ಟೊಳ್ಳಾಗಿದೆ ಸಂಶೋಧನೆಯ ಅಡಿಗಲ್ಲಾದ ಶಿಕ್ಷಣ ವ್ಯವಸ್ಥೆ..!

ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣಮೂರ್ತಿಯವರು ಒಂದು ಮುಖ್ಯವಾದ ಪ್ರಶ್ನೆಯನ್ನೆತ್ತಿದ್ದಾರೆ. ಏಕೆ ಅರವತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣಮೂರ್ತಿಯವರು ಒಂದು ಮುಖ್ಯವಾದ ಪ್ರಶ್ನೆಯನ್ನೆತ್ತಿದ್ದಾರೆ. ಏಕೆ ಅರವತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಹೊಸ ಸಂಶೋಧನೆಗಳಾಗಿಲ್ಲ ಎಂಬುದು ಅವರ ಪ್ರಶ್ನೆ. ಇದು ನಾರಾಯಣಮೂರ್ಯತಿಯವರು ಕೇಳಬೇಕಾದ ಪ್ರಶ್ನೆಯಲ್ಲ. ನಾರಾಯಮೂರ್ಣತಿಯವರು ಉತ್ತರಿಸಬೇಕಾದ ಪ್ರಶ್ನೆ! ಲಕ್ಷಕ್ಕಿಂತಲೂ ಹೆಚ್ಚು ಜನಬಲವನ್ನು ಹೊಂದಿರುವ ಇಪ್ಪತ್ತು ಸಾವಿರ ಕೋಟಿ ಆರ್ಥಿಕ ದ್ರವ್ಯವನ್ನು ಹೊಂದಿರುವ ಸಂಸ್ಥೆಯ ಮಾಲಿಕರು ಈ ಬಲವನ್ನುಪಯೋಗಿಸಿ ಅದ್ಯಾವ ದೇಶ ಹೆಮ್ಮೆ ಪಡುವ ಸಂಶೋಧನೆಯನ್ನು ಕೈಕೊಂಡಿದ್ದಾರೆ ಎಂಬುದನ್ನು ಅವರೇ ಉತ್ತರಿಸಬೇಕು. ನಾರಾಯಣ ಮೂರ್ತಿ ಕೇವಲ ಒಬ್ಬರು ಉದಾಹರಣೆಯಷ್ಟೇ. ಮುಂದುವರಿದ ದೇಶಗಳಲ್ಲಿ ಚಿಕ್ಕ ಖಾಸಗಿ ಸಂಸ್ಥೆಗಳು ಕೈಗೊಳ್ಳುವಷ್ಟು ಸಂಶೋಧನೆಯನ್ನು ನಮ್ಮಲ್ಲಿ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳೆರಡೂ ಮಾಡುತ್ತಿಲ್ಲ!
  ನಮ್ಮ ವ್ಯವಸ್ಥೆಯ ಬಹುದೊಡ್ಡ ಸಮಸ್ಯೆಯೆಂದರೆ ಸರಿಯಾದ ಮಾದರಿಗಳನ್ನು ಹುಟ್ಟುಹಾಕದಿರುವುದು. ಅಪ್ಪಟ ವ್ಯಾಪಾರಿ ನಾರಾಯಣ ಮೂರ್ತಿಯಂತವರು ಶಿಕ್ಷಣ ವ್ಯಸ್ಥೆಯನ್ನು ನಿರ್ದೇಶಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಶಿಕ್ಷಣ ಎಂದರೆ ತಮ್ಮ ಉದ್ದಿಮೆಗೆ ತಕ್ಕ ಉದ್ಯೋಗಿಗಳನ್ನು ಸೃಷ್ಟಿಸುವುದು ಎಂಬುದು ನಾರಾಯಣ ಮೂರ್ತಿಯವರ ಎಂದಿನ  ನಿಲುವು! ಕಡಿಮೆ ಬೆಲೆಯಲ್ಲಿ ಸರಕಾರದಿಂದ ಫಲವತ್ತಾದ ಭೂಮಿಯನ್ನು ಪಡೆದುಕೊಂಡು ಇತ್ತೀಚೆಗೆ ರಿಯಲ್ ಎಸ್ಟೇಟ್ ನಲ್ಲಿಯೇ ಹೂಡಿಕೆಗೆ ಗಮನ ಕೊಡುತ್ತಿರುವ ನಾರಾಯಣಮೂರ್ತಿಯವರು ಹಿಂದೊಮ್ಮೆ ಎನ್ ಐ ಐ ಟಿ ಯಂತಹ ಖಾಸಗಿ ಕಂಪ್ಯೂಟರ್ ಕಲಿಕಾ ಕೇಂದ್ರಗಳು ಕೊಡುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂಬ ಅನಾಹುತಕಾರಿ ಹೇಳಿಕೆಯನ್ನು ನೀಡಿದ್ದರು! ವಿಶ್ವದ ಯಾವ ಶಿಕ್ಷಣ ತಜ್ಞರಾದರೂ ನಾರಾಯಣಮೂರ್ತಿಯವರ ಹೇಳಿಕೆಯ ತೂಕವನ್ನು ಪ್ರಶ್ನಿಸುತ್ತಾರೆ. ಆದರೆ ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಇಂತಹವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದು ದುರಂತವೇ ಸರಿ!
      ಇನ್ನು ಮುಖ್ಯ ಪ್ರಶ್ನೆಗೆ ಬರೋಣ. ನಮ್ಮ ದೇಶದಲ್ಲಿ ಯಾಕೆ ಸಂಶೋಧನೆಗಳು ನಡೆಯುತ್ತಿಲ್ಲ? ಇದಕ್ಕೆ ಮುಖ್ಯ ಕಾರಣ ಪರೀಕ್ಷೆ ಕೇಂದ್ರಿತ ಶಿಕ್ಷಣ ವ್ಯವಸ್ಥೆ. ಪರೀಕ್ಷೆಗಾಗಿ ಮಾತ್ರ ಕಲಿಕೆ, ಹೆಚ್ಚಿನ  ಅಂಕಗಳಿಕೆ ಮಾತ್ರ ಸಾಧನೆ ಎಂಬ ಮನಸ್ಥಿತಿ.ಇತ್ತೀಚೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ಔಪಚಾರಿಕ ಶಿಕ್ಷಣ ಕೊಡುವ ಹುರುಪಿನಲ್ಲಿ ಸರಕಾರದ ಕೆಲ ಹೆಜ್ಜೆಗಳು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ನಿಶ್ಯಕ್ತಗೊಳಿಸುತ್ತಿವೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ಸಿಗಬೇಕಾದ ಬಗ್ಗೆ ಸರಕಾರ ಚಿಂತಿಸುವುದು ಸ್ವಾಗತಾರ್ಹ ಕ್ರಮ. ಆದರೆ ಎಲ್ಲರಿಗೂ ಶಿಕ್ಷಣ ದೊರಕುವಂತೆ ಶಿಕ್ಷಕರ ಮತ್ತು ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕೆ ಹೊರತು ಕೆಳಗಿಳಿಸಬಾರದು. ಉದಾಹರಣೆಗೆ ಕರ್ನಾಟಕದಲ್ಲಿ ಪಿಯುಸಿ ಪಠ್ಯ ಕ್ರಮವನ್ನು ಎನ್ ಸಿ ಇ ಆರ್ ಟಿ ಯ ಪಠ್ಯಕ್ರಮದಂತೆ ಮರುಹೊಂದಿಸಿಕೊಳ್ಳಲಾಯಿತು. ಆದರೆ ಆ ಪಠ್ಯದ ಎತ್ತರಕ್ಕೆ ತಕ್ಕಂತೆ ಗ್ರಾಮೀಣ ಮತ್ತು ಇತರ ಭಾಗದ ಶಿಕ್ಷಕರಿಗೆ ತರಬೇತಿಯನ್ನು ನೀಡಲಿಲ್ಲ. ಸಾಲದೆಂಬಂತೆ ಎನ್ ಸಿ ಇ ಆರ್ ಟಿ ಪಠ್ಯದ ಕ್ಲಿಷ್ಟವೆನಿಸಿದ ಅನೇಕ ಮುಖ್ಯವಾದ ಭಾಗಗಳನ್ನು  ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಎಂಬ ಕಾರಣ ನೀಡಿ ಕಿತ್ತು ಹಾಕಲಾಯಿತು. ಈಗ ತರಬೇತಿ ಇಲ್ಲದ ಶಿಕ್ಷಕರು ತಮ್ಮ ನಿಲುಕಿಗೆ ಮೀರಿದ ಅರೆಬೆಂದ ಪಠ್ಯವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ!
 ಮೊದಲನೆಯದಾಗಿ ಶಿಕ್ಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ವಿಚಾರಪ್ರಚೋದಕವಾದಂತಹ ಚಟುವಟಿಕೆಗಳು ಪಠ್ಯಕ್ರಮದಲ್ಲಿಲ್ಲ. ಪಠ್ಯೇತರ  ಹೊಸ ವಿಚಾರಗಳಿಗೆ ಪ್ರೋತ್ಸಾಹಕ್ಕೆ ಆಸ್ಪದ ಇಲ್ಲ. ಶಿಕ್ಷಕರ ಉತ್ಸಾಹಗಳೆಲ್ಲ ಚುನಾವಣೆ, ಗುಮಾಸ್ತ ಕೆಲಸಗಳು, ಗಣತಿಗಳಲ್ಲಿ ಕಳೆದು ಹೋಗುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸರಿಯಾದ ಸಾರಿಗೆ ವ್ಯವಸ್ಥೆ, ರಕ್ಷಣೆ ಇಲ್ಲ. ಪ್ರತಿವರ್ಷ ನಿಮ್ಮ ಶಾಲೆಯಿಂದ ಇಷ್ಟು ವಿದ್ಯಾರ್ಥಿಗಳು ಪಾಸಾಗಲೇ ಬೇಕು ಎಂಬ 'ಟಾರ್ಗೆಟ್' ಕೊಡಲಾಗುತ್ತದೆ. ಇದು ಶಿಕ್ಷಕರೇ ಕಾಪಿ ಮಾಡಿಸುವುದಕ್ಕೆ ಪ್ರೇರಣೆ ನೀಡುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಿತ್ತುವುದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಹಿಂದೆ ಬೀಳುತ್ತಿದೆ. ಎಲ್ಲರೂ ಸಾಗಿತ್ತಿರುವ ದಾರಿಯನ್ನು ಹೊರತುಪಡಿಸಿ ಸಾಗಿದರೆ ತಮ್ಮ ಭವಿಷ್ಯದ ಗತಿಯೇನಾಗಬಹುದೆಂಬ ದಿಗಿಲು ಮಕ್ಕಳನ್ನೂ ಪೋಷಕರನ್ನೂ ಕಾಡುತ್ತವೆ.
 ಇನ್ನು ಪಿ ಹೆಚ್ ಡಿ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಪಿ ಎಚ್ ಡಿ ಮುಗಿಸಿದ ಅಭ್ಯರ್ಥಿಗಳಿಗೆ ಸಂಶೋಧನೆಗೆ ತಕ್ಕ ವಾತಾವರಣವನ್ನು ನಿರ್ಮಿಸಲಾಗಿಲ್ಲ. ಪಿ ಎಚ್ ಡಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಕಳಪೆ ಗೈಡ್ ಗಳು ಮತ್ತಷ್ಟು ಕಳಪೆ ಡಾಕ್ಟರೇಟ್ ಗಳನ್ನು ಸೃಷ್ಟಿಸುತ್ತಿದ್ದಾರೆ. ಉತ್ತಮ ಅಭ್ಯರ್ಥಿಗಳು ಹೊರದೇಶಗಳಿಗೆ ತೆರಳುತ್ತಿದ್ದಾರೆ. ಇಲ್ಲಿ ಸರಿಯಾದ ಅವಕಾಶಗಳಿಲ್ಲದೇ ಬೇರೆಡೆ ತೆರಳಿ ಅತ್ಯುನ್ನತ ಸಂಶೋಧನೆಗಳನ್ನು ಮಾಡಿ ಗೆದ್ದವರಿದ್ದಾರೆ. ಕೃತಕವಾಗಿ ಡಿ ಎನ್ ಎ ಸೃಷ್ಟಿಸಿದ ನೋಬೆಲ್ ಪ್ರಶಸ್ತಿ ವಿಜೇತ ಮದನ್ ಲಾಲ್ ಖೊರೊನ, ಪ್ರಿನ್ಸ್ ಟನ್ ವಿವಿ ಯ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಶಾಂತಾರಾಮ ಇಂತಹ ಕೆಲ ಉದಾಹರಣೆಗಳು.  ಇದಕ್ಕೆ ತಕ್ಕಂತೆ ಮೂಲವಿಜ್ಞಾನಕ್ಕೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಸಂಶೋಧನೆಗೆ ಪ್ರೇರಣೆ ನೀಡಲಾಗುತ್ತಿಲ್ಲ. ಕಾಲೇಜುಗಳಲ್ಲಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ ಸಾಫ್ಟ್ ವೇರ್ ಕಂಪನಿಗಳು ತಮಗೆ ಬೇಕಾದಂತೆ ವಿದ್ಯಾರ್ಥಿಗಳನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ಕಾಲೇಜಿನಿಂದ ಹೊರಬರುವ ಹೊತ್ತಿಗೆ ವಿದ್ಯಾರ್ಥಿಗಳು ಸಾಫ್ಟ್ ವೇರ್ ಕುಶಲಕರ್ಮಿಗಳಾಗಿ ಹೊರಬರುತ್ತಿದ್ದಾರೆ. ನಾರಾಯಣ ಮೂರ್ತಿಗಳ ಸಾಫ್ಟ್ ವೇರ್ ಕಂಪನಿಗಳ ಬೇಡಿಕೆಗೆ ತಕ್ಕಂತೆ ಕಾಲೇಜುಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇನ್ನೆಲ್ಲಿಂದ ಬರಬೇಕು ಕ್ರಿಯಾತ್ಮಕತೆ, ಹೊಸತನ ಮತ್ತು ನೋಬೆಲ್ ಪ್ರಶಸ್ತಿಗಳು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com