ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಕಷ್ಟಗಳು!

ಒಂದಾನೊಂದು ಕಾಲದಲ್ಲಿ ಒಂದೇ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಪಠ್ಯಗಳ ನುಡಿಯೇ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಜನರ ಆಡುನುಡಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನನ್ನ ಗೆಳತಿಯೊಬ್ಬಳಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಅಧ್ಯಾಪಕಿಯಾಗಿ ಕೆಲಸ ದೊರೆಯಿತು. ಸರಕಾರಿ ಕೆಲಸ ಸಿಕ್ಕ ಖುಷಿಯೊಂದೆಡೆಯಾದರೆ ವ್ಯವಸ್ಥೆಯೊಳಗೆ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹುಮ್ಮಸ್ಸು ಇನ್ನೊಂದಡೆ. ವ್ಯವಸ್ಥೆಯೊಳಗೆ ಹೋಗಿದ್ದವಳಿಗೆ ನಿರಾಶೆಯೇ ಕಾದಿತ್ತು. ಈ ಬಾರಿ ಸರಕಾರಿ ಕಾಲೇಜುಗಳಲ್ಲಿ ದಾಖಲಾತಿ ತೀರಾ ಎಂದರೆ ತೀರಾ ಕಡಿಮೆ. ದಾಖಲಾದವರೂ ಕಡಿಮೆ ಅಂಕಗಳ ಕಾರಣ ಬೇರೆ ಎಲ್ಲೂ ದಾಖಲಾತಿ ಸಿಗದೇ ಸಿಗದೇ ಅಥವಾ ಓದಲು ಆಸಕ್ತಿಯಿಲ್ಲದೇ ಇಲ್ಲಿ ಬಂದು ಸೇರಿಕೊಂಡವರು. ಈ ಹುಡುಗರು ವಾರಕ್ಕೊಮ್ಮೆ  ಕಾಲೇಜಿಗೆ ಬಂದರೆ ಹೆಚ್ಚು. ಬಂದರೂ ಪಾಠ ಕೇಳುವ ಆಸಕ್ತಿಯಿಲ್ಲ. ಪಾಠ ಕೇಳುವ ಆಸಕ್ತಿ ಬರುವುದಾದರೂ ಹೇಗೆ? ಈ ಹುಡಗರೆಲ್ಲ ಓದಿರುವುದು ಕನ್ನಡ ಮಾಧ್ಯಮದಲ್ಲಿ. ಇದ್ದಕ್ಕಿದ್ದಂತೆ ಹೊಸ ಪಾಠಗಳ ಬೋಧನೆ ಶುರುವಾಗಿರುವುದು ಇಂಗ್ಲೀಷ್ ಮಾಧ್ಯಮದಲ್ಲಿ. ಅದಾದರೂ ಕೇಂದ್ರೀಯ ಪಠ್ಯದ ಅತ್ಯಂತ ಕ್ಲಿಷ್ಟಕರ ವಿಷಯಗಳು. ಕನ್ನಡ ಮಾಧ್ಯಮದಲ್ಲಿ ಓದಿಯೇ ವಿಷಯಗಳ ಅರಿವು ಕಷ್ಟಕರವಾಗಿರುವಾಗ ಇನ್ನು ಇಂಗ್ಲೀಷ್ ನಲ್ಲಿ ಓದುವುದು ಇನ್ನೂ ಕಷ್ಟ. ಅಲ್ಲದೇ ಸರಕಾರಿ ಅಧ್ಯಾಪಕರುಗಳಿಗೆ ಪಾಠಕ್ಕಿಂತ ಗುಮಾಸ್ತಿಕೆಯ ಕೆಲಸಗಳೇ ಹೆಚ್ಚಿರುತ್ತವೆ. ಗಣತಿಗೆ ಹೋಗುವುದು, ಚುನಾವಣೆಯ ಕರ್ತವ್ಯ ಇತ್ಯಾದಿ ಸಾಲದೇ ಒಮ್ಮೊಮ್ಮೆ ನೂರಿನ್ನೂರು ಕಿಮೀ ದೂರದ ಊರುಗಳಿಗೆ ಅಧ್ಯಾಪಕರುಗಳ ಕೊರತೆ ಇದೆ ಎಂಬ ಕಾರಣಕ್ಕೆ ತಾತ್ಕಾಲಿಕ ವರ್ಗಾವಣೆ ಮಾಡಿಬಿಡುತ್ತಾರೆ. ಇದರ ನಡುವೆ ಪಾಠ ಮಾಡುವುದಕ್ಕೆ ಆಸಕ್ತಿಯೂ ಉಳಿದಿರುವುದಿಲ್ಲ.
 ಇರಲಿ! ಕನ್ನಡ ಮಾಧ್ಯಮದಲ್ಲಿ ಓದುವವರು ಬಹಳಷ್ಟು ಹುಡುಗರು ದಲಿತ ಮತ್ತು ಹಿಂದುಳಿದ ಸಮಾಜಕ್ಕೆ ಸೇರಿದ ಮಕ್ಕಳು. ಕೊಂಚ ಆಳಕ್ಕೆ ಅವಲೋಕನ ಮಾಡಿದಾಗ ಕನ್ನಡದ ಹುಡುಗರ ಸಮಸ್ಯೆ ನಾವಂದುಕೊಂಡಷ್ಟು ಸರಳವಾಗಿಲ್ಲ ಎಂದು ಕಂಡು ಬಂತು. ಈ ಹುಡುಗರಿಗೆ ಇಂಗ್ಲೀಷ್ ತಿಳಿಯುವುದು ಹೋಗಲಿ ಕನಿಷ್ಟ ಪಕ್ಷ ಓದಿದ ವಿಷಯಗಳಾದರೂ ನೆನಪಿದೆಯೇ ಎಂದು ಪರೀಕ್ಷಿಸಿದರೆ ವಿಷಯಗಳೂ ತಿಳಿದಿಲ್ಲ. ಒಬ್ಬ ಹುಡುಗನನ್ನು ಎಬ್ಬಿಸಿ ಕನ್ನಡದಲ್ಲೇ ಪೈಥಾಗೊರಸ್ ನಿಯಮವನ್ನು ವಿವರಿಸಲು ಹೇಳಿದಾಗ ಕೊಂಚ ಗಲಿಬಿಲಿಗೊಳಗಾಗಿ ಪದಗಳನ್ನು ನೆನಪು ಮಾಡಿಕೊಳ್ಳುತ್ತಾ ಲಂಬಕೋನ ತ್ರಿಭುಜದಲ್ಲಿ ಕರ್ಣದ ವರ್ಗವು ಭುಜಗಳ ವರ್ಗಕ್ಕೆ ಸಮವಿರುತ್ತದೆ ಎಂದು ಹೇಳಿದ. ಇನ್ನೊಂದು ಪ್ರಶ್ನೆಗೆ “ತರಂಗಾಂತರವು ಅಲೆಗಳ ಆವರ್ತನದ ವ್ಯುತ್ಕ್ರಮ ರೂಪವಾಗಿರುತ್ತದೆ” ಎಂದು ಹೇಳಿದ. ಅವನು ಬಳಸುತ್ತಿದ್ದ ಪದಗಳನ್ನು ಕೇಳುತ್ತಿದ್ದಂತೆ ಬೇರಾವುದೋ ಭಾಷೆಯನ್ನು ಕೇಳುತ್ತಿರುವಂತೆ ಭಾಸವಾಯಿತು. ಆ ಹುಡುಗನ ಶಕ್ತಿಯೆಲ್ಲಾ ಆ ಕ್ಲಿಷ್ಟ ಪದಗಳನ್ನು ಬಾಯಿಪಾಠ ಮಾಡುವುದರಲ್ಲೇ ಕಳೆದುಹೋಗಿತ್ತು! ಇನ್ನು ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಮಯವಾದರೂ ಸಾಲುವುದು ಹೇಗೆ? ಕನ್ನಡ ಮಾಧ್ಯಮದ ಓದು ಇಂಗ್ಲೀಷ್ ಮಾಧ್ಯಮದ ಓದಿಗಿಂತಲೂ ಕಠಿಣವಾಗಿದೆ ಎಂದು ಆಗ ತಿಳಿಯಿತು. ಇಂಗ್ಲೀಷ್ ನಲ್ಲಿ ನಾವು ನಿತ್ಯ ಬಳಸುವ ಪದಗಳನ್ನೇ ಬಳಸಿ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಆದರೆ ಕನ್ನಡದಲ್ಲಿ ಪಠ್ಯಪುಸ್ತಕದಲ್ಲಿರುವ ನುಡಿಯೇ ಬೇರೆ ನಾವು ಆಡುವ ನುಡಿಯೇ ಬೇರೆ! ಮಕ್ಕಳು ಹೊಸ ಭಾಷೆಯನ್ನು ಕಲಿತು ಓದುವಷ್ಟೇ ಕಷ್ಟಕರವಾಗಿದೆ ಕನ್ನಡ ಮಾಧ್ಯಮದ ಓದು!  
 ಒಂದಾನೊಂದು ಕಾಲದಲ್ಲಿ ಒಂದೇ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಪಠ್ಯಗಳ ನುಡಿಯೇ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಜನರ ಆಡುನುಡಿಗೆ ತಕ್ಕಂತೆ ಈ ಪಠ್ಯ ವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಿದೆ. ಅನೇಕ ಪದಗಳನ್ನು ಬರೆಯುವುದಿರಲಿ ಉಚ್ಛರಿಸುವುದೂ ಸಹ ಕಷ್ಟವಾಗಿ ಪರಿಣಮಿಸಿರುವಾಗ ವಿಷಯಗಳ ಆಳವನ್ನು ವಿದ್ಯಾರ್ಥಿಗಳು ಗ್ರಹಿಸುವ ಬಗೆಯಾದರೂ ಹೇಗೆ? ವ್ಯುತ್ಕ್ರಮ ಬದಲು ತಲೆಕೆಳಗು, ಶ್ವಾಸಕೋಶದ ಬದಲು ಪುಪ್ಪಸ, ಮಸ್ತಿಷ್ಕ ಬದಲು ಮೆದುಳು, ಹೃತ್ಕಕ್ಷಿ, ಹೃತ್ಕರ್ಣಗಳ ಬದಲು ಮೇಲ್ಕೋಣೆ ಕೆಳಕೋಣೆ, ತ್ರಿಕೋಣ ಬದಲು ಮೂರುಮೂಲೆ ಇತ್ಯಾದಿ ವಿದ್ಯಾರ್ಥಿಗಳಿಗೆ ಬಳಸಲು ಸುಲಭವಾದ ಪದಗಳಲ್ಲಿ ವಿಷಯವನ್ನು ಹೇಳಬೇಕು. ಶಿಕ್ಷಣದ ಗುರಿಯು ಕೇವಲ ವಿದ್ಯಾರ್ಥಿಯ ಬಾಷಾಜ್ಞಾನವನ್ನು ಹೆಚ್ಚಿಸುವುದು ಅಲ್ಲ. ಭಾಷೆಯ ಬಗ್ಗೆ ಆಳ ತಿಳುವಳಿಕೆ ಬೇಕಾದವರು ಆ ವಿಷಯದ ಕಡೆ ಮುಂದುವರಿಯುತ್ತಾರೆ. ವಿಷಯವನ್ನು ಆಳವಾಗಿ ತಿಳಿದರೆ ವಿಜ್ಞಾನಿಗಳ ಸಂಶೋಧಕರ ಸಂಖ್ಯೆ ಹೆಚ್ಚುತ್ತದೆ.
 ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮದ ಮಕ್ಕಳು ಹೆಚ್ಚು. ಹಾಗಂತ ಕನ್ನಡದಲ್ಲಿ ಓದುವ ಮಕ್ಕಳು ದಡ್ಡರು ಅಂತ ಏನೂ ಅಲ್ಲ. ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ಶೇ.ನೂರರಷ್ಟು ಫಲಿತಾಂಶ ಬಂದಿರುವುದೇ ಇದಕ್ಕೆ ಸಾಕ್ಷಿ. ಮಕ್ಕಳ ಓದಿಗೆ ಪೂರಕವಾಗುವಂತಹ ಮತ್ತು ಅವರನ್ನು ಓದಲು ಪ್ರೇರೇಪಿಸುವಂತಹ ಭಾಷೆಯ ಬಳಕೆಯನ್ನು ಪಠ್ಯ ಪುಸ್ತಕಗಳಲ್ಲಿ ಬಳಸಬೇಕಾಗಿದೆ. ಕನ್ನಡ ನುಡಿಯೇ ಕನ್ನಡ ಮಕ್ಕಳ ಬೆಳವಣಿಗೆಗೆ ಅಡ್ಡಿಗಾಲಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವೇ ಸರಿ!
 ಮೊದಲ ಹಂತದಲ್ಲಿ ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಓದುವುದನ್ನು ಸುಲಭಗೊಳಿಸಿಕೊಂಡರೆ ನಂತರ ಹೆಚ್ಚಿನ ಓದನ್ನು ಅಂದರೆ ಪದವಿ ಪೂರ್ವ ಮತ್ತು ಡಿಗ್ರೀ ಹಂತಗಳಲ್ಲಿ ಕನ್ನಡದಲ್ಲೇ ವಿಜ್ಞಾನ ವಿಷಯಗಳನ್ನು ಬೋಧಿಸಬಹುದು. ಮುಂದುವರಿದ ರಾಷ್ಟ್ರಗಳೆಲ್ಲ ತಾಯ್ನುಡಿಯಲ್ಲೇ ಬೋಧನೆ ಕೈಗೊಳ್ಳುತ್ತವೆ ಹಾಗೆಯೇ ದೇಶದ ಏಳಿಗೆಗೆ ತಾಯ್ನುಡಿಯ ಬೋಧನೆಯೇ ಅತ್ಯಂತ ಪರಿಣಾಮಕಾರಿ ಎಂದು ಬಗೆದಿ ಹಾಗೆಯೇ ನಡೆದುಕೊಳ್ಳುತ್ತಿವೆ. ಕನ್ನಡದ ಉಳಿಯುವಿಕೆ ಮತ್ತು ಬೆಳವಣಿಗೆಗಳು ಉನ್ನತ ಶಿಕ್ಷಣದ ಮೇಲೆಯೇ ಅವಲಂಬಿತವಾಗಿವೆ. ತಕ್ಷಣವೇ ಪಠ್ಯದ ಭಾಷೆಯನ್ನು ಪರಿಷ್ಕರಿಸಿ ವಿದ್ಯಾರ್ಥಿಗಳ ಚಿತ್ತವನ್ನು ವಿಜ್ಞಾನದತ್ತ ಹೊರಳಿಸುವ ಮತ್ತು ಕನ್ನಡದಲ್ಲೇ ಉನ್ನತ ಶಿಕ್ಷಣ ಪಡೆಯುವ ಹಂಬಲವನ್ನು ಜಾಗೃತಗೊಳಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com