ಹೋಟೆಲ್ ಉದ್ಯಮದ ಮೇಲಿನ ಇಳಿದ ಜಿಎಸ್ಟಿ ದರ: ಭಾರತಕ್ಕೆ ಗರ!

ನಮ್ಮ ಬದುಕು ನಾವು ಹೇಗಾದರೂ ಬದುಕುತ್ತೇವೆ ಎನ್ನುವ ಹಾಗಿಲ್ಲ. ನಮ್ಮ ಬದುಕು ಸಮಾಜದಲ್ಲಿ ಬೆಸದಿದೆ ಇದೊಂತರ ಚೈನ್ ಲಿಂಕ್ ಇದ್ದಹಾಗೆ. ನಮ್ಮಿಚ್ಛೆ ಇರದಿದ್ದರೂ ನಾವು ಅದರಲ್ಲಿ ಭಾಗಿಗಳು. ಈ ಮಾತು....
ಹೋಟೆಲ್ ಉದ್ಯಮದ ಮೇಲಿನ ಇಳಿದ ಜಿಎಸ್ಟಿ ದರ: ಭಾರತಕ್ಕೆ ಗರ!
ಹೋಟೆಲ್ ಉದ್ಯಮದ ಮೇಲಿನ ಇಳಿದ ಜಿಎಸ್ಟಿ ದರ: ಭಾರತಕ್ಕೆ ಗರ!
ನಮ್ಮ ಬದುಕು ನಾವು ಹೇಗಾದರೂ ಬದುಕುತ್ತೇವೆ ಎನ್ನುವ ಹಾಗಿಲ್ಲ. ನಮ್ಮ ಬದುಕು ಸಮಾಜದಲ್ಲಿ ಬೆಸದಿದೆ ಇದೊಂತರ ಚೈನ್ ಲಿಂಕ್ ಇದ್ದಹಾಗೆ. ನಮ್ಮಿಚ್ಛೆ ಇರದಿದ್ದರೂ ನಾವು ಅದರಲ್ಲಿ ಭಾಗಿಗಳು. ಈ ಮಾತು ಹಣಕ್ಲಾಸು ಅಂಕಣ ಬರಹದಲ್ಲಿ ಏಕೆ ಬಂತು? ಭಾವನೆಗಳಿಗೆ ವಿತ್ತ ಪ್ರಪಂಚದಲ್ಲೇನು ಕೆಲಸ ಎನ್ನುವ ಪ್ರಶ್ನೆಗೆ ಉತ್ತರ ಮೊದಲ ಸಾಲಿನಲ್ಲೇ ಇದೆ! ಇರಲಿ ಜಿಎಸ್ಟಿ ರೇಟ್ ಹೋಟೆಲ್ ತಿನಿಸುಗಳ ಮೇಲೆ ಹನ್ನೆರೆಡು ಪ್ರತಿಶತ ಇದ್ದದ್ದು ಐದಕ್ಕೆ ಇಳಿಸಿದ್ದಾರೆ. ನಾವು ತಿನ್ನುವ ತಿಂಡಿಯ ಮೇಲಿನ ಬೆಲೆ ಇಳಿಯಿತು ಎಂದು ಖುಷಿಯಿಂದ ಜನತೆ ಕುಣಿದಿದೆ. ನಾವು ಹೋರಾಡಿ ಜಿಎಸ್ಟಿ ರೇಟ್ ಇಳಿಸಿದೆವು ಎಂದು ಪ್ರತಿಪಕ್ಷ ಬೀಗುತ್ತಿದೆ. ಹೀಗೆ ರೇಟ್ ಕಡಿಮೆ ಮಾಡಿದ್ದರಿಂದ ಸರಕಾರಕ್ಕೆ ಬರಬೇಕಾಗಿದ್ದ ಹಣದಲ್ಲಿ ಒಂದಂಶವೂ ಕಡಿಮೆಯಾಗುವುದಿಲ್ಲ ಮೋದಿಜಿ ಎಂದು ಜೇಟ್ಲಿ ಪಿಸುಗುಟ್ಟುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಸುಧಾರಣೆಯಾಗುತ್ತೆ ಎಂದು ಕಾದಿದ್ದ ತಾಯಿ ಭಾರತಿ ಮಾತ್ರ ಇನ್ನೊಂದು ಸುತ್ತು ನಿಟ್ಟುಸಿರು ಬಿಟ್ಟದ್ದು ಮಾತ್ರ ಯಾರಿಗೂ ಕೇಳಿಸಲೇ ಇಲ್ಲ. ಜಿಎಸ್ಟಿ ರೇಟ್ ಕಡಿಮೆ ಮಾಡಿದ್ದು ಜನತೆಗೆ ಒಳ್ಳೆಯದೇ ಅಲ್ಲವೇ? ಕಡಿಮೆ ಮಾಡಿದರೆ ಈ ರೀತಿ ಬರೆಯುವುದೇಕೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಮುಂದಿನ ಸಾಲುಗಳಲ್ಲಿ ಪ್ರಯತ್ನಿಸುತ್ತೇನೆ. 
ಜಿಎಸ್ಟಿ ಹೋಟೆಲ್ ಉದ್ಯಮದ ಮೇಲೆ 12 ಪ್ರತಿಶತ ಇದ್ದಾಗ ಹೇಗೆ ಕೆಲಸ ಮಾಡುತಿತ್ತು?
ಜಿಎಸ್ಟಿ ತಿಂಡಿ ತಿನಿಸುಗಳ ಮೇಲೆ ಹನ್ನೆರಡು ಪ್ರತಿಶತ ಇದ್ದಾಗ ಅಲ್ಲಿ ನಾವು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಬಹುದಿತ್ತು. ಸರಬರಾಜುದಾರ ಸಂಗ್ರಹಿಸಿದ ತೆರಿಗೆಯನ್ನ ಸೇವೆ ಅಥವಾ ಸರಕು ಖರೀದಿಸಿದ ಸಂಸ್ಥೆ ಸರಕಾರದಿಂದ ವಾಪಸ್ಸು ಪಡೆಯಬಹದು ಈ ಪ್ರಕ್ರಿಯೆಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನುತ್ತೇವೆ. ಅಂದರೆ ನಮ್ಮ ವಹಿವಾಟಿನ ಮೇಲೆ ನೂರು ರೂಪಾಯಿ ಟ್ಯಾಕ್ಸ್ ಕಟ್ಟಬೇಕಿದ್ದರೆ ಅದರಲ್ಲಿ ಖರೀದಿಯಲ್ಲಿ ಈಗಾಗಲೇ ಪಾವತಿಸಿರುವ ಟ್ಯಾಕ್ಸ್ ಮೊತ್ತವನ್ನ ಕಡಿದು ಉಳಿದ ಮೊತ್ತವ ಕೊಡುವ ಅವಕಾಶವಿತ್ತು. ಉದಾಹರಣೆ ನೋಡೋಣ. 
ನಿಮ್ಮ ಸಂಸ್ಥೆಯ ತಿಂಗಳ ವಹಿವಾಟು 1,000 ರೂಪಾಯಿ ಎಂದುಕೊಳ್ಳಿ ಇದರ ಮೇಲೆ 12 ಪ್ರತಿಶತ ಅಂದರೆ 120 ರೂಪಾಯಿ ಜಿಎಸ್ಟಿ ಪಾವತಿಸಬೇಕು. ಈ ರೀತಿ ಸಾವಿರ ರೂಪಾಯಿ ವಹಿವಾಟು ನೆಡೆಸಲು ಬೇಕಾಗುವ ವಸ್ತುಗಳನ್ನ ನೀವು ಖರೀದಿ ಮಾಡಿರಬೇಕು ಅಲ್ಲವೇ? ಹೀಗೆ ಖರೀದಿ ಮಾಡಿದ ವಸ್ತುಗಳ ಮೌಲ್ಯ ನಾಲ್ಕುನೂರು ರೂಪಾಯಿ ಎಂದುಕೊಳ್ಳಿ ಮತ್ತು ಉಳಿದ ಖರ್ಚುಗಳು ನಾಲ್ಕು ನೂರು ಎಂದುಕೊಳ್ಳಿ ಇವುಗಳ ಮೇಲೆ ನೀವು ಪಾವತಿಸಿದ ಒಟ್ಟು ಜಿಎಸ್ಟಿ ಮೊತ್ತ 80 ರೂಪಾಯಿ ಎಂದುಕೊಳ್ಳಿ. ಈಗ ನೀವು ಸರಕಾರಕ್ಕೆ ಪಾವತಿಸ ಬೇಕಾದ ಟ್ಯಾಕ್ಸ್ ಮೊತ್ತ ನಲವತ್ತು ರೂಪಾಯಿ. ಹೇಗೆಂದರೆ ವಹಿವಾಟಿನ ಮೇಲಿನ ತೆರಿಗೆ 120 ಇದರಿಂದ ಖರೀದಿ ಮತ್ತು ಖರ್ಚಿನ ಮೇಲೆ ಪಾವತಿಸಲ್ಪಟ್ಟ ತೆರಿಗೆ ಹಣವನ್ನ ಕಳೆದರೆ ಉಳಿದದ್ದು . 
ಜಿಎಸ್ಟಿ ಹನ್ನೆರಡರಿಂದ ಐದಕ್ಕೆ ಇಳಿದಾಗ ಹೇಗೆ ಕಾರ್ಯ ನಿರ್ವಹಿಸುತ್ತದೆ? 
ನಿಮ್ಮ ಸಂಸ್ಥೆಯ ತಿಂಗಳ ವಹಿವಾಟು 1,000 ರೂಪಾಯಿ ಎಂದುಕೊಳ್ಳಿ ಇದರ ಮೇಲೆ 5 ಪ್ರತಿಶತ ಅಂದರೆ 5೦ ರೂಪಾಯಿ  ಜಿಎಸ್ಟಿ ಪಾವತಿಸಬೇಕು. ಇಲ್ಲಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಲೆಕ್ಕಕ್ಕೆ ಬರುವುದಿಲ್ಲ. ಅಂದರೆ ನಿಮ್ಮ ಖರೀದಿಯ ಮೇಲೆ ಮತ್ತು ಖರ್ಚಿನ ಮೇಲೆ ಪಾವತಿಸಿದ ತೆರಿಗೆ ಹಣವನ್ನ ಇಲ್ಲಿ ಹಿಂಪಡೆಯಲು ಬರುವುದಿಲ್ಲ. ಈಗ ನೀವು ಪ್ರಶ್ನೆ ಕೇಳಬಹದು ಈಗೇನಾಯ್ತು? ಸರಕಾರಕ್ಕೆ ಹೋಟೆಲ್ ಮಾಲೀಕರು ಕಟ್ಟುವ ಹಣದಲ್ಲಿ ಭಾರಿ ವ್ಯತ್ಯಾಸವೇನು ಆಗಲಿಲ್ಲವಲ್ಲ? ಹಾಗೆ ನೋಡಲು ಹೋದರೆ ಪ್ರತಿ ತಿಂಗಳು ಅದನ್ನ ಹಿಂಪಡೆಯಲು ಅನುಸರಿಸಬೇಕಾಗಿದ್ದ ಒಂದಷ್ಟು ಕೆಲಸ ಕಡಿಮೆಯಾಯಿತು ಎಂದು. ಇದು ಎಲ್ಲರ ಗ್ರಹಿಕೆಗೆ ಬಂದ ವಿಷಯ. 
ಹಾಗಾದರೆ ಜಿಎಸ್ಟಿ ಕಡಿಮೆ ಮಾಡಿದ್ದು ತಪ್ಪೆಲ್ಲಾಯಿತು? 
ಗಮನಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ನೀವು ಜಿಎಸ್ಟಿ ಇರುವ ಬಿಲ್ ಪಡೆಯಬೇಕಾಗಿತ್ತು. ಇಲ್ಲವೇ ಹನ್ನೆರೆಡು ಪ್ರತಿಶತ ತೆರಿಗೆ ಕಟ್ಟಬೇಕಾಗಿತ್ತು. ಹನ್ನೆರೆಡು ಕಟ್ಟಬೇಕಲ್ಲ ಎನ್ನುವ ಭಯದಲ್ಲಿ ಎಲ್ಲಾ ವರ್ತಕರೂ ಬಿಲ್ ಪಡೆಯಲು ಶುರು ಮಾಡಿದ್ದರು. ನಿಧಾನವಾಗಿಯಾದರೂ ಬೇಕೋ ಬೇಡವೋ ಎಲ್ಲವೂ ಲೆಕ್ಕಕ್ಕೆ ಸಿಗಲು ಪ್ರಾರಂಭವಾಗಿತ್ತು. ಆದರೆ ಟ್ಯಾಕ್ಸ್ ಇಳಿಸಿದ್ದರಿಂದ ಏನಾಯಿತು? ವಹಿವಾಟಿನ ಐದು ಪ್ರತಿಶತ ಕಟ್ಟಿದರಾಯಿತು.. ಖರೀದಿ ಮೇಲಿನ ಮತ್ತು  ಖರ್ಚಿನ ಮೇಲಿನ ತೆರಿಗೆ ಹಿಂಪಡೆಯಲು ಸಾಧ್ಯವಿಲ್ಲ. ಹೀಗಿರುವಾಗ ವರ್ತಕರು ಜಿಎಸ್ಟಿ ಬಿಲ್ ಏಕೆ ಪಡೆಯುತ್ತಾರೆ? ಎಷ್ಟೋ ಸಣ್ಣ ಪುಟ್ಟ ಖರ್ಚುಗಳಿಗೆ ಬಿಲ್ ಕೊಡಿ ಎಂದು ಕೇಳಿ ಪಡೆಯುತ್ತಿದವರು ಈಗ ಮತ್ತೆ ತಮ್ಮ ಹಳೆ ಚಾಳಿ 'ಬಿಲ್ ಬೇಡ' ಎನ್ನುವ ಹಂತಕ್ಕೆ ಮರಳಿದ್ದಾರೆ. ಈಗ ನೀವೇ ನಿಧಾನವಾಗಿ ಯೋಚಿಸಿ ನೋಡಿ ನಿಮ್ಮ ಕಾಫೀ ಅಥವಾ ಟೀ ಮೇಲೆ ಕಡಿಮೆಯಾದ ಒಂದು ರೂಪಾಯಿ ಭಾರತಕ್ಕೆ ಎಂತಹ ಭಾರ ಹೊರಿಸಬಹದು ಎಂದು. 
ಭಾರತ ಇಷ್ಟೊಂದು ದೊಡ್ಡ ದೇಶವಾಗಿಯೂ ಸಣ್ಣ ಪುಟ್ಟ ಪಾಶ್ಚಾತ್ಯ ದೇಶಗಳ ಜಿಡಿಪಿ ಗೆ ಏಕೆ ಸಮವಾಗಿಲ್ಲ? 
ಇದಕ್ಕೆ ಉತ್ತರ ಮೇಲಿನ ಪ್ಯಾರದಲ್ಲಿದೆ. ಗಮನಿಸಿ ನಾವು ಬಿಲ್ ಕೊಳ್ಳದೆ ಮಾಡಿದ ವ್ಯಾಪಾರ/ವಹಿವಾಟು ಎಲ್ಲೂ ದಾಖಲಾಗುವುದಿಲ್ಲ. ಅಂದರೆ ಅದನ್ನ ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಸಣ್ಣ ಉದಾಹರಣೆ ಇದನ್ನ ಮತ್ತಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. 
ಪಾಶ್ಚಾತ್ಯ ದೇಶದ ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಎರಡು ಮಕ್ಕಳಿವೆ ಎಂದುಕೊಳ್ಳಿ. ಗಂಡ ದುಡಿಯಲು ಹೋಗುತ್ತಾನೆ. ಹೆಂಡತಿ ದುಡಿಯಲು ಹೋಗುತ್ತಾಳೆ. ಮಕ್ಕಳ ನೋಡಿಕೊಳ್ಳಲು ಆಯಾ ನೇಮಿಸುತ್ತಾರೆ ಆಕೆ ಸಂಬಳ ಕೊಡುತ್ತಾರೆ. ತಮ್ಮೆಲ್ಲಾ ಖರ್ಚನ್ನ ಕಾರ್ಡ್ ಮೂಲಕ ಮಾಡುತ್ತಾರೆ. ಸರಳವಾಗಿ ಹೇಳಬೇಕೆಂದರೆ ಎಲ್ಲವೂ ದಾಖಲಾಗುತ್ತದೆ. ಗಂಡ-ಹೆಂಡತಿಯ ಸಂಬಳ ಎರಡು ಸಾವಿರ ಎಂದುಕೊಳ್ಳಿ. ಅದು ಜಿಡಿಪಿಯಲ್ಲಿ ದಾಖಲಾಯಿತು. ಅವರು ಅದೇ ಎರಡು ಸಾವಿರದಲ್ಲಿ ತಮ್ಮ ಆಯಾಗೆ ಐನೂರು ಕೊಟ್ಟರು ಎಂದುಕೊಳ್ಳಿ ಅದೂ ಜಿಡಿಪಿಯಲ್ಲಿ ದಾಖಲಾಯಿತು. ಅವರು ಮಾಡಿದ ಖರ್ಚು ಒಂದು ಸಾವಿರ ಎಂದುಕೊಳ್ಳಿ ಅದು ವಹಿವಾಟು ಎಂದು ಯಾವುದೊ ವರ್ತಕ ಡಿಕ್ಲೇರ್ ಮಾಡುತ್ತಾನೆ. ಗಂಡ-ಹೆಂಡತಿ ನಡುವೆ ಇದ್ದ ಕೇವಲ ಎರಡು ಸಾವಿರದಲ್ಲಿ ಅವರು ಸಾವಿರದ ಐನೂರು ಖರ್ಚು ಮಾಡಿದರೂ ಅದು ಮೂರು ಸಾವಿರವಾಗಿ ಮಾರ್ಪಾಡಾಯಿತು.  ಆದರೆ ನಮ್ಮಲ್ಲಿ?  ವೇತನ ದಾಖಲಾಗುವುದೆಷ್ಟು?  ಖರ್ಚಿನಲ್ಲಿ ಬಿಲ್ ಇಲ್ಲದಿದ್ದರೆ, ಖರೀದಿಯಲ್ಲಿ ಬಿಲ್ ಇಲ್ಲದಿದ್ದರೆ ಅದನ್ನ ವರ್ತಕ ತನ್ನ ವಹಿವಾಟು ಎಂದು ತೋರಿಸುವುದಿಲ್ಲ. ಹೀಗೆ ನಮ್ಮ ಒಂದು ಕುಟುಂಬ ಕೂಡ ಸಾವಿರದ ಐನೂರು ಖರ್ಚು ಮಾಡಿದರೂ ಅದು ಪೂರ್ಣ ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ ಅದು ಮೂರು ಸಾವಿರ ಆಗುವುದೆಂದು? 
ಮೋದಿ ಸರಕಾರ ಜಿಎಸ್ಟಿ ಜಾರಿಗೆ ತಂದು ಎಲ್ಲಕ್ಕೂ ಲೆಕ್ಕ ಕೇಳಿದಾಗ ಖುಷಿಯಾಗಿತ್ತು ಆದರೇನು? ಉತ್ತಮ ಕೆಲಸ ಮಾಡಲು ಕೂಡ ಮರು ಆಯ್ಕೆಯಾಗಿ ಬರುವುದು ಕೂಡ ಮುಖ್ಯವಲ್ಲವೇ? ಜಡ್ಡುಗಟ್ಟಿದ ನಮ್ಮ ಸಮಾಜ ಅಷ್ಟು ಸುಲಭವಾಗಿ ಬದಲಾಗುವುದೇ? ಪ್ರಶ್ನೆಯೇನೇ ಇರಲಿ ಮೋದಿ ಸರಕಾರ ಜಿಎಸ್ಟಿ ರೇಟ್ ಕಡಿತಗೊಳಿಸಿ ಬೀಗುವಂತಿಲ್ಲ ನಿಜಕ್ಕೂ ಸುಧಾರಣೆ ಮಾಡಬೇಕೆನ್ನುವ ಮನಸಿದ್ದರೆ ಖರೀದಿ ಮತ್ತು ಖರ್ಚಿನ ಲೆಕ್ಕ ಕೂಡ ಕೇಳಬೇಕು. 
28 ಪ್ರತಿಶತದಲ್ಲಿದ್ದ ಹಲವು ಸರಕುಗಳ ಮೇಲಿನ ಇಳಿಕೆ ಅಭಿನಂದನಾರ್ಹ ಆದರೆ ಭಾರತದಂತ ಬೃಹತ್ ದೇಶದಲ್ಲಿ ಹೋಟೆಲ್ ಉದ್ಯಮ ನೀಡುವ ದೇಣಿಗೆ ಅತ್ಯಂತ ಪ್ರಮುಖವಾದದ್ದು. ಇಲ್ಲಿ ಸರಿಯಾಗಿ ಹಿಡಿತ ಸಾಧಿಸಬಹುದಿತ್ತು. ಆ ನಿಟ್ಟಿನಲ್ಲಿ ಮೋದಿ ಸರಕಾರ ಇಟ್ಟ ಹೆಜ್ಜೆಯೂ ಸರಿಯಾಗಿತ್ತು ಆದರೇನು ಗುಜರಾತ್ ಎಲೆಕ್ಷನ್ ನಂತರ ಬರುವ ಇನ್ನೂ ಹಲವು ರಾಜ್ಯಗಳ ಎಲೆಕ್ಷನ್ ಲೆಕ್ಕಾಚಾರದ ಮುಂದೆ ಮೌಲ್ಯ ಮುಕ್ಕಾಗಿದ್ದು ಮಾತ್ರ ಸುಳ್ಳಲ್ಲ. ತಮ್ಮ ಕಾಫಿ ತಿಂಡಿಯ ಮೇಲಿನ ಇಳಿದ ಒಂದು ರೂಪಾಯಿಯ ಖುಷಿಯಲ್ಲಿರುವ ಭವ್ಯ ಭಾರತದ ಪ್ರಜೆಗೆ ನಾಳಿನ ಚಿಂತೆ ಎಲ್ಲಿಯದು? ಅಲ್ಲವೇ? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com