ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?

ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಭದ್ರತೆ, ದೃಢತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಿಮ್ಮ ಮುಂದೆ ಒಂದು ಸತ್ಯವ ಹೇಳಬೇಕಿದೆ. ನನ್ನ ಬಳಿ ಹಣಕಾಸಿನ ಸಮಸ್ಯೆ ಹೊತ್ತು ಬರುವ ಮುಕ್ಕಾಲು ಪಾಲು ಜನ ವಿದ್ಯಾವಂತರು! ಒಂದೋ ಎರಡೂ ಯೂನಿವರ್ಸಿಟಿ ಪದವಿ ಹೊಂದಿದವರು. ಹಾಗೆ ಬರುವ ವಿದ್ಯಾವಂತರಲ್ಲಿ ಹೆಚ್ಚು ಜಟಿಲ ಪರಿಸ್ಥಿತಿ ಹೊತ್ತು ಬರುವವರು ಇಂಜಿನಿಯರ್ ಗಳು. ಇನ್ನೊಂದು ಸತ್ಯವನ್ನೂ ಹೇಳಿಬಿಡುವೆ, ಹೀಗೆ ಹಣಕಾಸಿಸ ತಾಪತ್ರಯಕ್ಕೆ ಸಿಕ್ಕಿ ಹಾಕಿಕೊಂಡವರ ಮಾಸಿಕ ವರಮಾನ ಐವತ್ತು ಸಾವಿರದಿಂದ ಹಿಡಿದು ಎರಡು ಲಕ್ಷದವರೆಗೆ ಇದೆ.!! 
ಈಗ ನೀವು ಕೇಳಬಹದು ನಿಮ್ಮ ಬಳಿ ಬರುವವರು ವಿದ್ಯಾವಂತರು ಮತ್ತು ಹೆಚ್ಚು ಹಣ ಸಂಪಾದಿಸುವರು ಆಗಿರುತ್ತಾರೆ ಅದರಲ್ಲಿ ಸತ್ಯ ಅಥವಾ ವಿಶೇಷ ಏನು? ಎಂದು. ಗಮನಿಸಿ ನನ್ನ ಬಳಿ ಹಣಕಾಸಿನ ಸಮಸ್ಯೆ ಹೊತ್ತು ಬಂದವರು ವಿದ್ಯಾವಂತರು, ಹಣವನ್ನ ಉಳಿಸಿದ್ದೇನೆ ಅದನ್ನ ಎಲ್ಲಿ ಹೂಡಿಕೆ ಮಾಡಲಿ ಎಂದು ಕೇಳಲು ಬರುವರು ಸಮಾಜದಲ್ಲಿ ಅಷ್ಟು ಮಾನ್ಯತೆ ಪಡೆಯದ ಹುಬ್ಬೇರಿಸದ ಮಾಸಿಕ ವರಮಾನ ಇಲ್ಲದ ಜನ. ನಂಬಲು ಕಷ್ಟವಾಗಬಹದು ಆದರೆ ಇದು ನಿಜ. ನಮ್ಮ ಮನೆ ಮುಂದೆ ಇದ್ದ ಖಾಲಿ ಸೈಟಿನಲ್ಲಿ ಮನೆ ಕಟ್ಟುವ ಕೆಲಸದಲ್ಲಿ ನಿರತನಾಗಿರುವ ವ್ಯಕ್ತಿಯೊಬ್ಬ ಎರಡು ವರ್ಷದಲ್ಲಿ ಎರಡು ಲಕ್ಷ ಉಳಿಸಿದ್ದೇನೆ ಎಲ್ಲಿ ಹೂಡಿಕೆ ಮಾಡಲಿ? ಪ್ರತಿ ತಿಂಗಳೂ ಹೂಡಿಕೆ ಮಾಡುವ ಹಣಕ್ಕೆ ಭದ್ರತೆ ಇರುವ ಯೋಜನೆಯಿದ್ದರೆ ತಿಳಿಸಿ ಎನ್ನುವ ಪ್ರಶ್ನೆಯನ್ನ ಹೊತ್ತು ತಂದಿದ್ದರು. ಹೀಗೆ ಅವಿದ್ಯಾವಂತರು ಎಂದು ಸಮಾಜ ಯಾರನ್ನ ಗುರುತಿಸುತ್ತದೋ ಅಂತವರಲ್ಲಿ ಇರುವ ಹಣಕಾಸಿನ ಭದ್ರತೆ ವಿದ್ಯಾವಂತರಲ್ಲಿ ಇಂದು ಕಾಣುತ್ತಿಲ್ಲ. ಹಣಕಾಸಿನ ಭದ್ರತೆ ಮಾನಸಿಕ ನೆಮ್ಮದಿಯನ್ನೂ ಕೊಡುತ್ತದೆ. 
ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಅದನ್ನ ಪಡೆಯಲು ಮೂಲಭೂತ ಅಂಶಗಳನ್ನ ಪಾಲಿಸಬೇಕು ಅಷ್ಟನ್ನ ಚಾಚೂ ತಪ್ಪದೆ ಪಾಲಿಸಿದರೆ ಹಣಕಾಸಿನ ಭದ್ರತೆ, ದೃಢತೆ ಎರಡೂ ನಿಮ್ಮದಾಗುತ್ತದೆ. 
ಎಲ್ಲಕ್ಕೂ ಮೊದಲು ಮಾಡಬೇಕಾದ ಕೆಲಸ ಬಜೆಟಿಂಗ್. ಏನಿದು ಬಜೆಟ್? 
ಬಜೆಟ್ ಎಂದರೆ ಆದಾಯ ಮತ್ತು ವ್ಯಯವನ್ನ ನಿಗದಿತ ಸಮಯಕ್ಕೆ ನಿಗದಿಪಡಿಸುವ ಸರಳ ಲೆಕ್ಕ. ಉದಾಹರಣೆ ನೋಡೋಣ, ನಿಮ್ಮ ಮಾಸಿಕ ಆದಾಯ ಐವತ್ತು ಸಾವಿರ ಎಂದುಕೊಳ್ಳಿ ಇದರ ಮುಂದೆ ನಿಮ್ಮ ಖರ್ಚುಗಳ ಬರೆಯಬೇಕು. ಮನೆ ಬಾಡಿಗೆ ಹತ್ತು ಸಾವಿರ, ಮನೆ ಖರ್ಚು ಐದು ಸಾವಿರ, ಮಕ್ಕಳ ಶಾಲೆಯ ವೆಚ್ಚ ಎರಡು ಸಾವಿರ, ಹೀಗೆ ಹಣಕಾಸಿನ ಸಮಸ್ಯೆಗೆ ಸಿಕ್ಕವರು ಬಜೆಟ್ ಮಾಡುವುದಿಲ್ಲ ಇವರಿಗೆ ತಮ್ಮ ಆದಾಯದ ಲೆಕ್ಕವಿರುತ್ತದೆ ಖರ್ಚಿನ ಲೆಕ್ಕ ಮಾತ್ರ ನಿಖರವಿರುವುದಿಲ್ಲ. ಬಜೆಟ್ ಎಂದರೆ ನಮ್ಮ ಆದಾಯದ ಜೊತೆಗೆ ನಮ್ಮ ಖರ್ಚನ್ನ ಹೊಂದಿಸುವ, ಸರಿದೂಗಿಸಿಕೊಂಡು ಹೋಗುವ ಕಲೆಯೂ ಹೌದು. ಅವಶ್ಯವಲ್ಲದ ಖರೀದಿಯನ್ನ ಮುಂದೂಡುವುದು ಅಥವಾ ತೆಗೆದೇ ಹಾಕುವುದು ಉತ್ತಮ. 
ಬಜೆಟ್ ತಯಾರಾದ ಮೇಲೆ ಅದನ್ನ ನಿಷ್ಠೆಯಿಂದ ಪಾಲಿಸಬೇಕು. 
ಎರಡನೆಯದಾಗಿ ಉಳಿಕೆಗೊಂದು ಗುರಿ ಕಂಡುಕೊಳ್ಳಬೇಕು. ಏನಿದು ಗುರಿ? 
ಉಳಿಕೆಯೇ ಆಗಲಿ, ಗಳಿಕೆಯೇ ಆಗಲಿ, ಬದುಕೇ ಆಗಲಿ, ಅದಕ್ಕೊಂದು ಗುರಿ ಇರಲೇಬೇಕು. ನಾವೇಕೆ ದುಡಿಯಬೇಕು? ಕಾರಣ ಸ್ಪಷ್ಟ ನಮ್ಮ ಕುಟುಂಬವನ್ನ ಸುರಕ್ಷಿತವಾಗಿ ಮತ್ತು ಸಂತೋಷವಾಗಿ ಇಡಲು. ಇದು ನಮ್ಮ ದುಡಿಮೆಯ ಗುರಿ ಹೌದಲ್ಲ. ಹಾಗೆಯೇ ಉಳಿಕೆಗೆ ಒಂದು ಗುರಿಯಿರಬೇಕು ಅದು ಏನಾದರೂ ಆಗಿರಬಹದು. ಹೊಸದಾಗಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿಹಕ್ಕಿಗಳು ಮುಂದಿನ ವರ್ಷ ವಿದೇಶ ಪ್ರವಾಸ ಮಾಡಬೇಕ್ಕೆನ್ನುವ ಗುರಿಗಾಗಿ ಉಳಿಸಬಹದು. ಹತ್ತು ವರ್ಷ ವಯಸ್ಸಿನ ಮಗುವಿನ ಭವಿಷ್ಯಕ್ಕಾಗಿ ಉಳಿಸುವ ಪೋಷಕರು, ನಾಳಿನ ತಮ್ಮ ವೃದ್ಯಾಪ್ಯಕ್ಕೆ.. ಹೀಗೆ ಪಟ್ಟಿ ಬೆಳಸಬಹದು. ಹೀಗೆ ಒಂದು ಕಾರಣ ಅಥವಾ ಗುರಿ ಸ್ಪಷ್ಟವಾದರೆ ಅದಕ್ಕೊಂದು ವೇಳೆಯನ್ನ ಸಿದ್ದಪಡಿಸುವುದು ಸುಲಭ, ವೇಳೆ ಮತ್ತು ಗುರಿ ಎಷ್ಟು ಉಳಿಸಬೇಕು ಎನ್ನುವ ಮೊತ್ತವನ್ನ ನಿರ್ಧರಿಸುತ್ತೆ. ಹೀಗೆ ನಿರ್ಧಾರವಾದ ಮೊತ್ತ ಬಜೆಟ್ನಲ್ಲಿ ಯಾವತ್ತಿಗೂ ಪ್ರಥಮ ಸ್ಥಾನ ಪಡೆಯಬೇಕು. ಗಮನಿಸಿ ಖರ್ಚು ಮಾಡಿ ಉಳಿದದ್ದನ್ನು ಉಳಿಕೆ ಎಂದು ತಿಳಿಯುವುದು ಅಷ್ಟೊಂದು ಉತ್ತಮ ನಿರ್ಧಾರವಲ್ಲ. ನಿರ್ದಿಷ್ಟ ಗುರಿಗಾಗಿ ನಿರ್ಧಾರಿತ ಮೊತ್ತವನ್ನ ಮೊದಲು ಉಳಿಸಬೇಕು ಉಳಿದದ್ದು ಖರ್ಚಿಗೆ ಎಂದು ಮೀಸಲಿಡಬೇಕು. 
ಮೂರನೆಯದಾಗಿ ನಿರ್ಧಾರಿತ ಗುರಿಯಲ್ಲಿ ಆದ್ಯತೆ ಪಟ್ಟಿ ಮಾಡಿ. ಏನಿದು ಆದ್ಯತೆ? 
ಉಳಿಕೆಗೆ ಗುರಿ ಬೇಕು ಎಂದು ತಿಳಿದೆವು. ಗುರಿಯಲ್ಲಿ ಹಲವು ಗುರಿಗಳಿರುತ್ತವೆ. ಉದಾಹರಣೆಗೆ ವಿದೇಶ ಪ್ರವಾಸ, ಮಗ/ಮಗಳ ವಿದ್ಯಾಭ್ಯಾಸ, ಹೊಸ ಕಾರು, ಮನೆ ಬದಲಾವಣೆ ಅಥವಾ ಮನೆ ಶೃಂಗಾರ, ರಿಟೈರ್ಮೆಂಟ್ ಪ್ಲಾನ್. ಹೀಗೆ ಪಟ್ಟಿ ಸಾಗುತ್ತದೆ. ಆದ್ಯತೆ ಎಂದರೆ ಯಾವುದು ಅತ್ಯಂತ ಮುಖ್ಯವಾಗಿ ಮಾಡಲೇಬೇಕು ಎನ್ನುವುದ ಸೂಚಿಸುತ್ತದೆ. ಮಕ್ಕಳ ವಿದ್ಯಾಭ್ಯಾಸ ಪಟ್ಟಿಯಲ್ಲಿ ಪ್ರಥಮ ಸ್ಥಾನ, ರಿಟೈರ್ಮೆಂಟ್ ಪ್ಲಾನ್ ಎರಡನೆಯ ಸ್ಥಾನ ಪಡೆಯುತ್ತೆ. ವಿದೇಶ ಪ್ರವಾಸ ಪಟ್ಟಿಯ ಕೊನೆಯ ಸ್ಥಾನ ನೀಡಬೇಕು. ಆದ್ಯತೆಯ ಪಟ್ಟಿಯನ್ನ ಹಂತ ಹಂತವಾಗಿ ಪರಿಶೀಲಿಸುತ್ತಾ ಬರಬೇಕು. ಗಮನಿಸಿ ಇವುಗಳಲ್ಲಿ ಮುಕ್ಕಾಲು ಪಾಲು ಎಲ್ಲವೂ ಧೀರ್ಘಾವಧಿ ಯೋಜನೆಗಳು. ಇವನ್ನ ನಿಮ್ಮ ಮನಸ್ಸಿಗೆ ಬಂದಂತೆ ಪ್ಲಾನ್ ಮಾಡುವ ಹಾಗಿಲ್ಲ. ನಾಳಿನ ಹಣದುಬ್ಬರದಿಂದ ಹಿಡಿದು ಸಾಮಾಜಿಕ ಬದಲಾವಣೆಗಳನ್ನ ಗಮನದಲ್ಲಿ ಇರಿಸಿಕೊಂಡು ಉಳಿಕೆ ಶುರು ಮಾಡಬೇಕು. 
ನಾಲ್ಕನೆಯದಾಗಿ ಅಚಾನಕ್ಕಾಗಿ ಎದುರಾಗುವ ಪ್ರಸಂಗಗಳಿಗೆ ಒಂದು ಫಂಡ್ 'ಎಮೆರ್ಜೆನ್ಸಿ ಫಂಡ್ ಸೃಷ್ಟಿಸಿಕೊಳ್ಳಿ.  ಏನಿದು ಎಮೆರ್ಜೆನ್ಸಿ ಫಂಡ್? 
ಮೊದಲೇ ಹೇಳಿದಂತೆ ಮುಕ್ಕಾಲು ಪಾಲು ಗುರಿಗಳು ಧೀರ್ಘಕಾಲಕ್ಕೆ ಸಂಬಂಧಿಸುದ್ದು ಅವು ಅಭಾದಿತವಾಗಿ ಸಾಗಬೇಕು ಆಗಷ್ಟೇ ಗುರಿಯ ತಲುಪುವ ಗುರಿ ಪೂರ್ಣವಾಗುವುದು. ಈ ಮಧ್ಯೆ ನಿಮ್ಮ ಕೆಲಸ ಬದಲಾವಣೆ ಇರಬಹದು, ಹೇಳದೆ ಕೇಳದೆ ಬರುವ ಅನಾರೋಗ್ಯ ಇರಬಹದು ಇವುಗಳನ್ನ ಅಚಾನಕ್ ಅಥವಾ ಪಟ್ಟಿಯಲ್ಲಿ ಇಲ್ಲದ ಬಜೆಟ್ ನಲ್ಲಿ ಸ್ಥಾನ ಪಡೆಯದ ಖರ್ಚುಗಳು ಎನ್ನಬಹದು. ಈ ಖರ್ಚನ್ನ ಮಾಡದೆ ಬೇರೆ ದಾರಿ ಕೂಡ ಇರುವುದಿಲ್ಲ. ಹೀಗೆ ಎದುರಾಗಬಹುದಾದ ಖರ್ಚುಗಳ ಊಹಿಸಿ ಅದಕ್ಕೂ ಒಂದಷ್ಟು ಹಣವನ್ನ ಬಜೆಟ್ ನಲ್ಲಿ ಸೇರಿಸಬೇಕು. ಇದು ಧೀರ್ಘಾವಧಿಯಲ್ಲ. ನಿಮ್ಮ ಮಾಸಿಕ ಖರ್ಚು ಐವತ್ತು ಸಾವಿರ ಎಂದು ಕೊಂಡರೆ ನಾಲ್ಕು ತಿಂಗಳ ಖರ್ಚನ್ನ ಅಂದರೆ ಎರಡು ಲಕ್ಷ ರೂಪಾಯಿಯನ್ನ ಎಮೆರ್ಜೆನ್ಸಿ ಫಂಡ್ ಎಂದು ಕಾಯ್ದಿರಿಸಬೇಕು. 
ಐದನೆಯಾದಾಗಿ ಹೀಗೆ ಉಳಿಸಿದ ಹಣವನ್ನ ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಏನಿದು ಹೂಡಿಕೆ? 
ಗಳಿಕೆಗಿಂತ ಉಳಿಕೆ ಪ್ರಮುಖ ಉಳಿಕೆಗಿಂತ ಸರಿಯಾದ ಹೂಡಿಕೆ ಇನ್ನೂ ಪ್ರಮುಖ. ಈ ಸರಳ ಸತ್ಯವನ್ನ ಅರಿತರೆ ಹಣಕಾಸಿನ ತಾಪತ್ರಯ ಯಾರನ್ನು ಭಾದಿಸುವುದಿಲ್ಲ. ಇರಲಿ. ಉಳಿಕೆ ಸರಿಯಾದ ಯೋಜನೆಯಲ್ಲಿ ಹೂಡಿಕೆ ಆಗದೆ ಹೋದರೆ ನಾಳಿನ ಹಣದುಬ್ಬರ ದ ಮುಂದೆ ಸರಿಯಾದ ಗಳಿಕೆ ನೀಡದೆ ಹೋಗುತ್ತದೆ. ಹೀಗಾದಾಗ ನೀವು ಯಾವ ಗುರಿಗಾಗಿ ಉಳಿಸಿ ಹೂಡಿಕೆ ಮಾಡಿದಿರೋ ಅದು ಪೂರ್ಣವಾಗದೆ ಹೋಗುತ್ತದೆ. ಇದೊಂದು ಎರಡು ಅಲುಗಿನ ಕತ್ತಿ ಇದ್ದಂತೆ, ಇವುಗಳ ನಡುವೆ ತುಲನೆ ಕಾಯುವುದು ಅತ್ಯಂತ ಅವಶ್ಯಕ. 
ಕೊನೆಯದಾಗಿ ಮತ್ತು ಅತ್ಯಂತ ಪ್ರಮುಖವಾಗಿ ಮಾಡಲೇಬೇಕಾದ ಕೆಲಸ ಸಮಯ ಸಮಯಕ್ಕೆ ಗುರಿಗಳನ್ನ ಆದ್ಯತೆಯನ್ನ ಹೂಡಿಕೆಯನ್ನ ಪರಿಶೀಲಸುತ್ತಾ ಇರುವುದು. ಮಾಡಿದ ಕೆಲಸ ನೋಡದೆ ಕೆಟ್ಟಿತು ಎನ್ನುವ ಒಂದು ಪ್ರಚಲಿತ ಮಾತಿದೆ ಹಾಗೆ ನಮ್ಮ ಗುರಿ, ಆದ್ಯತೆಯನ್ನ ಮತ್ತು ಹೂಡಿಕೆಯ ಮೊತ್ತವನ್ನ ಸಮಯದಿಂದ ಸಮಯಕ್ಕೆ ಬದಲಾದ ಸನ್ನಿವೇಶಕ್ಕೆ  ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತ ಹೋಗಬೇಕು. ಇವು ಧೀರ್ಘಾವಧಿ ಯೋಜನೆಗಳು, ಇಂದಿಗೆ ಸರಿಯಾಗಿದೆ ಅನ್ನಿಸಿದ್ದು ಮುಂದಿನ ಎರಡು ವರ್ಷದಲ್ಲಿ ಬದಲಾವಣೆ ಬೇಡಬಹುದು. ಬದಲಾಗುವ ಸಮಾಜ, ಪರಿಸ್ಥಿತಿಗೆ ಹೊಂದಿಕೊಳ್ಳುತ್ತ ಬದಲಾಗುತ್ತ ಸಾಗಬೇಕು. ನಿಮ್ಮ ವೃತ್ತಿ ಯಾವುದೇ ಇರಲಿ ನಿಮ್ಮಲ್ಲಿ ಒಬ್ಬ ಪುಟ್ಟ ಅಕೌಂಟೆಂಟ್ ಇರಬೇಕಾದು ಅತ್ಯಂತ ಅವಶ್ಯಕ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com