'UI' movie review: ವಾಸ್ತವತೆಯ ಪ್ರತಿಬಿಂಬ ತೆರೆದಿಡುವ ಸಿನಿಮಾ; ಪ್ರಜಾಕೀಯದ ಜೊತೆ ಉಪ್ಪಿಯ ಆಧ್ಯಾತ್ಮ; 'ಬುದ್ಧಿವಂತ'ನ ಕ್ರಿಯೇಟಿವಿಟಿಗೆ Hats off!
Rating(3 / 5)
ಒಂಬತ್ತು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. 'ಯುಐ' ಚಿತ್ರವು ವಾಸ್ತವತೆಯ ಪ್ರತಿಬಿಂಬ ತೋರಿಸುವ ಪ್ರಯತ್ನವಾಗಿದೆ. ಚಿತ್ರದಲ್ಲಿ ಪ್ರಾಮುಖ್ಯತೆ ಪಡೆದಿರುವ ಗ್ರಾಫಿಕ್ಸ್ ಆಕರ್ಷಕವಾಗಿದೆ. ಚಿತ್ರದಲ್ಲಿ ಉಪೇಂದ್ರ ಅವರ ವಿಭಿನ್ನ ಶೈಲಿಯ ನಿರ್ದೇಶನವಿದೆ.
ಸಾಂಗ್ ಮತ್ತು ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದ ನಟ ಉಪೇಂದ್ರ ಅವರ ನಿರ್ದೇಶನದ ಯುಐ ಸಿನಿಮಾ ಬಿಡುಗಡೆಯಾಗಿದೆ. ಜಗತ್ತಿನ ವಾಸ್ತವತೆಯನ್ನು ಹೊಸ ದೃಷ್ಟಿಕೋನದಲ್ಲಿ ತೋರಿಸಲು ಪ್ರಯತ್ನಿಸಿರುವ ಉಪೇಂದ್ರ ಅವರ ಯುಐ ಸಿನಿಮಾ ಪ್ರೇಕ್ಷಕರಿಗೆ ಆಲೋಚನೆಗೆ ಆಹಾರ ನೀಡಿದೆ. ಒಂಬತ್ತು ವರ್ಷಗಳ ವಿರಾಮದ ನಂತರ, ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಸತ್ಯದ ಮೇಲೆ ಗಮನ ಕೇಂದ್ರೀಕರಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸುವ ಉಪೇಂದ್ರ ಅವರ ಥೀಮ್‌ನ ಮತ್ತೊಂದು ಸಿನಿಮಾವಾಗಿದೆ. ಯುಐ ಚಿತ್ರದಲ್ಲಿ ಕಲ್ಕಿಯ ಪೌರಾಣಿಕ ಕಥೆಗೆ ಮನೋವೈಜ್ಞಾನಿಕ ಟಚ್ ನೀಡಿದ್ದಾರೆ, ಉಪೇಂದ್ರ ನಿರ್ದೇಶನದ ಯುಐ ನಲ್ಲಿ ಒಂದು ಸ್ಪಷ್ಚ ಕಥೆಯಿಲ್ಲ, ಅಂದರೆ ಮದರ್ ನೇಚರ್, ಆಡಮ್ ಮತ್ತು ಈವ್ ಮತ್ತು ಬುದ್ಧ, ಹಪಾಹಪಿತನ, ಕಲ್ಕಿ ಅವತಾರ, ಸತ್ಯ ಯುಗ, ಸೋಶಿಯಲ್ ಮೀಡಿಯಾ, ಮಾಫಿಯಾವನ್ನು ಕೂಡ ಕಥಾವಸ್ತುವಾಗಿಸಿದ್ಜಾರೆ. ಕಟ್ಟುಕಥೆಗಳ ಬದಲು ನೈಜ ಜೀವನದ ಸಮಸ್ಯೆಗಳನ್ನೇ ಕಥೆಯಾಗಿಸಿ ‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.
‘ಯುಐ’ ಸಿನಿಮಾ ನೋಡಿ ವಿಮರ್ಶೆ ಬರೆಯಲು ಪರದಾಡುವ ವಿಮರ್ಶಕನಿಂದ ಕಥೆ ಆರಂಭವಾಗುತ್ತದೆ. ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ. ಮೂರ್ಖರಾಗಿದ್ದರೆ ಚಿತ್ರ ಪೂರ್ತಿ ನೋಡಿ’ ಎಂದಿದ್ದಾರೆ. ಚಿತ್ರದ ಆರಂಭದಲ್ಲಿ ಉಪೇಂದ್ರ ಎಂಬ ನಿರ್ದೇಶಕ ತೆಗೆದ ಚಿತ್ರ ಸಂಚಲನ ಮೂಡಿಸುತ್ತದೆ, ಜೊತೆಗೆ ವಿವಾದ ಸೃಷ್ಟಿಸುತ್ತದೆ. ‘ಯೂಐ ಮೂವಿ’ ಎಂಬ ಶೀರ್ಷಿಕೆಯ ಚಿತ್ರ ನೋಡಿದ ಜನರು ತಲೆ ಕೆಡಿಸಿಕೊಳ್ಳುತ್ತಾರೆ. ವಿಮರ್ಶಕ(ಮರುಳಿ ಶರ್ಮಾ) ಉಪೇಂದ್ರ ಅವರನ್ನು ಹುಡುಕಿಕೊಂಡು ಹೋದರೆ ಮನೆಯ ಬಳಿ ಉಪೇಂದ್ರ ಬರೆದು ಬಿಸಾಕಿದ ಒಂದು ಸ್ಕ್ರಿಪ್ಟ್ ಸಿಗುತ್ತದೆ. ಆ ಸ್ಕ್ರಿಪ್ಟ್ ಅವನ ಕಲ್ಪನೆಯಿಂದ ಸಿನಿಮಾ ಅನಾವರಣಗೊಳ್ಳುತ್ತದೆ. ಆಡಂ ಹಾಗೂ ಇವ್ ಸ್ಟೋರಿ ಮೂಲಕ ಶುರುವಾಗುವ ಕಥೆ ಮೋಹಕ್ಕೆ ಒಳಗಾದ ವ್ಯಕ್ತಿ ಮೋಹದ ಬೆನ್ನು ಹತ್ತಿ ಬಯಸಿದ್ದನ್ನು ಹೇಗೆ ಪಡೆಯುತ್ತಾನೆ, ಬಯಸಿದ್ದು ಸಿಕ್ಕಿದಾಗ ಹೇಗೆ ತನ್ನ ಆಲೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ ಎನ್ನುವುದನ್ನು ತೋರಿಸಲಾಗಿದೆ.
ಅದೊಂದು ವಿಚಿತ್ರ ಲೋಕ. ಮಿದುಳು ಹೊಂದಿರುವವರ ಲೋಕವದು ಎಂಬುದನ್ನು ಉಪೇಂದ್ರ ಸೂಚ್ಯವಾಗಿ ಹೇಳಿದ್ದಾರೆ. ಅಲ್ಲಿ ಸತ್ಯ ಮತ್ತು ಕಲ್ಕಿಯಾಗಿ ದ್ವಿಪಾತ್ರದಲ್ಲಿ ಉಪೇಂದ್ರ ಬರುತ್ತಾರೆ. ಕಲ್ಕಿ ಖಳನಟನಾಗಿ ಜಗತ್ತನ್ನು ಬದಲಿಸಲು ಹೊರಟವನಾದರೆ, ಸತ್ಯ ಬುದ್ಧನಾಗಿ ಜಗತ್ತನ್ನು ಕಟ್ಟಲು ಹೊರಟವನು. ಕಲ್ಕಿ ತನ್ನ ತಾಯಿಯನ್ನು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುತ್ತಾನೆ. ಈ ಕೆಲಸಕ್ಕೆ ಅಡ್ಡ ಬರದಂತೆ ತನ್ನ ಸ್ವಂತ ಸಹೋದರ ಸತ್ಯನನ್ನು ಕಟ್ಟಿಹಾಕುತ್ತಾನೆ ಕಲ್ಕಿ. ಸತ್ಯ ಹೊರಗೆ ಬಂದನಾ, ಕಲ್ಕಿ ಈ ನಡುವೆ ಏನು ಮಾಡಿದ. ವಿಮರ್ಶಕನಿಗೆ ಸಿಕ್ಕ ತೀರ್ಮಾನ ಏನು ಎಂಬುದನ್ನು ತಿಳಿಯಬೇಕಾದರೆ ಚಿತ್ರ ನೋಡಲೇಬೇಕು. ಸತ್ಯ ಮತ್ತು ಕಲ್ಕಿ ಜೋಡಿ ಅಲ್ಲಿನ ರಾಜನಾಗಿದ್ದ ರವಿಶಂಕರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು, ಅದರ ನಂತರದ ಆ ಸಾಮ್ರಾಜ್ಯವೇ ಒಟ್ಟಾರೆ ಚಿತ್ರಕಥೆ.ಆದರೆ ಕಟ್ಟಿಕೊಟ್ಟಿರುವ ಗ್ರಾಫಿಕ್ಸ್ ಲೋಕ ಮಾತ್ರ ಅದ್ಭುತವಾಗಿದೆ ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತದೆ.
ಸಿನಿಮಾದಲ್ಲಿ ಉಪೇಂದ್ರ ಎಂದಿನಂತೆ ಹೊಸತಾಗಿ ಕಾಣಿಸಿಕೊಂಡಿದ್ದಾರೆ. ಅವರ ಧ್ವನಿಯಿಂದ ಹಿಡಿದು ಗೆಟಪ್, ಲುಕ್ ಎಲ್ಲವನ್ನೂ ಬದಲಾಯಿಸಿದ್ದಾರೆ. ಉಪ್ಪಿ ಅಭಿಮಾನಿಗಳಿಗೆ ಬೇಸರ ತರಿಸದಂತೆ ಯುಐ ಸಿನಿಮಾವಿದೆ. ಚಿತ್ರದ ಪೂರ್ತಿ ಉಪೇಂದ್ರ ಮಾತ್ರ ಇದ್ದಾರೆ. ರವಿಶಂಕರ್, ಸಾಧುಕೋಕಿಲಾರಿಗೆ ಸ್ವಲ್ಪ ಸ್ಕ್ರೀನ್ ಸ್ಪೇಸ್ ದೊರಕಿದೆ. ನಾಯಕಿ ಪಾತ್ರ ಹಾಡು, ನೃತ್ಯಕ್ಕೆ ಸೀಮಿತವಾಗಿದೆ. ಗ್ರಾಫಿಕ್ಸ್ ಎಂದು ಗೊತ್ತಾಗದಷ್ಟು ಸೊಗಸಾಗಿ ಗ್ರಾಫಿಕ್ಸ್ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ತಕ್ಕಂತಿದೆ.
ಇನ್ನೂ ಉಪ್ಪಿಯ ಯುಐ ಸಿನಿಮಾ ಬಗ್ಗೆ ಹೇಳುವುದಾದರೇ ಚಿತ್ರದ ಆರಂಭದಲ್ಲಿ ಇರುವ ಉತ್ಸಾಹ ಕೊನೆಯವರೆಗೂ ಉಳಿಯುವುದು ಕಷ್ಟ.ಉಪೇಂದ್ರ ಅವರ 'ಶ್' ಮತ್ತು 'ಎ' ಸಿನಿಮಾಗಳಲ್ಲಿ ಒಂದು ವಿಚಾರ ಕಾಮನ್ ಆಗಿತ್ತು.ಸಿನಿಮಾದ ಒಳಗೆ ಒಂದು ಸಿನಿಮಾ. ಅದೇ ರೀತಿ ಪ್ರಯತ್ನ ಇಲ್ಲೂ ಆಗಿದೆ. ಇಲ್ಲೂ ಕೂಡ ಸಿನಿಮಾದೊಳಗೆ ಒಂದು ಸಿನಿಮಾ ನಡೆಯುತ್ತದೆ. ಪಕ್ಕಾ ಮನರಂಜನೆ ಸಿನಿಮಾ ನೋಡಲು ಥಿಯೇಟರ್‌ಗೆ ಬರುವವರಿಗೆ ತುಸು ತಲೆನೋವು ಬರಬಹುದು. ಸಿನಿಮಾಗೆ ಒಂದು ಸರಿಯಾದ ಅಂತ್ಯವೂ ಇಲ್ಲ. ಒಂದಷ್ಟು ವಿಷಯಗಳನ್ನು ಉಪದೇಶ ಎನಿಸದಂತೆ ರಂಜನೀಯವಾಗಿ ಹೇಳಬಹುದಿತ್ತೇನೋ ಎನಿಸುತ್ತದೆ. ಉಪೇಂದ್ರ ಅವರ ಡಿಫರೆಂಟ್ ಸ್ಟೈಲ್ ನಿರ್ದೇಶನವನ್ನು ನಿರೀಕ್ಷಿಸಿಕೊಂಡು ಹೋಗುವ ಜನರಿಗೆ ಸಿನಿಮಾ ಬೋರಾಗಲ್ಲ. ಆದರೆ ಸಿನಿಮಾದ ಕಥೆ ಕಂಪ್ಲೀಟ್ ಆಗಿ ಅರ್ಥ ಮಾಡ್ಕೊಳ್ಳೋದು ನಿಜಕ್ಕೂ ಇಲ್ಲಿರುವ ಸವಾಲು.
ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ಕಲಾವಿದರು:ಉಪೇಂದ್ರ, ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧುಕೋಕಿಲ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ