ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?

ಮತ್ತೇನು ಹೇಳೋಣ ಆ ದಶಕಂಠನ ಬಗ್ಗೆ? ದೇವತೆಗಳನ್ನೆಲ್ಲ ಸೋಲಿಸಿ ಅಜೇಯನಾದನೆಂದೇ? ತನ್ನಣ್ಣ ಕುಬೇರನನ್ನು ಓಡಿಸಿ ಲಂಕಾಪತಿಯಾದನೆಂದೆ? ತಪಸ್ವಿಗಳನ್ನು ಕೊಂದನೆಂದೆ ? ಯಾವ ಘನಕಾರ್ಯಗಳನ್ನು...
ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?
(ಈ ಒಂದು ಘಟನೆ ಸಾಕು ನಮ್ಮದೇನೂ ನಡೆಯುವುದಿಲ್ಲ ಎಂದು ಹೇಳುವುದಕ್ಕೆ. ದೇವರುಗಳನ್ನು ಒಲಿಸಿದೆವೆಂಬ ಸಂತಸಕ್ಕಾಗಲಿ, ನಮ್ಮ ಕಾರ್ಯಗಳಲ್ಲಿ ಎಡವುತ್ತಿದ್ದೇವೆಂಬ ನೋವಿಗಾಗಲಿ ನಾವು ಕಾರಣರಲ್ಲ . ಈ ಸೋಲು ಗೆಲುವುಗಳೆರಡೂ ನಮ್ಮ ಕೈಯ್ಯಲ್ಲಿಲ್ಲ. ಯಾವುದು ದೈವದಿಂದ ಕರುಣಿಸಲ್ಪಡುತ್ತದೆಯೋ , ಅದರಲ್ಲಷ್ಟೇ ನಾವು ನಿಷ್ಠೆಯಿಂದ ಕಾರ್ಯ ತತ್ಪರರಾಗಬೇಕು. ತಪಸ್ಸು ನಮ್ಮದೇ ಇದ್ದರೂ, ಬ್ರಹ್ಮದೇವನೇ ಪ್ರಾರ್ಥಿಸ ಹೇಳಿದ್ದರೂ ಕುಪ್ರಾರ್ಥನೆ, ಸುಪ್ರಾರ್ಥನೆ ಈ ಎರಡೂ ಅರ್ಥಹೀನವೆಂದೇ ಭಾಸವಾಗುತ್ತದೆ. ಪಾಪ ದಶಕಂಠ ಬಾಯಿಬಿಟ್ಟು ಕೇಳಿದ ಅಮರತ್ವವನ್ನು. ಸಾವು ಅನುಲ್ಲಂಘನೀಯ, ಅಪವಾದ ರಹಿತ ಎಂದೆಲ್ಲ ಭಾಷಣ ಬಿಗಿದು, ಅವನಿಗೆ ಅಮರ್ತ್ಯ ಸ್ಥಿತಿ ಕೊಡದೆ, ಕೇಳದೇ ಇದ್ದರೂ ವಿಭೀಷಣನಿಗೆ ಸ್ಥಿರಂಜೀವಿತ್ವವನ್ನಿತ್ತ ! ಕುಂಭಕರ್ಣನಿಗೆ ಮೊಂಕು ಕವಿಸಿ ನಿದ್ದೆ ಮಾಡಿಸಿದ . ನಾವೇನು ಮಾಡಬಲ್ಲೆವು? ನಾವೇನು ಸಾಧಿಸಬಲ್ಲೆವು? ಎಲ್ಲವೂ ವಿಧಿಯದೇ ಆಗಿದ್ದಾಗ)
**********
ಮತ್ತೇನು ಹೇಳೋಣ ಆ ದಶಕಂಠನ ಬಗ್ಗೆ ? ತನ್ನಣ್ಣ ಕುಬೇರನನ್ನು ಓಡಿಸಿ ಲಂಕಾಪತಿಯಾದನೆಂದೆ ? ಸಹೋದರನ ಪುಷ್ಪಕ ಕಿತ್ತುಕೊಂಡನೆಂದೇ ? ದೇವತೆಗಳನ್ನೆಲ್ಲ ಸೋಲಿಸಿ ಅಜೇಯನಾದನೆಂದೇ ? ಕಂಡ ಕಂಡವರ ಹೆಂಡಿರನ್ನು ಸುಲಿದು ತಂದನೆಂದೇ ? ಯಙ್ಞಕುಂಡಗಳಿಗೆ ರಕ್ತ - ಮಾಂಸ ಸುರಿದನೆಂದೇ ? ತಪಸ್ವಿಗಳನ್ನು ಕೊಂದನೆಂದೆ ? ದೇವ ವಿರೋಧವನ್ನು ಪೋಷಿಸಿದನೆಂದೇ ? ಅವನ ಯಾವ ಘನಕಾರ್ಯಗಳನ್ನು ಹೊಗಳೋಣ ? 
ದಶಕಂಠನಿಗೆ ರಾವಣನೆಂಬ ಬಿರುದು ಬಂದದ್ದೊಂದು ವಿಶೇಷ. ಅದನ್ನು ಮುಂದೊಮ್ಮೆ ವಿವರಿಸುವ. ಸದ್ಯಕ್ಕೆ ದಶಕಂಠನನ್ನು ರಾವಣನೆಂದೇ ಸಂಬೋಧಿಸುವ. ರಾವಣನ ಅಡ್ಡಿಯಿರದ ದಿಗ್ವಿಜಯಕ್ಕೊಂದು ನೆಲೆ ನಿಂತುದು ಮರುತ್ತನ ಯಙ್ಞಮಂಟಪದಲ್ಲಿ. ಯುದ್ಧಕ್ಕೆ ಆಹ್ವಾನಿಸಿದ ರಾವಣನಿಗೆ ಛೀಗುಟ್ಟಿ ಧನು ತುಡುಕಿದ ಮರುತ್ತ. " ಎಂತಹ ಆದರ್ಶ ಸಹೋದರನಯ್ಯಾ ನೀನು? ಅಣ್ಣನ ವಿಮಾನವನ್ನೇ ಕಿತ್ತುಕೊಂಡ ಮಹಾತ್ಮ! ಮೂರು ಲೋಕಗಳಲ್ಲಿ ನಿನಗೆ ಸಮನಾದವರು ಯಾರೂ ಇಲ್ಲ! ನಿಲ್ಲು. ಈಗಲೇ ನನ್ನ ಹರಿತ ಬಾಣನಿಂದ ನಿನ್ನನ್ನು ಯಮಸದನಕ್ಕಟ್ಟುವೆ. " ಏನಾಗುತ್ತಿತ್ತೋ ಗೊತ್ತಿಲ್ಲ , ಆದರೆ ಯಙ್ಞ ಪುರೋಹಿತ ಸಂವರ್ತ ಅಡ್ಡಬಂದು ಘರ್ಷಣೆ ತಪ್ಪಿಸಿ. ಯಙ್ಞ ಕರ್ತೃ ಯುದ್ಧ ಮಾಡಕೂಡದೆಂದ. ಗುರುವಾಙ್ಞೆಗೆ ತಲೆಬಾಗಿ ಮರುತ್ತ ಸುಮ್ಮನಾದ. ಜಯಶೀಲನಾದ ರಾವಣ ಒಂದಷ್ಟು ಋಶಿಗಳನ್ನು ಕಬಳಿಸಿ ಮುಂದುವರಿದ. 
   (ತಾನ್ ಭಕ್ಷೈತ್ವಾ ತತ್ರಸ್ಥಾನ್ ಮರ್ಷೀನ್ ಯಙ್ಞಮಾಗತಾನ್)
ಮುಖ್ಯವಾದದ್ದು ಮರುತ್ತನ ಮೌನವೂ ಅಲ್ಲ; ರಾವಣನ ಜಯವೂ ಅಲ್ಲ. ನಾವು ನಡೆಸುವ ಶ್ರಾದ್ಧ ಕ್ರಿಯೆಗೆ ಒಂದು ಸಾರ್ಥಕ್ಯ ದೊರಕಿದ್ದು ಇಲ್ಲಿ; ಈ ಯಙ್ಞದಲ್ಲಿ. ರಾವಣ ಆಗಮನವಾಗುತ್ತಿದ್ದಂತೆಯೇ ಇಂದ್ರಾದಿ ದೇವತೆಗಳು ಹೆದರಿ ಬೇರೆ ಬೇರೆ ಪ್ರಾಣಿಗಳ ವೇಷ ಧರಿಸಿ ಮರೆಯಾದರು. ಅವರಲ್ಲಿ ಯಮನೂ ಒಬ್ಬ. ಹಿಂದೆ ರಾವಣನನ್ನು ಎದುರಿಸಿದ್ದಾಗ, ಇನ್ನೇನು ಅವನನ್ನು ಮುಗಿಸಬೇಕೆನ್ನುವಾಗ ಬ್ರಹ್ಮ ಬಂದು ಯಮನಿಗೆ ಹೇಳಿದ್ದ; " ನೀನು ಯಮದಂಡ ಪ್ರಯೋಗಿಸಿದರೆ ಅದು ರಾವಣನನ್ನು ಸಾಯಿಸಲೇ ಬೇಕು. ಹಾಗಾದರೆ ನಾನು ರಾವಣನಿಗಿತ್ತಿರುವ ವರ ಅಪ್ರಯೋಜಕವಾಗುತ್ತದೆ. ಅವನನ್ನು ಅದು ಸಾಯಿಸದೇ ಇದ್ದರೆ ನಿನ್ನ ಯಮದಂಡ ಎಲ್ಲರನ್ನು ನುಂಗುವುದೆಂದು ನಿನಗಿತ್ತಿರುವ ನನ್ನ ಮಾತು ತಪ್ಪುತ್ತದೆ. ಹೇಗಾದರೂ ನಾನು ವಚನ ಭ್ರಷ್ಠನಾಗುವುದರಿಂದ, ಅದನ್ನು ತಪ್ಪಿಸಲು ನೀನು ಮಾಯವಾಗು" ಎಂದಿದ್ದ. ಈಗಲೂ ಹಾಗೇ ಮಾಡಬೇಕೆಂದು ಯಮ ರಾವಣನ ಕಣ್ಣಿಗೆ ಬೀಳದಂತೆ ಬಳಿಯಲ್ಲಿದ್ದ ಕಾಗೆಯ ರೂಪ ಧರಿಸಿದ್ದ. ರಾವಣ ಯಙ್ಞಮಂಟಪದಿಂದ ನಿರ್ಗಮಿಸಿದ ಮೇಲೆ ನಿಜರೂಪ ತಳೆದ ಯಮ, ತನ್ನ ಕೃತಙ್ಞತೆಯನ್ನು ಕಾಗೆಯ ಕುಲಕ್ಕೆ ಅರ್ಪಿಸಿದ. " ಎಲೈ ವಾಯಸವೇ, ನಾನು ನಿಮ್ಮ ರೂಪ ಧರಿಸಿದ್ದರಿಂದ ರಾಕ್ಷಸನ ದೃಷ್ಟಿಗೆ ಬೀಳದಾದೆ. ನಿಮಗೆ ಕೃತಙ್ಞ . ನಿಮಗೆ ಯಾವ ರೋಗವೂ ಬರದಿರಲಿ. ಅಷ್ಟೇ ಅಲ್ಲ, ಎಲ್ಲ ಮನುಷ್ಯರೂ ನಿಮ್ಮನ್ನು ಆಹ್ವಾನಿಸಲಿ. ನನ್ನ ಲೋಕದಲ್ಲಿದ್ದ ಪಿತೃಗಳು ಹಶಿದಿದ್ದಾಗ ಭೂಲೋಕದಲ್ಲಿ ಅವರ ಉತ್ತರಾಧಿಕಾರಿಗಳು ಮಾಡುವ ಶ್ರಾದ್ಧ ಸಮರ್ಪಕವಾಗಬೇಕಿದ್ದರೆ ನೀವು ಪಿಂಡವನ್ನು ತಿನ್ನಬೇಕು. ನೀವು ಭಕ್ಷಿಸಿದರೆ ಪಿತೃಗಳು ತೃಪ್ತರಾಗುತ್ತಾರೆ. (ಏತೇ ಮದ್ವಿಷಯಸ್ಥಾವೈ ಮಾನವಾಃ ಕ್ಷುತ್ ಭಯ ಆರ್ದಿತಾಃ ತ್ವೈ ಭುಕ್ತೇತು ತೃಪ್ತಾಸ್ತೇ ಭವಿಷ್ಯಂತಿ ಸಬಾಂಧವಾಃ) ಇದು ಕಾರಣವೇ ಈಗಲೂ ತಿಥಿಯ ಅಂತ್ಯಕ್ಕೆ ಪಿಂಡವನ್ನು ಕಾಗೆ ಕುಕ್ಕಲೆಂದೇ ಕರ್ತೃ ಕಾಯುತ್ತಾನೆ . ಇಲ್ಲಿಗೆ ಈ ಪ್ರತಿನಾಯಕನ ಪುರಾಣ ಮುಗಿಸಿ ಮತ್ತೆ ಶ್ರೀರಾಮ ವಂಶ ವರ್ಣನೆಯ ಕಡೆ ತಿರುಗುವ.
  ************
ವಿಜಯದಿಂದ ಮತ್ತನಾದ ರಾವಣ ಗರ್ಜಿಸಿದ , " ಪ್ರಹಸ್ತ , ಸೇನೆಗೆ ಆದೇಶಿಸು ಅಯೋಧ್ಯೆಯ ಕಡೆ ನುಗ್ಗಲಿ. (... ಮುಗಿದಿಲ್ಲ )

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com