Ayogya 2 Movie Review: ಸಿದ್ದೇಗೌಡನ ಅಡ್ಡಾದಿಡ್ಡಿ ಕತೆ; ಪಂಚಾಯಿತಿ ರಾಜಕೀಯಕ್ಕೆ ಸ್ಟೇಟ್ ಪಾಲಿಟಿಕ್ಸ್ ಟಚ್; ಮ್ಯಾಜಿಕ್ ಮಾಡದ ಅರ್ಜುನ್ ಜನ್ಯ ಮ್ಯೂಸಿಕ್!

Ayogya 2 Movie still
ಅಯೋಗ್ಯ 2 ಸಿನಿಮಾ ಸ್ಟಿಲ್
Published on
Ayogya 2 Movie Rating(3.5 / 5)
Summary

‘ಅಯೋಗ್ಯ 2’ನಲ್ಲಿ ಮಾರಗೌಡನಹಳ್ಳಿಯ ಸಿದ್ದೇಗೌಡ ಗ್ರಾಮ ಪಂಚಾಯಿತಿ ಸದಸ್ಯನಿಂದ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಡುವ ಕಥೆ, ನಂದಿನಿಯ ಸರ್ಕಾರಿ ನೌಕರಿ ಕನಸು, ಬಚ್ಚೇಗೌಡನ ರಾಜಕೀಯ ಆಟ, ಬೈರೇಗೌಡನ ಎಂಟ್ರಿ ಎಲ್ಲವೂ ಸೇರಿ ಅಯೋಗ್ಯ 2 ಸಿನಿಮಾವಾಗಿದೆ. ಮೊದಲಾರ್ಧ ಲಯಬದ್ಧ, ದ್ವಿತೀಯಾರ್ಧ ಗೊಂದಲ. ಆ್ಯಕ್ಷನ್ ದೃಶ್ಯಗಳು ಭರ್ಜರಿ, ಆದರೆ ಸಂಗೀತ ನಿರಾಶೆ ಮೂಡಿಸುತ್ತದೆ.

ಹಳ್ಳಿಯ ರಾಜಕೀಯ, ಜಿದ್ದಾಜಿದ್ದಿನ ಹೋರಾಟ, ಗ್ರಾಮೀಣ ಸೊಗಡು, ಪ್ರೀತಿ, ಹಾಸ್ಯ, ರಾಜಕೀಯ ಹೋರಾಟದ ಕಥನ ಹೊಂದಿದ ಕುತೂಹಲಕಾರಿ ಚಿತ್ರ 'ಆಯೋಗ್ಯ -2' ತೆರೆಗೆ ಬಂದಿದೆ. ಮಹೇಶ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ.

ಎಸ್. ಮಹೇಶ್ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ‘ಅಯೋಗ್ಯ’ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಗಮನ ಸೆಳೆದಿತ್ತು. ಆಯೋಗ್ಯ ಚಿತ್ರದ ಮುಂದುವರಿದ ಭಾಗ ಆಯೋಗ್ಯ- 2. ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದ ಸಿದ್ದೇಗೌಡ, ಈಗ ಅಧ್ಯಕ್ಷರಾಗುವ ಕನಸು ಕಾಣುವ ಕತೆಯನ್ನು ಮುಂದುವರಿಸಲಾಗಿದೆ.

ಊರಿನ ಪ್ರಮುಖ ಹಾಗೂ ಪ್ರಭಾವಿಯಾದ ಬಚ್ಚೇಗೌಡನ (ರವಿಶಂಕರ್) ಎದುರು ಸಿದ್ಧೇಗೌಡ (ಸತೀಶ್ ನೀನಾಸಂ) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸುತ್ತಾನೆ ಮತ್ತು ಪ್ರೇಯಸಿ ನಂದಿನಿಯ (ರಚಿತಾ ರಾಮ್) ಜೊತೆಯಾಗುತ್ತಾನೆ. ಅಲ್ಲಿಗೆ 'ಅಯೋಗ್ಯ' ಮೊದಲ ಭಾಗ ಮುಕ್ತಾಯಗೊಂಡಿತ್ತು. ಎಲ್ಲಿಗೆ ಸಿನಿಮಾ ನಿಂತಿತ್ತೋ, ಅಲ್ಲಿಂದಲೇ ಪಾರ್ಟ್ 2 ಆರಂಭವಾಗಿದೆ. ಮೊದಲನೇ ಭಾಗವನ್ನು ನೋಡದೇ ಇರುವವರಿಗಾಗಿ ಇಲ್ಲಿ ಆರಂಭದಲ್ಲೇ ಆ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ.

ಸಿದ್ದೇಗೌಡ ಮಾರಗೌಡನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ. ನಂದಿನಿ ಸರ್ಕಾರಿ ನೌಕರಿ ಪಡೆದಿದ್ದಾಳೆ. ಆಕೆಗೆ ನೌಕರಿಗೆ ಹೋಗುವ ಇಚ್ಛೆ. ಸಿದ್ದೇಗೌಡನ ತಾಯಿಗೆ ಸೊಸೆ ಮನೆಯಲ್ಲೇ ಇರಬೇಕು ಹಾಗೂ ಮಗ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಬೇಕೆಂಬ ಆಸೆ. ಬಚ್ಚೇಗೌಡ ತನ್ನ ಬೆಂಬಲಿಗನನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಿದ್ದಾನೆ. ಸಿದ್ದೇಗೌಡ–ಬಚ್ಚೇಗೌಡನ ನಡುವೆ ಮುಂದುವರಿದ ರಾಜಕೀಯದ ಆಟವೇ ಎರಡನೇ ಭಾಗದ ಕಥೆ.

ಅಂದು ಗ್ರಾಮ ಪಂಚಾಯಿತಿ ಸದಸ್ಯನಾದ ಸಿದ್ಧೇಗೌಡ, ಸದ್ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾನೆ. ಇನ್ನೊಂದೆಡೆ ನಂದಿನಿಯ ಜೊತೆ ಮದುವೆಯಾದ ಮೇಲೆ ಮೊದಲ ರಾತ್ರಿಯ ಕನಸು ಕಾಣುತ್ತಿದ್ದಾನೆ. ಇವೆರಡೂ ಅಂಶಗಳ ಮೇಲೆಯೇ ಕಥೆ ಸಾಗುತ್ತದೆ. ನಂತರ ನಂದಿನಿಯ ಜೊತೆಗಿನ ಸಂಸಾರಕ್ಕಿಂತ ಪಂಚಾಯಿತಿ ಅಧ್ಯಕ್ಷಗಿರಿಯ ಮೇಲೆಯೇ ಹೆಚ್ಚು ಗಮನ ನೀಡುವ ಸಿದ್ಧೇಗೌಡ, ಮತ್ತೆ ಬಚ್ಚೇಗೌಡನ ಜೊತೆಗೆ ಮುಖಾಮುಖಿಯಾಗುತ್ತಾನೆ.

ಆದರೆ, ಗ್ರಾಮ ಪಂಚಾಯಿತಿ ಸದಸ್ಯನಾದಷ್ಟು ಸುಲಭವಾಗಿ ಅಧ್ಯಕ್ಷಗಿರಿ ಸಿದ್ಧೇಗೌಡನಿಗೆ ಒಲಿಯುವುದಿಲ್ಲ. ಸಿದ್ದೇಗೌಡ ಈಗ ಪಂಚಾಯ್ತಿ ಅಧ್ಯಕ್ಷನಾಗಲು ಗ್ರಾಮ ಪಂಚಾಯ್ತಿ ಸದಸ್ಯರನ್ನು ರೆಸಾರ್ಟ್‍ಗೆ ಶಿಪ್ಟ್ ಮಾಡುತ್ತಾನೆ. ಹಳ್ಳಿಯಲ್ಲಿ ರೆಸಾರ್ಟ್‌ ರಾಜಕೀಯ, ಹೆದ್ದಾರಿ ನೆಪದಲ್ಲಿ ಹಳ್ಳಿ ಜನರ ಎತ್ತಂಗಡಿ ವಿಷಯವನ್ನು ಪ್ರಧಾನವಾಗಿ ತೆಗೆದುಕೊಂಡು ಸ್ಟೇಟ್ ಪಾಲಿಟಿಕ್ಸ್ ಟಚ್ ನೀಡಲಾಗಿದೆ. ಸಿದ್ದೇಗೌಡ- ಬಚ್ಚೇಗೌಡನ ಜುಗಲ್ ಬಂಧಿಯ ಜೊತೆಗೆ ಬೈರೇಗೌಡನ ಎಂಟ್ರಿಯಾಗಿದೆ. ಈ ಬೈರೇಗೌಡ ಯಾರು.. ಆತನ ಹಿನ್ನೆಲೆ ಏನು ಎಂಬುದನ್ನು ತಿಳಿಯಬೇಕಾದರೆ ಆಯೋಗ್ಯ–2 ಚಿತ್ರದ ನೋಡಬೇಕು.

ಇನ್ನೂ ಪಾತ್ರಗಳ ಬಗ್ಗೆ ಹೇಳುವುದಾದರೆ ನೀನಾಸಂ ಸತೀಶ್ ಎಂದಿನಂತೆ ತಮ್ಮ ಲವಲವಿಕೆಯ ನಟನೆ ಮೂಲಕ ಗಮನ ಸೆಳೆದಿದ್ದಾರೆ, ನಂದಿನಿ ಪಾತ್ರಕ್ಕೆ ಸ್ಕೋಪ್ ಕಡಿಮೆಯಿದೆ. ರಚಿತಾ ರಾಮ್ ಅಲ್ಲಲ್ಲಿ ಕಾಣಿಸಿಕೊಂಡು, ಹಾಡಿಗೆ ಹೆಜ್ಜೆ ಹಾಕುವುದಕ್ಕಷ್ಟೇ ಸೀಮಿತವಾಗಿದ್ದಾರೆ.

ಮೊದಲ ಭಾಗದಲ್ಲಿ ಹೆಚ್ಚೇನೂ ಜವಾಬ್ದಾರಿ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿದ್ಧೇಗೌಡ, ಸದಸ್ಯನಾದ ಮೇಲೆಯೂ ಬದಲಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾದ ಮೇಲೆ ಆ ಪಾತ್ರವನ್ನು ಒಂಚೂರು ಹೊಣೆಗಾರಿಕೆಯಿಂದ ಬರೆಯಬಹುದಾದ ಅವಕಾಶ ನಿರ್ದೇಶಕರಿಗಿತ್ತು, ಆದರೆ ಮಿಸ್ ಆಗಿದೆ. ಮೊದಲಾರ್ಧದಲ್ಲಿ ಲಯಬದ್ಧವಾಗಿ ಸಾಗುವ ಕಥೆಯು, ದ್ವಿತೀಯಾರ್ಧದಲ್ಲಿ ಅಡ್ಡಾದಿಡ್ಡಿಯಾಗುತ್ತದೆ. ರವಿಚಂದ್ರನ್ ಅವರ ಅತಿಥಿ ಪಾತ್ರ ಕುತೂಹಲ ಹೆಚ್ಚಿಸುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಮೊದಲ ಭಾಗದಲ್ಲಿ ಹಾಡುಗಳ ಮೂಲಕವೇ ಗಮನ ಸೆಳೆದಿದ್ದ ಸಿನಿಮಾ, ಎರಡನೇ ಭಾಗದಲ್ಲಿ ಸಂಗೀತ ಸ್ವಲ್ಪ ನೀರಸವೆನಿಸುತ್ತದೆ. ಈ ಬಾರಿ ಅರ್ಜುನ್ ಜನ್ಯ ಅವರ ಸಂಗೀತ ಮ್ಯಾಜಿಕ್ ಮಾಡಿಲ್ಲ. ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಒಟ್ಟಾರೆ ಮನರಂಜನೆ ಇಷ್ಟ ಪಡುವ ಪ್ರೇಕ್ಷಕರು ಸಿನಿಮಾವನ್ನು ಒಮ್ಮೆ ನೋಡಬಹುದು.

Ayogya 2 Movie still
ಈ 'ಅಯೋಗ್ಯ'ನ ಬಗ್ಗೆ ಮಾತನಾಡೋದು ಬೇಡ: ಮುಂದಿನ ಚಿತ್ರದ ಕುರಿತು ಕೇಳಿದ್ದಕ್ಕೆ ಅಭಿಷೇಕ್ ಅಂಬರೀಶ್ ಉತ್ತರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com