Movie Review: ಬೇಲ್ ಸಿನಿಮಾದಲ್ಲಿ ಶಿವಣ್ಣ ಕೂಲ್; ನಿವೃತ್ತ ಪೊಲೀಸ್‌ ಆಯುಕ್ತನ ಪ್ರತೀಕಾರದ ಥ್ರಿಲ್; ಸೆಂಚುರಿ ಸ್ಟಾರ್ ಅಭಿಮಾನಿಗಳು ಚಿಲ್!

ಅಪರಾಧಿಗಳ ವಿರುದ್ಧದ ಹೋರಾಟ: 'ಬೇಲ್' ಚಿತ್ರದಲ್ಲಿ ಕಾನೂನಿನ ಲೋಪದೋಷಗಳ ಚಿತ್ರಣ
 A Still from bail cinema
ಬೇಲ್ ಸಿನಿಮಾ ಸ್ಟಿಲ್
Published on: 
ಬೇಲ್ ಸಿನಿಮಾ ರೇಟಿಂಗ್(3 / 5)
Summary

ಶಿವರಾಜ್ ಕುಮಾರ್ ಅವರ 'ಬೇಲ್' ಚಿತ್ರದಲ್ಲಿ ನಿವೃತ್ತ ಪೊಲೀಸ್ ಆಯುಕ್ತನಾಗಿ ಶಾಂತ, ಗಂಭೀರ ಅಭಿನಯ. ಮಗಳ ಸಾವಿಗೆ ನ್ಯಾಯ ಕೊಡಿಸಲು ಕಾನೂನನ್ನು ಕೈಗೆತ್ತಿಕೊಳ್ಳುವ ಕಥೆ ಪ್ರೇಕ್ಷಕರನ್ನು ಮನ ತಟ್ಟುತ್ತದೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಹೊಸ ಲುಕ್‌ನಲ್ಲಿ ಶಿವಣ್ಣನ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ.

ಸಿನಿಮಾ: ಬೇಲ್‌

ನಿರ್ದೇಶನ: ಪವನ್‌ ಒಡೆಯರ್‌

ಕಲಾವಿದರು: ಶಿವರಾಜ್‌ಕುಮಾರ್‌, ದೀಕ್ಷಿತ್ ಶೆಟ್ಟಿ, ಲೂಸ್ ಮಾದ ಯೋಗಿ, ಸಂಜನಾ ಆನಂದ್, ಜಯರಾಮ್‌, ಸಾಯಿಕುಮಾರ್‌ ಮುಂತಾದವರು

ಪವನ್ ಒಡೆಯರ್ ನಿರ್ದೇಶನದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಬೇಲ್ ಚಿತ್ರ ತೆರೆಕಂಡಿದ್ದು, ಶಿವಣ್ಣನ ಅಭಿಮಾನಿಗಳಿಗೆ ರಸದೌತಣ ಬಡಿಸಿದೆ. ಶಿವರಾಜ್ ಕುಮಾರ್ - ನಿರ್ದೇಶಕ ಪವನ್ ಒಡೆಯರ್ ಮೊದಲ ಬಾರಿಗೆ ಒಂದಾಗಿರುವ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಸಾಲ್ಟ್ & ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ‘ಬೇಲ್’ ಚಿತ್ರದಲ್ಲಿ ರಕ್ಷಕನೂ ಹೌದು, ರಾಕ್ಷಸನೂ ಹೌದು. ಹಾಗಂದ ಮಾತ್ರಕ್ಕೆ ಶಿವಣ್ಣ ಎಲ್ಲೂ ಅಬ್ಬರಿಸೋದಿಲ್ಲ. ವಯಸ್ಸಿಗೆ ತಕ್ಕನಾದ ಶಾಂತ, ಸಂಯಮ ಹಾಗೂ ಗಂಭೀರವಾದ ಅಭಿನಯ ನೀಡಿದ್ದಾರೆ ಶಿವಣ್ಣ. ಹೊಸ ಲುಕ್ ಮತ್ತು ಸ್ವಾಗ್‌ನಲ್ಲಿ ಶಿವಣ್ಣನ ನೋಡುವುದೇ ಚೆಂದ.

ವಿಜಯ್ ಕುಮಾರ್ (ಶಿವರಾಜ್ ಕುಮಾರ್) ನಿವೃತ್ತ ಐಪಿಎಸ್‌ ಅಧಿಕಾರಿ. ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಗಾಯವನ್ನೂ ಮಾಡಿಕೊಳ್ಳದೆ ರಿಟೈರ್‌ ಆಗುವವರು ಪೊಲೀಸ್ ಕಮಿಷನರ್‌. ಪಬ್ಲಿಕ್ ಲೈಫ್‌ನಲ್ಲಿ ಅಮ್ಮಾವ್ರ ಗಂಡ, ಮಿನಿಸ್ಟರ್ ಮಾವನಿಂದ ಪೋಸ್ಟ್ ಗಿಟ್ಟಿಸಿದವರು ಎಂಬ ಹೀಯಾಳಿಕೆ ವಿಜಯ್‌ ಕುಮಾರ್‌ಗೆ ಆಗಾಗ ಎದುರಾಗುತ್ತದೆ. 'ಬೇಲ್' ಚಿತ್ರದ ಆರಂಭದಲ್ಲಿ, ನಿವೃತ್ತ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ತಮ್ಮ ವಿದಾಯ ಭಾಷಣ ಮಾಡಲು ಎದ್ದು ನಿಂತು, ಮೈಕ್ ಮುಂದೆ ಏನೂ ಮಾತನಾಡಲಾಗದೆ ಸ್ತಬ್ಧರಾಗುವ ದೃಶ್ಯವೊಂದಿದೆ.

ಅಪಾಯಕಾರಿ ಅಪರಾಧಿಗಳ ಬೆನ್ನಟ್ಟುವ ಸಾಹಸಕ್ಕಾಗಲಿ, ಗುಂಡು ಹಾರಿಸುವ ಸನ್ನಿವೇಶಕ್ಕಾಗಲಿ ಅಥವಾ ಯಾವುದೇ ವಿವಾದಕ್ಕಾಗಲಿ ಎಂದೂ ಒಳಗಾಗದ ಆ ಅಧಿಕಾರಿಯನ್ನು ಗೌರವಿಸುತ್ತಾ ಅವರ ಸಹೋದ್ಯೋಗಿಗಳು ಆತ್ಮೀಯವಾಗಿ ನಗುತ್ತಾರೆ. ವಿಜಯ್ ತಮ್ಮ ಇಡೀ ವೃತ್ತಿಜೀವನವನ್ನು ಸುರಕ್ಷಿತ ಕಚೇರಿಯ ಕೆಲಸದಲ್ಲೇ ಕಳೆದವರು. ಆದರೂ, ಬೆಂಗಳೂರಿನಲ್ಲಿ ಸರಳ ಜೀವನ ನಡೆಸುತ್ತಿರುವ ಈ ಶಾಂತ ವ್ಯಕ್ತಿಯ ಮನಸ್ಸಿನಾಳದಲ್ಲಿ ತೀವ್ರವಾದ ನೋವಿರುತ್ತದೆ. 160 ಜನರ ಪ್ರಾಣ ಬಲಿ ಪಡೆದ 'ಸ್ವರಾಜ್ ಇಂಟರ್ನ್ಯಾಷನಲ್ ಹೋಟೆಲ್' ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಅವರ ಮಗಳು ಕೃತಿ ಸಾವನ್ನಪ್ಪಿರುತ್ತಾಳೆ.

ಕಥೆಯ ಮುಖ್ಯ ತಿರುವು ಆರಂಭವಾಗುವುದು ಇಲ್ಲಿಂದಲೇ. ಪೊಲೀಸರ ವೈಫಲ್ಯ ಮತ್ತು ಕಾನೂನಿನ ಲೋಪದೋಷಗಳಿಂದಾಗಿ, ಆ ಭಯೋತ್ಪಾದಕ ದಾಳಿಯ ರೂವಾರಿ ಸಾಜಿದ್ ಖುರೇಷಿ ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಾನೆ. ವ್ಯವಸ್ಥೆಯು ಹೀಗೆ ಸಂಪೂರ್ಣವಾಗಿ ವಿಫಲವಾದಾಗ, ಕಾನೂನು ಪಾಲಿಸುವ ವಿಜಯ್ ಅನಿವಾರ್ಯವಾಗಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ‘ಶಿಂಧೆ’ ಎಂಬ ಉದ್ಯಮಿಯ ಮಗ ‘ಬೇಲ್‌’ ಮೇಲೆ ಬಿಡುಗಡೆಯಾಗುತ್ತಾನೆ. ಆ ದಿನವೇ ವ್ಯಕ್ತಿಯೊಬ್ಬ ಆತನನ್ನು ದೂರದಿಂದ ಗುಂಡು ಹೊಡೆದು ಕೊಲ್ಲುತ್ತಾನೆ.

ಹೀಗೆ ಕಥೆ ತೆರೆದುಕೊಳ್ಳುತ್ತದೆ. ಇದರ ನಂತರದ ಕಥೆಯು ವೈಯಕ್ತಿಕ ಸೇಡಿನ ಕಥೆಯಾಗಿಯೂ ಮತ್ತು ಅಪರಾಧಿಗಳನ್ನು ರಕ್ಷಿಸಲು ಕಾನೂನನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸುವ ಕಥೆಯಾಗಿದೆ. ವ್ಯವಸ್ಥೆಯಲ್ಲಿನ ದೋಷಗಳಿಂದ ಘೋರ ಅಪರಾಧ ಮಾಡಿದ್ರೂ, ಬೇಲ್‌ ಮೇಲೆ ಆಚೆ ಬರುವ ಕ್ರಿಮಿನಲ್‌ಗಳ ವಿರುದ್ಧದ ಅಸಹನೆಯ ಕಥೆ ಇದೆ. ದೇಶದಲ್ಲಿ ಕಾನೂನು ಇದ್ದರೂ, ಸೂಕ್ತ ನ್ಯಾಯ ಸ್ಥಾಪಿಸಲು ಮುಂದಾಗುವ ಮೂರು ತ್ರಿಮೂರ್ತಿಗಳ ಕಥೆ ಇದೆ. ಅದೆಲ್ಲವನ್ನೂ ನೀವು ಚಿತ್ರಮಂದಿರದಲ್ಲೇ ನೋಡಬೇಕು.

ಸಿನಿಮಾ ಆರಂಭ ಬಹಳ ಕುತೂಹಲಕಾರಿಯಾಗಿ ಸಾಗುತ್ತದೆ. ಶಿವರಾಜ್‌ಕುಮಾರ್‌, ಜಯರಾಮ್‌ ಹಾಗೂ ಸಾಯಿಕುಮಾರ್‌ ಕಾಂಬಿನೇಷನ್‌ ಬಹಳ ಆಪ್ತವಾಗಿ, ಹಾಸ್ಯಭರಿತವಾಗಿದೆ. ಸಮಯ ಉರುಳಿದಂತೆ ಕಥೆಯ ದಾರಿ ಬದಲಾಗುತ್ತದೆ. ಇದು ಕಥೆಯನ್ನು ಬಿಡಿಬಿಡಿಯಾಗಿಸಿದೆ. ‘ಬೇಲ್‌’ನಲ್ಲಿ ನಾಯಕನ ಗುರಿ ಹತ್ತಾರು, ಅದೂ ಬೇರೆ ಬೇರೆ ರಾಜ್ಯಗಳಲ್ಲಿ. ಈ ಕಾರಣದಿಂದಾಗಿ ಕಥೆಯ ಮೂಲ ಸೂತ್ರ ಅಂತ್ಯದ ವೇಳೆಗೆ ಕಳೆದೇ ಹೋಗಿರುತ್ತದೆ.

‘ಬೇಲ್’ ಚಿತ್ರದಲ್ಲಿ ನಿವೃತ್ತಿ ಹೊಂದಿರುವ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಮಗಳನ್ನ ಕಳೆದುಕೊಂಡ ಅಸಹಾಯಕ ತಂದೆಯಾಗಿ, ಮಗಳ ಸಾವಿಗೆ ನ್ಯಾಯ ಕೊಡಿಸುವ ಧೈರ್ಯಶಾಲಿಯಾಗಿ, ದುಷ್ಟ ಸಂಹಾರ ಮಾಡುವ ಧೀರನಾಗಿ ವಿಜಯ್ ಪಾತ್ರಕ್ಕೆ ಶಿವಣ್ಣ ಜೀವ ತುಂಬಿದ್ದಾರೆ.

ಮೂವರು ದಿಗ್ಗಜರಿಗೂ ಸಂಭಾಷಣೆ ಮತ್ತು ಕತೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡುವ ಅವಕಾಶವಿತ್ತು, ಆದರೆ ನಿರ್ದೇಶಕರು ಅದರ ಕಡೆ ಗಮನ ಹರಿಸಿಲ್ಲ. ಚಿತ್ರದ ವಿಎಫ್‌ಎಕ್ಸ್‌ ದೃಶ್ಯಗಳ ಗುಣಮಟ್ಟದತ್ತ ಗಮನಹರಿಸಬೇಕಿತ್ತು. ಡಬ್ಬಿಂಗ್‌ನಲ್ಲಿ ಹಲವೆಡೆ ಹೊಂದಾಣಿಕೆ ಇಲ್ಲ. ಕಥೆಯೊಳಗಿನ ತಾಂತ್ರಿಕ ವಿಷಯಗಳತ್ತ ನಿರ್ದೇಶಕರು ಗಂಭೀರವಾಗಬೇಕಿತ್ತು. ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ತರ್ಕಕ್ಕೆ ಸಿಗದ ಹಲವು ಅಂಶಗಳಿವೆ. ಅಜನೀಶ್ ಲೋಕನಾಥ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರಕಥೆಗೆ ವೇಗ ನೀಡಿದೆ. ವೈದಿ ಎಸ್ ಪಿಳ್ಳೈ ಕ್ಯಾಮರಾ ವರ್ಕ್ ಉತ್ತಮವಾಗಿ ಮೂಡಿಬಂದಿದೆ.

ನಟನೆಯಲ್ಲಿ ಶಿವರಾಜ್‌ಕುಮಾರ್‌ ಗತ್ತು, ಗಮ್ಮತ್ತು ಚೆನ್ನಾಗಿದೆ. ಭಾವನೆಗಳ ಮೂಲಕ ಪಾತ್ರವನ್ನು ಜೀವಿಸಿದ್ದಾರೆ. ಅರ್ಧಂಬರ್ಧ ಕನ್ನಡ ಮಾತನಾಡುವ ಮಲಯಾಳಿಯಾಗಿ ಜಯರಾಮ್‌ ತಮ್ಮ ಮಾತು, ಹಾವಾಭಾವದಿಂದಲೇ ನಗಿಸುತ್ತಾರೆ. ಸಾಯಿಕುಮಾರ್‌ ಸಣ್ಣಗೆ ನಗುವಿನ ಕಚಗುಳಿ ಇಡುತ್ತಾರೆ. ದೀಕ್ಷಿತ್ ಶೆಟ್ಟಿ, ಲೂಸ್ ಮಾದ ಯೋಗಿ ಹಾಗೂ ಸಂಜನಾ ಆನಂದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com