ಕನ್ನಡಕ್ಕೆ ತಂತ್ರಜ್ಞಾನ ಒಗ್ಗಬೇಕಾದದ್ದೆಲ್ಲೆಲ್ಲಿ..?

ಇನ್ನೇನು ಕೆಲವೇ ದಿನಗಳಲ್ಲಿ ವಿಂಡೋಸ್ 10 ಬಿಡುಗಡೆಯಾಗಲಿದೆ. ಹೊಸ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕನ್ನಡವು ಹೇಗೆ ಕಾಣಬಹುದೆಂಬ...
ಕನ್ನಡ ತಂತ್ರಜ್ಞಾನ
ಕನ್ನಡ ತಂತ್ರಜ್ಞಾನ
Updated on

ಇನ್ನೇನು ಕೆಲವೇ ದಿನಗಳಲ್ಲಿ ವಿಂಡೋಸ್ 10 ಬಿಡುಗಡೆಯಾಗಲಿದೆ. ಹೊಸ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕನ್ನಡವು ಹೇಗೆ ಕಾಣಬಹುದೆಂಬ ಕುತೂಹಲದಲ್ಲಿ ಕನ್ನಡಪ್ರೇಮಿಗಳಿದ್ದಾರೆ. ಈಗಾಗಲೇ ಕೆಲವರು ಒಳಹೊಕ್ಕು ನೋಡಿ ಕನ್ನಡದ ಅಕ್ಷರಗಳು ಇನ್ನೂ ಚೆಂದಕ್ಕೆ ಕಾಣುವುದನ್ನು ನೋಡಿ ಪುಳಕಿತರಾಗಿದ್ದಾರೆ!
 ಚೆಂದದ ಒಂದು ಅಕ್ಷರ ವಿನ್ಯಾಸವಿದ್ದರೆ ಸಾಕೆ? ಇನ್ನೊಂಡುಷ್ಟು ಅಕ್ಷರವಿನ್ಯಾಸಗಳು ಬೇಡವೇ?  ಕನ್ನಡದ ವೆಬ್ ಸೈಟ್ ಗಳು ಒಂದೇ ರೀತಿಯ ಅಕ್ಷರಗಳಲ್ಲಿ ಶಾಲಾಮಕ್ಕಳು ಯುನಿಫಾರ್ಮ್ ಹಾಕಿಕೊಂಡ ರೀತಿಯಲ್ಲಿ ಬೋರಿಂಗ್ ಆಗಿ ಕಾಣಬೇಕೆ? ಕನ್ನಡ ಅಕ್ಷರಗಳಿಗೆ ಬಣ್ಗಳು ಬೇಡವೆ? ಹೊಸ ಹೊಸ ಡಿಸೈನ್ ಗಳು ಬೇಡವೇ?  ಕನ್ನಡವು ಶಾಲೆಯಿಂದ ಕಾಲೇಜಿಗೆ ಹೋಗುವುದು ಯಾವಾಗ? ಕಂಪ್ಯೂಟರ್ ಗಳಲ್ಲಿ ಕನ್ನಡ ಬಳಕೆಗೆ ಬಂದು ದಶಕಗಳೇ ಕಳೆದರೂ ಕನ್ನಡದಲ್ಲಿ ಹೊಸತನ ತರಲು ಇಷ್ಟು ಮೀನಮೇಷವೇಕೆ? ಜಪಾನ್ ಕೊರಿಯನ್ ನಂತಹ ಸಂಕೀರ್ಣ ಭಾಷೆಗಳಲ್ಲೇ ವಿವಿಧ ಫಾಂಟ್ ಗಳು ಲಭ್ಯವಿರುವಾಗ ಕನ್ನಡದಲ್ಲೇಕಿಲ್ಲ. ಪ್ರತೀಬಾರಿಯೂ ನಾವು ಸರಕಾರವೋ ಮತ್ತಾರೋ ಬೆಳೆಸಿದ ಫಾಂಟ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಹಾಕಿಕೊಂಡು ಕನ್ನಡ ಓದಬೇಕಾದ ಅನಿವಾರ್ಯತೆಯಿರುವುದೇಕೆ?
  ತೊಂದರೆಯಿರುವುದು ನಾವು ಯಾವ ರೀತಿ ಬೇಡಿಕೆ ಇಡಬೇಕೆಂಬ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲದಿರುವಲ್ಲಿ! ಇದು ಕೇವಲ ಕನ್ನಡದ್ದಲ್ಲ ಉಪಖಂಡದ ಎಲ್ಲಾ ಭಾಷೆಗಳಲ್ಲೂ ಇರುವ ತೊಂದರೆ. ಒಂದು ಆಶಾವಾದವೆಂದರೆ ವೇಗವಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಬೆಳೆಯುತ್ತಿದೆ. ಕಾರಣ ಹೆಚ್ಚುತ್ತಿರುವ ಬೇಡಿಕೆ! ಇಂತಹದೊಂದು ಬೇಡಿಕೆ ಕಂಪ್ಯೂಟರ್ ಲೋಕದಲ್ಲಿ ಸೃಷ್ಟಿಸಲು ನಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ. ತಮ್ಮ ಸಾಫ್ಟ್ ವೇರ್ ಗಳನ್ನು/ಆಪರೇಟಿಂಗ್ ಸಿಸ್ಟಮ್ ಗಳನ್ನು "ಲೋಕಲೈಸ್" ಮಾಡಲು ಕಂಪನಿಗಳು ಆಸಕ್ತಿ ತೋರುತ್ತಿಲ್ಲ. ಸರಿಯಾದ ಬೇಡಿಕೆ ಇರದ ಕಾರಣ ರೆಡ್ ಹ್ಯಾಟ್ ನಂತಹ ಸಂಸ್ಥೆಯೂ ಸಹ ಕನ್ನಡದಲ್ಲಿ ಸೇವೆ ಕೊಡುವುದನ್ನು ನಿಲ್ಲಿಸುತ್ತಿದೆ. ಒಂದು ಆಶಾವಾದವೆಂದರೆ ಮೊಬೈಲ್ ಗಳಲ್ಲಿ ಮುಂದೊಂದು ದಿನ ಕನ್ನಡ ವೆಬ್ ಸೈಟ್ ಗಳನ್ನು ನೋಡುವ ಹವ್ಯಾಸ ಶುರುವಾಗುವುದರಿಂದ ವಿವಿಧ ಫಾಂಟ್ ಗಳನ್ನು ಓದುವಂತೆ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸಲು ಮಾಡಲು ಕಂಪನಿಗಳು ಮನಸ್ಸು ಮಾಡಬಹುದು.  ಈಗಾಗಲೇ ಗೂಗಲ್ ನವರು ಕನ್ನಡವೂ ಸೇರಿದಂತೆ  ಹಲವು ಭಾಷೆಗಳಿಗೆ ವೆಬ್ ಫಾಂಟ್ ಗಳನ್ನು ಕೊಡಲು ಆರಂಭಿಸಿದ್ದಾರೆ. ಈ ಕಾರಣದಿಂದ ಹಳೆಯ ಆಂಡರಾಯಿಡ್ ಮೊಬೈಲ್ ಫೋನ್ ಗಳಲ್ಲಿ ಕನ್ನಡಕ್ಕೆ ಬೆಂಬಲ್ ಇಲ್ಲದಿದ್ದರೂ ಕನ್ನಡವನ್ನು ಓದಬಹುದು. ಇದೇ ರೀತಿ ಎಲ್ಲ ವ್ಯವಸ್ಥೆಗಳಿಗೆ ತಕ್ಕುದಾದ ಕನ್ನಡ ಅಕ್ಷರ ವಿನ್ಯಾಸಗಳನ್ನು ತಂತ್ರಜ್ಞಾನ ಜಗತ್ತು ಒದಗಿಸಿಕೊಡುವಂತೆ ನಾವು ಒತ್ತಾಯಿಸಬೇಕಾಗಿದೆ.
 ವಿಂಡೋಸ್ 10 ಫ್ರೆಂಚ್, ಥಾಯ್, ಕೊರಿಯನ್, ಜಪಾನೀಸ್, ಅರೇಬಿಕ್, ಝೆಕ್ ಭಾಷೆ ಗಳು ಸೇರಿದಂತೆ ಹದಿನೈದು ಭಾಷೆಗಳಲ್ಲಿ ಲಭ್ಯವಿದೆ. ಇದೇ ರೀತಿ ಕನ್ನಡಲ್ಲೂ ಬರುವ ವ್ಯವಸ್ಥೆಯಿರಬೇಕು. ಕರ್ನಾಟಕದಲ್ಲಿ ಬಿಡುಗಡೆಯಾಗುವ ಎಲ್ಲಾ ಆಪರೇಟಿಂಗ್ ಸಿಸ್ಟಮ್ ಮತ್ತು ಸಾಫ್ಟ್ ವೇರ್ ಗಳು ಕನ್ನಡ ನುಡಿಯಲ್ಲೇ ಇರಬೇಕು. ಕೀಲಿಸುವ ಮೊದಲ ನುಡಿ ಕನ್ನಡವಾಗಿರಬೇಕು (Default input language). ಕನ್ನಡಕ್ಕಾಗಿಯೇ ಭೌತಿಕ ಕೀಲಿಮಣೆ ಬರಬೇಕು. ಕನ್ನಡದಲ್ಲಿ ಹೊಸ ಅಕ್ಷರವಿನ್ಯಾಸಗಳನ್ನು ಸೃಷ್ಟಿಸಲು ತಕ್ಕಂತಹ ಸಾಫ್ಟ್ವೇರ್ ಮಟ್ಟುಗಳು ಅವುಗಳಲ್ಲಿ ಇರಬೇಕು. ಯಾವುದೇ ಕನ್ನಡ ಭಾಷೆಯಲ್ಲಿ ಕೀಲಿಸಲ್ಪಟ್ಟ ವೆಬ್ ಸೈಟ್ ಗಳು ಎಲ್ಲ ಅಕ್ಷರವಿನ್ಯಾಸಗಳೊಂದಿಗೆ ಯಾವುದೇ ಇಂಜಿನ್ ಸಹಾಯವಿಲ್ಲದೇ ಓದಲು ಬರಬೇಕು.  ಕಂಪ್ಯೂಟರ್ ಗಳನ್ನು ಬಳಸಲು ಇರುವ ಹೆದರಿಕೆ ಜನರಿಂದ ದೂರವಾಗಬೇಕು.
ಇದಲ್ಲದೇ ಕನ್ನಡದ ಲಿಪಿಗುರುತಿನ ಮಟ್ಟು (Optical Character Recognition), ಕುರುಡರಿಗಾಗಿ ಸ್ವಂತ ಓದುವ ಹಾಗೂ ಬರೆಯುವ ಸಲಕರಣೆಗಳು, ಮಾತನ್ನು ಅಕ್ಷರವಾಗಿ ಪರಿವರ್ತಿಸುವ, ಕನ್ನಡವನ್ನೇ ಕೀಲಿಸುವ ಸೌಲಭ್ಯವಿರುವ ಮಿಂದಾಣ (ವೆಬ್ ಸೈಟ್) ಗಳನ್ನು ಅಭಿವೃದ್ಧಿಪಡಿಸುವ ಸಲಕರಣೆಗಳು, ಚಲನೆಯನ್ನು ಗುರುತಿಸುವ, ಸಹಿ ಗುರುತಿಸುವ ಸಲಕರಣೆಗಳು, ಅನುವಾದ ಮಾಡುವ ಸಲಕರಣೆಗಳು ಬರಬೇಕು.
  ಸೀಮಿತ ಭೂಪ್ರದೇಶದಲ್ಲಿ ಬಳಕೆಯಾಗುವ ಕನ್ನಡದಂತಹ ಭಾಷೆಗಳು ಇವುಗಳನ್ನು ಬೇಡಿಕೆ ಸೃಷ್ಟಿಸಿ ಪಡೆದುಕೊಳ್ಳಬೇಕಾಗುತ್ತದೆ. ಅಂತಹ ಬೇಡಿಕೆಗಳು ಕನ್ನಡದಲ್ಲಿ ಸೃಷ್ಟಿಯಾಗಲಿ ಎಂದು ಬಯಸುವ. ಏಕೆಂದರೆ ಭಾಷೆ ಎಂಬುದು ಸಂಸ್ಕೃತಿಯ ಬಹುಮುಖ್ಯ ಅಂಗ. ಭಾಷೆಯ ನಾಶದೊಂದಿಗೆ ಸಂಸ್ಕೃತಿಯೂ ನಾಶವಾಗಿ ಹೋಗುತ್ತದೆ. ಭಾಷೆ ಸಧ್ಯದ ಪರಿಸ್ಥಿತಿಯಲ್ಲಿ ಉಳಿಯಬೇಕೆಂದರೆ ತಂತ್ರಜ್ಞಾನದೊಂದಿಗೆ ಮಿಳಿತವಾಗಿ ಬೆಳೆಯಬೇಕು.

-ಶ್ರೀಹರ್ಷ ಸಾಲಿಮಠ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com