ವಿದೇಶದಲ್ಲಿ ಅಂಚೆ ಸೇರುತ್ತಿದೆ ನೇಪಥ್ಯ, ಭಾರತದಲ್ಲಿ ಮಾತ್ರ ಅಂಚೆಯದೇ ಪಾರುಪತ್ಯ!

ಇಂದಿನ ಇನ್ಸ್ಟಂಟ್ ಮೆಸೇಜ್ ಯುಗದಲ್ಲಿ ಪತ್ರ ಬರೆಯುವ ಸಂಖ್ಯೆಯೆಷ್ಟು? ಇಂದು ಪೋಸ್ಟ್ ಆಫೀಸ್ ಕೇವಲ ಸರಕಾರಿ ನೋಟೀಸ್ ಗಳನ್ನ ಕಳಿಸಲು ಉಳಿದಿರುವ ಸಂಸ್ಥೆಯಾಗಿದೆ. ಇದು ಕೇವಲ ಬ್ರಿಟನ್ ಕಥೆಯಲ್ಲ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬ್ರಿಟನ್ ಅಂಚೆ ಕಛೇರಿಗಳು ಹೆಚ್ಚಿನ ಲಾಭ ತರುವುದು ನಿಲ್ಲಿಸಿ ಬಹಳ ವರ್ಷಗಳಾಗಿವೆ. ಬ್ರಿಟನ್ ನಲ್ಲಿ ಅಂಚೆ ಕಛೇರಿ ಜೊತೆಗೆ ನೀವು ಗ್ರೀಟಿಂಗ್ ಕಾರ್ಡ್ ಮಾರಬಹದು, ತಿನ್ನಲು ಸಿದ್ಧವಿರುವ ಸ್ಯಾಂಡ್ವಿಚ್ ಮಾರಬಹದು, ಹೂವಿನ ಬೊಕ್ಕೆ ಇಡಬಹದು ಹೀಗೆ ಅಂಚೆಯ ಜೊತೆಗೆ ಇನ್ನಷ್ಟು ಸೇವೆ ನೀಡಿ ಒಂದಷ್ಟು ಹಣಗಳಿಸಲು ಅವಕಾಶ ಮಾಡಿಕೊಡುತ್ತದೆ ಸರಕಾರ. ಕಾರಣ ಅತ್ಯಂತ ಸರಳ, ದಿನೇ ದಿನೇ ಬ್ರಿಟನ್ ರಾಯಲ್ ಪೋಸ್ಟ್ ಆಫೀಸ್ ತನ್ನ ಹಿಂದಿನ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಇಂದಿನ ಇನ್ಸ್ಟಂಟ್ ಮೆಸೇಜ್ ಯುಗದಲ್ಲಿ ಪತ್ರ ಬರೆಯುವ ಸಂಖ್ಯೆಯೆಷ್ಟು? ಇಂದು ಪೋಸ್ಟ್ ಆಫೀಸ್ ಕೇವಲ ಸರಕಾರಿ ನೋಟೀಸ್ ಗಳನ್ನ ಕಳಿಸಲು ಉಳಿದಿರುವ ಸಂಸ್ಥೆಯಾಗಿದೆ. ಇದು ಕೇವಲ ಬ್ರಿಟನ್ ಕಥೆಯಲ್ಲ. ಜಗತ್ತಿನ ಬಹುತೇಕ ಪೋಸ್ಟ್ ಆಫೀಸ್ಗಳ ಕಥೆ.  
ಹೌದಾ!! ಹಾಗಾದರೆ ಭಾರತೀಯ ಪೋಸ್ಟ್ ಆಫೀಸ್ ಕಥೆ ಏನು? 
ಭಾರತೀಯ ಪೋಸ್ಟ್ ಜಗತ್ತಿನ ಇತರ ಪೋಸ್ಟ್ ಗಳಂತಲ್ಲ ಅದು ಯಶಸ್ವಿಯಷ್ಟೇ ಅಲ್ಲ, ಜನರ ಜೀವನಾಡಿ. 180 ವರ್ಷಗಳ ಇತಿಹಾಸ ಹೊಂದಿರುವ, ವಿಶ್ವದ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ಎಂಬ ಖ್ಯಾತಿ ಗಳಿಸಿರೋ ಭಾರತೀಯ ಅಂಚೆಯನ್ನು ಹಾಗೆಯೇ ಬಿಟ್ಟಿದ್ದರೆ ಸಹಜವಾಗಿಯೇ ಅದು ಕೂಡ ಬ್ರಿಟನ್ ರಾಯಲ್ ಪೋಸ್ಟ್ ದಾರಿ ಹಿಡಿಯುತಿತ್ತು. ಆದರೆ ಕೇಂದ್ರ ಸರಕಾರ ಪೋಸ್ಟ್ ಆಫೀಸ್ ಗೆ ಆಗಿಂದ್ದಾಗೆ ಹೊಸ ರೂಪ ಹೊಸ ಚೇತನ ತುಂಬುತ್ತಾ ಬಂದಿದೆ. ನಿಮಗೆ ಗೊತ್ತೇ ಇಂದಿಗೆ ದೇಶದಲ್ಲಿ ಒಂದು ಲಕ್ಷ ಐವತೈದು ಸಾವಿರ ಪೋಸ್ಟ್ ಆಫೀಸಗಳಿವೆ. ಇದಕ್ಕಿಂತ ಹೆಚ್ಚಿನ ಹೆಗ್ಗಳಿಕೆ ಏನು ಗೊತ್ತೇ ಇವುಗಳಲ್ಲಿ ಸರಿಸುಮಾರು ಒಂದು ಲಕ್ಷ ಮೂವತೈದು ಸಾವಿರ ಶಾಖೆಗಳು ಇರುವುದು ಗ್ರಾಮೀಣ ಭಾಗದಲ್ಲಿ! ಭಾರತದ ಅತಿ ದೊಡ್ಡ ಹಾಗು ಅತ್ಯಂತ ಯಶಸ್ವಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಹೊಂದಿರುವ ಎಸ ಬಿ ಐ ಕೂಡ ಈ ಪ್ರಮಾಣದ ಶಾಖೆಗಳನ್ನ ಹೊಂದಿಲ್ಲ! ಹತ್ತಿರತ್ತಿರ ಮೂರು ಲಕ್ಷ ಪೋಸ್ಟ್ ಆಫೀಸ್ ನಲ್ಲಿ ಕೆಲಸಮಾಡುತ್ತಾರೆ. ಸದ್ಯಕ್ಕೆ ಒಂದು ಸಾವಿರ ಪೋಸ್ಟ್ ಆಫೀಸ್ ಏಟಿಎಂ ಕೇಂದ್ರಗಳಿದ್ದು ಇದನ್ನ ದೇಶದ ನಾನಾ ಭಾಗಗಳಲ್ಲಿ ಒಟ್ಟು 5000 ಎಟಿಎಂಗಳನ್ನಾಗಿಸುವ ಉದ್ದೇಶವಿದೆ. ಅಲ್ಲದೆ ಇಂದಿಗೆ ನಲವತ್ತು ಸಾವಿರ ಮೈಕ್ರೋ ಏಟಿಎಂ ಗಳಿದ್ದು ಇವುಗಳ ಸಂಖ್ಯೆಯನ್ನ ಒಂದು ಲಕ್ಷಕ್ಕೆ ಏರಿಸುವ ಗುರಿ ಕೇಂದ್ರ ಸರಕಾರ ಹೊಂದಿದೆ. 
ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುಂಚೆ ಅಂದರೆ 2013-2014 ರಲ್ಲಿ ಭಾರತೀಯ ಅಂಚೆ ಕಛೇರಿಯ ಒಟ್ಟು ಲಾಭ ನೂರು ಕೋಟಿ ರೂಪಾಯಿಯಿತ್ತು. ಇದು 2014-2015 ರಲ್ಲಿ 5೦೦ ಕೋಟಿಗೇರಿತು. ಇದರ ಓಟ ಇಷ್ಟಕ್ಕೆ ನಿಲ್ಲದೆ 2015-2016 ರಲ್ಲಿ ಲಾಭದ ಮೊತ್ತ ಸಾವಿರ ಕೋಟಿ ರೂಪಾಯಿ ತಲುಪಿದೆ ಎಂದರೆ ನೀವು ನಂಬಲೇಬೇಕು. ಇವ್ಯಾವುದೂ ಯಾರನ್ನೋ ಮೆಚ್ಚಿಸಲು ಬರೆದ ಸಾಲುಗಳಲ್ಲ. ನಿಖರ ಅಂಕಿ ಅಂಶಗಳನ್ನ ಅವಲೋಕಿಸಿ ಪರಾಮರ್ಶಿಸಿ ಬರೆದದ್ದು. ಕೇಂದ್ರ ಸರ್ಕಾರದ ಹೊಸ ಯೋಜನೆಗಳಿಂದ ಭಾರತೀಯ ಪೋಸ್ಟ್ ಹೊಸಕಾಲಕ್ಕೆ ಒಗ್ಗಿಕೊಂಡು ಮತ್ತೊಂದು ಮಹಾನ್ ಯಶೋಗಾಥೆಯನ್ನು ಬರೆಯಲಿಕ್ಕೆ ಹೊರಟಿದೆ. ಭಾರತದ ಪೋಸ್ಟ್ ಆಫೀಸ್ ಗಳು ಪೇಮಂಟ್ ಬ್ಯಾಂಕ್ ಆಗಲಿವೆ! ಇದು ಇದೆ ವರ್ಷ ಅಂದರೆ 2017 ರ ಸೆಪ್ಟೆಂಬರ್ ತಿಂಗಳಿಂದ ಆಗಲೇ ಶುರುವಾಗಿದೆ. ಪಾವತಿ ಬ್ಯಾಂಕ್ ಆಗುವುದಕ್ಕೆ ಮುಂಚೆಯೆ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಭಾರತೀಯ ಅಂಚೆ ಮುಂದಿನ ದಿನಗಳಲ್ಲಿ ಏರಲಿರುವ ಹೊಸ ಮಟ್ಟ ನೆನೆದು ಮನಸ್ಸು ಉಲ್ಲಾಸಿತವಾಗುತ್ತದೆ. ಜಗತ್ತಿನ ಘಟಾನುಘಟಿ ದೇಶದ ಅಂಚೆ ವ್ಯವಸ್ಥೆ ನೇಪಥ್ಯಕ್ಕೆ ಸೇರುವ ಸಮಯದಲ್ಲಿ ಭಾರತೀಯ ಅಂಚೆ ಹೊಸ ರೂಪದೊಂದಿಗೆ ಹೊಸ ಹುರುಪಿನೊನೊದಿಗೆ ಮೇಲೆದ್ದಿರುವುದು ಮಾತ್ರ ಅಭಿನಂದನಾರ್ಹ. 
ಪೇಮೆಂಟ್ ಅಥವಾ ಪಾವತಿ ಬ್ಯಾಂಕ್ ಹಾಗೆಂದರೇನು?  
ಪೇಮೆಂಟ್ ಬ್ಯಾಂಕ್ ಹೆಸರೇ ಹೇಳುವಂತೆ ಹಣ ಪಾವತಿ ಮಾಡಲು ಸೃಷ್ಟಿಸಿದ ಬ್ಯಾಂಕ್. ಅಂದರೆ ಈ ಬ್ಯಾಂಕ್ಗಳು ಸಾಲ ನೀಡಲು ಆಗುವುದಿಲ್ಲ. ಠೇವಣಿ ಕೂಡ ಲಕ್ಷ ರೂಪಾಯಿ ವರೆಗೆ ಮಾತ್ರ ತೆಗೆದುಕೊಳ್ಳಬಹದು. ಡೆಬಿಟ್ ಕಾರ್ಡ್ ಕೂಡ ನೀಡಬಹದು. ಆದರೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವಂತಿಲ್ಲ. ಉಳಿದಂತೆ ಯಾವುದೇ ರೀತಿಯ ಹಣ ಸಂದಾಯ ಈ ಬ್ಯಾಂಕ್ಗಳ ಮೂಲಕ ಮಾಡಬಹುದಾಗಿದೆ. ಕಳೆದ ವರ್ಷವೇ ಆರ್ಬಿಐ ಖಾಸಗಿ ಕಂಪನಿಗಳೂ ಸೇರಿದಂತೆ ಹಲವರಿಗೆ ಪೇಮೆಂಟ್ ಬ್ಯಾಂಕ್ ಗೆ ಅನುಮತಿ ನೀಡಿತ್ತು. ಅನುಮತಿ ಪಡೆದಿದ್ದ ಹಲವರು ಈ ವಲಯದಲ್ಲಿ ಲಾಭ ಮಾಡುವುದಕ್ಕೆ ದೀರ್ಘಾವಧಿ ಬೇಕು ಎಂಬ ಕಾರಣಕ್ಕೆ ಹಿಂದೆ ಸರಿದರು. ಪೇಟಿಎಂ, ವೊಡಾಫೋನ್, ಕೋಟಕ್ ಮಹಿಂದ್ರ , ರಿಲಯನ್ಸ್  ಸೇರಿದಂತೆ ಕೆಲವೇ ಕಂಪನಿಗಳ ಜತೆ ಭಾರತದ ಪೋಸ್ಟಾಫೀಸು ಸಹ ಸ್ಪರ್ಧೆಯಲ್ಲಿದೆ. ಉಳಿದ ಪೇಮೆಂಟ್ ಬ್ಯಾಂಕ್ಗಳಿಗೆ ಹೋಲಿಸಿದರೆ ಅದಾಗಲೇ ದೇಶದ ಮೂಲೆ ಮೂಲೆಗಳಲ್ಲಿ ಭಾರತೀಯ ಅಂಚೆ ಕಚೇರಿಯ ಜಾಲ ಹರಡಿಬಿಟ್ಟಿದೆ ಹೀಗಾಗಿ ಭಾರತೀಯ ಅಂಚೆ ಕಛೇರಿಗೆ ಸ್ಪರ್ಧೆ ಒಡ್ಡಿ ಗೆಲುವನ್ನ ಸಾಧಿಸುವುದು ಇತರ ಸಂಸ್ಥೆಗಳಿಗೆ ಸುಲಭವಲ್ಲ. ಹಣಕಾಸು ಜಗತ್ತಿನಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಇರಬೇಕು ಎಂಬ ಮೋದಿ ಸರ್ಕಾರದ ಆಶಯವನ್ನು ಈಡೇರಿಸಿಕೊಳ್ಳುವುದಕ್ಕೆ ಪೋಸ್ಟಾಫೀಸುಗಳಿಗಿಂತ ಉತ್ತಮ ಮಾರ್ಗ ಇಲ್ಲವೇ ಇಲ್ಲ ಏಕೆಂದರೆ ಮೊದಲೇ ಹೇಳಿದಂತೆ ಇದರ ಇರುವಿಕೆ ಇನ್ನ್ಯಾವುದೇ ಸಂಸ್ಥೆಗಳ ಇರುವಿಕೆಗಿಂತ ಹೆಚ್ಚಿದೆ ಸಂಖ್ಯೆಗೂ ಮುಖ್ಯವಾಗಿ ಇದರ ಉಪಸ್ಥಿತಿ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ. 
ಪೇಮೆಂಟ್ ಬ್ಯಾಂಕ್ನಿಂದ  ಪ್ರಯೋಜನವೇನು? 
ಪೇಮೆಂಟ್ ಬ್ಯಾಂಕ್ನಿಂದ ಆಗುವ ಪ್ರಯೋಜನಗಳನ್ನ ನಿಖರವಾಗಿ ಕೆಳಕಂಡಂತೆ ಮಾಡಬಹದು. 
1. ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರುವ ಅವಶ್ಯಕೆತೆ ಇದೆ. ಆದರೆ ಪೇಮೆಂಟ್ ಬ್ಯಾಂಕ್ನಲ್ಲಿ ಇದರ ಅವಶ್ಯಕತೆ ಇಲ್ಲ. ಅಲ್ಲದೆ ಬ್ಯಾಂಕ್ಗಳು ಇರದ ಗ್ರಾಮೀಣ ಪ್ರದೇಶದಲ್ಲಿ ಕೂಡ ಪೇಮೆಂಟ್ ಬ್ಯಾಂಕ್ ಕಾರ್ಯ ನಿರ್ವಹಿಸಬಹದು. 
2. ಸಾಂಪ್ರದಾಯಿಕ ಬ್ಯಾಂಕ್ಗಳಿಗಿಂತ ಒಂದಂಶ ಹೆಚ್ಚಿನ ಬಡ್ಡಿ ದರ ಉಳಿಕೆಯ ಮತ್ತು ಹೂಡಿದ ಹಣದ ಮೇಲೆ ಸಿಗುತ್ತದೆ. 
3. ಉಪಯೋಗಿಸಲು ಅತ್ಯಂತ ಸುಲಭ. ಸದ್ಯಕ್ಕೆ 8 ಪೇಮೆಂಟ್ ಬ್ಯಾಂಕ್ಗಳಿಗೆ ಅನುಮತಿ ನೀಡಲಾಗಿದೆ. ಇವುಗಳಲ್ಲಿ ನಾಲ್ಕು ಟೆಲಿಕಾಂ ಕಂಪನಿಗಳು! ಮೊಬೈಲ್ ಬಳಸಿ ಹಣದ ವರ್ಗಾವಣೆ ಕ್ಷಣಾರ್ಧದಲ್ಲಿ ಮಾಡಿಬಿಡಬಹದು. ಸಾಂಪ್ರದಾಯಿಕ ಬ್ಯಾಂಕ್ನಲ್ಲಿ ಕ್ಯೂ ನಿಲ್ಲುವ ಪದ್ದತಿ ಇದರಿಂದ ತಪ್ಪಲಿದೆ. 
4. ಇದೊಂದು ಸುರಕ್ಷಿತ ಹಣ ಪಾವತಿ ವಿಧಾನವಾಗಿದೆ. ಅತಿ ಕಡಿಮೆ ಸಮಯದಲ್ಲಿ ಹಣವನ್ನ ಕೊಡಬೇಕಾದವರಿಗೆ ತಲುಪಿಸುವ ಸುರಕ್ಷಿತ ವಿಧಾನವಾಗಿದೆ. 
5. ನಮ್ಮ ಮೊಬೈಲ್ ಸಂಖ್ಯೆಯೇ ಇಲ್ಲಿ ನಮ್ಮ ಖಾತೆಯ ಸಂಖ್ಯೆ. ಎಷ್ಟೇ ವರ್ಷ ಕಳೆಯಲಿ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇದ್ದರೆ ಸಾಕು ನಿಮ್ಮ ಅಕೌಂಟ್ ಸಂಖ್ಯೆ ಬದಲಾಗುವುದೇ ಇಲ್ಲ. 
6. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ಯಾಶ್ ಬ್ಯಾಕ್ ಮತ್ತು ಸೋಡಿ ನೀಡುವ ಅನೇಕ ಹೊಸ ಆವಿಷ್ಕಾರಗಳು ಮಾರ್ಕೆಟಿಂಗ್ ಯತ್ನಗಳು ನೆಡೆಯುತ್ತಿರುತ್ತವೆ. ನಾವು ಯಾವುದೇ ಒಂದು ಪೇಮೆಂಟ್ ಬ್ಯಾಂಕ್ಗೆ ನಿಯತ್ತಾಗಿ ಗ್ರಾಹಕನಾಗಿ ಉಳಿದುಕೊಂಡರೆ ನಮಗೆ ಹೆಚ್ಚಿನ ಲಾಭ. 
7. ಕೆಲವು ಪೇಮೆಂಟ್ ಬ್ಯಾಂಕ್ಗಳು ನೀವು ಒಂದುಲಕ್ಷ ಹಣವನ್ನ ಇಟ್ಟರೆ ಅಷ್ಟೇ ಮೊತ್ತದ ಹಣದ ಇನ್ಶೂರೆನ್ಸ್ ಪಾಲಿಸಿ ಕೊಡುವುದಾಗಿ ಹೇಳುತ್ತಿವೆ. ಏರ್ಟೆಲ್ ಇಟ್ಟ ಹಣದ ಮೊತ್ತದ ನಿಮಿಷ ಟಾಕ್ ಟೈಮ್ ಫ್ರೀ ನೀಡುತ್ತೇನೆ ಎನ್ನುತ್ತದೆ. ಹೀಗೆ ಇನ್ನೂ ಹಲವಾರು ಆಮಿಷಗಳು ಗ್ರಾಹಕನಿಗಿದೆ. 
ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿದಷ್ಟೂ ಗ್ರಾಹಕಿನಿಗೆ ಲಾಭ ಎನ್ನುವುದು ಯಾರಿಗಾದರೂ ತಿಳಿದ ವಿಷಯವೇ ಆಗಿದೆ. ಇದನ್ನ ಮನಸ್ಸಿನಲ್ಲಿ ಇರಿಸಿ ನೋಡಿದರೆ ಪೋಸ್ಟ್ ಆಫೀಸ್ ಕೂಡ ಪೇಮೆಂಟ್ ಬ್ಯಾಂಕ್ ಆಗಿ ಸ್ಪರ್ಧೆಗೆ ಇಳಿದಿರುವುದು ಅತ್ಯಂತ ಖುಷಿ ಕೊಡುವ ವಿಷಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ ಬ್ರಿಟನ್ ನ ರಾಯಲ್ ಪೋಸ್ಟ್ ನಂತಹ ಹೆಗ್ಗಳಿಕೆ ಹೊಂದಿದ್ದ ಸಂಸ್ಥೆಗಳು ಅವನತಿಯ ದಾರಿಯಲ್ಲಿರುವಾಗ ನಮ್ಮ ಅಂಚೆ ಕಛೇರಿ ನೆಡೆಯುತ್ತಿರುವ ದಾರಿ ಇನ್ನೂ ಹೆಚ್ಚಿನ ಖುಷಿ ಕೊಡುವ ವಿಚಾರ. ನಮ್ಮದು ಅತ್ಯಂತ ಜನಭರಿತ ಸಮಾಜ ಇಂತಹ ಸಮಾಜದಲ್ಲಿ ಎಷ್ಟೇ ಸಂಖ್ಯೆಯ ಕೆಲಸವಿದ್ದರೂ ಕಡಿಮೆಯೇ ಈ ನಿಟ್ಟಿನಲ್ಲಿ ಮೂರು ಲಕ್ಷ ಜನರಿಗೆ ಕೆಲಸ ನೀಡಿ ಅವರನ್ನ ಬೀದಿಗೆ ಬೀಳದಂತೆ ತಡೆದು ನಮ್ಮ ಅಂಚೆ ಇನ್ನಷ್ಟು ಉನ್ನತಿಯ ಕಡೆಗೆ ನೆಡೆಯುತ್ತಿರುವುದು ಎಲ್ಲವನ್ನೂ ಮೀರಿದ ಖುಷಿಯ ವಿಚಾರ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com