ಡಿಜಿಯುಗದಲ್ಲಿ ದರೋಡೆ ಎಂಬುದು ಅತ್ಯಂತ ಸುಲಭ..!

ನಾವು ಅನೇಕ ಆಪ್ ಗಳನ್ನು ಫೋನಿಗೆ ಇಳಿಸಿಕೊಳ್ಳುತ್ತೇವೆ. ಈ ಆಪ್ ಗಳು ನಿಮ್ಮ ಫೋನಿನ ಮೀಡಿಯಾ, ಫೋನ್ ನಂಬರ್ ಗಳ ಪಟ್ಟಿ , ಕ್ಯಾಮೆರಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
 ಡಿಜಿಟಲ್ ಲೋಕ ಎಂಬುದು ಹುಟ್ಟಿಕೊಂಡು ಒಂದೆರಡು ದಶಕಗಳಾಗಿರಬಹುದಷ್ಟೇ! ತಂತ್ರಜ್ಞಾನವು ಕೈಗೆ ಸಿಗದಷ್ಟು ವೇಗವಾಗಿ ಬೆಳದು ನಾಗಾಲೋಟದಲ್ಲಿ ಎಲ್ಲರನ್ನೂ ಮೀರಿಸಿ ಓಡುತ್ತಿದ್ದರೆ ಅತ್ಯಂತ ಮುಂದುವರಿದ ಸುಧಾರಿತ ತಂತ್ರಜ್ಞಾನ ಹೊಂದಿರುವ ದೇಶಗಳ ಆಡಳಿತ ಘಟಕಗಳೂ ಈ ವೇಗಕ್ಕೆ ಸಮನಾಗಿ ಓಡಲಾಗದೇ ತಿಣುಕುತ್ತಿವೆ! ಕೊಲೆ ಎಂಬುದೊಂದು ಅಪರಾಧ ಎಂದು ಕಾನೂನು ಬರುವುದಕ್ಕೇ ನಾಗರೀಕತೆ ಬೆಳೆದು ಸಾವಿರಾರು ವರ್ಷಗಳು ತೆಗೆದುಕೊಂಡಿತು. ಇನ್ನು ಸೈಬರ್ ಲೋಕದಲ್ಲಿ ಅಪರಾಧ ಯಾವುದು? ಯಾವುದು ಅಲ್ಲ? ಅವುಗಳನ್ನು ಹೇಗೆ ತಡೆಗಟ್ಟಬೇಕು ?ಕಾನೂನಿನ ಪಾತ್ರವೇನು? ಬಳಕೆಯ ನಿಯಮಗಳೇನಿರಬೇಕು ಎಂಬುದರ ಸ್ಪಷ್ಟತೆ ಯಾರಿಗೂ ಇಲ್ಲ. ಅತ್ಯಂತ ವಿದ್ಯಾವಂತರಾದ ಪೋಲೀಸರಿಗೂ, ಲಾಯರ್ ಗಳಿಗೂ, ನ್ಯಾಯಾಧೀಶರಿಗೂ ಇದರ ಬಗ್ಗೆ ಸ್ಪಷ್ಟವಾದ ಅರಿವಾಗಲೀ, ಸರಿಯಾದ ತರಬೇತಿಯಾಗಲೀ ಇಲ್ಲ. 
 ಮೊದಲೊಂದು ಕಾಲದಲ್ಲಿ ದರೋಡೆ ಕೆಲವರ ಕಸುಬಾಗಿತ್ತು. ದರೋಡೆಗಾಗಿ ಅವರು ಸಮಯ ಕಾಯ್ದು ದಾಳಿ ಮಾಡಿ ಹೊಂಚು ಹಾಕಬೇಕಿತ್ತು. ಅವರದು ಎಂದುಕೊಂಡ ಪ್ರದೇಶ ಇರುತ್ತಿತ್ತು. ಈಗ ಹಾಗಿಲ್ಲ. ದರೋಡೆಕೋರರಿಗೆ ವಿಶ್ವವೇ ಮೈದಾನ. ಪ್ರತಿಯೊಬ್ಬರೂ ಮಿಕಗಳೇ. ಹಾಗೆಯೇ ರಿಜಿಸ್ಟರ್ ಮಾಡಿಸಿಕೊಂಡು ಮಾಡುವ ಡಿಜಿಟಲ್ ದರೋಡೆ ಅಪರಾಧದ ವ್ಯಾಪ್ತಿಯಲ್ಲೂ ಬರುವುದಿಲ್ಲ. ಈ ರೀತಿಯ ದರೋಡೆ "ದರೋಡೆ" ಎಂದೂ ಸಹ ಅನಿಸಿಕೊಳ್ಳುವುದಿಲ್ಲ.
 ಮೊಬೈಲ್ ಬಂದ ಮೇಲೆ ಇದು ಇನ್ನೂ ಸುಲಭವಾಗಿ ಹೋಗಿದೆ. ನಾವು ಅನೇಕ ಆಪ್ ಗಳನ್ನು ಫೋನಿಗೆ ಇಳಿಸಿಕೊಳ್ಳುತ್ತೇವೆ. ಈ ಆಪ್ ಗಳು ನಿಮ್ಮ ಫೋನಿನ ಮೀಡಿಯಾ, ಫೋನ್ ನಂಬರ್ ಗಳ ಪಟ್ಟಿ , ಕ್ಯಾಮೆರಾ ಇತ್ಯಾದಿ ಗಳನ್ನು ಬಳಸಲು ಅನುಮತಿ ಕೇಳುತ್ತವೆ. ಒಂದು ಸಣ್ಣ ಆಪ್ ಗೆ ಇಷ್ಟೊಂದೆಲ್ಲಾ ವಿವರಗಳು ಏಕೆ ಬೇಕು ಎಂದು ಯಾರಾದರೂ ಯೋಚಿಸಿದ್ದೀರಾ? ಉದಾಹರಣೆಗೆ ಟಾಕ್ಸಿ ಬುಕಿಂಗ್ ಆಪ್ ಗಳಾದ ಓಲಾ, ಉಬರ್ ಶಾಪಿಂಗ್ ಆಪ್ ಗಳಾದ ಫ್ಲಿಪ್ ಕಾರ್ಟ್ ಅಮೇಝಾನ್ ನಂತಹ ಆಪ್ ಗಳು ನಿಮ್ಮ ಫೋನ್ ನಲ್ಲಿ ಕೂತಿರುವ ಫೋಟೋಗಳ ಮತ್ತು ವಿಡಿಯೋಗಳ ಬಳಕೆಗೆ ಅನುಮತಿ ಯಾಕೆ ಬೇಡುತ್ತವೆ. ಶಾಪಿಂಗ್ ಮತ್ತು ಬುಕಿಂಗ್ ಗೂ ನಮ್ಮ ಫೋಟೋಗಳಿಗೂ ಏನು ಸಂಬಂಧ?  ನಮ್ಮ ಇಡೀ ಫೋನಿನ ಎಲ್ಲ ಮಾಹಿತಿಯನ್ನೂ ಬಳಸುವ ದರ್ದು ಇವಕ್ಕೆ ಏನಿದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ನಮ್ಮ ಫೋನಿನ ಮಾಹಿತಿಯನ್ನು ಬಳಸಲು ಇವರಿಗೆ ಬಿಟ್ಟುಕೊಡುವುದೆಂದರೆ ನಾವು ವಿಶ್ವದೆದುರಿಗೆ ನಗ್ನವಾಗಿ ನಿಂತ ಹಾಗೆ! ನಿಮಗೆ ಗೊತ್ತಿಲ್ಲದೇ ಎಲ್ಲೆಡೆಯೂ ತಮ್ಮ ಮಾಹಿತಿಯನ್ನು ಬಳಸಲು ಇವರಿಗೆ ಅವಕಾಶ ಕೊಟ್ಟಿದ್ದೀರಿ ಎಂದು ಅರ್ಥ! ನಿಮ್ಮ ಮಾಹಿತಿ ಹೆಚ್ಚು ತಿಳಿದಷ್ಟೂ ನಿಮ್ಮನ್ನು ದರೋಡೆ ಮಾಡುವುದು ಸುಲಭ!
 ಇತ್ತೀಚೆಗೆ ಮೊಬೈಲ್ ಕಾಲ್ ಡ್ರಾಪ್ ವಿರುದ್ಧ ಕೇಂದ್ರ ಸರಕಾರ ಸಮರ ಸಾರಿದೆ. ಇದು ಬಹುಷಃ ಅತಿದೊಡ್ಡ ಹಗಲು ದರೋಡೆ. ಮೊಬೈಲ್ ನಲ್ಲಿ ಮಾತನಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಕರೆಗಳು ನಡುನಡುವೆ ಕಟ್ ಆಗತೊಡಗುತ್ತವೆ. ಕಟ್ ಆದ ಕಾರಣ ಮತ್ತೆ ಫೋನ್ ಮಾಡಿ ಮಾತನಾಡುತ್ತೀರಿ.  ಒಂದು ನಿಮಿಷ ಮಾತನಾಡಲು ನಿಮಗೆ 50 ಪೈಸೆ ಖರ್ಚಾಗುತ್ತದೆ ಎಂದು ಕೊಳ್ಳೋಣ.ಮೂವತ್ತು ಸೆಕಂಡ್ ಗೆ ಒಮ್ಮೆ ಕರೆ ಕಟ್ ಆದರೆ 50 ಪೈಸೆ ಮುರಿದುಕೊಳ್ಳಲಾಗುತ್ತದೆ ಮತ್ತೆ ಡಯಲ್ ಮಾಡಿ ಮಾತನಾಡಿದಾಗ ಮತ್ತೆ 50 ಪೈಸೆ ಕತ್ತರಿಯಾಗುತ್ತದೆ. ಅಂದರೆ ನೀವು ನಲವತೈದು ಸೆಕಂಡ್ ಮಾತನಾಡಿದರೆ ಕರೆ ತಟ್ ಆಗದಿದ್ದರೆ 50 ಪೈಸೆ ಕೊಡಬೇಕು. ಕಟ್ ಆದರೆ ಅದೇ ನಲವತೈದು ಸೆಕಂಡ್ ಗೆ ಒಂದು ರೂಪಾಯಿ ಕೊಡಬೇಕು! ಅನ್ಯಾಯವಾಗಿ ಕಂಪನಿಗಳಿಗೆ ಒಂದಕ್ಕೆರಡು ಲಾಭ! ಕಳಪೆ ಸರ್ವಿಸ್ ಕೊಡುವ ಮೂಲಕ ಗ್ರಾಹಕರನ್ನು ಲೂಟಿ ಮಾಡುವ ದೊಡ್ಡ ತಂತ್ರ ಇದು! ಇನ್ನು ಸೆಕಂಟ್ ಲೆಕ್ಕದಲ್ಲಿ ದರ ವಿಧಿಸುವ ಕಡೆ ನಮಗೆ ನಷ್ಟವಾಗುವುದಿಲ್ಲ ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದರೆ ಇದೂ ಸಹ ಹಗಲು ದರೋಡೆಯೇ! ಹದಿನೈದು ಸೆಕಂಡ್ ಮಾತನಾಡಿದರೆ ಸೆಕಂಡ್ ಗೆ ಅರ್ಧ ಪೈಸೆಯಂತೆ ಏಳೂವರೆ ಪೈಸೆ ಬ್ಯಾಲೆನ್ಸ್ ನಲ್ಲಿ ಮುರಿದುಕೊಳ್ಳಬೇಕು. ಆದರೆ ಕಂಪನಿಗಳು ಎಂಟು ಪೈಸೆ ಕಟ್ ಮಾಡುತ್ತವೆ. ಮೂವತ್ತು ಸೆಕಂಡ್ ನೇರವಾಗಿ ಮಾತನಾಡಿದರೆ 15 ಪೈಸೆ ಕೊಡಬೇಕು. ಆದರೆ ನಡುವೆ ಕರೆ ಕಡಿತವಾದರೆ 8+8 = 16 ಪೈಸೆ ಕತ್ತರಿಯಾಗುತ್ತದೆ. ಒಂದು ಪೈಸೆಯಂತೆ ದಿನಕ್ಕೆ ಒಂದು ಹತ್ತು ಕೋಟಿಯಷ್ಟು ಕರೆಗಳನ್ನು ಮಾಡಲಾಗುತ್ತದೆ. ಒಂದು ಕರೆಗೆ ಒಂದು ಪೈಸೆ ಮೋಸ ಮಾಡಲಾಗಿದೆ ಎಂದು ಕೊಂಡರೂ ಸುಮ್ಮಸುಮ್ಮನೇ ದಿನಕ್ಕೆ ಹತ್ತು ಲಕ್ಷ ಮೊಬೈಲ್ ಕಂಪನಿಯ ಅಕೌಂಟಿಗೆ ಹೋಗಿ ಬೀಳುತ್ತದೆ. ಅಂದರೆ ವರ್ಷಕ್ಕೆ 36 ಕೋಟಿ ಹಣ ಬರೀ "ಕಾಲ್ ಡ್ರಾಪ್" ಗಳಿಂದಲೇ ಕಂಪನಿಗೆ ಲಾಭ ಬರುತ್ತದೆ. ಇದೊಂದು ಚಿಕ್ಕ ಅಂದಾಜಷ್ಟೇ! ಇದು ಇನ್ನೂ ಹಲವು ಪಟ್ಟು ಹೆಚ್ಚಿರಬಹುದು.  ಈ ಹಣ ನಾವು ಕಷ್ಟ ಪಟ್ಟು ದುಡಿದದ್ದು! 
 ಈಗ ಸರಕಾರವು ದಂಡ ಹಾಕಲು ಹೊರಟಿದ್ದಕ್ಕೆ ಕಂಪನಿಗಳಿಗೆ ನಡುಕ ಹುಟ್ಟಿದೆ. ತಮ್ಮ ಹಗಲು ದರೋಡೆಯನ್ನು ತಡೆಯುವ ಕ್ರಮವನ್ನು ವಿರೋಧಿಸಿ ಬೊಬ್ಬೆ ಹೊಡೆಯುತ್ತಿದೆ.ನಾವು ಈ ಸಮಯದಲ್ಲಿ ಸರಕಾರದೊಡನೆ ಕೈ ಜೋಡಿಸಿ ಈ ದರೋಡೆಯ ವಿರುದ್ಧ ನಮ್ಮ ಜೇಬನ್ನು ರಕ್ಷಿಸಿಕೊಳ್ಳಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com