ತಾಂತ್ರಿಕ ಶಿಕ್ಷಣದಲ್ಲಿ ಪರಿಣಿತಿಯ ಕೊರತೆ

ಪ್ರೊಫೆಸರ್ ಗಳಾಗಲು ಡಾಕ್ಟರೇಟ್ ಪಡೆದಿರಬೇಕು ಆದರೆ ಶಿಕ್ಷಣ ಸಚಿವನಾಗಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ!...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇಲ್ಲಿನ ವ್ಯವಸ್ಥೆಯ ಒಂದು ದೊಡ್ಡ ವ್ಯಂಗ್ಯವೆಂದರೆ ಶಿಕ್ಷಕನಾಗಲು ಡಿಗ್ರಿ ಪಡೆದಿರಬೇಕು, ಒಳ್ಳೆಯ ಅಂಕಗಳನ್ನು ಗಳಿಸಿರಬೇಕು. ಪ್ರೊಫೆಸರ್ ಗಳಾಗಲು ಡಾಕ್ಟರೇಟ್ ಪಡೆದಿರಬೇಕು ಆದರೆ ಶಿಕ್ಷಣ ಸಚಿವನಾಗಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ! ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಮೂಹ ಸಂವಹನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿರುವ ಆಡಳಿತಾತ್ಮಕ ಹುದ್ದೆಯು ಪರಿಣಿತರ ಕೈಯಲ್ಲಿರದಿರುವುದು ಅತ್ಯಂತ ದೊಡ್ಡ ದುರಂತ. ಆಡಳಿತಾತ್ಮಕ ನಿರ್ಧಾರ ಕೈಗೊಳ್ಲುವವರ ಹಿಂದೆ ಪರಿಣಿತರ ತಂಡ ಇರುತ್ತದಾದರೂ ಅವರು ಅನೇಕ ಬಾರಿ ರಾಜಕೀಯ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಅನೇಕ ಬಾರಿ ಪಠ್ಯವು ರಾಜಕೀಯ ತತ್ವಗಳ ಪ್ರತಿಪಾದಕವಾಗಿ ನಿರೂಪಿತವಾಗಿರುವುದೂ ಹೌದು! ಇತ್ತೀಚೆಗೆ ರಾಜ್ಯ ಸರಕಾರದ ಪಠ್ಯ ಪುಸ್ತಕ ಸಮಿತಿಯ ಬಗ್ಗೆ ಅನೇಕ ತಕರಾರುಗಳನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಮಹಿಳಾ ಶಿಕ್ಷಕರು ಯಾವ ಉಡುಪು ತೊಡಬೇಕು, ಶಿಕ್ಷಕರು ಎಲ್ಲಿ ಮತ್ತು ಹೇಗೆ ಕೆಲಸ ಮಾಡಬೇಕು ಎಂಬೆಲ್ಲ ನಿರ್ಧಾರಗಳನ್ನು ಅನೇಕ ತಜ್ಞರಲ್ಲದವರೇ ನಿರ್ಧರಿಸುತ್ತಾರೆ. ಕೆಲ ಸಮಿತಿಗಳಲ್ಲಿ ಮಹಿಳೆ ಮತ್ತು ಹಿಂದುಳಿದ ವರ್ಗದವರ ಪ್ರಾತಿನಿಧ್ಯ ತೀರಾ ಕಡಿಮೆ ಇರುತ್ತದೆ. 
 ತಾಂತ್ರಿಕ ಶಿಕ್ಷಣ ಈ ರೀತಿಯ ವ್ಯವಸ್ಥೆಯ ಬಲಿಪಶುಗಳಲ್ಲೊಂದು. ತಾಂತ್ರಿಕವಾಗಿ ವಿಶ್ವವು  ಮಹೋನ್ನತಿಯನ್ನು ಸಾಧಿಸುತ್ತಿರುವಾಗ ನಮ್ಮಲ್ಲಿ ಈ ಶಿಕ್ಷಣವು ಇನ್ನೂ ಕುಂಠಿತವಾಗಿ ನಡೆಯುತ್ತಿದೆ. ನಮ್ಮಲ್ಲಿ ಈಗ ಬಳಸಲ್ಪಡುತ್ತಿರುವ ಬಹುತೇಕ ತಂತ್ರಜ್ಞಾನ ಹೊರಗಿನಿಂದ ಆಮದಾದದ್ದು.ನಮ್ಮಲ್ಲಿ ವಿಶ್ವದ ಗಮನ ಸೆಳೆಯುವಂತಹ ಸಂಶೋಧನೆಗಳು ನಡೆದಿಲ್ಲ ಎಂಬುದನ್ನು ಅತ್ಯಂತ ಧೈರ್ಯವಾಗಿ ಹೇಳಬಹುದು. ಇಸ್ರೋ ವಿಜ್ಞಾನಿಗಳು ಆಮದಾದ ಬಿಡಿಭಾಗಗಳನ್ನು ಜೋಡಿಸುವುದನ್ನೇ ಸಾಧನೆ ಎಂಬಂತೆ ಹೇಳಿಕೊಳ್ಳುವುದು, ಉಪಗ್ರಹ ಉಡಾವಣೆಗೆ ಮುಂಚೆ ಯಜ್ಞ ಪೂಜೆಗಳನ್ನು ಕೈಗೊಳ್ಳುವುದು ಸತ್ಯಂತ ಸ್ಪಷ್ಟವಾಗಿ ನಮ್ಮ ಹಿಂದುಳಿಯುವಿಕೆಯ ಕಾರಣಗಳನ್ನು ಸಾರುತ್ತವೆ. 
 ತಾಂತ್ರಿಕ ಶಿಕ್ಷಣದಲ್ಲಿ  ಮೊದಲನೆಯದಾಗಿ ತಳಮಟ್ಟದ ಅಧ್ಯಯನವನ್ನು ಕೈಗೊಳ್ಳಲಾಗುತ್ತಿಲ್ಲ. ಗಣಿತ ಮತ್ತು ಭೌತಶಾಸ್ತ್ರದ ಮೂಲ ನಿಯಮಗಳನ್ನು ಕಲಿಸದೇ ಕೇವಲ ಮೇಲ್ಮಟ್ಟದ ಅನ್ವಯಿಕ ವಿಷಯಗಳನ್ನು ಮಾತ್ರ ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಕೋಡಿಂಗ್ ಮಾಡುವ ಇಂಜಿನಿಯರ್ ಗಳಾಗುತ್ತಾರೆಯೇ ಹೊರತು ವಿಜ್ಞಾನಿಗಳಾಗುವುದಿಲ್ಲ. ಸಂಶೋಧನೆಗೆ ಅವಶ್ಯಕವಾದ ಮೂಲ ವಿಷಯಗಳನ್ನು ಅವರಿಗೆ ಕಲಿಸದಿರುವುದು ಅವರನ್ನು ಇತರೆ ಭಾಗದ ವಿದ್ಯಾರ್ಥಿಗಳಿಗಿಂತ ಹಿಂದುಳಿಯುವಂತೆ ಮಾಡುತ್ತದೆ. ಬಹುತೇಕ ಸಮಯದಲ್ಲಿ ವಿದ್ಯಾರ್ಥಿಗಳು ತಳ ಮಟ್ಟದ ಅಧ್ಯಯನ ಮಾಡದೇ ಅಂಕಗಳಿಗಾಗಿ ಬಾಯಿಪಾಠ ಮಾಡಿ ಪರೀಕ್ಷೆ ಬರೆದು ಹೊರಬರುತ್ತಾರೆ. ಪ್ರತಿಷ್ಟೆಗೋಸ್ಕರ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವದಕ್ಕಾಗಿ ಕಾಲೇಜುಗಳು ಮತ್ತು ವಿವಿಗಳು ಮಕ್ಕಳಿಗೆ ಅನವಶ್ಯಕವಾಗಿ ಅತೀ ಹೆಚ್ಚು ಅಂಕಗಳನ್ನು ಕೊಟ್ಟು ಹೊರನೂಕಿಬಿಡುತ್ತಾರೆ. ಈಗ ಪಾಸಾಗುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇ.80 ರಷ್ಟು ವಿದ್ಯಾರ್ಥಿಗಳು ಇಂಜಿನಿಯರ್ ಗಳಾಗಲು ಬೇಕಾದ ಪರಿಣತಿಯನ್ನು ಪಡೆಯದೇ ಹೊರಬಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಸಾಫ್ಟ್ ವೇರ್ ಕೋಡಿಂಗ್ ಗೆ ಎಂತಹವರನ್ನಾದರೂ ಒಗ್ಗಿಸಬಹುದಾದ ಕಾರಣ ಇಂಜಿನಿಯರ್ ಗಳಾಗದಿದ್ದರೂ ಒಳ್ಳೆಯ ಕಂಪನಿಗಳಲ್ಲಿ ಕೆಲ ಗಿಟ್ಟಿಸಿಕೊಂಡು ಆರಾಮವಾಗಿರುತ್ತಾರೆ. ಇದರಿಂದ ಅನೇಕರಿಗೆ ಕೆಲಸ ಸಿಗುವುದಾದರೂ, ದೇಶಕ್ಕೆ ಹಣ ಬರುವುದಾದರೂ ನೋಬಲ್ ಪ್ರಶಸ್ತಿಗಳು ಬರುವುದಿಲ್ಲ. ಹೊಸ ತಾಂತ್ರಿಕ ಅನ್ವೇಷಣೆಗಳಿಗಾಗಿ ಜಗತ್ತು ನಮ್ಮ ಹತ್ತಿರ ತಿರುಗಿ ನೋಡುವುದಿಲ್ಲ. ಕೇವಲ ತಮ್ಮಿಂದ ತಂತ್ರಜ್ಞಾನವನ್ನು ಪಡೆದುಕೊಂಡು ತಮ್ಮ ಚಾಕರಿ ಮಾಡಿಕೊಂಡಿರುವ ಜನರಾಗಿಯೇ ಜಾಗತಿಕ ಪ್ರಪಂಚದಿಂದ ತಿರಸ್ಕಾರದ ನೋಟದಿಂದ ನೋಡಲ್ಪಡುತ್ತೇವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com