ಪಾತ್ರ ಕೇವಲ ಸಾಂಪ್ರಾದಾಯಿಕ ವೈದ್ಯರ ಪಾತ್ರಕ್ಕಷ್ಟೇ ಸೀಮತವಾಗಿಲ್ಲ. ಸಿನಿಮಾ ಪ್ರೇಕ್ಷಕರನ್ನು ಕೋವಿಡ್ ಸಾಂಕ್ರಾಮಿಕ ರೋಗದ ಸಮಯಕ್ಕೆ ಕರೆದೊಯ್ಯುತ್ತದೆ. ಕೋವಿಡ್ ಉತ್ತುಂಗದಲ್ಲಿದ್ದ ಸಮಯದಲ್ಲಿ, ಆಸ್ಪತ್ರೆ ಸಿಗದೆ ಪರದಾಟ, ಚಿಕಿತ್ಸೆಗೆ ಹಾಸಿಗೆಯಿಲ್ಲದೆ ಒದ್ದಾಟ, ಸಾವು, ನೋವು, ಸತ್ತವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಲೂ ಸಾಧ್ಯವಾಗದೆ ಕುಟುಂಬಸ್ಥರ ನರಳಾಟ, ಇದೆಲ್ಲಾ ಸನ್ನಿವೇಶಗಳನ್ನಿಟ್ಟುಕೊಂಡು ಹೆಣೆದ ಚಿತ್ರ ‘ನೈಟ್ ಕರ್ಫ್ಯೂ’. ಈ ಹಿಂದೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ ವೈದ್ಯೆ ದುರ್ಗಾ (ಮಾಲಾಶ್ರೀ) ಆಸ್ಪತ್ರೆಯ ಜೀವನದ ಸವಾಲುಗಳನ್ನುಎದುರಿಸುತ್ತಾರೆ. ಪ್ರತಿ ದಿನ ಎದುರಾಗುವ ಒಂಟಿತನ ಮತ್ತು ಹತಾಶೆಯಲ್ಲಿಯೂ ಕೂಡ ದೃಢ ನಂಬಿಕೆಯೊಂದಿದ್ದಾರೆ ಏನು ಬೇಕಾದರೂ ನಡೆಯಬಹುದು ಎಂಬಲ ಅಚಲ ವಿಶ್ವಾಸ ದುರ್ಗಾಳದ್ದು.
ವೈದ್ಯೆ ದುರ್ಗಾ ಜೊತೆ ಡಾ. ವೇದಾ ಪಾತ್ರದಲ್ಲಿ ರಂಜಿನಿ ರಾಘವನ್ ನಟಿಸಿದ್ದಾರೆ. ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸ ಮಾಡುವ ವೇಳೆ ಇವರ ಆಸ್ಪತ್ರೆಗೆ ಮಹಿಳೆಯೊಬ್ಬರನ್ನು ಕರೆತರಲಾಗುತ್ತದೆ. ಆಕೆಯನ್ನು ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸುತ್ತಿರುವಾಗಲೇ ಆಕೆಯ ಜೀವ ಹೋಗಿರುತ್ತದೆ. ಇಲ್ಲಿಂದ ಚಿತ್ರದ ಕಥೆ ಪ್ರಾರಂಭವಾಗುತ್ತದೆ.
ಸತ್ತ ಮಹಿಳೆಯ ಸಂಬಂಧಿಯಾಗಿ ರಘುರಾಮ್ (ಪ್ರಮೋದ್ ಶೆಟ್ಟಿ) ಪ್ರವೇಶವಾಗುತ್ತದೆ. ಆಕೆಯ ಹೆಣ ಸುಡಲು ನಮಗೆ ಆಕೆ ಕೊರೋನಾದಿಂದ ಸತ್ತಿದ್ದು ಎಂಬ ಸರ್ಟಿಫಿಕೆಟ್ ಬೇಕು ಎಂದು ರಘುರಾಮ್ ವೈದ್ಯ ದುರ್ಗಾ ಬಳಿ ಬಳಿ ಪಟ್ಟುಹಿಡಿಯುತ್ತಾರೆ. ಆದರೆ ಆಕೆಯದ್ದು ಕೊಲೆ, ಕೊರೋನಾದಿಂದ ಸಂಭವಿಸಿದ ಸಾವಲ್ಲ ಎಂಬುದು ದುರ್ಗಾಗೆ ತಿಳಿದುಹೋಗುತ್ತದೆ. ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ಇದರ ನಡುವೆ ಮದ್ಯಕ್ಕಾಗಿ ಬಾರ್ ಗೆ ನುಗ್ಗುವ ಇಬ್ಬರು ಸ್ನೇಹಿತರಿಗೆ ಬಾರ್ ನಲ್ಲಿ ಸಮಸ್ಯೆಯೊಂದು ಎದುರಾಗುತ್ತದೆ. ಬಾರ್ ನಲ್ಲಿ ಬಾಟಲ್ ಕದಿಯುವ ವೇಳೆ ವ್ಯಕ್ತಿಯೊಬ್ಬನ ಮೇಲೆ ಎಡವಿ ಬೀಳುತ್ತಾರೆ, ನಂತರ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಯುತ್ತಾರೆ, ಆದರೆ ಕೆಲ ಸಮಯದ ನಂತರ ತಿಳಿಯುತ್ತದೆ ಆದ ಅಮಲಿನಲ್ಲಿ ಮಲಗಿದ್ದಾನೆಂದು. ಆಸ್ಪತ್ರೆಯಲ್ಲಿರುವ ಮಹಿಳೆಗೂ ಬಾರ್ ನಲ್ಲಿ ಕುಡಿದು ಮಲಗಿದ್ದ ವ್ಯಕ್ತಿಗೂ ಉಳಿದ ಕಥೆಯಲ್ಲಿ ಸಂಬಂಧ ರೂಪಿಸಲಾಗುತ್ತದೆ.
ಕೋವಿಡ್ ಸಾಂಕ್ರಾಮಿಕದಲ್ಲಿ ಕೆಲವು ಮಂದಿ ತಮ್ಮ ಲಾಭಕ್ಕಾಗಿ ಹೇಗೆ ಸಮಯವನ್ನು ದುರುಪಯೋಗ ಪಡಿಸಿಕೊಂಡರು, ಮಾನವೀಯ ಮೌಲ್ಯ ಹಾಗೂ ಸಂಬಂಧಗಳನ್ನು ಮರೆತು ಕೆಲವು ನಿರ್ಲಜ್ಜ ವ್ಯಕ್ತಿಗಳು ವೈಯಕ್ತಿಕ ಲಾಭಕ್ಕಾಗಿ ಪರಿಸ್ಥಿತಿಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ಬಹಿರಂಗಪಡಿಸುತ್ತದೆ.
ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀಯನ್ನೇ ಕೇಂದ್ರೀಕರಿಸಿ ಕತೆ ಬರೆಯಲಾಗಿದೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀಗಾಗಿಯೇ ಉದ್ದೇಶಪೂರ್ವಕವಾಗಿ ಫೈಟಿಂಗ್ ಸೀನ್ ಸೃಷ್ಟಿಸಲಾಗಿದೆ, ಆದರೆ ಈ ಕಥೆಗೆ ಇದು ಅನಾವಶ್ಯಕ ಎನಿಸುತ್ತದೆ. ಮಾಲಾಶ್ರೀ ಪಂಚಿಂಗ್ ಡೈಲಾಗ್ಸ್ ಅವರ ಅಭಿಮಾನಿಗಳನ್ನು ರಂಜಿಸುತ್ತವೆ. ಚಿತ್ರದಲ್ಲಿ ರಂಗಾಯಣ ರಘು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲಾ ಮಂಜು ಪಾವಗಡ ಹಾಸ್ಯ ದೃಶ್ಯಗಳು ಎಂದಿನಂತೆ ಪ್ರೇಕ್ಷಕರನ್ನು ರಂಜಿಸುತ್ತವೆ. ಇನ್ನೂ ಹಿನ್ನೆಲೆ ಸಂಗೀತ ಅಷ್ಟಾಗಿ ಗಮನ ಸೆಳೆಯುವುದಿಲ್ಲ, ಒಟ್ಟಾರೆ ನೈಟ್ ಕರ್ಫ್ಯೂ ಒಮ್ಮೆ ನೋಡಬಹುದಾದ ಸಿನಿಮಾ.
ಸಿನಿಮಾ: ನೈಟ್ ಕರ್ಫ್ಯೂ
ನಿರ್ದೇಶಕ: ರವೀಂದ್ರ ವೆಂಶಿ
ಕಲಾವಿದರು: ಮಾಲಾಶ್ರೀ, ರಂಜನಿ ರಾಘವನ್, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಮತ್ತು ರಂಗಾಯಣ ರಘು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ