'ಶ್ರೀರಾಮರೇ, ನೀವೊಪ್ಪುವ ಲಗ್ನದಲ್ಲಿನ ಅನಿವಾರ್ಯ ಅಂಗಗಳಾವುವು ?'

"ನಿಶ್ಚಿತಾರ್ಥ..."ತುಸು ನಗೆಯಿಂದಲೇ ಕೇಳಿದರು, "ಯಾರಿಗೆ ನಿಶ್ಚಿತಾರ್ಥ ಗುರುಗಳೇ? ಯಾರಿಗಾಗಿ? ಯಾರಿಗೆ ಹೇಳಲು? ನಾನು ಬರುವುದಕ್ಕೂ ಮುನ್ನವೇ ನಿಶ್ಚಯವಾಗಿಬಿಟ್ಟಿದೆ, ’ಯಾರು ಬಿಲ್ಲೆತ್ತಿ ಹೆದೆ
ರಾಮ
ರಾಮ
"ನಿಶ್ಚಿತಾರ್ಥ..."ತುಸು ನಗೆಯಿಂದಲೇ ಕೇಳಿದರು, "ಯಾರಿಗೆ ನಿಶ್ಚಿತಾರ್ಥ ಗುರುಗಳೇ? ಯಾರಿಗಾಗಿ? ಯಾರಿಗೆ ಹೇಳಲು? ನಾನು ಬರುವುದಕ್ಕೂ ಮುನ್ನವೇ ನಿಶ್ಚಯವಾಗಿಬಿಟ್ಟಿದೆ, 'ಯಾರು ಬಿಲ್ಲೆತ್ತಿ ಹೆದೆ ಏರಿಸುವರೋ ಅವರಿಗೇ ಸೀತೆ'. ಆಯಿತು, ಅದಾದಮೇಲೆ? ಆಕೆಯನ್ನು ಮಗನಿಗೆ ವಿವಾಹ ಮಾಡಿಸಲೇ ತಂದೆಯೂ, ಗುರುಗಳೂ ಬಂದಿದ್ದಾರೆ. ಇಡೀ ಮಿಥಿಲೆಗೇ ಈ ವಿಷಯ ಗೊತ್ತಿದೆ. ಎಂದಮೇಲೆ ನೀವು ಹೇಳುವ ಆ ನಿಶ್ಚಿತಾರ್ಥ ಏಕೆ? ಈ ಯಾವುದೂ ಇಲ್ಲದೆಯೇ ಇಂತಹ ಗಂಡು, ಹೆಣ್ಣು ಗೃಹಸ್ಥ ಧರ್ಮ ಪ್ರವೇಶ ಮಾಡುತ್ತಾರೆ ಎಂದು ಯಾವಾಗ ಖಚಿತವಾಗುತ್ತದೆಯೋ, ಆಗಲೇ ನಿಶ್ಚಿತಾರ್ಥ ಆಗಿ ಹೋಯಿತು. ಅದನ್ನು ಬಹಿರಂಗವಾಗಿ ಆಚರಿಸುವುದೇನು ಬಂತು, ನಾನು ಕೇಳಿದ್ದೇನೆ ಕೆಲವೆಡೆ ವಿವಾಹಕ್ಕೆ ಬಹು ಮುನ್ನವೇ, ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಎನ್ನುವ ಮದುವೆಯಂತೆ ದೊಡ್ಡದಾಗಿ ಬಂಧು-ಬಳಗವನ್ನು ಕರೆದು ಆಚರಿಸುತ್ತಾರೆ.
’ನನಗೆ ಮದುವೆಯನ್ನೇ ಸರಳವಾಗಿ ಮಾಡಬೇಕೆನ್ನುವವನಿಗೆ ಈ ನಿಶ್ಚಿತಾರ್ಥದ ಆರ್ಭಟ ಇಷ್ಟವೇ ಆಗುವುದಿಲ್ಲ. ಅಕಸ್ಮಾತ್ ಮಾಡಲೇ ಬೇಕೆನ್ನುವ ಹೆಬ್ಬಯಕೆ ಇದ್ದರೆ ಗಂಡು-ಹೆಣ್ಣಿನ ಮನೆಯವರಿಬ್ಬರಿದ್ದರೆ ಸಾಕು. ಹೇಗೂ ಎಲ್ಲರೂ ನಿಶ್ಚಯ ಆಗಿರುವಾಗ, ಮದುವೆಗೆ ಸಿದ್ಧತೆ ಗಳಿಸುತ್ತಿರುವಾಗ ಈ ನಿಶ್ಚಿತಾರ್ಥವೆಂಬುದರ ಅರ್ಥವೇನು?" ದೊಡ್ಡ ಭಾಷಣವೇ ಆಯಿತು ರಾಮರಿಂದ. ಬೆವರು ವರೆಸಿಕೊಂಡರು ಶತಾನಂದರು. "ಎಲ್ಲದಕ್ಕೂ ಬೇಡವೆನ್ನುತ್ತಿರುವಿರಿ, ಕೊನೆಯದಾಗಿ ಒಂದು ಕೇಳಿಬಿಡುತ್ತೇನೆ. ಕಾಶಿ ಯಾತ್ರೆ ಬೇಕೋ, ಬೇಡವೋ?". "ಇದು ಪ್ರಶ್ನಾವಳಿಯ ಕೊನೆಯ ಪ್ರಶ್ನೆಯೋ? "ತುಸು ಹಾಸ್ಯ ಮಿಶ್ರಿತ ಧ್ವನಿಯಲ್ಲೇ ಕೇಳಿದರು ರಾಮರು. ಅತ್ಯಂತ ಸ್ಪಷ್ಟವಾಗಿ ಆರಂಭಿಸಿದರು, "ಇದೆಂಥ ನಾಟಕ ಮಾಡುತ್ತಿದ್ದೀರಿ? ಇದರಂತಹ ನಾಟಕ ಮತ್ತೊಂದಿಲ್ಲ. ಇದಕ್ಕೊಂದು ಹರುಕು ಕಥೆಯನ್ನೂ ಕಟ್ಟಿಬಿಟ್ಟಿದ್ದೀರಿ, ಅಥವ ಆಧಾರ ಎನ್ನುತ್ತೀರಿ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಒಬ್ಬಾತ ಕಾಶಿಗೆ ಹೊರಟನಂತೆ, ವಾರಣಾಸಿ ಎಂಬುದು ಪ್ರಪಂಚದ ಹಳೆಯ, ಅತ್ಯಂತ ಹಳೆಯ ಪಟ್ಟಣ. ನಮ್ಮ ವಂಶದ ಹರಿಶ್ಚಂದ್ರನಿಗೆ ಪರಮೇಶ್ವರ ಪ್ರತ್ಯಕ್ಷವಾದ ಪರಮ ಪುಣ್ಯ ಕ್ಷೇತ್ರ. ನಿತ್ಯ ಸ್ಮಶಾನ ಎಂದು ಅದನ್ನೇಕೆ ಕರೆಯುತ್ತಾರೆ ಎಂದರೆ, ಅಲ್ಲಿ ಪ್ರತಿ ನಿತ್ಯ ಆ ಗಂಗಾನದಿಯಲ್ಲಿ, ದಿವ್ಯ ಗಂಗಾನದಿಯಲ್ಲಿ ತಮ್ಮ ದೇಹಗಳನ್ನು ತೇಲಿ ಬಿಡಬೇಕೆಂಬ ಉದ್ದಿಶ್ಯದಿಂದಲೇ ಎಷ್ಟೋ ವರ್ಷಗಳು ಕಾಶಿಯಲ್ಲೇ ಬಂದು, ನೆಲೆಸಿ, ಪ್ರಾಣ ಬಿಡುವವರಿದ್ದಾರೆ. ಹಾಗೂ ಆ ಪ್ರಮಾಣದಲ್ಲಿ ಅಲ್ಲಿ ಸಾಯುವುದರಿಂದ ಅಲ್ಲಿನ ಸ್ಮಶಾನಗಳಲ್ಲಿ ಹೆಣಗಳು ಸುಡುತ್ತಲೇ ಇರುತ್ತದೆ. ಇದು ಪ್ರಸಿದ್ಧವಾಗಿರುವ ವಿಷಯ. ಹೀಗಾಗಿ ಅಲ್ಲಿ ಯಾರಿಗೂ ಸ್ಮಶಾನದ ಮೈಲಿಗೆ ಇರುವುದೇ ಇಲ್ಲ ಎನ್ನುವುದು ಪ್ರಸಿದ್ಧಿ. 
ನಮ್ಮ ವಂಶ ಪರಂಪರೆಯಂತೆ ಪರಮೇಶ್ವರ ನಮಗೆ ಆರಾಧ್ಯ ದೈವ. ನಾವು ಯಾವುದಾದರೂ ಪ್ರಮುಖ ಘಟ್ಟವನ್ನೋ, ವಿಜಯ ಯಾತ್ರೆಯನ್ನೋ ಮುಗಿಸಿದಾಗ ಶಿವಾರಾಧನೆ ಮಾಡುತ್ತೇವೆ. ಇರಲಿ, ಹೀಗೆ ನಮ್ಮ ದೇಶದಲ್ಲಿ ಅತಿ ಪ್ರಸಿದ್ಧವಾಗಿರುವ ಕಾಶಿಗೆ, ಹಾಗೆ ನೋಡಿದರೆ ಅದರಂತಃ ವಿದ್ವತ್ ಕ್ಷೇತ್ರವೇ ಇಡೀ ಭಾರತದಲ್ಲಿ ಮತ್ತೊಂದಿಲ್ಲ. ಅಂತಹ ಕಾಶಿಗೆ, ಅಲ್ಲಿ ಅಧ್ಯಯನ ಮಾಡುವುದಕ್ಕೆ ಯಾವುದೇ ವಿದ್ವಾಂಸ ಇಷ್ಟ ಪಟ್ಟರೆ ಅದು ಗೌರವಾರ್ಹವಾದ ವಿಷಯವೇ. ಇಷ್ಟೆಲ್ಲ ಪೀಠಿಕೆಯನ್ನೇಕೆ ಹೇಳಿದೆನೆಂದರೆ ಮುಂದೆ ಹೇಳುತ್ತಿರುವುದು ಇದೆಲ್ಲದಕ್ಕೂ ವಿರುದ್ಧವಾದದ್ದು.
ಅಂತೂ ಇರಲಿ, ಹೀಗೆ ಅಲ್ಲಿ ವಿದ್ಯೆಯನ್ನು ಅಧ್ಯಯನ ಮಾಡಲಿಕ್ಕಾಗಿ ಹೊರಟಿದ್ದಾನೆ ಒಬ್ಬ ವಿದ್ಯಾಪಿಪಾಸು ಎಂದಿಟ್ಟುಕೊಳ್ಳಿ, ಆ ಕಥೆಯ ಪ್ರಕಾರ. ದಾರಿಯಲ್ಲೊಬ್ಬ ಕನ್ಯಾ ಪಿತೃ ಸಿಗಬೇಕೆ? ಮಗಳಿಗೆ ಗಂಡು ಹುಡುಕಿ ಸುಸ್ತಾಗಿದ್ದ ಆ ವ್ಯಕ್ತಿ ಹೇಳುತ್ತಾನಂತೆ, "ನನ್ನ ಮಗಳನ್ನು ಮದುವೆಯಾಗಿ ಅನಂತರ ವಿದ್ಯಾಭಾಸ ಮುಂದುವರಿಸಿ ಅವಳೊಟ್ಟಿಗೆ". ಈ ಬೆಪ್ಪ ವಿದ್ಯಾರ್ಥಿ ತಕ್ಷಣಕ್ಕೆ ಒಪ್ಪಿ ಮದುವೆಗೆ ಸಿದ್ಧನೇ ಆಗಿಬಿಟ್ಟ! ಅವನನ್ನು ಕರೆತಂದು ಮಗಳನ್ನು ಧಾರೆ ಎರೆದರಂತೆ. ಮುಂದೆ? ಕಥೆ ಅಲ್ಲಿಗೆ ನಿಂತು ಹೋಯಿತು. ಅವನೇನು ಹೋದನೋ, ಇಲ್ಲವೋ, ಈ ದುರ್ಬಲ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಇಂದು ಈ ಕಾಶಿ ಯಾತ್ರೆ ನಾಟಕವನ್ನು ಆಡುತ್ತಿದ್ದಾರೆ. ಹೆಚ್ಚಾಗಿ ಇದು ನಿಮ್ಮಲ್ಲಿ, ಎಂದರೆ ಬ್ರಾಹ್ಮಣರಲ್ಲಿದೆ, ಅದನ್ನು ನೋಡಿ ನಮ್ಮಲ್ಲೂ, ಅಂದರೆ ಅದೇ ನಾಟಕ ಕೆಲವರು ಆಡಲು ಪ್ರಯತ್ನಿಸುತ್ತಿದ್ದಾರೆ. ಇದೆಷ್ಟು ಹಾಸ್ಯಾಸ್ಪದವೆಂದರೆ, ಗಂಡು-ಹೆಣ್ಣು ನೋಡುತ್ತಾರೆ, ಮದುವೆಗೆ ಸಿದ್ಧವಾಗುತ್ತಾರೆ, ಮದುವೆಗೆ ಬಂದಿರುತ್ತಾರೆ, ಕೊನೆಗೆ ಮಾವನೇ ಕಾಶಿ ಯಾತ್ರೆಯ ವೇಷವನ್ನೂ ಕೊಡುತ್ತಾನೆ, ಹೆಣ್ಣಿನ ಕಡೆಯವರೇ ಬೇಕೋ, ಬೇಡವೋ ಕೊಡೆಯನ್ನೂ ಹಿಡಿಯುತ್ತಾರೆ, ಕನ್ಯಾಮಂಟಪದಿಂದ ಹತ್ತು ಹೆಜ್ಜೆ ತಾಳ ಮೇಳಗಳೊಡನೆ ಹೋಗುವುದೂ ಆಗುತ್ತದೆ, ನಿಮ್ಮಂತಹ ಪುರೋಹಿತರು ಕನ್ಯಾಪಿತೃವಿನಿಂದ ಹೇಳಿಸಿ ವಾಪಸ್ ಕರೆಸಿಕೊಂಡು ನೇರ ಈಗಾಗಲೇ ಸಿದ್ಧವಿರುವ ಕಲ್ಯಾಣ ಮಂಟಪಕ್ಕೇ ಕರೆತರುತ್ತಾರೆ.
ಇಂತಹ ನಾಟಕ ಮದುವೆಯ ಗಾಂಭೀರ್ಯವನ್ನೇ ಕೆಡಿಸುತ್ತದೆ. ಹೇಳಿ ಗುರುಗಳೇ, ಎದೆ ಮುಟ್ಟಿಕೊಂಡು ಹೇಳಿ, ಈ ಕಾಶಿ ಯಾತ್ರೆ ಯಾವುದಾದರೂ ವೇದದಲ್ಲೋ, ಶಾಸ್ತ್ರದಲ್ಲೋ ಇದೆಯೋ, ಹೇಳಿ." " ಉಫ಼್! "ಶತಾನಂದರು ನಿಟ್ಟುಸಿರು ಬಿಟ್ಟರು, ಅವರ ಹಿಂದಿನಿಂದ" ಶ್ರೀರಾಮ, ನೀನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ನಿನ್ನ ನಡೆಯೇ ಲೋಕಕ್ಕೆ ಮಾರ್ಗದರ್ಶನ. ಮುಂದೆ ನಿನ್ನ ಪ್ರಜೆಗಳು ನಿನ್ನನ್ನು ಕೊಂಡಾಡುವವರು, ನಿನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಇಂತಹ ಅರ್ಥವಿಲ್ಲದ ಆಧಾರಗಳನ್ನು ಬಿಡಬೇಕು. ನೀನೆಂದಂತೆ ಇದಕ್ಕೆ ಯಾವ ಶಾಸ್ತ್ರಾಧಾರವೂ ಇಲ್ಲ. "ಅತ್ಯಂತ ಗಂಭೀರವಾಗಿ ನ್ಯಾಯಾಧೀಶರಂತೆ ತೀರ್ಪು ಕೊಟ್ಟುಬಿಟ್ಟರು, ಯಾವಾಗ ಬಂದಿದ್ದರೋ, ಯಾವಾಗಲಿಂದ ಶ್ರೀರಾಮರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಯಾರು? ವಸಿಷ್ಠರು... ಇಬ್ಬರೂ ಅವರೆಡೆ ಸಂಭ್ರಮದಿಂದ ನೋಡಿ ಧಿಗ್ಗೆನೆದ್ದು ಅವರಿಗೆ ನಮಸ್ಕರಿಸಿದರು.
"ಶತಾನಂದರೆ, ನೀವು ಜನಕ ಮಹಾರಾಜನ ಆಚಾರ್ಯರು. ನೀವು ಬಂದು ಇದನ್ನು ಚರ್ಚಿಸಿದ್ದು ಒಳ್ಳೆಯದೇ ಆಯಿತು. ಕಾಲ-ಕಾಲಕ್ಕೆ ಇಂತಹ ಶುದ್ಧೀಕಾರ್ಯ ಆಗುತ್ತಿರಲೇ ಬೇಕು. ವಿವಾಹ ಕಾರ್ಯವನ್ನು ಜನಸಾಮಾನ್ಯರು ಅತಿ ಕಗ್ಗಂಟಾಗಿ, ಅರ್ಥವೇ ಆಗದೇ ಅನುಸರಿಸುತ್ತಿದ್ದಾರೆ. ನಮ್ಮ ಶಿಷ್ಯನ ವಿವಾಹದಲ್ಲಾದರೂ ಇಂತಹ ಬೇಕಿಲ್ಲದ ಆಚರಣೆಗಳಿಗೆ ಕಡಿವಾಣವಿದ್ದರೆ ಮುಂದೆ ಶ್ರೀರಾಮರನ್ನು ಅನುಸರಿಸುವ ಜನಸಾಮಾನ್ಯರಿಗೆ ಸುಲಭವಾದ, ಸಾಧ್ಯವಾದ ಮದುವೆಯ ಮಾರ್ಗದರ್ಶನ ಮಾಡಿದಂತಾಗುತ್ತದೆ. "ವಸಿಷ್ಠರೇ ಹೀಗೆಂದಮೇಲೆ ಶತಾನಂದರಿಗೆ ಹೇಳಲೇಬೇಕೇನು? ಇನ್ನು ತಾನು ಪ್ರಶ್ನೆ ಕೇಳಿ ಬೈಸಿಕೊಂಡಿದ್ದು ಸಾಕು. ಶ್ರೀರಾಮರನ್ನೇ ಕೇಳಿಬಿಡೋಣ, "ಶ್ರೀರಾಮ, ಹಾಗಾದರೆ ನೀನೊಪ್ಪುವ ವಿವಾಹ ಕ್ರಮ ಹೇಗೆ? ವಿವಾಹದಲ್ಲಿ ಅನಿವಾರ್ಯವಾದ ಅಂಗಗಳು ಯಾವುದು?"....
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com